ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಯುವ ಸಮುದಾಯದಲ್ಲಿ ಎಬ್ಬಿಸಿರುವ ಕಿಚ್ಚು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. 2014 ಮತ್ತು 2019ರ ಲೋಕಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಯುವ ಸಮುದಾಯವು ನರೇಂದ್ರ ಮೋದಿಯವರ ಪ್ರಭಾವಳಿಗೆ ಒಳಗಾಗಿ ಬಿಜೆಪಿಯನ್ನು ಬೆಂಬಲಿಸಿತ್ತು. ಇದರಿಂದ ಭಾರಿ ಬಹುಮತ ಗಳಿಸಿದ್ದ ಬಿಜೆಪಿಯು ತನ್ನ ವಿವಾದಾತ್ಮಕ ವಿಚಾರಧಾರೆಗಳ ಅನುಷ್ಠಾನಕ್ಕೆ ಮುಂದಾಗುವ ಮೂಲಕ ಅದೇ ವರ್ಗದ ಕೆಂಗಣ್ಣಿಗೆ ಗುರಿಯಾಗಲಾರಂಭಿಸಿರುವುದು ಇತಿಹಾಸದ ಚೋದ್ಯ. “ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವ ಮೂಲಕ ಬಿಜೆಪಿಯ ಅವನತಿ ಆರಂಭವಾಗಿದೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಕಾಲೇಜು ಕ್ಯಾಂಪಸ್ ಗಳಿಗೆ ಹಬ್ಬಿದ್ದು, ದೇಶದ ಪ್ರತಿಷ್ಠಿತ 18 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನವದೆಹಲಿಯ ಜಾಮಿಯಾ ಮಿಲಿಯಾ ಹಾಗೂ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರೌರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಪ್ರತಿಭಟನಾಕಾರರು ಧರಿಸಿರುವ ಬಟ್ಟೆಯಿಂದಲೇ ಅವರು ಯಾರು ಎಂಬುದನ್ನು ಪತ್ತೆ ಹಚ್ಚಬಹುದು” ಎಂಬ ಮೋದಿಯವರ ಹೇಳಿಕೆಯೂ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಬಹುದು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಜಾಮಿಯಾ ವಿಶ್ವವಿದ್ಯಾಲಯದ ಹೊರಗೆ ಪ್ರತಿಭಟಿಸಿದ ವಿದ್ಯಾರ್ಥಿಗಳು ಶರ್ಟ್ ತೆಗೆದು ಪ್ರತಿಭಟಿಸಿದ್ದೂ ಮೋದಿ ಹೇಳಿಕೆಗೆ ಸಾಂಕೇತಿಕ ಪ್ರತಿರೋಧವಾಗಿದೆ.
ದೆಹಲಿ ಪೊಲೀಸ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಗೆ ಅದರ ಮೇಲೆ ಹಿಡಿತವಿಲ್ಲ. ಪೊಲೀಸ್ ವ್ಯವಸ್ಥೆಯು ಕೇಂದ್ರದ ಗೃಹ ಸಚಿವಾಲಯಕ್ಕೆ ಒಳಪಡುವುದರಿಂದ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಕ್ರೌರ್ಯದ ಪರಮಾವಧಿಯನ್ನು ಇಂದಿನ ಹೋರಾಟಗಳಿಗೆ ಕಾರಣರಾದ ಅಮಿತ್ ಶಾ ನೆಪಮಾತ್ರಕ್ಕೂ ಖಂಡಿಸಿಲ್ಲ. ಚುನಾವಣಾ ರ‌್ಯಾಲಿಗಳಲ್ಲಿ ದೇಶದ ಯುವ ಜನತೆ ಮೋದಿ ಬೆನ್ನಿಗಿದೆ ಎಂದು ಅರಚುವ ಅಮಿತ್ ಶಾ, ತನ್ನ ಉಸ್ತುವಾರಿಯಲ್ಲಿ ಬರುವ ಪಡೆಯೊಂದು ತನ್ನದೇ ನಾಗರಿಕರ ಮೇಲಿನ ದೌರ್ಜನ್ಯವನ್ನು ಸಮರ್ಥಿಸುವರೇ? ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಟಿ ಹಿಡಿದು ಎರಗಿರುವ ವಿಡಿಯೊಗಳು ಇಂದಿನ ಭಾರತದ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಸಹವರ್ತಿಯ ಮೇಲಿನ ದಾಳಿಯನ್ನು ತಡೆಯಲು ವಿದ್ಯಾರ್ಥಿನಿಯರು ಆತನನ್ನು ಸುತ್ತುವರಿದಿರುವಾಗಲು ಪೊಲೀಸರು ಅಟ್ಟಹಾಸ ಮೆರೆಯುತ್ತಿರುವ ಪೊಲೀಸರ ಫೋಟೊಗಳು ಎಂಥ ಸಂದೇಶ ರವಾನಿಸುತ್ತವೆ? ಪೊಲೀಸ್ ವ್ಯವಸ್ಥೆ ನಾಗರಿಕ ಸಮಾಜದಲ್ಲಿ ಎಂದೋ ವಿಶ್ವಾಸ ಕಳೆದುಕೊಂಡಾಗಿದೆ. ಈಗ ತುಕ್ಕು ಹಿಡಿದ ಲಾಟಿಗಳ ಮೂಲಕ ಜನಪರ ಹೋರಾಟ ಹತ್ತಿಕ್ಕುವ ಮೂಲಕ ಪೊಲೀಸ್ ರಾಜ್ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ಧವಾದಂತಿದೆ.
2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದರು. ನಿಪುಣ ಮಾನವ ಸಂಪನ್ಮೂಲ ಸೃಷ್ಟಿಯ ಭರವಸೆ ನೀಡಿದ್ದರು. ಹೊಸತನಕ್ಕೆ ಹಾತೊರೆಯುತ್ತಿದ್ದ ಯುವ ಸಮುದಾಯವು ವಯಸ್ಸಿನಲ್ಲಿ ಮೋದಿಗಿಂತಲೂ ಕಿರಿಯರಾದ ರಾಹುಲ್ ಗಾಂಧಿಗೆ ಬದಲಾಗಿ ಮೋದಿಯವರನ್ನು ಯುವ ಸಮುದಾಯ ಆಯ್ಕೆ ಮಾಡಿಕೊಂಡಿತ್ತು. ಆದರೆ, ಇತ್ತೀಚೆಗೆ ಬಹಿರಂಗಗೊಂಡ NSSO ವರದಿ ಪ್ರಕಾರ ಭಾರತದಲ್ಲಿ ನಿರುದ್ಯೋಗ ಪ್ರಮಾಣವು 45 ವರ್ಷಗಳ ಹಿಂದೆ ಇದ್ದ ಮಟ್ಟಕ್ಕೆ ಇಳಿದಿದೆ ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ. ಕನಸು ಕಂಗಳಿಂದ ಮೋದಿ ಆಡಳಿತದಲ್ಲಿ ಅಚ್ಚೇ ದಿನ ಎದುರು ನೋಡುತ್ತಿದ್ದ ಯುವಕ-ಯುವತಿಯರಿಗೆ ಲಾಟಿ ಏಟು ಎದುರಾಗುತ್ತದೆ ಎನ್ನುವ ನಿರೀಕ್ಷೆ ಇದ್ದಿರಲಿಕ್ಕಿಲ್ಲ. ಈಗ ಯುವ ಸಮುದಾಯವು ನರೇಂದ್ರ ಮೋದಿಯೊಬ್ಬ ಮತ್ತೊಬ್ಬ “ಕಪಟ ರಾಜಕಾರಣಿ” ಎನ್ನಲಾರಂಭಿಸಿದೆ.
ನರೇಂದ್ರ ಮೋದಿ ಸರ್ಕಾರವು ವಿಶ್ವವಿದ್ಯಾಲಯಗಳ ಮೇಲಿನ ಅಟ್ಟಹಾಸ ಮೆರೆಯುತ್ತಿರುವುದು ಮೊದಲೇನಲ್ಲ. ಹಿಂದೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿತ್ತು. ದೇಶ ವಿರೋಧಿ ಕೃತ್ಯ ಎಸಲಾಗುತ್ತಿದೆ ಎಂದು ಆರೋಪಿಸಿದ್ದ ಪೊಲೀಸರು ಆನಂತರ ತಮ್ಮ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಈಗ ಜಾಮಿಯಾ ವಿಶ್ವವಿದ್ಯಾಲಯದ ಮೇಲಿನ ದಾಳಿಯಲ್ಲಿಯೂ ಸರ್ಕಾರದ ಪಿತೂರಿ ಇರಬಹುದು ಎಂಬುದಕ್ಕೆ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ನಡೆದಿರುವ ದಾಂಧಲೆ ಸ್ಪಷ್ಟ ಉದಾಹರಣೆಯಾಗಿದೆ.
ಚೀನಾ ಹಸ್ತಕ್ಷೇಪ ವಿರೋಧಿಸಿ ನೆರೆಯ ಹಾಂಕಾಂಗ್ ನಲ್ಲಿ ಆರು ತಿಂಗಳ ಹಿಂದೆ ಆರಂಭವಾದ ವಿದ್ಯಾರ್ಥಿ ಚಳವಳಿ ಇನ್ನೂ ನಿಂತಿಲ್ಲ. ಚಿಲಿ ದೇಶದಲ್ಲಿ ಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆಯ ವಿರುದ್ಧ ಆರಂಭವಾಗಿರುವ ಹೋರಾಟ ಸಾಕಷ್ಟು ಸವಾಲು ತಂದೊಡ್ಡಿದೆ. ಇವೆಲ್ಲಾ ಹೋರಾಟಗಳಲ್ಲೂ ವಿದ್ಯಾರ್ಥಿ ಸಮುದಾಯದ ಪ್ರಭಾವ ಗಾಢವಾಗಿದೆ. ಈ ನೆಲೆಯಲ್ಲಿ ಭಾರತದಲ್ಲಿ ಆರಂಭವಾಗಿರುವ ವಿದ್ಯಾರ್ಥಿ ಹೋರಾಟವು ಮತ್ತಷ್ಟು ವ್ಯಾಪಕವಾದರೆ ಮೋದ ಸರ್ಕಾರಕ್ಕೆ ಉಳಿಗಾಲ ಇಲ್ಲ ಎಂಬುದು ಮಾತ್ರ ಸ್ಪಷ್ಟ.