‘ಕೋವಿಡ್-19’ ವ್ಯಾಪಾಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ದೇಶಾದ್ಯಂತ ಹೇರಲಾಗಿರುವ 21 ದಿನಗಳ ‘ಲಾಕ್ ಡೌನ್’ ನಿಂದಾಗಿ ಜನತೆ ತಬ್ಬಿಬ್ಬಾಗಿ ಅಲ್ಲಲ್ಲಿ ಪೋಲಿಸರು ಲಾಠಿ ಬೀಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಮತ್ತು ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಿವೆ. ಜನಸಾಮಾನ್ಯರಿಗೆ ಆಗುವ ಆರ್ಥಿಕ ನಷ್ಟ ಅನನುಕೂಲತೆಗಳನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರ್ಕಾರ ತ್ವರಿತವಾಗಿ ಹತ್ತು ಕ್ರಮಗಳನ್ನು ಕೈಗೊಳ್ಳುವಂತೆ ಮಾಜಿ ವಿತ್ತ ಸಚಿವ ಚಿದಂಬರಂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕಿ ಸೋನಿಯಗಾಂಧಿ ಅವರು ಪ್ರಧಾನಿಗೆ ನಾಲ್ಕುಪುಟಗಳ ಪತ್ರ ಬರೆದು ಎಂಟು ಅಂಶಗಳತ್ತ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ 21 ದಿನಗಳ ಲಾಕ್ ಡೌನ್ ಮತ್ತು ನಂತರ ಸರ್ಕಾರ ಕೈಗೊಳ್ಳುವ ಎಲ್ಲಾ ಕ್ರಮಗಳನ್ನು ಬೆಂಬಲಿಸುವುದಾಗಿಯೂ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶವ್ಯಾಪಿ ಲಾಕ್ ಡೌನ್ ಘೋಷಣೆ ಮಾಡುವ ಮುಂಚೆಯೇ ಚಿದಂಬರಂ ಅವರು ತಕ್ಷಣ ಲಾಕ್ ಡೌನ್ ಮಾಡಬೇಕು ಎಂದು ಸಲಹೆ ನೀಡಿದ್ದರು. ಮಾರ್ಚ್ 19 ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದ ಚಿದಂಬಂರಂ, ‘ಪ್ರಧಾನಿಗಳು ದೇಶವ್ಯಾಪಿ ಲಾಕ್ ಡೌನ್ ಘೋಷಿಸದಿದ್ದರೆ ನನಗೆ ಖಂಡಿತಾ ನಿರಾಶೆಯಾಗುತ್ತದೆ’ ಎಂದು ತಿಳಿಸಿದ್ದರು. ಅಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಬಾಷಣ ಮಾಡಿದ್ದ ಪ್ರಧಾನಿ ಮೋದಿ ಭಾನುವಾರ ಒಂದು ದಿನ ಎಲ್ಲರೂ ಮನೆಯಲ್ಲಿದ್ದು, ಸಂಜೆ 5 ಗಂಟೆಗೆ ಬಾಲ್ಕನಿಯಲ್ಲಿ ನಿಂತು ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವವರಿಗೆ ಕೃತಜ್ಞತೆ ಸಲ್ಲಿಸಲು ಚಪ್ಪಾಳೆ ತಟ್ಟಿ ಎಂದು ಹೇಳಿದ್ದರು. ಮೋದಿ ಅಭಿಮಾನಿಗಳು ಅದನ್ನು ತಪ್ಪಾಗಿ ತಿಳಿದು ಅಂದು ಸಂಜೆ 5 ಗಂಟೆಗೆ ಗುಂಪುಗುಂಪಾಗಿ ಸೇರಿ ಅದೇನೋ ಸಂಭ್ರಮ ಎಂಬಂತೆ ಆಚರಿಸಿದ್ದರು.

ಆದರೆ, ದೇಶವ್ಯಾಪಿ ‘ಕೋವಿಡ್-19’ ಹಾವಳಿ ತೀವ್ರವಾಗುತ್ತಿದ್ದಂತೆ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿ ಮತ್ತೆ 24ರಂದು ರಾತ್ರಿ 8 ಗಂಟೆಗೆ ಮತ್ತೆ ದೇಶವನ್ನುದ್ದೇಶಿಸಿ, 21 ದಿನಗಳ ಲೌಕ್ ಡೌನ್ ಪ್ರಕಟಿಸಿದ್ದರು. ಒಂದು ವೇಳೆ ಪ್ರಧಾನಿ ನರೇಂದ್ರಮೋದಿ ಚಿದಂಬರಂ ಅವರ ಸಲಹೆಯನ್ನು ಪರಿಗಣಿಸಿ (ಕೇವಲ ಚಿದಂಬರಂ ಅಷ್ಟೇ ಅಲ್ಲ, ಕೇಂದ್ರ ಸರ್ಕಾರದ ಹಲವು ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ತಜ್ಞರು ಸಹ ಮುಂಚಿತವಾಗಿಯೇ ಲಾಕ್ ಡೌನ್ ಗೆ ಸಲಹೆ ಮಾಡಿದ್ದರು) 19ರ ಮಧ್ಯರಾತ್ರಿಯಿಂದಲೇ ಲಾಕ್ ಡೌನ್ ಘೋಷಿಸಿದ್ದರೆ ‘ಕೋವಿಡ್-19’ ಹಾವಳಿ ಈ ಹೊತ್ತಿಗೆ ಸ್ವಲ್ಪ ಮಟ್ಟಿಗಾದರೂ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ನರೇಂದ್ರ ಮೋದಿ ಅವರು ಚಿದಂಬರಂ ಅವರ (ಮತ್ತಿತರರ) ಸಲಹೆಯನ್ನು ಪರಿಗಣಿಸಲೇ ಇಲ್ಲ.
ಈಗ ದೇಶವ್ಯಾಪಿ ಲಾಕ್ ಡೌನ್ ಘೋಷಿಸಲಾಗಿದೆ. ಜನರು ಸಂಕಷ್ಟ ಎದುರಿಸುತ್ತಿರುವ ವರದಿಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಈ ಹೊತ್ತಿನಲ್ಲಿ ಜನತೆಗೆ ಆಗುವ ಅನಾನುಕೂಲಗಳನ್ನು ತಗ್ಗಿಸುವ ಮೂಲಕ ಸಂಕಷ್ಟವನ್ನು ಕೊಂಚ ಮಟ್ಟಿಗಾದರೂ ನಿವಾರಿಸುವ ಸಲುವಾಗಿ ಹತ್ತು ಕ್ರಮಗಳನ್ನು ಕೈಗೊಳ್ಳುವಂತೆ ಚಿದಂಬರಂ ಅವರು ಪ್ರಧಾನಿ ನರೇಂದ್ರ ಮೋದಿಗೆ ಸಲಹೆಮಾಡಿದ್ದಾರೆ.
ಆ ಹತ್ತು ಸಲಹೆಗಳೇನು?
1- ಎಲ್ಲಾ ರೀತಿಯ ತೆರಿಗೆ ಪಾವತಿಗಳನ್ನು ಜೂನ್ 30ವರೆಗೆ ವಿಸ್ತರಿಸಬೇಕು. ಜತೆಗೆ ಪಂಚಾಯ್ತಿಗಳು, ಪುರಸಭೆ, ನಗರಸಭೆ ಮತ್ತು ನಗರಪಾಲಿಕೆಗಳಿಗೆ ಸ್ವೀಕರಿಸಬಹುದಾದ ತೆರಿಗೆಯನ್ನು ಖಾತರಿಯೆಂದು ಪರಿಗಣಿಸಿ, ಬ್ಯಾಂಕುಗಳು ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು.
2- ಎಲ್ಲಾ ವಿಧವಾದ ಇಎಂಐ (ಸಮಾನ ಮಾಸಿಕ ಕಂತುಗಳು) ಪಾವತಿಗಳನ್ನು ಜೂನ್ 30ರವರೆಗೆ ವಿಸ್ತರಿಸಬೇಕು ಎಂದು ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಬೇಕು.
3- ಎಲ್ಲಾ ಅತ್ಯಾವಶ್ಯಕ ಸರಕು ಮತ್ತು ಸೇವೆಗಳು ಜನಸಾಮಾನ್ಯರು ಬಳಸುವ ನಿತ್ಯೋಪಯೋಗಿ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಏಪ್ರಿಲ್ 1ರಿಂದ ಜೂನ್ 30ರವರೆಗೆ ಶೇ.5ರಷ್ಟು ತಗ್ಗಿಸಬೇಕು.
4-ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ಪಾವತಿಸುವ ಮೊತ್ತವನ್ನು ದುಪ್ಪಟ್ಟುಗೊಳಿಸಬೇಕು. ಈಗ ಹಾಲಿ 6000 ರುಪಾಯಿ ಇದ್ದು ಅದನ್ನು 12,000 ರುಪಾಯಿಗೆ ಹೆಚ್ಚಿಸಬೇಕು. ಹೆಚ್ಚುವರಿ ಮೊತ್ತವನ್ನು ತಕ್ಷಣವೇ ರೈತರ ಬ್ಯಾಂಕ್ ಖಾತೆಗೆ ವರ್ಗಾಹಿಸಬೇಕು.
5-ಕೃಷಿಭೂಮಿಯನ್ನು ಗುತ್ತಿಗೆ ಪಡೆದು ಕೃಷಿ ಮಾಡುವ ರೈತರಿಗೆ ಎರಡು ಕಂತುಗಳಲ್ಲಿ ತಲಾ 6000 ರುಪಾಯಿಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಬೇಕು.
6-ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೊಂದಾಯಿಸಿಕೊಂಡಿರುವ ಕೃಷಿ ಕಾರ್ಮಿಕರಿಗೆ ಪ್ರತಿಯೊಬ್ಬರಿಗೂ ತಲಾ 3000 ರುಪಾಯಿಗಳನ್ನು ಬ್ಯಾಂಕ್ ಖಾತೆಗೆ ವರ್ಗಾಹಿಸಬೇಕು.
7-ನಗರ ಪ್ರದೇಶದ ಬಡಜನರಿಗೆ ಜನಧನ್ ಖಾತೆಯ ಮೂಲಕ ತಕ್ಷಣವೇ 6000 ರುಪಾಯಿಗಳನ್ನು ವರ್ಗಾಹಿಸಬೇಕು.
8-ಎಲ್ಲಾ ಪಡಿತರ ಕಾರ್ಡುದಾರರಿಗೆ 10 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಅವರವರ ಮನೆಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕು.
9-ಕಾನೂನು ಪ್ರಕಾರ ನೋಂದಾಯಿತ ಎಲ್ಲಾ ಕಾರ್ಮಿಕರಿಗೆ ಅವರು ಹಾಲಿ ಪಡೆಯುತ್ತಿರುವ ವೇತನವನ್ನು ಯಾವುದೇ ಕಡಿತವಿಲ್ಲದೇ ಪಾವತಿಸಬೇಕು ಎಂದು ಆದೇಶಿಸಬೇಕು. ಕೇಂದ್ರ ಸರ್ಕಾರವು ಉದ್ಯೋಗದಾತರಿಗೆ ಈ ಮೊತ್ತವನ್ನು ಒಂದು ತಿಂಗಳೊಳಗೆ ಮರುಪಾವತಿ ಮಾಡುವುದಾಗಿ ಘೋಷಿಸಬೇಕು.
10-ಮೇಲ್ಕಂಡ ಯೋಜನೆಯಡಿ ಫಲಾನುಭವ ಪಡೆಯದ ಜನರನ್ನು ಆಯಾ ವಾರ್ಡು ಅಥವಾ ಬ್ಲಾಕ್ ಗಳಲ್ಲಿ ನೊಂದಾಯಿಸಿ ಅವರಿಗೆ ಮೇಲ್ಕಂಡ ಸೌಲಭ್ಯ ಒದಗಿಸಬೇಕು. ಬೀದಿ ಜನರು ಮತ್ತು ನಿರ್ಗತಿಕರು ಈ ವ್ಯಾಪ್ತಿಗೆ ಬರುತ್ತಾರೆ. ಕನಿಷ್ಠ ಪರಿಶೀಲನೆ ನಂತರ ಇವರೆಲ್ಲರಿಗೂ ಬ್ಯಾಂಕ್ ಖಾತೆ ತೆಗೆದು ತಕ್ಷಣವೇ 3000 ರುಪಾಯಿ ವರ್ಗಾಹಿಸಬೇಕು.
I am glad that the government has announced a Financial Action Plan today that reflects some elements of the 10-point plan that I had put forward yesterday. I offer a cautious welcome.
It is a modest plan. In due course, government will realize that it must do more.
— P. Chidambaram (@PChidambaram_IN) March 26, 2020
ಸೋನಿಯಾಗಾಂಧಿ ಅವರು ನೀಡಿದ ಸಲಹೆಗಳು:
Congress President & CPP Chairperson Smt. Sonia Gandhi writes a letter to PM Modi with suggestions that the govt should immediately undertake in this lockdown period. pic.twitter.com/YGsjUUFGKe
— Congress (@INCIndia) March 26, 2020
ಸರ್ಕಾರವು ಕರೋನಾ ವಿರುದ್ಧ ವೈದ್ಯಕೀಯ ಸುರಕ್ಷತೆಗಾಗಿ 15,000 ಕೋಟಿ ರುಪಾಯಿ ಬಿಡುಗಡೆ ಮಾಡಲು ನಿರ್ಧರಿಸಿರುವುದು ಸೂಕ್ತವಾಗಿದೆ. ಜತೆಗೆ ವೈದ್ಯಕೀಯ ಸಿಬ್ಬಂದಿಗಳಿಗೆಲ್ಲ ಎನ್-95 ಮಾಸ್ಕ್ ಗಳನ್ನು ಮತ್ತು ವೈಯಕ್ತಿಕ ಸುರಕ್ಷತಾ ಪರಿಕರಗಳನ್ನು(ಪಿಪಿಇ) ಒದಗಿಸಬೇಕು. ವೈದ್ಯಕೀಯ ಸಿಬ್ಬಂದಿಗೆ ರಿಸ್ಕ್ ಅಲೊಯನ್ಸ್ ನೀಡಬೇಕು. ಕೊರೊನಾ ಚಿಕಿತ್ಸೆ ನೀಡುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು. ಅದ್ಕಕಾಗಿ ಪ್ರತ್ಯೇಕವಾದ ಒಂದು ಪೋರ್ಟಲ್ ಪ್ರಾರಂಭಿಸಬೇಕು. ತ್ವರಿತವಾಗಿ ತಾತ್ಕಾಲಿಕ ಐಸಿಯುಗಳನ್ನು ನಿರ್ಮಿಸಬೇಕು. ಕಾರ್ಮಿಕರು, ಕೃಷಿಕರು, ಸಣ್ಣವ್ಯಾಪಾರಿಗಳು ಸೇರಿದಂತೆ ಸಂಕಷ್ಟಕ್ಕೆ ಒಳಗಾಗುತ್ತಿರುವರಿಗೆ ನೆರವು ಒದಗಿಸಲು ನೇರವಾಗಿ ನಗದು ವರ್ಗಾಹಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರೈತರ ಸಾಲ ವಸೂಲಾತಿಯನ್ನು ಆರು ತಿಂಗಳ ಕಾಲ ಮುಂದೂಡಬೇಕು, ರೈತರ ಎಲ್ಲಾ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಕ್ರಮಕೈಗೊಳ್ಳಬೇಕು. ಕಾಂಗ್ರೆಸ್ ಪ್ರಸ್ತಾಪಿಸಿದ ಕನಿಷ್ಠ ಆದಾಯ ಖಾತರಿ ಯೋಜನೆಯು(ನ್ಯಾಯ್) ಈ ಹೊತ್ತಿನಲ್ಲಿ ಅತ್ಯಗತ್ಯ ಎನಿಸುತ್ತಿದೆ. ಅದಕ್ಕೆ ಪೂರಕವಾಗಿ ಸರ್ಕಾರವು ಕೂಡಲೇ ಕೃಷಿಕರು, ಕಾರ್ಮಿಕರು ಸೇರಿದಂತೆ ಎಲ್ಲಾ ಸಂಕಷ್ಟದಲ್ಲಿರುವ ವರ್ಗಗಳಿಗೆ 7500 ರುಪಾಯಿಗಳನ್ನು ಬ್ಯಾಂಕ್ ಖಾತೆಗೆ ವರ್ಗಾಹಿಸಬೇಕು. ಸಂಬಳದಾರರ ಇಎಂಐ ಪಾವತಿಯನ್ನು ಆರು ತಿಂಗಳು ಮುಂದೂಡಬೇಕು. ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಗಳಿಗೆ ವಲಯವಾರು ಪರಿಹಾರಗಳನ್ನು ಘೋಷಿಸಲೇಬೇಕು ಎಂದು ಸೋನಿಯಾಗಾಂಧಿ ಅವರು ಸಲಹೆ ಮಾಡಿದ್ದಾರೆ.