ಕರೋನಾ ಸೋಂಕು ದಿನದಿಂದ ದಿನಕ್ಕೆ ಜನರಲ್ಲಿ ಆತಂಕ ಮೂಡಿಸಲು ಶುರು ಮಾಡಿದೆ. ಸರ್ಕಾರ ಏನೇ ಧೈರ್ಯ ತುಂಬಿದರೂ ಸೋಂಕಿತರ ಸಂಖ್ಯೆ ಜನರಲ್ಲಿ ಭಯ ಮೂಡಿಸುತ್ತಿದೆ. ಈ ವಾರ ರಾಜ್ಯದಲ್ಲಿ ಸರ್ಕಾರಿ ಅಂಕಿಅಂಶದಂತೆ ಒಂದೇ ದಿನ 1000+ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಸತತವಾಗಿ ಕರೋನಾ ಸೋಂಕಿನ ಸಂಖ್ಯೆ ಏರುತ್ತಿದೆ.
ಬೆಂಗಳೂರಿನಲ್ಲಿ ಸೋಂಕಿತ ಪೊಲೀಸರ ಸಂಖ್ಯೆಯೂ ಏರಿಕೆಯಾಗುತ್ತಲೇ ಇದೆ. ಉಪ್ಪಾರಪೇಟೆ ಸಂಚಾರ ಠಾಣೆಯ ಒಬ್ಬ ಕಾನ್ಸ್‌ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್, ಪಶ್ಚಿಮ ವಿಭಾಗದ ಸಿಎಆರ್‌ನ ಓರ್ವ ಕಾನ್ಸ್‌ಟೇಬಲ್, ಕಾಟನ್‌ಪೇಟೆ ಠಾಣೆಯ ಓರ್ವ ಹೆಡ್ ಕಾನ್ಸ್‌ಟೇಬಲ್, ಉಪ್ಪಾರಪೇಟೆ ಠಾಣೆಯ ಓರ್ವ ಕಾನ್ಸ್‌ಟೇಬಲ್ ಸೇರಿ 11 ಮಂದಿಗೆ ಕರೋನಾ ವೈರಸ್ ಹಬ್ಬಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು 292 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ ರಾಜ್ಯದಲ್ಲಿ ಇಂದು 145 ಜನ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿರುವುದು ಆತಂಕ ಸೃಷ್ಟಿಸುತ್ತಿದೆ.
ಬೆಂಗಳೂರಿಗೆ ಆತಂಕ ಶುರುವಾಗಿರೋದ್ಯಾಕೆ..!?
ಬೆಂಗಳೂರಿನಲ್ಲಿ ನಿನ್ನೆ ಪತ್ತೆಯಾಗಿರುವ ಎಲ್ಲಾ 735 ಸೋಂಕಿತರಿಗೂ ಕರೋನಾ ವೈರಸ್ ಸೋಂಕಿನ ಮೂಲ ಇನ್ನೂ ಕೂಡ ಪತ್ತೆಯಾಗಿಲ್ಲ. ಬಿಬಿಎಂಪಿ ಆರೋಗ್ಯಾಧಿಕಾರಿಗಳು, ಸೋಂಕಿನ ಮೂಲ ಪತ್ತೆ ಮಾಡಲು ಹೆಣಗಾಡುವಂತೆ ಮಾಡಿದೆ. ಸೋಂಕಿನ ಮೂಲ ಪತ್ತೆಯಾಗದಿದ್ದರೆ ಪ್ರಾಥಮಿಕ ಸಂಪರ್ಕಿತರು, ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಕೇವಲ ಕುಟುಂಬಸ್ಥರನ್ನು ಮಾತ್ರ ಕ್ವಾರಂಟೈನ್ ಮಾಡಿ ಸುಮ್ಮನಿರಬೇಕಾದರ ಅನಿವಾರ್ಯತೆ ಎದುರಾಗಲಿದೆ.
ಸಮುದಾಯಕ್ಕೆ ಹರಡಿದೆಯೇ ಸೋಂಕು..?
ಬೆಂಗಳೂರಿನಲ್ಲಿ ಕಮ್ಯುನಿಟಿ ಸ್ಪ್ರೆಡ್ ಆಗಿದೆ ಎನ್ನುವ ಮಾಹಿತಿ ಜನರನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ದಿನಕ್ಕೆ 700ಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದು ಆಸ್ಪತ್ರೆಗಳಲ್ಲಿ ಹಾಸಿಗೆ ಹೊಂದಿಸಲು ಸರ್ಕಾರ ಹೆಣಗಾಡುವಂತೆ ಮಾಡಿದೆ. ಇದೇ ರೀತಿಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೆ ಒಂದೇ ವಾರದಲ್ಲಿ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳು ಫುಲ್ ಆಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಮುದಾಯಕ್ಕೆ ಸೋಂಕು ಹಬ್ಬಿರುವ ಬಗ್ಗೆ ಮಾತನಾಡಿರುವ ಡಾ ಭುಜಂಗಶೆಟ್ಟಿ, ಈ ರೀತಿಯ ಆತಂಕಕಾರಿ ಮಾಹಿತಿಯನ್ನು ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣ ಸರ್ಕಾರಕ್ಕೂ ಈ ಬಗ್ಗೆ ತಿಳಿಸಿದ್ದೇವೆ. ಸಮುದಾಯಕ್ಕೆ ಹರಡಿರುವುದನ್ನು ತಡೆಗಟ್ಟಲು ಲಾಕ್‌ಡೌನ್ ಅತ್ಯಗತ್ಯ. ಆದರೆ ರಾಜ್ಯ ಸರ್ಕಾರ ಏನು ಮಾಡುತ್ತೋ ಗೊತ್ತಿಲ್ಲ. ಇನ್ಮುಂದೆ ಮನೆಯಲ್ಲೇ ಟ್ರೀಟ್‌ಮೆಂಟ್ ಕೊಡಲು ಹೇಳಿದ್ದೇವೆ. ಹಾಸ್ಪಿಟಲ್‌ಗಳಲ್ಲಿ ಹಾಸಿಗೆ ಕೊರತೆ ಇರುವ ಕಾರಣಕ್ಕೆ ರೋಗದ ಗುಣಲಕ್ಷಣ ಇದ್ದವರಿಗೆ ಮಾತ್ರ ಟ್ರೀಟ್‌ಮೆಂಟ್ ಕೊಡೋಕೆ ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದಿದ್ದಾರೆ.
ಈ ವಿಚಾರವನ್ನು ಕಿಮ್ಸ್‌ನ ಮಾಜಿ ವೈದ್ಯಕೀಯ ವರಿಷ್ಟಾಧಿಕಾರಿಯಾದ ಡಾ. ಆಂಜನಪ್ಪ ಅವರು ಕೂಡಾ ಹೇಳಿದ್ದಾರೆ. ಕರೋನಾ ಸೋಂಕು ಸಮುದಾಯಕ್ಕೆ ಹಬ್ಬಿದೆ. ಹಾಗಾಗಿ ಸೋಂಕಿತರ ಮೂಲವನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲ ಸೋಂಕಿನ ಪ್ರಕರಣ ಪತ್ತೆಯಾದಾಗಲೇ ಇದನ್ನು ತಡಿಯಬಹುದಿತ್ತು, ಆದರೆ ಸರ್ಕಾರ ಇದನ್ನು ಮಾಡುವುದರಲ್ಲಿ ಎಡವಿದೆ, ಎಂದು ಪ್ರತಿಧ್ವನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಚಿಕಿತ್ಸೆ ಬಗ್ಗೆಯೂ ಶುರುವಾಗಿದೆ ಚಿಂತೆ..!
ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದೆ ಜನರು ಕಂಗಾಲಾಗಿದ್ದಾರೆ. ನಾಗರಭಾವಿಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಮಹಿಳೆಯೊಬ್ಬರು ಅಸುನೀಗಿದ್ದಾರೆ. ಸೋಂಕು ಇದೆಯೋ..? ಇಲ್ಲವೋ? ಎನ್ನುವುದೇ ಇನ್ನೂ ಕೂಡ ಖಚಿತವಾಗಿಲ್ಲ. ಇನ್ನೂ ವಿಜಯನಗರದಲ್ಲಿ ವ್ಯಕ್ತಿಯೊಬ್ಬರಿಗೆ ಕರೋನಾ ಸೋಂಕು ಬಂದು ಮೂರು ದಿನವಾದರೂ ಆಸ್ಪತ್ರೆಗೆ ಕರೆದೊಯ್ದಿಲ್ಲ. ಎಷ್ಟು ಭಾರೀ ಕರೆ ಮಾಡಿ ಮನವಿ ಮಾಡಿಕೊಂಡರೂ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇವತ್ತು ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಬಳಿಕ ಸಾವನ್ನಪ್ಪಿದ್ದಾರೆ, ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಶವವನ್ನು ಒಳಗೆ ತೆಗೆದುಕೊಳ್ಳದೆ ಹೆಣಗಾಡಿಸಿದ್ದಾರೆ.
ಇದೇ ರೀತಿ ಆಸ್ಪತ್ರೆಯಲ್ಲಿರುವ ಸೋಂಕಿತರಿಗೂ ಸರಿಯಾದ ಊಟೋಪಚಾರ ಕೊಡುತ್ತಿಲ್ಲ ಎನ್ನುವ ಆರೋಪ ಎದುರಾಗಿತ್ತು. ಇದೀಗ ಎಚ್ಚೆತ್ತಿರುವ ಸರಕಾರ ಸೋಂಕಿತ ರೋಗಿಗಳಿಗೆ ಆಹಾರ ನೀಡುವುದಕ್ಕೆ ಮೆನು ರಿಲೀಸ್ ಮಾಡಿದ್ದಾರೆ. ಎಲ್ಲಾ ಜಿಲ್ಲಾ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ 19 ಸೋಂಕಿತರಿಗೆ ಇನ್ಮುಂದೆ ಮೆನು ಪ್ರಕಾರವೇ ಊಟ ನೀಡುವಂತೆ ಸರ್ಕಾರ ಆದೇಶ ಮಾಡಿದೆ. ಬೆಳಗ್ಗೆ 7ಕ್ಕೆ ತಿಂಡಿ, 10ಕ್ಕೆ ಹಣ್ಣು ಮತ್ತು ಗಂಜಿ, ಮಧ್ಯಾಹ್ನ 1ಕ್ಕೆ ಊಟ, ಸಂಜೆ 5ಕ್ಕೆ ಸ್ನ್ಯಾಕ್ಸ್, ರಾತ್ರಿ 7ಕ್ಕೆ ಊಟ, ರಾತ್ರಿ 9ಕ್ಕೆ ಹಾಲು ಕೊಡಬೇಕು. ಈ ಮೂಲಕ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ನಿರ್ಧಾರ ಮಾಡಿದೆ.
ವಿಶ್ವದಲ್ಲಿ ಎಲ್ಲಾ ದೇಶಗಳನ್ನು ಹಿಂದಿಕ್ಕಿದ ಭಾರತ..!
ದೇಶದಲ್ಲಿ ಕರೋನಾ ಹಾವಳಿ ಜೋರಾಗಿದ್ದು, ಮಂಗಳವಾರದ ಅಂಕಿ ಅಂಶ ಪ್ರಕಾರ 18,653 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರೋನಾ ಪೀಡಿತರ ಸಂಖ್ಯೆ 5,85,493ಕ್ಕೆ ಏರಿಕೆಯಾಗಿದೆ. ಒಂದೇ ದಿನ 507 ಮಂದಿ ಸಾವನ್ನಪ್ಪಿರುವುದು ಆತಂಕ ಸೃಷ್ಟಿಸಿದ್ದು, ಇದುವರೆಗೂ ಕರೋನಾ ಸೋಂಕಿನಿಂದ ಸತ್ತವರ ಸಂಖ್ಯೆ 17,400 ಆಗಿದೆ. ಗುಣಮುಖ ಆಗಿರುವವರನ್ನು ಬಿಟ್ಟು 2,20,114 ಜನರು ಇನ್ನೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇಡೀ ಭಾರತದಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಏರುತ್ತಿರುವ ಗತಿಯನ್ನು ನೋಡಿದರೆ ವಿಶ್ವದಲ್ಲಿ ನಂಬರ್ ಸ್ಥಾನಕ್ಕೆ ಪೈಪೋಟಿ ಕೊಡುವ ಎಲ್ಲಾ ಸಾಧ್ಯತೆಗಳು ಇದೆ ಎಂದಿದ್ದಾರೆ ಆರೋಗ್ಯ ತಜ್ಞರು.
ಒಟ್ಟಾರೆ, ಲಾಕ್‌ಡೌನ್ ಮಾಡುವಂತೆ ತಜ್ಞರು ಹೇಳಿದರೂ ರಾಜ್ಯ ಸರ್ಕಾರ ಮಾತ್ರ ಲಾಕ್‌ಡೌನ್ ಮಾಡುವ ನಿರ್ಧಾರ ಪ್ರಕಟ ಮಾಡ್ತಿಲ್ಲ. ಇನ್ಮುಂದೆ ಮತ್ತಷ್ಟು ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದರೂ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದು ನೋಡಬೇಕು.