ರಾಜ್ಯದಲ್ಲಿ ವಿದ್ಯುಚ್ಚಕ್ತಿ ವ್ಯತ್ಯಯ ಉಂಟಾಗಿ ಹೊರ ರಾಜ್ಯಗಳಿಂದ ಖರೀದಿಸಬೇಕಾಗಿದ್ದ ಸಂದರ್ಭಗಳು ಕರ್ನಾಟಕಕ್ಕೆ ಹಲವು ಬಾರಿ ಒದಗಿ ಬಂದಿದ್ದವು. ಆದರೆ, ಈ ಬಾರಿ ವ್ಯತಿರಿಕ್ತವಾಗಿರುವ ಪರಿಸ್ಥಿತಿ ಕರ್ನಾಟಕ ವಿದ್ಯುತ್ ನಿಗಮಕ್ಕೆ ಎದುರಾಗಿದೆ. ಈ ಬಾರಿ, ವಿದ್ಯುತ್ ಬೇಡಿಕೆ ತೀವ್ರವಾಗಿ ಕಡಿಮೆಯಾಗಿರುವುದರಿಂದ ರಾಜ್ಯದ ಪ್ರಮುಖ ಮೂರು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅದು ಕೂಡಾ ಸುಮಾರು ಮೂರೂವರೆ ದಶಕಗಳ ನಂತರ ಮೊತ್ತ ಮೊದಲ ಬಾರಿಗೆ ಉಷ್ಣ ವಿದ್ಯುತ್ ಸ್ಥಾವರಗಳು ತಾತ್ಕಾಲಿಕ ಸ್ಥಗಿತಗೊಂಡಿವೆ (Shut Down).
ಕೋವಿಡ್ ಸಂಕಷ್ಟದ ಕಾರಣದಿಂದಾಗಿ ರಾಜ್ಯದಲ್ಲಿ ವಿದ್ಯುತ್ತಿನ ಬೇಡಿಕೆ ಅತೀ ಕಡಿಮೆ ಮಟ್ಟಕ್ಕೆ ಇಳಿದಿದೆ. ಇದಕ್ಕೆ ಕಾರಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಯಾಚರಣೆಗೆ ಕಳೆದ ನಾಲ್ಕು ತಿಂಗಳುಗಳಲ್ಲಿ ಸಾಕಷ್ಟು ಹೊಡೆತ ಬಿದ್ದಿರುವಂತದ್ದು ಎಂದರೆ ತಪ್ಪಾಗಲಾರದು. ಆರ್ಥಿಕ ಹಿಂಜರಿತ ಹಾಗೂ ಲಾಕ್‌ಡೌನ್ ದೆಸೆಯಿಂದ ಸಾಕಷ್ಟು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈಗಾಗಲೇ ಮುಚ್ಚಿ ಹೋಗಿವೆ. ಉಳಿದವುಗಳು ತಮ್ಮ ಸಂಪೂರ್ಣ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸುವಂತಹ ಮಟ್ಟಕ್ಕೆ ಇನ್ನೂ ಏರಲಾಗುತ್ತಿಲ್ಲ.
ಕಳೆದ ಸುಮಾರು ಒಂದೂವರೆ ತಿಂಗಳುಗಳಿಂದ ರಾಯಚೂರಿನಲ್ಲಿರುವ ಎರಡು ಉಷ್ಣವಿದ್ಯುತ್ ಸ್ಥಾವರಗಳು ಹಾಗೂ ಬಳ್ಳಾರಿಯಲ್ಲಿರುವ ಒಂದು ಉಷ್ಣವಿದ್ಯುತ್ ಸ್ಥಾವರವನ್ನು ಶಟ್‌ಡೌನ್ ಮಾಡಲಾಗಿದೆ. ಈಗ ಕೇವಲ ಅವುಗಳ ನಿರ್ವಹಣೆ ಮಾತ್ರ ಮಾಡಲಾಗುತ್ತಿದೆಯೇ ಹೊರತು, ವಿದ್ಯುತ್ ಉತ್ಪಾದನೆಯಲ್ಲ.
ಈ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಈಗಲೂ ಮೂರು ಪಾಳಿಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ವಿದ್ಯುತ್ ಬೇಡಿಕೆಯ ಕೊರತೆ ಇನ್ನಷ್ಟು ದಿನಗಳ ವರೆಗೆ ಮುಂದುವರೆದರೆ ಒಂದರಿಂದ ಎರಡು ಪಾಳಿ(Shift) ಕೆಲಸದ ಸಮಯವನ್ನು ಇಳಿಸುವ ಚಿಂತನೆಯೂ ನಡೆದಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೌರ ಮತ್ತು ವಾಯು ವಿದ್ಯುತ್ ಸ್ಥಾವರಗಳ ಹೆಚ್ಚಿನ ಬಳಕೆ:
ಸದ್ಯಕ್ಕಿರುವ ಬೇಡಿಕೆಯನ್ನು ಪೂರೈಸುವಲ್ಲಿ ಸೌರ ಹಾಗೂ ವಾಯು ವಿದ್ಯುತ್ ಸ್ಥಾವರಗಳು ಪ್ರಮುಖವಾಗಿ ಬಳಕೆಯಾಗುತ್ತಿವೆ. ಸದ್ಯದ ಮಟ್ಟಿಗೆ ರಾಜ್ಯದ ಶೇಕಡಾ 70ರಷ್ಟು ವಿದ್ಯುತ್ ಬೇಡಿಕೆಯನ್ನು ಸೌರ ಹಾಗೂ ವಾಯು ವಿದ್ಯುತ್ ಸ್ಥಾವರಗಳು ಪೂರೈಸುತ್ತಿವೆ ಎಂದು, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪೊನ್ನುರಾಜ್ ಅವರು ಪ್ರತಿಧ್ವನಿಗೆ ಮಾಹಿತಿ ನೀಡಿದ್ದಾರೆ. ಉಳಿದ ಬೇಡಿಕೆಯನ್ನು ಜಲ ವಿದ್ಯುತ್ ಸ್ಥಾವರಗಳ ಮೂಲಕ ಪೂರೈಸಲಾಗುತ್ತಿದೆ.
ಆಗಸ್ಟ್ 22ರಂದು ಕೆಪಿಸಿಎಲ್‌ನ ಅಧಿಕೃತ websiteನಲ್ಲಿ ಪ್ರಕಟವಾಗಿರುವ ಮಾಹಿತಿಯ ಪ್ರಕಾರ, ರಾಜ್ಯದ ಪ್ರಮುಖ ಮೂರು ಜಲ ವಿದ್ಯುತ್ ಸ್ಥಾವರಗಳಾದ ಶರಾವತಿ, ನಾಗಝರಿ ಮತ್ತು ವಾರಾಹಿಗಳಲ್ಲಿ ಕ್ರಮವಾಗಿ 138, 300 ಮತ್ತು 460 ಮೆಗಾವ್ಯಾಟ್‌ಗಳಷ್ಟು station load ದಾಖಲಾಗಿದೆ. ಈ ಸ್ಥಾವರಗಳಲ್ಲಿ ವಾಸ್ತವವಾಗಿ ಉತ್ಪಾದಿಸಲಾಗುವ ವಿದ್ಯುತ್ನ ಪ್ರಮಾಣ ಶರಾವತಿಯಲ್ಲಿ 1035 ಮೆಗಾವ್ಯಾಟ್, ನಾಗಝರಿಯಲ್ಲಿ 900 ಮೆಗಾವ್ಯಾಟ್ ಮತ್ತು ವಾರಾಹಿಯಲ್ಲಿ 460 ಮೆಗಾವ್ಯಾಟ್. ಇಲ್ಲಿ ವಾರಾಹಿಯನ್ನು ಹೊರತುಪಡಿಸಿದರೆ, ಉಳಿದೆರಡು ಜಲ ವಿದ್ಯುತ್ ಸ್ಥಾವರಗಳು ತಮ್ಮ ಸಾಮರ್ಥ್ಯಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದಿಸುತ್ತಿವೆ.
1986 ರ ಬಳಿಕ ಮೊತ್ತ ಮೊದಲ ಬಾರಿಗೆ ಈ ರೀತಿಯ ಪರಿಸ್ಥಿತಿಯನ್ನು ಕರ್ನಾಟಕ ಎದುರಿಸುತ್ತಿದೆ. ಕೆಪಿಸಿಎಲ್ ಒಂದು ಬಾರಿಗೆ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದಿಸುವ ಪ್ರಯತ್ನವನ್ನೂ ಮಾಡಿತ್ತು. ಆದರೆ, ಬೇಡಿಕೆ ಇಲ್ಲದೇ ಇರುವ ಕಾರಣದಿಂದ ಗ್ರಿಡ್‌ಗಳು ಅಸ್ಥಿರಗೊಂಡ ಕಾರಣ ಆ ಪ್ರಯತ್ನವನ್ನೂ ನಿಲ್ಲಿಸಲಾಯಿತು.
ಕೆಪಿಸಿಎಲ್‌ಗೆ ಒಟ್ಟು 8,686 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಶಕ್ತಿಯಿದೆ. ಆದರೆ, ಈಗ ಉತ್ಪಾದಿಸುತ್ತಿರುವ ಒಟ್ಟು ವಿದ್ಯುತ್ 600 ರಿಂದ 1200 ಮೆಗಾವ್ಯಾಟ್ ಅಷ್ಟೇ. ಇದಕ್ಕಿಂತ ಹೆಚ್ಚಿನ ವಿದ್ಯುತ್‌ಗೆ ರಾಜ್ಯದಲ್ಲಿ ಬೇಡಿಕೆಯೇ ಇಲ್ಲವಾಗಿರುವುದು ನಿಜಕ್ಕೂ ಆಶ್ಚರ್ಯ ಹಾಗೂ ಆಘಾತಕಾರಿ ಸಂಗತಿ. ಆಘಾತಕಾರಿ ಏಕೆಂದರೆ, ಮನೆಗಳಿಗೆ ಪೂರೈಸುವ ವಿದ್ಯುತ್‌ಗಿಂತಲೂ ನೂರಾರು ಪಟ್ಟು ಹೆಚ್ಚು ವಿದ್ಯುತ್ ಕೈಗಾರಿಕೆಗಳಿಕೆ ಸರಬರಾಜಾಗುತ್ತಿತ್ತು. ಈಗ ಅದೇ ಕೈಗಾರಿಕೆಗಳು ಸ್ಥಗಿತಗೊಂಡ ಕಾರಣದಿಂದ ವಿದ್ಯುತ್ ಬೇಡಿಕೆಯೇ ಇಲ್ಲವಾಗಿದೆ. ಇದರ ನೇರ ಪರಿಣಾಮ ರಾಜ್ಯದ ಬೊಕ್ಕಸದ ಮೇಲಾಗುತ್ತದೆ ಎಂದರೆ ತಪ್ಪಾಗಲಾರದು.
ಸಾಮಾನ್ಯವಾಗಿ ಈ ಸಮಯದಲ್ಲಿ ರಾಜ್ಯದಲ್ಲಿ ಬೇಡಿಕೆ ಇರುವಂತಹ ವಿದ್ಯುತ್ ಪ್ರಮಾಣ 9,500 ರಿಂದ 10,000 ಮೆಗಾವ್ಯಾಟ್. ಆದರೆ, ಈ ಬಾರಿಯ ಬೇಡಿಕೆ ಕೇವಲ 6,943 ಮೆಗಾವ್ಯಾಟ್. 2000 ಮೆಗಾವ್ಯಾಟ್‌ಗಿಂತಲೂ ಅಧಿಕ ಪ್ರಮಾಣದಲ್ಲಿ ಬೇಡಿಕೆಯಲ್ಲಿ ಕೊರತೆ ಸದ್ಯದ ಪರಿಸ್ಥಿತಿಯಲ್ಲಿ ಉಂಟಾಗಿದೆ.
ಒಟ್ಟಿನಲ್ಲಿ, ರಾಜ್ಯದಲ್ಲಿನ ವಿದ್ಯುತ್ ಬೇಡಿಕೆ ಅಭಾವ ಸಾಕಷ್ಟು ವಿಚಾರಗಳನ್ನು ಮುನ್ನೆಲೆಗೆ ತರುತ್ತವೆ. ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಕೈಗಾರಿಕೆಗಳ ಮೇಲೆ ಕೋವಿಡ್ ಸೋಂಕು, ಲಾಕ್‌ಡೌನ್ ಎಳೆದಿರುವ ಬರೆ ಕಣ್ಣಿಗೆ ರಾಚುವಂತೆ ಕಾಣಿಸುತ್ತಿದೆ. ರಾಜ್ಯದ ಬೊಕ್ಕಸ ತುಂಬಿಸಲು ಎಲ್ಲಾ ಕೈಗಾರಿಕೆಗಳನ್ನು ತೆರೆಯಲು ರಾಜ್ಯ ಸರ್ಕಾರ ಅವಕಾಶ ನೀಡಿದ್ದರೂ, ತೆರೆಯುವ ಸ್ಥಿತಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯವಸ್ಥಾಪಕರಿಲ್ಲ.