ಕೇಂದ್ರ ಸಚಿವರ ಬಕೆಟ್ ಸಂಸ್ಕೃತಿ ಕರ್ನಾಟಕ ಕರಾವಳಿ ಜಾನಪದ ಕ್ರೀಡೆ ಕಂಬಳವನ್ನು ಮತ್ತೊಮ್ಮೆ ವಿಶ್ವಕ್ಕೆ ಪರಿಚಯಿಸಿದೆ. ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆ ಹಿಂದಿಕ್ಕುವ ಮೂಲಕ ಜಾನಪದ ಕ್ರೀಡೆ ಕಂಬಳ ಪಟು ಶ್ರೀನಿವಾಸ ಗೌಡ ಹೊಸ ಸಾಧನೆ ಮಾಡಿದ್ದಾರೆ ಎಂದು ಅದ್ಯಾರೊ ಸೋಶಿಯಲ್ ಮಿಡಿಯಾದಲ್ಲಿ ಹರಿಯಬಿಟ್ಟಿದ್ದರು. ಅದನ್ನು ನಮ್ಮ ಮಾಧ್ಯಮದವರು ಎತ್ತಿಕೊಂಡರು. ದೇಶದ ಎಲ್ಲ ಭಾಷೆಗಳಲ್ಲಿ ಹರಿದಾಡಿ ಬಿಸಿಸಿಯಲ್ಲೂ ಬಿತ್ತರವಾಯಿತು.
ವಿಶ್ವದ ವೇಗದ ಟ್ರಾಕ್ ಓಟಗಾರ ಉಸೇನ್ ಬೋಲ್ಟ್ ಅವರೊಂದಿಗೆ ಶ್ರೀನಿವಾಸ್ ಗೌಡ ಅವರ ಸಾಧನೆಯನ್ನು ಹೋಲಿಕೆ ಮಾಡಲಾಗಿತ್ತು.
ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವ ಟ್ವೀಟ್ ಮಾಡಲು ಕಾಯುತ್ತಿದ್ದ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರು ಕಂಬಳ ಓಟಗಾರ ಶ್ರೀನಿವಾಸ್
ಗೌಡ ಅವರನ್ನು ಕೂಡಲೇ ಸ್ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾಕ್ಕೆ ಆಹ್ವಾನ ನೀಡಿದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಟ್ಯಾಗ್ ಮಾಡಿದ ಟ್ವೀಟಿಗೆ ಉತ್ತರಿಸಿದ ಕೇಂದ್ರ ಕ್ರಡಾ ಸಚಿವ ಕಿರಣ್ ರಿಜಿಜು ಈ ರೀತಿ ಟ್ವೀಟ್ ಮಾಡಿದ್ದರು. … I will ensure top national coaches to conduct his trials properly. We are team @narendramodi ji and will do everything to identity sporting talents!
ಮುರಳೀಧರ ರಾವ್ ಅವರು ರಾಜ್ಯ ಸರಕಾರದ ಕ್ರೀಡಾ ಸಚಿವ ಸಿ.ಟಿ.ರವಿ ಅವರಿಗೆ ಕೂಡ ಟ್ವೀಟನ್ನು ಟ್ಯಾಗ್ ಮಾಡಿದ್ದರು.
ಸೋಶಿಯಲ್ ಮಿಡಿಯಾದಲ್ಲಿ ಈ ವಿಚಾರ ವೈರಲ್ ಆಗುತ್ತಿರುವಾಗ ಕಂಬಳ ಓಟಗಾರ ಶ್ರೀನಿವಾಸ್
ಗೌಡ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಸಮೀಪ ಮತ್ತೊಂದು ಕಂಬಳ ಓಟದ ಸಿದ್ಧತೆಯಲ್ಲಿದ್ದರು. ಕಾರ್ಮಿಕ ಆಯುಕ್ತರು ಆಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಆಗಿರುವ ಪಿ.ಮಣಿವಣ್ಣನ್ ಅವರು ಶ್ರೀನಿವಾಸ ಗೌಡ ಅವರನ್ನು ಬೆಂಗಳೂರಿಗೆ ಅಹ್ವಾನಿಸಿದರು.
ಕೇಂದ್ರ ಕ್ರೀಡಾ ಸಚಿವ, ಬಿಜೆಪಿ ಪ್ರಧಾನ ಕಾರ್ಯದ್ರಶಿ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶ್ರೀನಿವಾಸ್ ಗೌಡ ಅವರನ್ನುಪ್ರಶಂಸಿರುವುದನ್ನು ಗಮಸಿದ ಕಾರ್ಮಿಕ ಇಲಾಖೆ ಎಚ್ಚೆತ್ತುಕೊಂಡಿತು. ಕಟ್ಟಡ ನಿರ್ಮಾಣ ಕಾರ್ಮಿಕನೂ ಆಗಿರುವ ಗೌಡರ ಮನೆಗೆ ಕಾರ್ಮಿಕ ಇಲಾಖೆ ಸಿಬ್ಬಂದಿ ಧಾವಿಸಿದರು. ಕಂಬಳ ಓಟದಲ್ಲಿ ನಿರತರಾಗಿದ್ದ ಶ್ರೀನಿವಾಸ್ ಗೌಡ ಅವರಿಂದ ಅರ್ಜಿ ಪಡೆದ ಇಲಾಖೆ ಸಿಬ್ಬಂದಿ ಸದ್ಯದಲ್ಲೇ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ನೀಡಲು ಮುಂದಾಗಿದ್ದಾರೆ.
ಕೇವಲ ಕ್ರೀಡಾ ಇಲಾಖೆ ಮಾತ್ರ ಯಾಕೆ ಶ್ರೀನಿವಾಸ್ ಗೌಡ ನಮಗೂ ಸೇರಿದವನು, ಆತ ಕಟ್ಟಡ ಕಾರ್ಮಿಕ ಎಂದು ಕಾರ್ಮಿಕ ಇಲಾಖೆಯವರು ಕ್ರೀಡಾ ಇಲಾಖೆಯೊಂದಿಗೆ ಕಂಬಳದ ಉಸೇನ್ ಬೋಲ್ಟ್ ಸನ್ಮಾನಕ್ಕೆ ಕೈಜೋಡಿಸಿದರು. ಸರಕಾರದ ವತಿಯಿಂದ ಮೂರು ಲಕ್ಷ ರೂಪಾಯಿ ಚೆಕ್ಕನು ಸೋಮವಾರ ಹಸ್ತಾಂತರಿಸಲಾಗಿದೆ.
ಬೆಂಗಳೂರಿನಲ್ಲಿ ಅತ್ಯಂತ ವೇಗದ ಕಂಬಳ ಓಟಗಾರ ಎಂದು ಶ್ರೀನಿವಾಸ್ ಗೌಡ ಸನ್ಮಾನ ಸ್ವೀಕರಿಸುತ್ತಿದ್ದಂತೆ ಬಂದ ಹೊಸ ಸುದ್ದಿ ಗೌಡರ ದಾಖಲೆಯನ್ನು ಮತ್ತೋರ್ವ ಕಂಬಳ ಓಟಗಾರ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಮುರಿಯುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ ಎಂದಾಗಿತ್ತು. ಈಗ ನಿಶಾಂತ್ ಶೆಟ್ಟಿ ಅವರಿಗೆ ಕೂಡ ಇದೇ ಗೌರವ ಸನ್ಮಾನ ಆಹ್ವಾನಗಳು ದೊರೆಯುತ್ತವೆಯೇ ಎಂದು ಕಾದು ನೋಡಬೇಕಾಗಿದೆ.
ಫೆ.16ರಂದು ಭಾನುವಾರ ವೇಣೂರಿನ ಪೆರ್ಮುಡ ಕಂಬಳದಲ್ಲಿ ನಿಶಾಂತ್ ಈ ಸಾಧನೆ ಮಾಡಿದ್ದಾರೆ. 143 ಮೀಟರ್ ದೂರವನ್ನು ನಿಶಾಂತ್ ಕೇವಲ 13.61 ಸೆಕೆಂಡಿನಲ್ಲಿ ಓಡಿದ್ದಾರೆ. ಈ ಮೂಲಕ ಶ್ರೀನಿವಾಸ ಗೌಡ ಅವರ ದಾಖಲೆಯನ್ನು ಮುರಿದಿದ್ದಾರೆ. ಶ್ರೀನಿವಾಸ್ ಗೌಡ 13.62 ಸೆಕೆಂಡ್‌ನಲ್ಲಿ 143 ಮೀಟರ್ ಕ್ರಮಿಸಿದ್ದರು. ಆದರೆ, ನಿಶಾಂತ್ ಶೆಟ್ಟಿ ಈ ದೂರವನ್ನು ಕೇವಲ 13.61 ಸೆಕೆಂಡ್‌ಗಳಲ್ಲಿ ಓಡಿದ್ದಾರೆ. ನಿಶಾಂತ್ ಶೆಟ್ಟಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿ ನಿವಾಸಿ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಶ್ರೀನಿವಾಸ ಗೌಡ ಕಂಬಳ ಸ್ಪರ್ಧೆಯಲ್ಲಿ 143 ಮೀ. ಓಡುವಾಗ 100 ಮೀಟರ್ ಅನ್ನು ಕೇವಲ 9.55 ಸೆಕೆಂಡ್‌ನಲ್ಲಿ ಕ್ರಮಿಸಿದಂತೆ ಆಗುತ್ತದೆ ಎನ್ನುವ ಲೆಕ್ಕಚಾರ ಸೋಶಿಯಲ್ ಮಿಡಿಯಾದಲ್ಲಿ ಬರುತ್ತಿದ್ದಂತೆ ಸಚಿವರು, ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರೀಡಾ ಪ್ರತಿಭಾನ್ವೇಷಣೆಗೆ ತೊಡಗಿದ್ದು.
ಕಂಬಳ ಓಟಗಾರರಾಗಲಿ, ಕಂಬಳ ಕ್ರೀಡೆಯಲ್ಲಿ ತೊಡಗಿದ್ದವರಾಗಲಿ ಕೇಂದ್ರ ಕ್ರೀಡಾ ಸಚಿವರ ಆಹ್ವಾನವನ್ನು ಮೊದಲಿಗೆ ಗಂಭೀರವಾಗಿ ಪರಿಗಣಿಸಲಿಲ್ಲ. ಅವರಿಗೊಂದು ಖುಷಿ ಏನೆಂದರೆ ಕಂಬಳ ಕ್ರೀಡೆಗೆ ಅಪಾರ ಪ್ರಚಾರ ದೊರೆಯಿತಿರುವುದು. ಆದರೆ, ರಾಜ್ಯ ಸರಕಾರದ ಆಮಂತ್ರಣವನ್ನು ಅವರು ನಿರಾಕರಿಸಲಿಲ್ಲ.
ಕೇಂದ್ರ ಸರಕಾರದ ಕ್ರೀಡಾ ಸಚಿವರ ವಿನಂತಿ ಮೇರೆಗೆ ಅನಿವಾರ್ಯವಾಗಿ ಏಸ್‌ಎಐ ಸೆಂಟರಿಗೆ ಶ್ರೀನಿವಾಸ ಗೌಡ ಅವರು ಹೋಗಬೇಕಾಗಿ ಬಂದಿದೆ. ಶ್ರೀನಿವಾಸ ಗೌಡ ಒಂದು ಕಂಬಳದಲ್ಲಿ ಹಲವು ಜೋಡಿ ಕೋಣಗಳನ್ನು ಓಡಿಸುತ್ತಾರೆ. ಮಾತ್ರವಲ್ಲದೆ, ಮೂರು ಮಂದಿ ಕಂಬಳ ಮಾಲೀಕರೊಂದಿಗೆ ಗೌಡ ವಾರ್ಷಿಕ ಒಪ್ಪಂದ ಮಾಡಿಕೊಂಡಿದ್ದಾರೆ. ವಾರ್ಷಿಕ ನೆಲೆಯಲ್ಲಿ ಕಂಬಳ ಓಟಗಾರನಿಗೆ ಒಂದು ದೊಡ್ಡ ಮೊತ್ತವನ್ನು ಕೋಣಗಳು ಮಾಲೀಕರು ನಿಗದಿ ಮಾಡಿರುತ್ತಾರೆ. ನವೆಂಬರ್ ತಿಂಗಳಲ್ಲಿ ಆರಂಭವಾಗುವ ಕಂಬಳ ಸೀಸನ್ ಮಾರ್ಚ್ ಎರಡನೇ ವಾರ ಮುಕ್ತಾಯ ಆಗುತ್ತದೆ. ಕಂಬಳ ಸಮಿತಿ ನಿಗದಿ ಮಾಡಿದಂತೆ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಪ್ರತಿ ಶನಿವಾರ ಕಂಬಳ ಆರಂಭವಾಗಿ ಭಾನುವಾರ ಮುಕ್ತಾಯ ಆಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಗೌಡ ತಕ್ಷಣ ಕ್ರೀಡಾ ಪ್ರಾಧಿಕಾರದ ತರಬೇತಿಗೆ ಹಾಜರಾಗುವಂತೆ ಇಲ್ಲ.
ಇದೀಗ ಶ್ರೀನಿವಾಸ ಗೌಡ ಮಾತ್ರವಲ್ಲದೆ ಇನ್ನಿತರ ವೇಗದ ಕಂಬಳ ಓಟಗಾರ ಯುವಕರನ್ನು ಕೂಡ ಕ್ರೀಡಾ ಪ್ರಾಧಿಕಾರ ತರಬೇತಿಗೆ ಆಹ್ವಾನ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಶ್ರೀನಿವಾಸ ಗೌಡ, ನಿಶಾಂತ್ ಶೆಟ್ಟಿ ಸಹಿತ ಐದಾರು ಮಂದಿ ಗಟ್ಟಿಗ ಓಟಗಾರರು ಇದ್ದಾರೆ. ಅವರೆಲ್ಲರೂ ಕಂಬಳ ಅಕಾಡಮಿಯಲ್ಲಿ ಕೋಣದ ಓಟ ಕಂಬಳಕ್ಕಾಗಿ ತರಬೇತಿ ಪಡೆದವರು. ಜಾನಪದ ಕ್ರೀಡೆಗಾಗಿ ಸ್ಥಾಪಿಸಲಾದ ಕಂಬಳ ಅಕಾಡಮಿ ಇಂತಹ ಪ್ರತಿಭೆಗಳನ್ನು ಬೆಳಸಲು ಸಾಧ್ಯ ಆಗಿರುವುದನ್ನು ಸರಕಾರ ಮತ್ತು ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಗಮನಿಸಬೇಕು.