ಕೇಂದ್ರ ಸರ್ಕಾರ ತಂದಿರುವ ರೈತರನ್ನು ಬಾಣಲೆಯಿಂದ ಬೆಂಕಿಗೆ ತಳ್ಳುವಂತಹ ಮೂರು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ದೆಹಲಿ ಗಡಿಯಲ್ಲಿ ಕೊರೆಯುವ ಚಳಿಯಲ್ಲಿ 9 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಸಂಘಟನೆಗಳ 35 ಮಂದಿ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ಮೂವರು ಸಚಿವರ ನಡುವೆ 4 ಸುತ್ತಿನ ಮಾತುಕತೆ ನಡೆದಿದೆ. ಆದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ರೈತರು ‘ತಮ್ಮ ಪಾಲಿಗೆ ಮರಣಶಾಸನವಾಗಿರುವ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು’ ಎಂದು ಪಟ್ಟು ಹಿಡಿದಿದ್ದಾರೆ. ಕೇಂದ್ರ ಸರ್ಕಾರ ‘ಸಮಸ್ಯೆ ಪರಿಶೀಲನೆಗೆ ಸಮಿತಿ ರಚಿಸುತ್ತೇವೆ’ ಎಂದು ಹಳೆಯ ರಾಗ ಹಾಡುತ್ತಿದೆ. ಹಾಗಾದರೆ ಆ ಮೂರು ಕಾಯಿದೆಗಳಲ್ಲಿರುವ ಅಪಾಯಕಾರಿ ಅಂಶಗಳೇನು ಎಂಬ ವಿವರಗಳನ್ನು ‘ಪ್ರತಿಧ್ವನಿ’ ನಿಮ್ಮ ಮುಂದಿಡುತ್ತಿದೆ.
ಕಾನೂನು 1: ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯಗಳಿಗೆ ಉತ್ತೇಜನ ಮತ್ತು ಸೌಕರ್ಯ ಕಲ್ಪಿಸಿ ಕೊಡುವ ಕಾನೂನು. (Farmers Produce Trade and Commerce (Promotion And Facilitation) Act 2020). ಹೆಸರಿನಲ್ಲಿ ರೈತರ ಬೆಳೆಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡಿಕೊಡಲು ವಾಣಿಜ್ಯ ಅವಕಾಶಗಳನ್ನು ತೆರೆದಿಡಲಾಗುತ್ತದೆ ಎಂದು ಧ್ವನಿಸುವ (ಕೇಂದ್ರ ಸರ್ಕಾರ ಹಾಗೆಯೇ ಬಿಂಬಿಸುತ್ತಿದೆ) ಈ ಕಾಯಿದೆ ಒಳಗೆ ಈಗಿರುವ ಕೃಷಿ ಉತ್ಪನ್ನ ಮಾರಾಟ ಸಮಿತಿ (APMC) ವ್ಯವಸ್ಥೆಯನ್ನೇ ಬಲಿ ತೆಗೆದುಕೊಳ್ಳುವ ದುರುದ್ದೇಶವನ್ನು ಹೊಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೇಗೆಂದರೆ, ರೈತರ ಬೆಳೆಗಳನ್ನು ಮಾರಾಟ ಮಾಡಲು ಹಾಗೂ ಖಚಿತವಾದ ಆದಾಯವನ್ನು ಖಾತರಿ ಮಾಡಿಕೊಳ್ಳಲೆಂದು ಈವರೆಗೆ ಕೃಷಿ ಉತ್ಪನ್ನ ಮಾರಾಟ ಸಮಿತಿ ವ್ಯವಸ್ಥೆ ಇತ್ತು. ಇದು ರೈತರು, ಮಧ್ಯವರ್ತಿ ದಲ್ಲಾಳಿಗಳೂ ಹಾಗೂ ವ್ಯಾಪಾರಿಗಳನ್ನು ಒಳಗೊಂಡಿತ್ತು. ಸರ್ಕಾರವು ಈ ಕೃಷಿ ಉತ್ಪನ್ನ ಮಾರಾಟ ಸಮಿತಿ ಹಾಗೂ ಮಂಡಿಗಳ ಮೂಲಕ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ(MSP) ಕೊಟ್ಟು ಅವರ ಉತ್ಪನ್ನಗಳನ್ನು ಖರೀದಿಸುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ತಂದಿರುವ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯಗಳಿಗೆ ಉತ್ತೇಜನ ಮತ್ತು ಸೌಕರ್ಯ ಕಲ್ಪಿಸಿ ಕೊಡುವ ಕಾನೂನು ತಂದಿರುವುದರಿಂದ ಕೃಷಿ ಉತ್ಪನ್ನ ಮಾರಾಟ ಸಮಿತಿ ಅಪ್ರಸ್ತುತವಾಗುತ್ತದೆ.
ಮೊದಲಿಗೆ ರೈತರು ಬೆಳೆದ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾದ ಬೆಲೆಗಳೇ ಲಭಿಸಿದರೂ ಕ್ರಮೇಣ ಕೃಷಿ ಉತ್ಪನ್ನ ಮಾರಾಟ ಸಮಿತಿಯೇ ಇಲ್ಲದ ವಾತಾವರಣದಲ್ಲಿ ಕಾರ್ಪೂರೇಟ್ ಕಂಪನಿಗಳು ದರ ನಿಗಧಿ ಮಾಡುತ್ತವೆ. ಕ್ರಮೇಣ ಆ ಬೆಲೆಗಳು ಸರ್ಕಾರ ನೀಡುತ್ತಿದ್ದ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆಯಾಗಲಿವೆ. ವಾಸ್ತವವಾಗಿ ಸರ್ಕಾರ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯೇ ಕಡಿಮೆ. ಅಂಥದ್ದರಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಾರ್ಪೊರೇಟ್ ಕಂಪನಿಗಳು ಕಡಿಮೆ ಬೆಲೆ ನಿಗಧಿ ಮಾಡಿದರೆ ರೈತ ಸಹಜವಾಗಿ ಇನ್ನಷ್ಟು ಕಷ್ಟಕ್ಕೆ ಸಿಲುಕಲಿದ್ದಾನೆ.
Also Read: ಹೊಸ ಕೃಷಿ ಸುಧಾರಣೆಗಳ ಹಿಂದೆ ಇರುವ ಅಸಲೀ ಅಜೆಂಡಾ ಯಾವುದು?
ಈವರೆಗೆ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕೊಟ್ಟು ಆಹಾರ ಧಾನ್ಯಗಳನ್ನು ಖರೀದಿಸುತ್ತಿತ್ತು. ಆ ಆಹಾರ ಧಾನ್ಯಗಳನ್ನೇ 2013 ರಿಂದ ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದ ನಂತರ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ರಿಯಾಯತಿ ದರದಲ್ಲಿ ಕೊಡುತ್ತಿತ್ತು. ಕನಿಷ್ಠ ಬೆಂಬಲ ಬೆಲೆ ಮೂಲಕ ಕೊಂಡುಕೊಳ್ಳುವ ಪದ್ಧತಿಯೇ ನಿಂತುಹೋದರೆ ಸರ್ಕಾರ ಕೂಡ ರೈತರಿಂದ ಬೆಳೆಗಳನ್ನು ಖರೀದಿಸಲು ಅಸಾಧ್ಯ. ಆಗ ಆಹಾರ ಭದ್ರತಾ ಕಾಯಿದೆಯಡಿ ದೇಶವಾಸಿಗಳಿಗೆ ಆಹಾರ ಧಾನ್ಯ ಒದಗಿಸುವುದು ಕೂಡ ಅಸಾಧ್ಯ.
ವಾಸ್ತವ ಹೀಗಿರುವಾಗ ಕೃಷಿ ಉತ್ಪನ್ನ ಮಾರಾಟ ಸಮಿತಿ ಕೆಲ ಲೋಪ ದೋಷಗಳನ್ನೇ ಮುಂದಿಟ್ಟುಕೊಂಡು ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯಗಳಿಗೆ ಉತ್ತೇಜನ ಮತ್ತು ಸೌಕರ್ಯ ಕಲ್ಪಿಸಿ ಕೊಡುವ ಕಾನೂನು ತಂದಿದೆ. ಕೃಷಿ ಉತ್ಪನ್ನ ಮಾರಾಟ ಸಮಿತಿ ಕೆಲ ಲೋಪ ದೋಷಗಳಿಂದ ಬೇಸತ್ತಿರುವ, ಅಲ್ಲಿನ ದಲ್ಲಾಳಿಗಳ ಕಾಟದಿಂದ ಸಾಕಾಗಿರುವ ರೈತರಿಗೆ ‘ಸ್ಪರ್ಧಾತ್ಮಕ ಬೆಲೆ’ ಎಂಬ ಆಕರ್ಷಣೆ ತೋರಿ ದಾರಿ ತಪ್ಪಿಸುವ ಕೆಲಸವಾಗುತ್ತಿದೆ.
ಕಾನೂನು- 2: ರೈತರಿಗೆ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾನೂನು (Farmers (Empowerment And Protection) Price Assurance And Farm Services). ಇದು ಕೂಡ ‘ಬೆಲೆ ಭರವಸೆ’, ‘ಕೃಷಿ ಸೇವೆ’ ‘ಸಬಲೀಕರಣ’ ಹಾಗೂ ‘ಸಂರಕ್ಷಣೆ’ ಎಂಬ ಆಕರ್ಷಕ ಪದಗಳನ್ನೊಳಗೊಂಡ ಆಕರ್ಷಕ ಹೆಸರಿನ ಕಾನೂನು. ಆದರೆ ಕೇಂದ್ರ ಸರ್ಕಾರ ತಂದಿರುವ ಈ ಕಾನೂನಿನ ಒಳಗೆ ಅಡಗಿರುವುದು ಮಾತ್ರ ರೈತರನ್ನು ಕಾರ್ಪೋರೆಟ್ ಕಂಪನಿಗಳ ಪದತಳಕ್ಕೊಪ್ಪಿಸುವ ಕೌರ್ಯ.
Also Read: ಕೃಷಿ ಮಸೂದೆಗೆ ಮೋದಿ ಧಾವಂತ ಮತ್ತು ಕೃಷಿ ಹೂಡಿಕೆಗೆ ಅಂಬಾನಿ ಆತುರ!
ಹೇಗೆಂದರೆ, ದೇಶದ ರೈತರ ಪೈಕಿ ಬಹುಪಾಲು ಸಣ್ಣ ಹಿಡುವಳಿದಾರರು. ರೈತ ಹಿಡುವಳಿಗಳು ಸಣ್ಣದಾಗುತ್ತಾ ಸಾಗಿದಂತೆಲ್ಲಾ ಕೃಷಿಯಿಂದ ಬರುವ ಲಾಭ ಕ್ಷೀಣಿಸುತ್ತಾ ಹೋಗುತ್ತದೆ. ಇದರ ನಡುವೆ ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಯಲ್ಲಿ ಅಸ್ಥಿರ ವಾತಾವರಣ ನಿರ್ಮಾಣವಾಗಿದೆ. ಕೃಷಿ ಉತ್ಪನ್ನಗಳು ಹೆಚ್ಚಾಗಿ ಸೂಕ್ತ ಬೆಲೆ ಸಿಗುತ್ತಿಲ್ಲ. ಇದನ್ನು ಭರಿಸುವುದು ರೈತನಿಗೆ ಸಾಧ್ಯವಾಗುತ್ತಿಲ್ಲ. ಈ ಜಟಿಲ ಸಮಸ್ಯೆಗೆ ಕೇಂದ್ರ ಸರ್ಕಾರ ವೈಜ್ಞಾನಿಕ ಪರಿಹಾರವೊಂದನ್ನು ಕಂಡುಹಿಡಿಯಬೇಕಾದ ಜರೂರತ್ತು ಇತ್ತು. ಆದರೆ ಕೇಂದ್ರ ಈ ಸಮಸ್ಯೆಗಳ ನೆಪ ಇಟ್ಟುಕೊಂಡು ರೈತರಿಗೆ ಮಾರಕವಾಗುವಂತಹ ‘ರೈತರಿಗೆ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾನೂನು’ ತಂದಿದೆ.
ರೈತರಿಗೆ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾನೂನು ರೈತರ ಜಮೀನನ್ನು ಬೃಹತ್ ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಂದದ ಆಧಾರದಲ್ಲಿ ಗುತ್ತಿಗೆಗೆ ಕೊಡಲು ಅವಕಾಶ ಒದಗಿಸುತ್ತದೆ. ಆಗ ‘ರೈತನದ್ದೇ ಜಮೀನು, ರೈತನೇ ಕೂಲಿ, ಬೆಳೆಯುವವರು ಮಾತ್ರ ಕಾರ್ಪೊರೇಟ್ ಕಂಪನಿಗಳು’ ಎಂಬಂತಾಗುತ್ತದೆ. ಇದನ್ನು ‘ಕಾರ್ಪೊರೇಟ್ ಫಾರ್ಮಿಂಗ್’ ಎಂಬ ನಾಜೂಕಿನ ಹೆಸರಿನಲ್ಲಿ ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ರೈತರಿಗೆ ಅವರ ಒಪ್ಪಂದ ಮಾಡಿಕೊಂಡಷ್ಟು ದುಡ್ಡು ಕೊಟ್ಟು ಉಳಿದೆಲ್ಲಾ ಲಾಭವನ್ನು ಕಾರ್ಪೊರೇಟ್ ಕಂಪನಿಗಳು ನುಂಗುತ್ತವೆ.
ಇದರಲ್ಲಿ ಇನ್ನೊಂದು ಅಪಾಯವೂ ಇದೆ. ಈ ಕಾನೂನಿನ 4ನೇ ಸೆಕ್ಷನ್ನಿನ 2ನೇ ಸಬ್ ಕ್ಲಾಸಿನ ಪ್ರಕಾರ ಬೆಳೆಯ ಗುಣಮಟ್ಟ ಸರ್ಕಾರ ಅಥವಾ ಸರ್ಕಾರದಿಂದ ಗುರುತಿಸಲ್ಪಟ್ಟ ಏಜೆನ್ನಿ ನಿಗದಿ ಮಾಡಿದಂತಿರಬೇಕು. ಒಂದೊಮ್ಮೆ ‘ಗುಣಮಟ್ಟ’ ಸರಿ ಇಲ್ಲದಿದ್ದರೆ ಕಂಪನಿಗಳು (ಪ್ರಾಯೋಜಕರು) ರೈತರ ಬೆಳೆಗಳನ್ನು ತಿರಸ್ಕರಿಸಬಹುದು. ಆಗ ರೈತನಿಗೆ ಇತ್ತ ಎಪಿಎಂಸಿ ಮಾರುಕಟ್ಟೆಯೂ ಇಲ್ಲ ಕಾರ್ಪೊರೇಟ್ ಕಂಪನಿಯೂ ಇಲ್ಲ ಎನ್ನುವಂತಾಗುತ್ತದೆ. ಕಂಪನಿಗಳು ಕೇಳಿದಷ್ಟು ದರಕ್ಕೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ.
ಕಾನೂನು -3: ಅಗತ್ಯ ಸರಕುಗಳ (ತಿದ್ದುಪಡಿ) ಕಾನೂನು (Essential Commodities (Amendment) Act). ಇದು ಮೇಲುನೋಟಕ್ಕೆ ಸ್ಪಷ್ಟವಾಗಿ ಏನೊಂದೂ ಅರ್ಥವಾಗದ ಕಾನೂನು. ಆದರೆ ಈ ಕಾನೂನ ಪ್ರಕಾರ ‘ಬೃಹತ್ ಕೃಷಿ ಕಂಪನಿಗಳಿಗೆ (ವಿದೇಶಿ ಕಂಪನಿಗಳಿಗೂ) ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬಹುದು. ಇದು ರೈತ ಸಮುದಾಯ ಮತ್ತು ದೇಶ ಎರಡಕ್ಕೂ ದೊಡ್ಡ ಅಪಾಯ.
Also Read: ವಿವಾದಿತ ಮೂರು ಕೃಷಿ ಮಸೂದೆ: ರಾಜ್ಯಸಭೆಯ ಬಲಾಬಲದ ಲೆಕ್ಕಾಚಾರವೇನು?
ಮೊದಲು ಕೂಡ ಅಗತ್ಯ ಸರಕುಗಳ ಕಾನೂನು ಇತ್ತು. 1955ರ ಕಾನೂನಿನ ಪ್ರಕಾರ ಆಹಾರ ಧಾನ್ಯಗಳು, ಕಲ್ಲಿದ್ದಲು, ಕಬ್ಬಿಣ ಮತ್ತಿತರ ಅಗತ್ಯ ಉತ್ಪನ್ನಗಳ ಸಂಗ್ರಹವನ್ನು ಸರ್ಕಾರವೇ ಮಾತ್ರ ಮಾಡಬೇಕು ಎಂದಿತ್ತು. ಇಂಥ ಅಗತ್ಯ ವಸ್ತುಗಳನ್ನು ದೊಡ್ಡ ವ್ಯಾಪಾರಿಗಳು ಸಂಗ್ರಹಿಸಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಿ ಭಾರೀ ಮೊತ್ತಕ್ಕೆ ಮಾರುವಂತಾಗಬಾರದೆಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಈ ಕಾನೂನನ್ನು ಅತ್ಯಂತ ಕಠಿಣಗೊಳಿಸಿದ್ದರು.
ಈಗ ಹಳೆಯ ಕಠಿಣ ಕಾನೂನಿಗೆ ತಿದ್ದುಪಡಿ ತಂದು ಆಹಾರ ಸರಕುಗಳ ಸಾಗಾಟ, ಸಂಗ್ರಹ ಇತ್ಯಾದಿಗಳಿಗಿದ್ದ ಮಿತಿಯನ್ನು ತೆಗೆದುಹಾಕಲಾಗಿದೆ. ಆಹಾರ ಸಂಸ್ಕರಣಾ ಉದ್ಯಮಗಳು ಮತ್ತು ರಫ್ತು ವ್ಯವಹಾರ ಮಾಡುವ ದೊಡ್ಡ ಪ್ರಮಾಣದ ಕಾರ್ಪೋರೇಟ್ ಕಂಪನಿಗಳು ಎಷ್ಟು ಬೇಕಾದರೂ ಅಷ್ಟು ಆಹಾರ ಧಾನ್ಯಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕಾರ್ಪೊರೇಟ್ ಕಂಪನಿಗಳು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸುವ, ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ.
ಈ ಕಾನಿನಲ್ಲೂ ಮತ್ತೊಂದು ಅಪಾಯ ಇದೆ. ಒಂದೆಡೆ ಯುದ್ಧದಂತಹ ಪರಿಸ್ಥಿತಿಯಲ್ಲಿ ಸರ್ಕಾರ ಈ ಕಂಪನಿಗಳು ಆಹಾರ ಸಾಮಾಗ್ರಿಗಳನ್ನು ಕೊಡಲೇಬೇಕೆಂಬ ನಿಯಮವಿದೆ. ಆದರೆ ಜೊತೆಯಲ್ಲೇ ಆ ಕಂಪನಿಗಳು ರಫ್ತು ಮಾಡಲು ಅಥವಾ ಕೈಗಾರಿಕೋತ್ಪಾದನೆಗಾಗಿ ಸಂಗ್ರಹಿಸಿಟ್ಟಿರುವ ಸರಕುಗಳನ್ನು ಕೊಡಬೇಕಾಗಿಲ್ಲ ಎಂಬ ಖಾಸಗಿಯವರ ಪರವಾದ ಅವಕಾಶವೂ ಇದೆ.