ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಬೇಕೆಂಬ ಸಚಿವ ಆನಂದ್ ಸಿಂಗ್ ಮತ್ತಲವು ಹೋರಾಟಗಾರರ ಹತ್ತಾರು ವರ್ಷಗಳ ಬೇಡಿಕೆಗೆ ಮರುಜೀವ ಬಂದಿದೆ. ಇತ್ತೀಚೆಗೆ ನವೆಂಬರ್ 18ನೇ ತಾರೀಕಿನಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಅನೌಪಚಾರಿಕ ಒಪ್ಪಿಗೆ ನೀಡಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಕುರಿತು ಅಧಿಕೃತ ಘೋಷಣೆಯಾಗಲಿದೆ.
ಬಳ್ಳಾರಿ ಜಿಲ್ಲೆಯ 11 ತಾಲೂಕುಗಳ ಪೈಕಿ ಹೊಸಪೇಟೆ ಅಂದರೆ ವಿಜಯನಗರವೂ ಒಂದು. ಈ ಹೊಸಪೇಟೆ ತಾಲೂಕನ್ನು ಬಳ್ಳಾರಿಯಿಂದ ವಿಭಜಿಸಿ ವಿಜಯನಗರ ಜಿಲ್ಲೆಯನ್ನಾಗಿ ರಚಿಸಬೇಕೆಂದು ಒಂದು ದಶಕದಿಂದ ತೀವ್ರ ಹೋರಾಟ ನಡೆಯುತ್ತಿತ್ತು. ಈ ಹಿಂದೆ ಸ್ಥಳೀಯ ಹೋರಾಟಗಾರರ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗಿ ನಿರಂತರ ಹೋರಾಟ ಮುಂದುವರಿದಿತ್ತು. ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಕೂಗಿಗೆ ಸಚಿವ ಆನಂದ್ ಸಿಂಗ್ ಕೂಡ ದನಿಗೂಡಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಆನಂದ್ ಸಿಂಗ್ ಪ್ರತ್ಯೇಕ ಜಿಲ್ಲೆ ವಿಚಾರವನ್ನೇ ಮುಂದಿಟ್ಟು ರಾಜೀನಾಮೆ ಸಲ್ಲಿಸಿದ್ದರು. ಇದಾದ ನಂತರ ತನ್ನ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿ ಮತ್ತೆ ಶಾಸಕರಾಗಿ ಆಯ್ಕೆಯಾದರು. ಅಲ್ಲದೇ ಗಣಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಹೋರಾಟಕ್ಕೆ ಫಲ ಸಿಕ್ಕಿದಂತಾಗಿದೆ. ತನ್ನ ಬೇಡಿಕೆಗೆ ಜಿಲ್ಲೆಯ ಸ್ವಪಕ್ಷ ಮತ್ತು ವಿರೋಧ ಪಕ್ಷದ ಶಾಸಕರ ತೀವ್ರ ವಿರೋಧದ ನಡುವೆಯೂ ಪ್ರತ್ಯೇಕ ವಿಜಯನಗರ ಜಿಲ್ಲೆಗೆ ಅನುಮೋದನೆ ದೊರೆತಿರುವುದು ಇವರ ಹೋರಾಟಕ್ಕೆ ಸಂದ ಜಯ.
ಸುಮಾರು ಎರಡು ವರ್ಷಗಳಿಂದಲೂ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಜಿಲ್ಲೆ ರಚನೆ ಕುರಿತು ಹಲವು ಬಾರಿ ಜಿಲ್ಲೆಯ ಶಾಸಕರ ಸಭೆ ಸೇರಿ ಚರ್ಚಿಸಿದ್ದರು. ಬಳ್ಳಾರಿ ವಿವಿಧ ಸಂಘಟನೆಗಳು ಪ್ರತ್ಯೇಕ ಜಿಲ್ಲೆ ರಚನೆ ವಿರೋಧಿಸಿ ಬೀದಿಗಿಳಿದು ಹೋರಾಟ ನಡೆಸಿದ್ದರು. ಅಂತೆಯೇ ವಿಜಯನಗರ ಪ್ರತ್ಯೇಕ ಜಿಲ್ಲೆಗಾಗಿ ನಾನಾ ಸಂಘಟನೆಗಳು ಹೊಸಪೇಟೆಯಲ್ಲಿ ಹೋರಾಟ ಮುಂದುವರಿಸಿದ್ದವು.
ಇನ್ನು, ಈ ಬಾರಿಯೂ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ, ಸೇರಿ ವಿವಿಧ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಸಚಿವ ಸಂಪುಟ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತ್ಯೇಕ ಜಿಲ್ಲೆಯ ವಿಚಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಲಾಗುತ್ತಿದೆ.
ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ಹೊಸ ಜಿಲ್ಲೆ ರಚಿಸಬೇಕು ಎನ್ನುವುದು ಹಲವು ವರ್ಷಗಳ ಹಿಂದಿನ ಕೂಗು. ತೀವ್ರ ವಿರೋಧದ ನಡುವೆಯೂ ಸಚಿವ ಆನಂದ್ ಸಿಂಗ್ ಸಿಎಂ ಬಿಎಸ್ ಯಡಿಯೂರಪ್ಪಗೆ ಒತ್ತಾಯಿಸಿ ತನ್ನ ಕ್ಷೇತ್ರದ ಜನರ ಬೇಡಿಕೆಯನ್ನು ಈಡೇರಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ವಿಜಯನಗರ ಜಿಲ್ಲೆಯಾಗಬೇಕು ಎಂಬುದು ಬಹುದಿನದ ಬೇಡಿಕೆ. ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ತೀರ್ಮಾನದಿಂದ ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಜೆ ತೆಗೆದುಕೊಂಡಿದ್ದೇವೆ. ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳ ಬೇಡಿಕೆ ಈಡೇರಿದೆ. ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಬೇಡಿಕೆ ಈಡೇರಿಕೆಗೆ ಒಪ್ಪಿಗೆ ನೀಡಿದ ಮುಖ್ಯಮಂತ್ರಿಗಳಿಗೂ ಅಭಿನಂದನೆ ಸಲ್ಲಿಸಲಿದ್ದೇನೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಮತ್ತೊಂದೆಡೆ ಸರ್ಕಾರದ ನಡೆಗೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಜಯನಗರ ಜಿಲ್ಲೆ ರಚನೆಗೆ ನನ್ನ ಬೆಂಬಲವಿಲ್ಲ. ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಳ್ಳಬಾರದಿತ್ತು. ಈ ಜಿಲ್ಲೆಯ ಜನರು, ವಿಜಯನಗರ ಜಿಲ್ಲೆ ರಚನೆಯ ವಿರೋಧಿಸಿ ಹೋರಾಟ ಮಾಡಿದರೆ ಅವರೊಂದಿಗೆ ನಾನೂ ನಿಲ್ಲುವೆ ಎಂದು ಎಚ್ಚರಿಸಿದ್ದಾರೆ.
ಬಳ್ಳಾರಿ ಜಿಲ್ಲೆ ವಿಭಜನೆಯಾದ್ರೆ ಜಿಲ್ಲೆಯಲ್ಲಿ ಬಿಜೆಪಿ ಎರಡು ಹೋಳಾಗುತ್ತದೆ. ಈ ಜಿಲ್ಲೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ. ವಿಜಯನಗರ ಜಿಲ್ಲೆ ಬೇಡ ಬೇಡ ಅಂತ ಎಷ್ಟು ಬಾರಿ ಸಿಎಂ ಬಿಎಸ್ವೈ ಅವರಿಗೆ ಹೇಳಬೇಕು. ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಿ ಹೇಳಿದ್ದೇವೆ. ಇನ್ನೆಷ್ಟು ಬಾರಿ ಹೇಳಬೇಕು. ಡಿವೈಡ್ ಆಗಲೇಬೇಕು ಎಂದು ಡಿಸೈಡ್ ಆದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕಾ ಸಂದೇಶ ರವಾನಿಸಿದ್ದಾರೆ.