ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ರಾಜ್ಯ ಕಾಂಗ್ರೆಸ್ ನ ಒಳಬೇಗುದಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರ ರಾಜೀನಾಮೆಗೆ ನಿಲ್ಲುವಂತಿಲ್ಲ. ಬದಲಾಗಿ ಇನ್ನಷ್ಟು ಜೋರಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದು, ಈ ರಾಜೀನಾಮೆ ಕುರಿತು ಹೈಕಮಾಂಡ್ ನಾಯಕರು ತೀರ್ಮಾನ ಕೈಗೊಳ್ಳುವ ಮುನ್ನವೇ ಎರಡೂ ಹುದ್ದೆಗಳಿಗೆ ಲಾಬಿ ತೀವ್ರಗೊಂಡಿದೆ.
ರಾಜೀನಾಮೆ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ ಅವರ ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ನ ಒಂದು ಗುಂಪು ಮಾಡುತ್ತಿದ್ದರೆ, ಇನ್ನೊಂದೆಡೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರಿಸದಂತೆ ವರಿಷ್ಠರ ಮೇಲೆ ಒತ್ತಡ ಹೇರುವ ಕೆಲಸವನ್ನು ಪಕ್ಷದ ಇನ್ನೊಂದು ಗುಂಪು ಮಾಡುತ್ತಿದೆ. ಮತ್ತೊಂದೆಡೆ ತನ್ನ ರಾಜೀನಾಮೆಯನ್ನು ಹೈಕಮಾಂಡ್ ಒಪ್ಪಿದರೂ ತೆರವಾಗುವ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಆಪ್ತರನ್ನೇ ಕುಳ್ಳಿರಿಸಬೇಕು ಎಂಬ ಪ್ರಯತ್ನ ಸಿದ್ದರಾಮಯ್ಯ ಕಡೆಯಿಂದ ಆಗುತ್ತಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿಲ್ಲ. ಅದಕ್ಕೆ ವಿರೋಧವೂ ವ್ಯಕ್ತವಾಗುತ್ತಿಲ್ಲ. ಆದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿರುವುದು ಹೆಚ್ಚು ಪೈಪೋಟಿಗೆ ಕಾರಣವಾಗಿದೆ. ಅವರು ಆ ಸ್ಥಾನದಲ್ಲಿ ಮುಂದುವರಿಯಬೇಕು ಮತ್ತು ಬೇಡ ಎನ್ನುವ ಚರ್ಚೆಗಳೇ ಜೋರಾಗಿದ್ದು, ಹಿರಿಯ ಕಾಂಗ್ರೆಸ್ಸಿಗರು ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರ ಜಾಗಕ್ಕೆ ಬೇರೆಯವನ್ನು ಕೂರಿಸಬೇಕು ಎಂದು ಒದ್ದಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿದ ಬಳಿಕ ಪಕ್ಷಕ್ಕೆ ಬಂದವರು ಮತ್ತು ಎರಡನೇ ಹಂತದ ಬಹುತೇಕ ಮುಖಂಡರು ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಸೋಮವಾರ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ಸೋಲಿನ ನೈತಿಕ ಹೊಣೆಹೊತ್ತು ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿದ್ದ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾತ್ರಿಯ ವೇಳೆ ಸಿದ್ದರಾಮಯ್ಯ ಅವರನ್ನು ಭೇಟಿಯಾದ ದಿನೇಶ್ ಗುಂಡೂರಾವ್ ಸಹಿತ ಕೆಲವು ಮುಖಂಡರು ರಾಜೀನಾಮೆ ವಾಪಸ್ ಪಡೆಯಿರಿ. ಸೋಲಿಗೆ ನೀವೊಬ್ಬರೇ ಜವಾಬ್ದಾರಿಯಲ್ಲ. ಕಾಂಗ್ರೆಸ್ ನ ಹಲವು ನಾಯಕರು ಕೈಜೋಡಿಸದ ಕಾರಣ ಹೀನಾಯ ಸೋಲು ಅನುಭವಿಸಬೇಕಾಯಿತೇ ಹೊರತು ನಿಮ್ಮ ಕಾರಣದಿಂದಾಗಿ ಅಲ್ಲ ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಅವರೊಂದಿಗೆ ಆಡಿದ ಕೆಲವು ಮಾತುಗಳು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಪ್ರಸ್ತುತ ಮನಸ್ಥಿತಿಗೆ ಹಿಡಿದ ಕನ್ನಡಿ ಎಂಬಂತಿದೆ.
ಆಪ್ತರ ಬಳಿ ಸಿದ್ದರಾಮಯ್ಯ ಹೇಳಿದ್ದೇನು?
ನನಗೆ ರಾಜಕೀಯ ಹೊಸದೇನೂ ಅಲ್ಲ. ಜನತಾ ಪರಿವಾರ ಮೂಲದಿಂದ ಬಂದವನು. ಅಲ್ಲಿ ಇದಕ್ಕಿಂತಲೂ ಕೆಟ್ಟ ರಾಜಕೀಯ ಪರಿಸ್ಥಿತಿ ಇತ್ತು. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರೆ, ಅದೆಲ್ಲವನ್ನೂ ಮೀರಿ ನಾನು ಆ ಪಕ್ಷದಲ್ಲಿ ಬೆಳೆದೆ. ನನ್ನ ಬೆಳವಣಿಗೆ ಸಹಿಸದ ಕೆಲವರು ನೇರವಾಗಿಯೇ ನನ್ನೊಂದಿಗೆ ಹೋರಾಟಕ್ಕಿಳಿದರು. ಅವರ ಸಹವಾಸವೇ ಬೇಡ ಎಂದು ಹೊರಬಂದೆ. ಮುಂದೇನು ಎಂದು ಯೋಚಿಸುತ್ತಿದ್ದಾಗ ಕಾಂಗ್ರೆಸ್ ನಾಯಕರು ಕರೆದು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡರು. ನನಗಿರುವ ಜನಬೆಂಬಲ, ಶಾಸಕರ ಬಲ ನೋಡಿ ಹೈಕಮಾಂಡ್ ನಾಯಕರು ನನ್ನನ್ನು ಮುಖ್ಯಮಂತ್ರಿ ಮಾಡಿದರು. ಆದರೆ, ನಂತರ ಗೊತ್ತಾಯಿತು. ನನ್ನನ್ನು ಮುಖ್ಯಮಂತ್ರಿ ಮಾಡಲು ರಾಜ್ಯದ ನಾಯಕರು ಒಪ್ಪಿದ್ದು ಅವರ ಸ್ವಾರ್ಥ ಸಾಧನೆಗೆ ಎಂದು. ರಾಜ್ಯದಲ್ಲಿ ನೆಲಕಚ್ಚುತ್ತಿದ್ದ ಕಾಂಗ್ರೆಸ್ಸನ್ನು ಮೇಲೆತ್ತಲು ಒಬ್ಬ ಬೇಕಿತ್ತು. ಅದಕ್ಕೆ ನನ್ನನ್ನು ಕರೆದುಕೊಂಡು ಬಂದಿದ್ದರು. ಯಾವಾಗ ಹೈಕಮಾಂಡ್ ನನ್ನನ್ನು ಮುಖ್ಯಮಂತ್ರಿ ಮಾಡಿತೋ ಅಲ್ಲಿಗೆ ನನ್ನ ಮೇಲೆ ಹಿರಿಯ ಕಾಂಗ್ರೆಸ್ಸಿಗರಿಗೆ ದ್ವೇಶ ಶುರುವಾಯಿತು.
ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಅದು ಇನ್ನೂ ಹೆಚ್ಚಾಯಿತು. ಆದರೆ, ನನ್ನನ್ನು ಕರೆದು ಮುಖ್ಯಮಂತ್ರಿ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಬಾರದು ಎಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಬಂದೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಸರ್ಕಾರ ಉರುಳಿದ ಮೇಲೆ ನಡೆದ ವಿದ್ಯಮಾನಗಳು, ಕಾಂಗ್ರೆಸ್ ನಾಯಕರ ನಡವಳಿಕೆಗಳು ನಿಮಗೂ ಗೊತ್ತಿದೆ. ಆದರೂ ಸಹಿಸಿಕೊಂಡೆ. ಉಪ ಚುನಾವಣೆಯಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗಳಿಸಿಕೊಡಬೇಕು ಎಂದು ಪ್ರಯತ್ನ ಪಟ್ಟೆ. ಆದರೆ, ಹಿರಿಯ ನಾಯಕರಾರೂ ಕೈಜೋಡಿಸದ ಕಾರಣ ಹೀನಾಯವಾಗಿ ಸೋಲಬೇಕಾಯಿತು. ಅಂದರೆ, ಕಾಂಗ್ರೆಸ್ ಹಿರಿಯ ನಾಯಕರಿಗೆ ಪಕ್ಷದ ಗೆಲುವಿಗಿಂತಲೂ ನನ್ನ ಮೇಲೆ ದ್ವೇಶ ಸಾಧಿಸುವುದೇ ಮುಖ್ಯ ಎನ್ನುವುದು ಸ್ಪಷ್ಟವಾಯಿತು. ಬಿಜೆಪಿಯನ್ನು ಸುಲಭವಾಗಿ ಎದುರಿಸಿ ನಿಲ್ಲಬಹುದು, ಗೆಲ್ಲಬಹುದು. ಆದರೆ, ಪಕ್ಷದ ಒಳಗೇ ಇರುವ ಹಿತಶತ್ರುಗಳನ್ನು ಎದುರಿಸುವುದು ಸಾಧ್ಯವಿಲ್ಲ. ಹೀಗಾಗಿ ನನಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಬೇಡ. ಯಾರು ಬೇಕಾದರೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಲಿ. ಅವರು ಯಶಸ್ವಿಯಾಗುತ್ತಾರೋ ನೋಡೋಣ ಎಂದು ಸಿದ್ದರಾಮಯ್ಯ ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಈ ಬೆಳವಣಿಗೆ ಕಾಂಗ್ರೆಸ್ ಪಕ್ಷಕ್ಕೆ ಮಾರಕ
ಅಂದರೆ, ಪಕ್ಷಕ್ಕಿಂತ ವೈಯಕ್ತಿಕ ಪ್ರತಿಷ್ಠೆ, ತಮಗೆ ನಾಯಕತ್ವ ಸಿಗಬೇಕು ಎಂಬ ಹಪಹಪಿ ಕಾಂಗ್ರೆಸ್ ನ ಬಹುತೇಕ ನಾಯಕರಿಗೆ ಇದೆ. ಇದು ತಪ್ಪು ಎಂದು ಹೇಳಲು ಸಾಧ್ಯವಿಲ್ಲವಾದರೂ ಪಕ್ಷಕ್ಕಿಂತ ಯಾವುದೇ ಹುದ್ದೆ ಮುಖ್ಯವಾಗಬಾರದು. ಆದರೆ, ಸದ್ಯದ ಪರಿಸ್ಥಿತಿ ಹಾಗಿಲ್ಲ. ಜವಾಬ್ದಾರಿಗಿಂತ ಹುದ್ದೆಯೇ ಎಲ್ಲರಿಗೂ ಮುಖ್ಯವಾಗಿದೆ. ಇದರಿಂದಾಗಿಯೇ ಆಂತರಿಕ ಬೇಗುದಿ ಎನ್ನುವುದು ಪಕ್ಷವನ್ನೇ ಆಹುತಿ ಪಡೆಯುವ ಮಟ್ಟಕ್ಕೆ ಬೆಳೆಯುತ್ತಿದೆ.
ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರ ರಾಜೀನಾಮೆಯನ್ನು ಹೈಕಮಾಂಡ್ ಒಪ್ಪಿದರೆ ಆ ಸ್ಥಾನಗಳಿಗೆ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್, ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್, ರಮೇಶ್ ಕುಮಾರ್ ಅವರಂತಹ ಸಾಕಷ್ಟು ಹಿರಿಯರಿದ್ದಾರೆ. ಹುದ್ದೆಗಳನ್ನು ನಿಭಾಯಿಸುವುದು ಅವರಿಗೆ ಕಷ್ಟದ ಕೆಲಸವೇನೂ ಅಲ್ಲ. ಆದರೆ, ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಿ ಬರುವುದಿಲ್ಲ ಎನ್ನುವ ಪರಿಸ್ಥಿತಿ ಇರುವಾಗ ಹುದ್ದೆಗೆ ಏರಿದವರನ್ನು ಕೆಲಸ ಮಾಡಲು ಬಿಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇಂತಹ ಬೆಳವಣಿಗೆಗಳು ಪಕ್ಷದ ಮೇಲೆ ಪ್ರತೀಕೂಲ ಪರಿಣಾಮ ಬೀರಲಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವ ಮೊದಲು ಪಕ್ಷದ ವರಿಷ್ಠ ನಾಯಕರು ಸಾಕಷ್ಟು ಯೋಚನೆ ಮಾಡಬೇಕಾಗಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಇರವವರೆಗೆ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಷ್ಟವಾಗಬಹುದು.