ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಎಸಿಬಿ ಅಧಿಕಾರಿಗಳು ಚಿಕ್ಕಜಾಲ ಕಂದಾಯ ನಿರೀಕ್ಷಕ ಹಾಗೂ ಚಿಕ್ಕಜಾಲ ಪೊಲೀಸ್ ಠಾಣೆಯ ಪೋಲೀಸ್ ಹೆಡ್ ಕಾನ್ಸ್ಟೇಬಲ್ ಓರ್ವರನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊರ್ವ ಆರೋಪಿ ಚಿಕ್ಕಜಾಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ತಲೆಮರೆಸಿಕೊಂಡಿದ್ದಾರೆ.
ಬೆಂಗಳೂರು ನಗರದ ನಿವಾಸಿಯೊಬ್ಬರು ಬೆಂಗಳೂರು ಉತ್ತರ ತಾಲ್ಲೂಕು ಜಾಲ ಹೋಬಳಿಯಲ್ಲಿ 5 ಎಕರೆ ಜಮೀನನ್ನು 2018ನೇ ಸಾಲಿನಲ್ಲಿ ಖರೀದಿಸಿ ನೋಂದಣಿ ಮಾಡಿಸಿದ್ದರು. ಆದರೆ, ಜಮೀನಿನ ಹಿಂದಿನ ಮಾಲೀಕರು ಅದೇ ಜಮೀನನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡುವ ಸಲುವಾಗಿ ಕರಾರು ಮಾಡಿಕೊಂಡಿರುವುದು ಗಮನಕ್ಕೆ ಬಂದಿದ್ದು, ಇದೇ ವಿಷಯವಾಗಿ ದೂರುದಾರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು ದೂರುದಾರರ ಪರವಾಗಿ ತಾತ್ಕಲಿಕವಾಗಿ ತಡೆಯಾಜ್ಞೆಯನ್ನು ನೀಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೂರುದಾರರು ಜಮೀನಿನ ಪೋಡಿ, ಪವತಿ ಖಾತೆ ಮತ್ತು ಮ್ಯುಟೇಷನ್ ಅನ್ನು ಮಾಡಿಕೊಡುವ ಸಲುವಾಗಿ ತಹಶೀಲ್ದಾರ್ ರವರ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ, ಜಮೀನಿನ ದಾಖಲಾತಿಗಳನ್ನು ಮಾಡಿಕೊಡುವ ಸಲುವಾಗಿ ಚಿಕ್ಕಜಾಲ ನಾಡ ಕಛೇರಿ ಕಂದಾಯ ನಿರೀಕ್ಷಕ ಹೆಚ್.ಪುಟ್ಟಹನುಮಯ್ಯ ಅಲಿಯಾಸ್ ಪ್ರವೀಣ್ 50 ಲಕ್ಷ ರೂ ಲಂಚದ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ನ್ಯಾಯಾಲಯದಲ್ಲಿ ದಾವೆ ಇರುವ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬೋರ್ಡ್ ಅಳವಡಿಸಲು ಮತ್ತು ಸೂಕ್ತ ರಕ್ಷಣೆ ನೀಡುವ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ದೂರುದಾರರು ಸಂಪರ್ಕಿಸಿದಾಗ ಪೊಲೀಸರು ಕೂಡಾ 10 ಲಕ್ಷ ರೂ ಲಂಚದ ಬೇಡಿಕೆ ಇಟ್ಟಿದ್ದಾರೆ.


ಈ ಕುರಿತು ಜಮೀನು ಖರೀದಿಸಿಕೊಂಡ ವ್ಯಕ್ತಿ (ದೂರುದಾರ) ಎಸಿಬಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ 08/01/2021 ರಂದು ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ದೂರುದಾರರಿಂದ ಕಂದಾಯ ನಿರೀಕ್ಷಕ ಹೆಚ್.ಪುಟ್ಟಹನುಮಯ್ಯ ಅಲಿಯಾಸ್ ಪ್ರವೀಣ್ 5 ಲಕ್ಷ ಲಂಚದ ಹಣ ಹಾಗೂ ಚಿಕ್ಕಜಾಲ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಯಶವಂತ ಪರವಾಗಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರಾಜು ಅವರು 6 ಲಕ್ಷ ಲಂಚದ ಹಣವನ್ನು ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬೆಂಗಳೂರು ನಗರ ಠಾಣೆಯ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾದ ಪೊಲೀಸ್ ಇನ್ಸ್ಪೆಕ್ಟರ್ ಯಶವಂತ ಅವರು ತಲೆಮರೆಸಿಕೊಂಡಿದ್ದಾರೆಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.