ದೇಶದಲ್ಲಿ ಎರಡನೇ ಬಾರಿ ಭಾರೀ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬಂದು ವಿವಿಧ ರಾಜ್ಯಗಳಲ್ಲಿಯೂ ವಿಜಯೀಶಾಲಿಯಾಗಿ ಬೀಗುತ್ತಿದ್ದ ಬಿಜೆಪಿ ಅವನತಿಯ ಮೆಟ್ಟಿಲನ್ನು ತುಳಿಯಲಾರಂಭಿಸಿದೆ!
Party with difference ಎಂದು ಹೇಳಿಕೊಳ್ಳುತ್ತಲೇ ಅಧಿಕಾರಕ್ಕೆ ಬಂದ ಬಿಜೆಪಿ ಇತರೆ ಪಕ್ಷಗಳ ಆಡಳಿತ ವೈಖರಿಗೆ ಭಿನ್ನವಾಗಿ ಕಾಣಿಸಿಕೊಂಡಿಲ್ಲ. ಇನ್ನು ತನ್ನ ಹಿಂದುತ್ವವಾದ ಮತ್ತು ರಾಷ್ಟ್ರೀಯತೆಯ ವಿಚಾರಗಳನ್ನು ಮುಂದಿಟ್ಟು ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಮತದಾರರನ್ನು ಓಲೈಸುವ ಯತ್ನದಲ್ಲಿ ವಿಫಲವಾಯಿತು.
ಹತ್ತಾರು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನಾಯಕರು ಕಳೆದ ಒಂದು ವರ್ಷದ ಹಿಂದಿನವರೆಗೂ ಇಡೀ ದೇಶವನ್ನೆಲ್ಲಾ ಕೇಸರಿಮಯ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾ ಬಂದಿದ್ದರು. ಆದರೆ, ಒಂದು ವರ್ಷದಿಂದೀಚೆಗೆ ನಡೆದ ವಿಧಾನಸಭೆ ಚುನಾವಣೆಗಳ ಮೂಲಕ ಬಿಜೆಪಿ ನಾಯಕರಿಗೆ ಮತದಾರರು ತಕ್ಕ ಪಾಠವನ್ನು ಕಲಿಸಲು ಆರಂಭಿಸಿದ್ದಾರೆ.
ಬಿಜೆಪಿಗೆ ಭಾರೀ ಹೊಡೆತ ಕೊಟ್ಟ ರಾಜ್ಯವೆಂದರೆ ಮಹಾರಾಷ್ಟ್ರ. ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಮುಖಭಂಗವನ್ನು ಬಿಜೆಪಿ ಅನುಭವಿಸಿತು. ಆದರೂ ಎನ್ಸಿಪಿಯನ್ನು ಇಬ್ಭಾಗ ಮಾಡುವ ಪ್ರಯತ್ನ ನಡೆಸಿ ಬೆಳಗಿನ ಜಾವ ಸರ್ಕಾರ ರಚನೆಗೆ ಮುಂದಾಗಿತ್ತು. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದರು. ಆದರೆ, ಮತ್ತೊಂದು ದಿನದ ಬೆಳಗಾಗುವುದರೊಳಗೆ ಫಡ್ನವೀಸ್ ಅಧಿಕಾರವನ್ನೂ ಕಳೆದುಕೊಂಡರು. ಇಂತಹ ಅಸಂವಿಧಾನಿಕವಾದ ರೀತಿಯಲ್ಲಿ ಅಧಿಕಾರಕ್ಕೆ ಬರಲು ಯತ್ನಿಸಿ ಕೈಸುಟ್ಟುಕೊಂಡರು ಬಿಜೆಪಿ ನಾಯಕರು. ಈ ಮೂಲಕ ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿತು.
ಇನ್ನು ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಬಿಜೆಪಿ ಕೈತಪ್ಪಿ ಹೋಯಿತು. ಈ ರಾಜ್ಯಗಳಲ್ಲಿ ಬಿಜೆಪಿ ನಾಯಕರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಅಧ್ಯಕ್ಷ ಅಮಿತ್ ಶಾ ಅವರು ಸಿಡಿಸಿದ ಪಟಾಕಿಗಳೆಲ್ಲವೂ ಠುಸ್ ಎಂದವು. ಪರಿಣಾಮ ಕಳೆದ ಮೂರ್ನಾಲ್ಕು ವರ್ಷಗಳಿಂದ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷ ಮೂರು ರಾಜ್ಯಗಳಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್ಸಿಪಿ ಮೈತ್ರಿಕೂಟದೊಂದಿಗೆ ಸೇರಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದೀಗ ಜಾರ್ಖಂಡ್ ನಲ್ಲಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಬಿಜೆಪಿ ಎಡವಿದೆ. ಇಲ್ಲಿ ಆಡಳಿತದ ವಿರೋಧ ಅಲೆ ಎದ್ದು ಕಂಡಿದೆ. ಇಂದು ಪ್ರಕಟವಾದ ಫಲಿತಾಂಶವನ್ನು ಗಮನಿಸುವುದಾದರೆ ಜಾರ್ಖಂಡ್ ಎಂಬ ಪುಟ್ಟ ರಾಜ್ಯದಲ್ಲಿ ಮೋದಿ ಮತ್ತು ಅಮಿತ್ ಶಾ ಅವರ ಯಾವುದೇ ಆಟವೂ ನಡೆದಿಲ್ಲ, ಅವರು ಉದುರಿಸಿದ ರಾಜಕೀಯ ದಾಳಗಳೆಲ್ಲವೂ ತಮಗೇ ಮುಳುವಾಗಿವೆ.
ಹೀಗೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ರುಚಿಯನ್ನು ನೋಡುತ್ತಿರುವುದನ್ನು ಗಮನಿಸಿದರೆ ಸೋಲು-ಗೆಲುವಿನ ಚಕ್ರ ತಿರುಗಲಾರಂಭಿಸಿದೆ ಎಂದೇ ಹೇಳಬಹುದು. ಅಷ್ಟೇ ಅಲ್ಲ ಮೇಲಿದ್ದವನು ಕೆಳಗೆ ಇಳಿಯಲೇಬೇಕೆಂಬ ಪಾಠವನ್ನು ವಿವಿಧ ರಾಜ್ಯಗಳ ಮತದಾರರು ಬಿಜೆಪಿ ನಾಯಕರಿಗೆ ಹೇಳಿಕೊಟ್ಟಿದ್ದಾರೆ.
ಜಾರ್ಖಂಡ್ ನಲ್ಲಿ ಪ್ರಮುಖವಾಗಿ ಬಿಜೆಪಿ ಸೋಲಿಗೆ ಕಾರಣಗಳಾವುವು ಎಂಬುದನ್ನು ನೋಡುವುದಾದರೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಎಲ್ಲರಿಗೂ ತಿಳಿದಿರುವಂತೆ ಅಯೋಧ್ಯೆಯ ರಾಮಮಂದಿರ ಮತ್ತು ಸಿಎಎ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ ನಡೆದ ಮೊದಲ ವಿಧಾನಸಭೆ ಚುನಾವಣೆ ಇದಾಗಿತ್ತು. ಇದಲ್ಲದೇ, ಪೌರತ್ವ ತಿದ್ದುಪಡಿ ಕಾನೂನು ವಿಚಾರವೂ ಪ್ರಮುಖವಾಗಿತ್ತು. ಜಾರ್ಖಂಡ್ ನಲ್ಲಿ ನಡೆದ ಚುನಾವಣೆ ಪ್ರಚಾರ ಸಮಾವೇಶಗಳಲ್ಲಿ ಹೋದಲ್ಲೆಲ್ಲಾ ಬಂದಲ್ಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಈ ಎರಡೇ ವಿಚಾರಗಳನ್ನು ಬಹುವಾಗಿ ಪ್ರಸ್ತಾಪ ಮಾಡಿದರು. ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ಪ್ರಸ್ತಾಪ ಮಾಡುವುದನ್ನು ಬಿಟ್ಟು ಈ ಇಬ್ಬರು ನಾಯಕರು ತಮಗೆ ಅನುಕೂಲವಾಗುವ ಈ ಎರಡು ಅಂಶಗಳನ್ನು ಪ್ರಸ್ತಾಪ ಮಾಡಿದರೆ ಜನ ಮತ ಹಾಕುತ್ತಾರೆ ಎಂಬ ಭ್ರಮಾಲೋಕದಲ್ಲಿ ತೇಲಿದ್ದರು. ಆದರೆ, ಜಾರ್ಖಂಡ್ ನ ಪ್ರಜ್ಞಾವಂತ ಮತದಾರ ಈ ಮರುಳು ಮಾಡುವ ಮಾತಿಗೆ ಸೊಪ್ಪು ಹಾಕದೇ ತಮ್ಮದೇ ಆದ ನಿರ್ಧಾರದಂತೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಸಫಲನಾಗಿದ್ದಾನೆ.
ಗುಡ್ಡಗಾಡು ಪ್ರದೇಶ ಮತ್ತು ಬುಡಕಟ್ಟು ಪ್ರದೇಶದ ಜನರೇ ಅಧಿಕವಾಗಿರುವ ಈ ರಾಜ್ಯದಲ್ಲಿ ಮೋದಿ ಎಷ್ಟರ ಮಟ್ಟಿಗೆ ಮತದಾರರನ್ನು ಓಲೈಸಿಕೊಳ್ಳಲು ಯತ್ನಿಸಿದರೆಂದರೆ ಒಂದು ಹಂತದಲ್ಲಿ ರಾಮನಿಗೂ ಬುಡಕಟ್ಟು ಜನಾಂಗದ ನಡುವೆ ಸಂಬಂಧವನ್ನೂ ಕಲ್ಪಿಸಿದರು. ಅದೆಂದರೆ, ಶ್ರೀರಾಮನು ರಾಜನಾಗಿ ಅಯೋಧ್ಯೆಯನ್ನು ತೊರೆದ. ಆದರೆ, ಮರ್ಯಾದಾ ಪುರುಷೋತ್ತಮನಾಗಿ ವಾಪಸಾದ. ವನವಾಸ ಅನುಭವಿಸುವಾಗ ರಾಮನು ಅರಣ್ಯದಲ್ಲಿನ ಆದಿವಾಸಿಗಳ ಜತೆಗೆ ಜೀವನ ಸಾಗಿಸಿದ ಎಂದೆಲ್ಲಾ ಹೇಳಿ ಆದಿವಾಸಿಗಳ ಮತಗಳನ್ನು ಸೆಳೆಯಲು ಮುಂದಾದರಾದರೂ ಯಾವುದೂ ವರ್ಕೌಟ್ ಆಗಲಿಲ್ಲ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರಸ್ತಾಪ ಮಾಡಿದ ಬಿಜೆಪಿ ನಾಯಕರು, ಈ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಮತ್ತು ಬೆಂಕಿ ಹಚ್ಚಿದವರನ್ನು ಅವರು ಹಾಕಿರುವ ಬಟ್ಟೆಯಿಂದ ಗುರುತಿಸಬಹುದು ಎಂದು ಹೇಳುವ ಮೂಲಕ ಹಿಂದೂ ಮತಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನೂ ಮಾಡಿದರು. ಆದರೆ, ಅದು ಮತ ಗಳಿಕೆಯಾಗದೇ ಮತ ವಿಭಜನೆಗೆ ಕಾರಣವಾಯಿತು.
ಬಿಜೆಪಿ ನಾಯಕರು ಇದೇ ಕಾರ್ಯತಂತ್ರವನ್ನು ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿಯೂ ಅನುಸರಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿ ಮಹತ್ಸಾಧನೆ ಮಾಡಿದ್ದೇವೆ ಎಂದು ಫೋಸ್ ಕೊಟ್ಟರು. ಈ ಮೂಲಕ ಮತದಾರರ ಮನಸಲ್ಲಿ ರಾಷ್ಟ್ರೀಯತೆಯ ಬೀಜ ಬಿತ್ತಲು ಪ್ರಯತ್ನ ನಡೆಸಿದರು. ಆದರೆ, ಈ ಎರಡೂ ರಾಜ್ಯಗಳ ಮತದಾರರಿಗೆ ಯಾವ 370 ಯೂ ಬೇಕಿರಲಿಲ್ಲ, ಜಮ್ಮು ಕಾಶ್ಮೀರ ವಿಚಾರವೂ ಬೇಕಿರಲಿಲ್ಲ. ಅವರಿಗೆ ಬೇಕಿದ್ದದ್ದು ತಮ್ಮ ತಮ್ಮ ರಾಜ್ಯಗಳಲ್ಲಿ ಜ್ವಲಂತ ಸಮಸ್ಯೆಗಳನ್ನು ಪರಿಹಾರ ಮಾಡುವ ಭರವಸೆಗಳು. ಇಂತಹ ಯಾವುದೇ ಭರವಸೆಗಳು ಬಿಜೆಪಿ ನಾಯಕರಿಂದ ಬರಲಿಲ್ಲವಾದ್ದರಿಂದ ಮತದಾರರು ಕಮಲ ಪಕ್ಷವನ್ನು ಸ್ಪಷ್ಟವಾಗಿ ತಿರಸ್ಕರಿದರು.
ಬಿಜೆಪಿಯವರಿಗೆ ಇನ್ನೂ ಮೋದಿ ಅಲೆಯ ಗುಂಗಿನಿಂದ ಹೊರಬರಲು ಸಾಧ್ಯವಾದಂತೆ ಕಾಣುತ್ತಿಲ್ಲ. ಏಕೆಂದರೆ, ಯಾವುದೇ ರಾಜ್ಯಗಳ ಬಿಜೆಪಿ ನಾಯಕರಾಗಿರಲಿ ಅವರು ತಮ್ಮ ತಮ್ಮ ರಾಜ್ಯಗಳ ವಿಚಾರಗಳನ್ನು ಪ್ರಸ್ತಾಪ ಮಾಡುವುದನ್ನೇ ಮರೆತ್ತಿದ್ದಾರೆ. ಅವರನ್ನು ಅರ್ಧರಾತ್ರಿಯಲ್ಲಿ ಎಬ್ಬಿಸಿ ಭಾಷಣ ಮಾಡಿ ಎಂದು ಹೇಳಿದರೆ, ಈಗ ನೋಡಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ, ವಿಶ್ವದ ಶ್ರೇಷ್ಠ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಲೆ ದೇಶದೆಲ್ಲೆಡೆ ಇದೆ. ಈ ಬಾರಿಯೂ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ.
ಇವರನ್ನು ನಿಮ್ಮ ರಾಜ್ಯದ ಅಭಿವೃದ್ಧಿ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿ ಎಂದರೆ ಅಲ್ಲಿಯೂ ಮೋದಿ ಅವರು ಪ್ರಧಾನಮಂತ್ರಿ ಆದ ದಿನದಿಂದ ದೇಶ ಸುಭೀಕ್ಷವಾಗಿದೆ ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಮೋದಿ ಅಲೆ ಅವರನ್ನು ಸಮ್ಮೋಹನಗೊಳಿಸಿದೆ. ರಾಜ್ಯದಲ್ಲಿ ಸಮಸ್ಯೆಗಳನ್ನು ಬಿಟ್ಟು ಬರೀ ಮೋದಿ ಗುಣಗಾನ ಮಾಡಿದ್ದೇ ಬಿಜೆಪಿಗೆ ಮಹಾರಾಷ್ಟ್ರ, ಹರ್ಯಾಣ ಮತ್ತು ಈಗ ಜಾರ್ಖಂಡ್ ನಲ್ಲಿ ಮಗ್ಗುಲ ಮುಳ್ಳಾಗಿದೆ ಎಂದರೆ ತಪ್ಪಾಗಲಾರದು.
ಲೋಕಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಾದರೆ ಮೋದಿಯವರು ರಾಷ್ಟ್ರ ಮಟ್ಟದಲ್ಲಿ ಏನೆಲ್ಲಾ ಜಾರಿಗೆ ತಂದಿದ್ದಾರೆ ಎಂಬ ವಿಚಾರಗಳನ್ನು ಪ್ರಸ್ತಾಪ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಈ ಒಂದು ಸಾಮಾನ್ಯ ಜ್ಞಾನವನ್ನೂ ಇಟ್ಟುಕೊಳ್ಳದ ಬಿಜೆಪಿ ನಾಯಕರು ಸ್ಥಳೀಯ ಸಮಸ್ಯೆಗಳನ್ನು ಬಿಟ್ಟು, ಮೋದಿ, ರಾಷ್ಟ್ರೀಯವಾದ, ಹಿಂದುತ್ವ, ರಾಮಜನ್ಮಭೂಮಿ ಎಂಬೆಲ್ಲಾ ವಿಚಾರಗಳನ್ನು ಮತದಾರನ ತಲೆಗೆ ತುಂಬಲು ನಡೆಸಿದ ಪ್ರಯತ್ನದ ಮೂಲಕ ಭಾರೀ ಪ್ರಮಾಣದ ಕಲ್ಲನ್ನು ಎಡವಿದಂತೆ ಮಾಡಿಕೊಂಡರು.
ಇಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ಮತ್ತೊಂದು ಕಾರಣವೆಂದರೆ ಮೇಲ್ವರ್ಗಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು. ಮಹಾರಾಷ್ಟ್ರದಲ್ಲಿ ಮರಾಠ ಅಭ್ಯರ್ಥಿಗೆ ಬದಲಾಗಿ ಬ್ರಾಹ್ಮಣರಾದ ದೇವೇಂದ್ರ ಫಡ್ನಾವೀಸ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡಿದ್ದು, ಹರ್ಯಾಣದಲ್ಲಿ ಜಾಟ್ ಸಮುದಾಯಕ್ಕೆ ಬದಲಾಗಿ ಪಂಜಾಬಿಯಾದ ಖಟ್ಟರ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡಿದ್ದು ಮತ್ತು ಜಾರ್ಖಂಡ್ ನಲ್ಲಿ ಬುಡಕಟ್ಟು ಸಮುದಾಯೇತರರಾದ ರಘುಬಾರ್ ದಾಸ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಬಿಜೆಪಿ ಹಿನ್ನಡೆಗೆ ಮತ್ತೊಂದು ಕಾರಣವಾಗಿದೆ.