ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ನಾನಾ ರೀತಿಯ ಲಾಬಿ, ತಂತ್ರಗಾರಿಕೆ, ಪರಸ್ಪರ ಕಾಲೆಳೆಯುತ್ತಿದ್ದ ರಾಜ್ಯ ನಾಯಕರಿಗೆ ಪಕ್ಷದ ವರಿಷ್ಠರು ಸರಿಯಾಗಿಯೇ ಪಾಠ ಕಲಿಸಲು ಮುಂದಾಗಿದ್ದಾರೆ. ಇದರ ಪರಿಣಾಮ ಈ ಹುದ್ದೆಯ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಲಾರಂಭಿಸಿದ್ದಾರೆ. ಶನಿವಾರ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಪಕ್ಷದ ಬಹುತೇಕ ನಾಯಕರು ಒಟ್ಟಾಗಿ ಕುಳಿತು ಸಮಾಲೋಚನೆ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷರಾಗಿ ಹೈಕಮಾಂಡ್ ಆಯ್ಕೆ ಮಾಡಿದವರ ಜತೆಗೆ ಒಟ್ಟಾಗಿ ಕೈಜೋಡಿಸಿ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದಾರೆ.
ಇದರ ಮಾರನೇ ದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ, ಸದ್ಯ ಮುಂಚೂಣಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಅವರಿಬ್ಬರ ಮಧ್ಯೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಆಂಜಿಯೊಪ್ಲಾಸ್ಟಿ ಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಎಲ್ಲಾ ಪಕ್ಷಗಳ ನಾಯಕರು ಅವರನ್ನು ಭೇಟಿ ಮಾಡಿದಾಗಲೂ ದೂರವೇ ಉಳಿದಿದ್ದ ಶಿವಕುಮಾರ್ ಈ ಸಂದರ್ಭದಲ್ಲಿ ಮಾಡಿದ ಭೇಟಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆಗೆ ವಿಧಾನಸಭೆ ಪ್ರತಿಪಕ್ಷ ಸ್ಥಾನ ಯಾರಿಗೆ ಎಂಬುದೂ ನಿರ್ಧಾರವಾಗಬೇಕಿದೆ. ಇದುವರೆಗೆ ಶಾಸಕಾಂಗ ಪಕ್ಷದ ನಾಯಕರಾಗಿದ್ದವರು ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡುವುದು ಸಂಪ್ರದಾಯವಾಗಿತ್ತು. ಅದರಂತೆ ಸಿದ್ದರಾಮಯ್ಯ ಅವರು ಎರಡೂ ಹುದ್ದೆಗಳನ್ನು ನಿಭಾಯಿಸುತ್ತಿದ್ದರು. ಆದರೆ, ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಉಪ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಇದನ್ನು ಹೈಕಮಾಂಡ್ ಇನ್ನೂ ಒಪ್ಪಿಕೊಂಡಿಲ್ಲ. ಬದಲಾಗಿ ಈ ಹುದ್ದೆಯಲ್ಲಿ ಮುಂದುವರಿಯುವಂತೆ ಸಿದ್ದಾರಮಯ್ಯ ಅವರಿಗೆ ಸೂಚಿಸಿದೆ. ಈ ಮಧ್ಯೆ ಸಿದ್ದರಾಮಯ್ಯ ಅವರು ಶಾಸಕಾಂಗ ಸ್ಥಾನದ ನಾಯಕರಾಗಿ ಮುಂದುವರಿದರೆ ಪ್ರತಿಪಕ್ಷ ನಾಯಕ ಸ್ಥಾನವನ್ನು ಬೇರೆಯವರಿಗೆ ನೀಡಬೇಕು ಎಂಬ ಕೂಗು ಎದ್ದಿದೆ.
ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಅವರ ಬದಲು ಎಂ.ಬಿ.ಪಾಟೀಲ್ ಅವರ ಆಯ್ಕೆಗೆ ಸಿದ್ದರಾಮಯ್ಯ ಒಲವು ತೋರಿದ್ದಾರೆ. ಪ್ರತಿಪಕ್ಷ ಸ್ಥಾನವನ್ನು ತಮ್ಮಿಂದ ಕಿತ್ತುಕೊಂಡರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಾನು ಹೇಳಿದವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಅವರು ಹೈಕಮಾಂಡ್ ಮುಂದಿಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಭೇಟಿಯಲ್ಲಿ ಏನೇನು ಚರ್ಚೆಗಳಾಗಿವೆ ಎಂಬುದನ್ನು ಉಭಯ ನಾಯಕರು ಬಹಿರಂಗಪಡಿಸಿಲ್ಲವಾದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನದ ಬಗ್ಗೆಯೇ ಚರ್ಚೆಯಾಗಿದೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.
ಡಿಕೆಶಿಗೆ ಕೆಪಿಸಿಸಿ ಗದ್ದುಗೆ, ಪ್ರತಿಪಕ್ಷ ನಾಯಕ ಸ್ಥಾನವೂ ಸಿದ್ದರಾಮಯ್ಯಗೆ?
ಒಂದು ಮೂಲದ ಪ್ರಕಾರ ಇವರಿಬ್ಬರ ನಡುವಿನ ಚರ್ಚೆ ಕೊಡು-ಕೊಳ್ಳುವ ವಿಚಾರದಲ್ಲಿ ಆಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಹಿರಿಯ ಕಾಂಗ್ರೆಸಿಗರು ಸೇರಿದಂತೆ ಬಹುತೇಕರು ಅವರ ಜತೆಗೆ ನಿಲ್ಲುತ್ತಾರೆ. ಇದು ಶನಿವಾರ ಪರಮೇಶ್ವರ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಖಚಿತವಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾಗಲು ತಮಗೆ ಬೆಂಬಲ ನೀಡಿ ಎಂದು ಕೇಳಿಕೊಳ್ಳಲು ಸಿದ್ದರಾಮಯ್ಯ ಅವರನ್ನು ಶಿವಕುಮಾರ್ ಭೇಟಿಯಾಗಿದ್ದಾರೆ.
ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕ ಹುದ್ದೆಯ ಜತೆಗೆ ಪ್ರತಿಪಕ್ಷ ನಾಯಕರಾಗಿಯೂ ಮುಂದುವರಿಸುವ ಬಗ್ಗೆ ಶಿವಕುಮಮಾರ್ ಪ್ರಸ್ತಾಪಿಸಿದ್ದಾರೆ. ಸದ್ಯ ಯಾವುದೇ ಚುನಾವಣೆಗಳಿಲ್ಲ. ಬಿಜೆಪಿ ಸರ್ಕಾರವೂ ಗಟ್ಟಿಯಾಗಿದ್ದು, ಸದ್ಯಕ್ಕೆ ಉರುಳುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾಗಲು ನನಗೆ ಸಹಕಾರ ನೀಡಿ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಜತೆಗೆ ಪ್ರತಿಪಕ್ಷ ನಾಯಕ ಸ್ಥಾನದಲ್ಲೂ ನೀವೇ ಮುಂದುವರಿಯಿರಿ. ಈ ಬಗ್ಗೆ ಹೈಕಮಾಂಡ್ ನಾಯಕರ ಜತೆಗೂ ನಾನು ಮಾತನಾಡುತ್ತೇನೆ. ವಿಧಾನಸಭೆಯ ಒಳಗೆ ಮತ್ತು ಹೊರಗೆ ಬಿಜೆಪಿ ಸರ್ಕಾರದ ವಿರುದ್ಧ ನಾನು ಮತ್ತು ನೀವು ಒಟ್ಟಾಗಿ ಹೋರಾಟ ಮಾಡೋಣ. ಆಗ ಇತರೆ ಹಿರಿಯ ನಾಯಕರೂ ನಮ್ಮ ಜತೆ ಬರುತ್ತಾರೆ. ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ಭವಿಷ್ಯದಲ್ಲಿ ಪಕ್ಷ ಗಟ್ಟಿಯಾಗಿ ಮತ್ತೆ ಅಧಿಕಾರಕ್ಕೆ ಬರಲು ಅವಕಾಶವಿದೆ ಎಂದು ಸಿದ್ದರಾಮಯ್ಯ ಅವರ ಮುಂದೆ ಶಿವಕುಮಾರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.
ಆದರೆ, ಸಿದ್ದರಾಮಯ್ಯ ಅವರಿಗೆ ಯಾವ ಹುದ್ದೆಯನ್ನೂ ನೀಡಬಾರದು ಎಂದು ಪ್ರತಿಪಾದಿಸುತ್ತಿರುವ ಕೆಲವು ಹಿರಿಯ ಕಾಂಗ್ರೆಸ್ಸಿಗರು, ಆ ಕಾರಣಕ್ಕಾಗಿಯೇ ವಿಧಾನಸಭೆ ಉಪ ಚುನಾವಣೆಯಲ್ಲಿ ಅಸಹಾಕಾರ ಧೋರಣೆ ತೋರಿದ್ದರು. ಇದೀಗ ತಮ್ಮ ದಾರಿಗೆ ಸಿದ್ದರಾಮಯ್ಯ ಅಡ್ಡ ಬರಬಾರದು ಎಂಬ ಕಾರಣಕ್ಕೆ ಶಿವಕುಮಾರ್ ಮುಂದಿಟ್ಟಿರುವ ಪ್ರಸ್ತಾವನೆಗೆ ಹಿರಿಯ ಕಾಂಗ್ರೆಸ್ಸಿಗರು ಒಪ್ಪುವರೇ ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ, ಪ್ರತಿಪಕ್ಷ ನಾಯಕ ಸ್ಥಾನದ ಮೇಲೆ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್ ಮುಂತಾದವರು ಕಣ್ಣಿಟ್ಟಿದ್ದಾರೆ. ಆದರೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಟ್ಟಾದರೆ ರಾಜ್ಯದಲ್ಲಿ ಪಕ್ಷ ಸಂಘಟನೆ ಚುರುಕಾಗುತ್ತದೆ ಎಂಬ ಕಾರಣಕ್ಕೆ ಹಿರಿಯ ಕಾಂಗ್ರೆಸ್ಸಿಗರ ಮಾತಿಗೆ ಹೈಕಮಾಂಡ್ ತಲೆಕೆಡಿಸಿಕೊಳ್ಳಲಿಕ್ಕಿಲ್ಲ ಎಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಿಂದ ಕೇಳಿಬರುತ್ತಿದೆ.
ಈ ಎಲ್ಲಾ ಕಾರಣಗಳಿಗಾಗಿ ಸದ್ಯ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದರೂ ಅದು ಎಷ್ಟು ದಿನ ಉಳಿಯಬಹುದು ಎಂಬ ಆತಂಕವೂ ಪಕ್ಷದಲ್ಲಿ ಕಾಡಲಾರಂಭಿಸಿದೆ. ಏಕೆಂದರೆ, ಪ್ರಸ್ತುತ ಈ ಒಗ್ಗಟ್ಟು ಪ್ರದರ್ಶನ ಆಗುತ್ತಿರುವುದು ಹೈಕಮಾಂಡ್ ಸೂಚನೆಯಿಂದಾಗಿ. ಯಾರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂಬ ಬಗ್ಗೆ ಮೊದಲು ನೀವು ಒಮ್ಮತಕ್ಕೆ ಬಂದು ಬಳಿಕ ನಮ್ಮಲ್ಲಿ ಬನ್ನಿ ಎಂಬ ಸಂದೇಶವನ್ನು ವರಿಷ್ಠರು ಕಳುಹಿಸಿದ್ದರು. ಈ ಕಾರಣಕ್ಕಾಗಿ ದೆಹಲಿಗೆ ತೆರಳುವ ಮುನ್ನ ಎಲ್ಲರೂ ಒಟ್ಟಾಗಿ ಕುಳಿತು ಒಗ್ಗಟ್ಟಿನಿಂದಿದ್ದೇವೆ ಎಂಬ ಸಂದೇಶ ರವಾನಿಸುತ್ತಿದ್ದಾರೆ.
ಆದರೆ, ರಾಜಕೀಯ ವಲಯದಲ್ಲಿ ನಾಯಕರ ಬಗ್ಗೆ, ಅವರ ಧೋರಣೆ ಕುರಿತಾಗಿ ಒಮ್ಮೆ ಅಸಮಾಧಾನ ಉಂಟಾದರೆ ಅದು ಪೂರ್ಣ ಬಗೆಹರಿಯುವುದೇ ಇಲ್ಲ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಎಲ್ಲರೂ ನಡೆದುಕೊಳ್ಳುತ್ತಾರಾದರೂ ಆಂತರಿಕವಾಗಿ ತಿಕ್ಕಾಟ ಮುಂದುವರಿಯುತ್ತದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನದ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಕಾಣಿಸಿಕೊಂಡಿರುವ ಈ ಒಗ್ಗಟ್ಟು ಎಷ್ಟು ದಿನ ಉಳಿಯುತ್ತದೆ ಎಂಬುದನ್ನು ಕಾದು ನೋಡಬೇಕು.