ಮಹಾರಾಷ್ಟ್ರದಲ್ಲಿ ಶನಿವಾರದ ರಾಜಕೀಯ ಅಚ್ಚರಿ, ರಾತ್ರೋರಾತ್ರಿ ನಡೆದ ರಾಜಕೀಯ ಹೈಡ್ರಾಮ ಕೇವಲ ಮಹಾರಾಷ್ಟ್ರದ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಮಾತ್ರವಲ್ಲ, ಕರ್ನಾಟಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನೂ ಬೆಚ್ಚಿ ಬೀಳಿಸಿದೆ ಉಪ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದರೆ ತಮ್ಮ ಆಟ ಆಡಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ರಾಜ್ಯದಲ್ಲಿ ಇನ್ನೇನು ಕಾದಿದೆಯೋ ಎಂದು ಆತಂಕದಲ್ಲಿ ಕಾಲ ಕಳೆಯುವಂತೆ ಮಾಡಿದೆ.
ಈ ಕಾರಣಕ್ಕಾಗಿಯೇ ಮಹಾರಾಷ್ಟ್ರದಲ್ಲಿ ಬಿಜೆಪಿ- ಎನ್ ಸಿಪಿ (ಅಜಿತ್ ಪವಾರ್ ಗುಂಪು) ಸರ್ಕಾರ ರಚನೆಯಾಗುತ್ತಿದ್ದಂತೆ ರಾಜ್ಯದ ಕಾಂಗ್ರೆಸ್ ನಾಯಕರು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹರಿಹಾಯಲಾರಂಭಿಸಿದ್ದಾರೆ. ಜೆಡಿಎಸ್ ಕೂಡ ತಾನೇನೂ ಕಮ್ಮಿಯಲ್ಲ ಎಂಬಂತೆ ಇವರ ಬಗ್ಗೆ ಕಿಡಿ ಕಾರತೊಡಗಿದೆ. ಏಕೆಂದರೆ, ಕರ್ನಾಟಕದಲ್ಲೂ ಬಿಜೆಪಿ ಈ ರೀತಿಯ ರಾಜಕಾರಣ ಶುರುವಿಟ್ಟುಕೊಂಡರೆ ಭವಿಷ್ಯದಲ್ಲಿ ಈ ಎರಡೂ ಪಕ್ಷಗಳು ತಲೆಎತ್ತಿ ನಿಲ್ಲಲು ಸಾಕಷ್ಟು ವರ್ಷಗಳೇ ಬೇಕಾಗಬಹುದು.
ಬೆಳಗ್ಗೆ ದಿನಪತ್ರಿಕೆಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ ಖಚಿತ. ಉದ್ಧವ್ ಠಾಕ್ರೆ ಮುಂದಿನ ಮುಖ್ಯಮಂತ್ರಿ, ಶನಿವಾರ ಅಧಿಕೃತ ಘೋಷಣೆ ಎಂಬ ಹೆಡ್ ಲೈನ್ ಓದುತ್ತಿದ್ದರೆ ಪಕ್ಕದಲ್ಲೇ ಇದ್ದ ಟಿವಿಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮತ್ತು ಎನ್ ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉರುಳಲು ಕಾಯುತ್ತಿರುವ ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಹೇಗನ್ನಿಸಬೇಡ.
ಮುಗಿಬಿದ್ದ ಕಾಂಗ್ರೆಸ್, ಜೆಡಿಎಸ್ ನಾಯಕರು
ಪ್ರತಿಪಕ್ಷಗಳ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಈ ಕುರಿತಂತೆ ವ್ಯಕ್ತಪಡಿಸಿದ ಆಕ್ರೋಶ ಆ ಪಕ್ಷದ ನಾಯಕರು ಎಷ್ಟೊಂದು ಆತಂಕಿತರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಬೆಳ್ಳೆಬಳಗ್ಗೆಯೇ ಈ ಕುರಿತು ಟ್ವೀಟ್ ಮಾಡಿದ್ದ ಮಾಜಿ ಸಚಿವ ಕೃಷ್ಣಬೈರೇಗೌಡ, ಮುಂಬೈ ರಾಜಕಾರಣ ದೆಹಲಿಯ ಮಾಲಿನ್ಯಕ್ಕಿಂತಲೂ ಹೆಚ್ಚು ಹೊಲಸಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಕಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಬಿಜೆಪಿಯದ್ದು ಅನೈತಿಕ, ಅಕ್ರಮ ಎಂದೆಲ್ಲಾ ಜರೆದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೂ ಬಿಜೆಪಿಯ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.

ಏಕೆಂದರೆ, ಮಹಾರಾಷ್ಟ್ರದಲ್ಲಿ ನಡೆದಿರುವ ರಾಜಕೀಯ ಹೈಡ್ರಾಮಕ್ಕೂ ರಾಜ್ಯದಲ್ಲಿ ನಡೆದ ರಾಜಕೀಯ ನಾಟಕಕ್ಕೂ ಸಾಕಷ್ಟು ಸಾಮ್ಯತೆ ಇದೆ. ಇಲ್ಲಿ ಸರ್ಕಾರ ರಚನೆಯಾಗಿ ಒಂದು ವರ್ಷವಾದ ಮೇಲೆ ಅನ್ಯ ಪಕ್ಷಗಳ ಶಾಸಕನ್ನು ಸೆಳೆದು ಸರ್ಕಾರ ರಚಿಸಲಾಯಿತು. ಇದರಿಂದ ಶಾಸಕರು ಅನರ್ಹರಾಗಬೇಕಾಯಿತು. ಮಹಾರಾಷ್ಟ್ರದಲ್ಲೂ ಅಂತಹದ್ದೇ ಪರಿಸ್ಥಿತಿ ಉದ್ಭವವಾಗಿದೆ. ಆದರೆ, ಸರ್ಕಾರ ರಚನೆಗೆ ಮುನ್ನವೇ ಆಪರೇನ್ ಕಮಲ ನಡೆದಿದೆ. ಇನ್ನೇನು ಸರ್ಕಾರ ರಚಿಸುವುದೊಂದೇ ಬಾಕಿ ಎನ್ನುತ್ತಿದ್ದ ಶಿವಸೇನಾ-ಎನ್ ಸಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ದಿಡೀರ್ ಟಕ್ಕರ್ ನೀಡಿದ ಬಿಜೆಪಿ ಆ ಹಕ್ಕನ್ನು ತನ್ನದಾಗಿಸಿಕೊಂಡಿತು.

ರಾಜ್ಯದ ನಾಯಕರಿಗೇನು ಆತಂಕ?
ಒಟ್ಟು 224 ಸದಸ್ಯಬಲದ ವಿಧಾನಸಭೆಯಲ್ಲಿ 17 ಶಾಸಕರ ಅನರ್ಹತೆಯಿಂದಾಗಿ ಸದಸ್ಯಬಲ 207ಕ್ಕೆ ಕುಸಿದಿದೆ. 105 ಸ್ಥಾನ ಹೊಂದಿರುವ ಬಿಜೆಪಿ ಸದ್ಯ ಬಹುಮತ ಹೊಂದಿದ್ದರೂ ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಫಲಿತಾಂಶ ಹೊರಬಿದ್ದ ಮೇಲೆ ವಿಧಾನಸಭೆ ಸದಸ್ಯಬಲ 222 ಆಗಲಿದ್ದು, ಬಹುಮತ ಹೊಂದಬೇಕಾದರೆ ಬಿಜೆಪಿ 112 ಸ್ಥಾನ ಗಳಿಸಬೇಕು. ಅಂದರೆ, ಪಕ್ಷೇತರ ಸದಸ್ಯರೊಬ್ಬರು ಬೆಂಬಲಿಸುತ್ತಿರುವುದರಿಂದ 15ರಲ್ಲಿ ಕನಿಷ್ಟ ಆರು ಸ್ಥಾನಗಳನ್ನು ಗೆಲ್ಲಲೇ ಬೇಕು. ಎಲ್ಲಾ 17 ಕ್ಷೇತ್ರಗಳಿಗೆ ಚುನಾವಣೆ ನಡೆದ ಬಳಿಕ 113 ಸ್ಥಾನಗಳನ್ನು ಹೊಂದಿರಬೇಕಾಗುತ್ತದೆ. ಒಂದೊಮ್ಮೆ ಈ ಸ್ಥಾನಗಳನ್ನು ಗಳಿಸಲು ಬಿಜೆಪಿ ವಿಫಲರಾದರೆ ಅದಿಕಾರ ಕಳೆದುಕೊಳ್ಳಲು ಸಿದ್ಧವಿರುವುದಿಲ್ಲ. ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಮತ್ತೊಂದು ಸುತ್ತಿನ ಕಸರತ್ತು ಆರಂಭವಾಗಲಿದೆ.
ಇದುವೇ ಕಾಂಗ್ರೆಸ್ ಮತ್ತು ಜೆಡಿಎಸ್ ಆತಂಕಕ್ಕೆ ಕಾರಣ. ಉಪ ಚುನಾವಣೆ ಫಲಿತಾಂಶದ ಬಳಿಕ ಒಂದೊಮ್ಮೆ ಬಿಜೆಪಿಗೆ ಬಹುಮತಕ್ಕೆ ಬೇಕಾದ ಸ್ಥಾನ ಸಿಗದೇ ಇದ್ದರೆ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕುವುದು ಖಚಿತ. ಅಂತಹ ಪರಿಸ್ಥಿತಿ ಉದ್ಭವವಾದರೆ ಮತ್ತೆ ಸರ್ಕಾರಕ್ಕೆ ಅಪಾಯವಾಗದಂತೆ ದೊಡ್ಡ ಮಟ್ಟದಲ್ಲೇ ಈ ಆಪರೇಷನ್ ನಡೆಯಲಿದೆ. ಇವರಿಗೆ ಬೆಂಬಲವಾಗಿ ಈಗಾಗಲೇ ಈ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿರುವ ಅನರ್ಹ ಶಾಸಕರು ಇರುತ್ತಾರೆ. ಚುನಾವಣೆಯಲ್ಲಿ ಸೋತರೆ ತಾವು ಹಿಂದೆ ಇದ್ದ ಪಕ್ಷದ ಮೇಲೆ ಆಕ್ರೋಶ ಇನ್ನಷ್ಟು ಹೆಚ್ಚಾಗುತ್ತದೆ. ಸೋಲಿಸಿದ ಸೇಡನ್ನು ತೀರಿಸಿಕೊಳ್ಳಲು ಅವಕಾಶಕ್ಕಾಗಿ ನೋಡುತ್ತಿರುತ್ತಾರೆ. ಗೆದ್ದರೆ, ಬಿಜೆಪಿಯಲ್ಲಿ ತಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಅಥವಾ ಜೆಡಿಎಸ್ ನಲ್ಲಿ ತಮಗೆ ಆಪ್ತರಾಗಿರುವ ಶಾಸಕರಿಗೆ ಗಾಳ ಹಾಕಬಹುದು.
ಹೀಗಾಗಿ ಉಪ ಚುನಾವಣೆ ಫಲಿತಾಂಶ ಏನೇ ಬಂದರೂ ಆಪರೇಷನ್ ಕಮಲದ ಬಗ್ಗೆ ಜಾಗೃತವಾಗಿಯೇ ಇರಬೇಕು. ಇದುವರೆಗೆ ಯಡಿಯೂರಪ್ಪ ಮಾತ್ರ ಸ್ಟ್ರಾಟಜಿ ಮಾಡಿ ಸರ್ಕಾರ ರಚನೆ ಮಾಡಿದ್ದರು. ಮಹಾರಾಷ್ಟ್ರದಲ್ಲಿ ನಡೆದ ರಾಜಕಾರಣವನ್ನು ಗಮನಿಸಿದಾಗ ಅಗತ್ಯಬಿದ್ದರೆ ಯಾವುದೇ ಸಂದರ್ಭದಲ್ಲೂ ಅಮಿತ್ ಶಾ ಮಧ್ಯಪ್ರವೇಶ ಮಾಡಬಹುದು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಅಂಶಗಳೇ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಆತಂಕಗೊಳ್ಳುವಂತೆ ಮಾಡಿವೆ.