ಅದು ಹೇಳಿಕೊಳ್ಳಲು ದೇಶದ ಬೆನ್ನೆಲುಬು ರೈತರ ಸಮಾವೇಶ. ಅಲ್ಲಿ ದೇಶದ ಪ್ರಗತಿಪರ ರೈತರಿಗೆ, ಸಂಘ ಸಂಸ್ಥೆಗಳಿಗೆ, ವಿವಿಧ ರಾಜ್ಯ ಸರ್ಕಾರಗಳಿಗೆ ಕೃಷಿ ಸಮ್ಮಾನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಆದರೆ, ಇದೇ ರೈತರ ಸಮಾವೇಶದಲ್ಲಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ಬರುತ್ತಿದ್ದ ಅನ್ನದಾತನ ಹೆಡೆಮುರಿ ಕಟ್ಟಿದ್ದು ಮಾತ್ರ ಅತ್ಯಂತ ದುಃಖಕರವಾದ ವಿಚಾರವಾಗಿದೆ.
ಕೇಂದ್ರದ ಬಿಜೆಪಿ ಸರ್ಕಾರ ಕಲ್ಪತರು ನಾಡು ತುಮಕೂರಿನಲ್ಲಿ ರೈತರ ದೊಡ್ಡದೊಂದು ಸಮಾವೇಶ ಮಾಡಿ ಅಲ್ಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಸಿ ಅವರಿಂದ ಕೃಷಿ ಸಮ್ಮಾನ್ ಪ್ರಶಸ್ತಿಗಳನ್ನು ಕೊಡಿಸುವ ಕಾರ್ಯಕ್ರಮ ಆಯೋಜಿಸಿತ್ತು. ಹೇಗಿದ್ದರೂ ಪ್ರಧಾನಮಂತ್ರಿ ನಮ್ಮೂರಿಗೆ ಬರುತ್ತಿದ್ದಾರೆ. ಅವರಿಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿಕೊಳ್ಳಲು ತುಮಕೂರು ಜಿಲ್ಲೆಯ ಪ್ರತಿ ತಾಲೂಕಿನ ರೈತರು, ಶಿವಮೊಗ್ಗ ಜಿಲ್ಲೆಯ ರೈತರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರೈತರು ತುಮಕೂರಿಗೆ ಆಗಮಿಸಲು ಅಣಿಯಾಗಿದ್ದರು.
ಆದರೆ, ಶಿವಮೊಗ್ಗ ಮತ್ತು ಇತರೆಡೆಗಳಲ್ಲಿ ರೈಲು ಮತ್ತು ಇತರೆ ವಾಹನಗಳನ್ನು ಹತ್ತಿ ತುಮಕೂರಿನತ್ತ ಪ್ರಯಾಣ ಆರಂಭಿಸಿದ್ದ ರೈತರನ್ನು ಮನಸೋಇಚ್ಛೆ ಎಳೆದಾಡಿ ಆಯಾ ಊರುಗಳಿಂದ ಹೊರ ಹೋಗಲೂ ಬಿಡಲಿಲ್ಲ ಕಾನೂನುಪಾಲಕರಾದ ಪೊಲೀಸರು. ರೈತರು ತಾವು ತುಮಕೂರಿಗೆ ಹೋಗುತ್ತಿರುವ ಉದ್ದೇಶವನ್ನು ವಿವರಿಸಿದರೂ ಬಿಡದ ಪೊಲೀಸರು ಸಂಜೆವರೆಗೆ ತಮ್ಮ ವಶಕ್ಕೆ ತೆಗೆದುಕೊಂಡು ಬಿಟ್ಟಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಪೊಲೀಸರ ಮೂಲಕ ರೈತರ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಿದೆ.
ಶಿವಮೊಗ್ಗದಿಂದ ರೈಲು ಹತ್ತಿ ತುಮಕೂರಿಗೆ ಆಗಮಿಸುತ್ತಿದ್ದ ರೈತಸಂಘದ ಬಸವರಾಜಪ್ಪ ಮತ್ತಿತರೆ ರೈತರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ದರ್ಪ ಮೆರೆದಿದ್ದಾರೆ.
ಇನ್ನು ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೊರಟ ರೈತರನ್ನು ಆಯಾ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿಯೇ ತಡೆಯಲಾಯಿತು. ತುಮಕೂರು ನಗರದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವ ಸಲುವಾಗಿ ಕಪ್ಪುಪಟ್ಟಿ ಧರಿಸಿ ಸಮಾವೇಶದ ಸ್ಥಳಕ್ಕೆ ಆಗಮಿಸುತ್ತಿದ್ದ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ರೈತರನ್ನು ತಮ್ಮ ವಶಕ್ಕೆ ತೆಗೆದುಕೊಂಡ ಪೊಲೀಸರು ಅವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ.
ನಾವು ಮೌನವಾಗಿರುತ್ತೇವೆ. ನಮ್ಮ ಮನವಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲು ಸಮಾವೇಶಕ್ಕೆ ಹೋಗುತ್ತಿದ್ದೇವೆ. ನಮಗೆ ಅವಕಾಶ ನೀಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಈ ಮೂಲಕ ಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆಯನ್ನು ಪೊಲೀಸರ ಮೂಲಕ ರೈತರ ಮೇಲೆ ಚಲಾಯಿಸಿದೆ.
ನಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಲು ಹೊರಟ ನಮ್ಮನ್ನು ಪೊಲೀಸರು ತಡೆದಿದ್ದಾರೆ. ಸಮಾವೇಶದಲ್ಲಿ ರೈತರಿಗೆ ಮಾತನಾಡಲೂ ಅವಕಾಶ ನೀಡಿಲ್ಲ. ಹೀಗೆ ಮಾಡಿದರೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬೇರೆ ವೇದಿಕೆ ಎಲ್ಲಿದೆ? ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಭಿಕರು ರೈತರ ಸಂಕಷ್ಟಗಳ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ? ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣಕ್ಕೆ ಜೈಕಾರ ಕೂಗಿದ್ದನ್ನು ಬಿಟ್ಟರೆ, ರೈತರಿಗೆ ಜಯವಾಗಲಿ ಎಂದು ಒಬ್ಬರೂ ಘೋಷಣೆ ಕೂಗಲಿಲ್ಲವೇಕೆ? ಹಾಗಾದರೆ, ಅಲ್ಲಿ ಪಾಲ್ಗೊಂಡಿದ್ದವರು ನಿಜವಾದ ರೈತರಲ್ಲವೇ? ಅವರೆಲ್ಲಾ ಬಿಜೆಪಿ ಕಾರ್ಯಕರ್ತರೇ? ಎಂಬ ಪ್ರಶ್ನೆಯನ್ನು ರೈತ ಮುಖಂಡರು ಕೇಳಿದ್ದಾರೆ.
ಅಲ್ಲದೇ, ಇದು ಸರ್ಕಾರದ ಕಾರ್ಯಕ್ರಮ. ಇಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಏನು ಕೆಲಸವಿತ್ತು. ಪಕ್ಷದ ನಾಯಕರಿಗೂ ಈ ಸಮಾವೇಶಕ್ಕೂ ಏನು ಸಂಬಂಧ? ದೇಶದ ಉದ್ಧಾರದ ಬಗ್ಗೆ ಗಂಟೆಗಟ್ಟಲೇ ಭಾಷಣ ಬಿಗಿಯುವ ಪ್ರಧಾನಿಗೆ ಪಕ್ಷದ ಕಾರ್ಯಕ್ರಮದ ರೀತಿಯಲ್ಲಿ ಸರ್ಕಾರಿ ಸಮಾವೇಶವನ್ನು ಆಯೋಜಿಸಬಾರದು ಎಂಬ ಸಾಮಾನ್ಯ ಪ್ರಜ್ಞೆಯೇ ಇರಲಿಲ್ಲವೇ? ಎಂದೂ ರೈತ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ರಾಜ್ಯಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿ ರೈತರ ಬಹುದಿನದ ಬೇಡಿಕೆಯಾದ ಡಾ.ಸ್ವಾಮಿನಾಥನ್ ವರದಿಯನ್ವಯ ತೆಂಗು ಸೇರಿದಂತೆ ಇನ್ನಿತರೆ ಕೃಷ್ಯುತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯನ್ನು ಘೋಷಣೆ ಮಾಡುತ್ತಾರೆ ಅಥವಾ ವರದಿಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂಬ ಘೋಷಣೆ ಮಾಡುತ್ತಾರೆ ಎಂದು ರೈತರು ಭಾವಿಸಿದ್ದರು. ಆದರೆ, ಸಮಾವೇಶದಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಹಾಗಾದರೆ, ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾದಂತಾಯಿತು.
ರೈತರ ಮೇಲೆ ಪೊಲೀಸರ ದಬ್ಬಾಳಿಕೆ ಹೇಗಿತ್ತೆಂದರೆ ಹಸಿರು ಶಾಲು ಹಾಕಿಕೊಂಡು ರಸ್ತೆಯಲ್ಲಿ ತಿರುಗುತ್ತಿದ್ದ ರೈತರನ್ನೂ ಬಂಧಿಸಲಾಗಿದೆ. ಅವರಿಗೂ ರೈತ ಸಮಾವೇಶಕ್ಕೂ ಸಂಬಂಧವೇ ಇರಲಿಲ್ಲ. ಅಷ್ಟಕ್ಕೂ ತುಮಕೂರಿನಲ್ಲಿ ರೈತರ ಸಮಾವೇಶ ನಡೆಯುತ್ತಿದೆ ಎಂಬ ಮಾಹಿತಿಯನ್ನೂ ಹೊಂದಿರದ ರೈತರ ಮೇಲೆ ದಬ್ಬಾಳಿಕೆ ನಡೆಸಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ಇನ್ನು ಕೆಲವು ಪ್ರತಿರೋಧ ತೋರಿದ ರೈತರ ಮೇಲೆ ಪೊಲೀಸರು ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಅನ್ನದಾತ ಎಂದೂ ಲೆಕ್ಕಿಸದೇ ಪೊಲೀಸ್ ವ್ಯಾನ್ ಗಳಲ್ಲಿ ಕುರಿಗಳನ್ನು ತುಂಬಿಸುವಂತೆ ತುಂಬಿಕೊಂಡು ಹೋದರು. ಮೋದಿ ಭಾಷಣ ಮುಗಿದು ತುಮಕೂರಿನಿಂದ ಹೊರಡುವವರೆಗೆ ಅಕ್ರಮ ಬಂಧನದಲ್ಲಿಟ್ಟು ಅನ್ನದಾತನಿಗೆ ಅವಮಾನ ಮಾಡಲಾಗಿದೆ.
ಇಂತಹ ದಬ್ಬಾಳಿಕೆಯ ನಡುವೆಯೇ ನಡೆದ ಈ ಸಮಾವೇಶ ಕೇವಲ ಪ್ರಧಾನಿ ಮೋದಿ ಮೂಲಕ ಬಿಜೆಪಿ ಸರ್ಕಾರದ ಅಂಕಿಅಂಶಗಳನ್ನು ಓದಲು ಮೀಸಲಾಯಿತೇ ಹೊರತು ರೈತರೊಂದಿಗೆ ಒಂದು ಸಂವಾದವಾಗಲೀ ಅಥವಾ ಚರ್ಚೆಯನ್ನಾಗಲೀ ಏರ್ಪಡಿಸುವಲ್ಲಿ ವಿಫಲವಾಯಿತು. ಒಂದು ರೀತಿಯಲ್ಲಿ ರಾಜಕೀಯ ರ್ಯಾಲಿಯ ರೀತಿಯಲ್ಲಿ ಗಣ್ಯಾತಿಗಣ್ಯರ ಭಾಷಣ ಮುಗಿಯುತ್ತಿದ್ದಂತೆಯೇ ಇಡೀ ಸಮಾವೇಶವೇ ಮುಗಿದುಹೋಯಿತು.