ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರ ರಾಜಕೀಯ ಪ್ರವೇಶದ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.
ಭಾನುವಾರ ಸೌರವ್ ಗಂಗೂಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಭೇಟಿಯಾಗಿದ್ದರು. ಜಗದೀಪ್ ಧಂಕರ್ ಜತೆಗೆ ಸೌರವ್ ಗಂಗೂಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಈಗ ದಾದಾ ರಾಜಕೀಯ ಪ್ರವೇಶಿಸಬಹುದು ಎಂಬ ಪ್ರಶ್ನೆ ಹುಟ್ಟಿಹಾಕಿದೆ.
ಇದು ಕೇವಲ ಸೌಹಾರ್ದಯುತ ಭೇಟಿಯೆಂದು ಹೇಳಲಾಗುತ್ತಿದೆಯಾದರೂ ಸೌರವ್ ಗಂಗೂಲಿ ಪಶ್ಚಿಮ ಬಂಗಾಳದ ಮುಂದಿನ ಚುನಾವಣೆ ಬಗ್ಗೆಯೇ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಕೊಲ್ಕತ್ತಾದಲ್ಲಿ ನಡೆದ ಬಿಜೆಪಿ ಸಮಾವೇಶವೊಂದರಲ್ಲಿ “ಬಂಗಾಳದ ಭೂಮಿಪುತ್ರನೇ ಪಶ್ಚಿಮ ಬಂಗಾಳದ ಮುಂದಿನ ಸಿಎಂ” ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದರು. ಈ ಬೆನ್ನಲ್ಲೇ ಈ ಭೂಮಿಪುತ್ರ ಸೌರವ್ ಗಂಗೂಲಿಯೇ ಎನ್ನುವ ಚರ್ಚೆ ಚಾಲ್ತಿಯಲ್ಲಿತ್ತು.
ಇತ್ತೀಚೆಗೆ ಸೌರವ್ ಗಂಗೂಲಿ ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಹೀಗಾಗಿಯೇ ಕಳೆದ ಕೆಲವು ದಿನಗಳಿಂದ ಗಂಗೂಲಿ ಬಿಜೆಪಿಗೆ ಸೇರುವ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿದ್ದವು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೀಗಿರುವಾಗಲೇ ರಾಜ್ಯಪಾಲ ಜಗದೀಪ್ ಧಂಕರ್ ಜತೆ ಗಂಗೂಲಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಮಿತ್ ಷಾ ಹೇಳಿಕೆ ನೀಡಿರುವುದು ಮತ್ತು ಇತ್ತೀಚೆಗಿನ ಸೌರವ್ ಗಂಗೂಲಿ ನಡವಳಿಕೆಗಳು ಕಂಡವರು ಯಾರು ಬೇಕಾದವರೂ ಇವರೇ ಬಂಗಾಳದ ಮುಂದಿನ ಸಿಎಂ ಎಂದು ಹೇಳಬಹುದು. ಗಂಗೂಲಿ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ರಾಜಪಾಲರ ಭೇಟಿ ಮಾತ್ರ ಪಶ್ಚಿಮ ಬಂಗಾಳದ ರಾಜಕೀಯದ್ದೇ ಎನ್ನಬಹುದು.
ಕೇಂದ್ರ ಬಿಜೆಪಿ ನಾಯಕರ ಮೂಲಗಳ ಪ್ರಕಾರ ಸೌರವ್ ಗಂಗೂಲಿ ಸದ್ಯದಲ್ಲೇ ಬಿಜೆಪಿ ಸೇರುವ ಸಾಧ್ಯತೆ ಇದೆ. ಜ.12ರಂದು ಸ್ವಾಮಿ ವಿವೆಕಾನಂದರ ಜಯಂತಿಯ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಆಗ ಪಶ್ಚಿಮ ಬಂಗಾಳದಲ್ಲಿ ಹಲವರು ಬಿಜೆಪಿ ಸೇರಲಿದ್ದಾರೆ. ಇದರಲ್ಲಿ ಸೌರವ್ ಗಂಗೂಲಿ ಪ್ರಮುಖರು ಎನ್ನಲಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್-ಮೇ ನಲ್ಲಿ ಪಶ್ಚಿಮ ಬಂಗಾಳದ ಚುನಾವಣೆ ನಡೆಯಲಿದೆ. ಸೌರವ್ ಗಂಗೂಲಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಬಂಗಾಳದಲ್ಲಿ ಬಿಜೆಪಿಗೆ ಬಹುಮತ ಬಂದರೆ ಗಂಗೂಲಿಯೇ ಸಿಎಂ ಎಂದು ಹೇಳಲಾಗುತ್ತಿದೆ.
ಗಂಗೂಲಿ ಆರಂಭದಿಂದಲೂ ಬಿಜೆಪಿ ಜತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರುವ ಮುನ್ನ ಗಂಗೂಲಿ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಆಪ್ತರು. ಬಿಜೆಪಿ ಅಧಿಕಾರದಲ್ಲಿರುವ ಕಾರಣದಿಂದಲೇ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಲು ಸಾಧ್ಯವಾಯ್ತು. ಆದರೀಗ, ಅಮಿತ್ ಷಾ ಮನವಿ ಮೇರೆಗೆ ಗಂಗೂಲಿ ಬಿಜೆಪಿ ಸೇರಿದರೆ ಮುಂದಿನ ಚುನಾವಣೆಯಲ್ಲಿ ‘ದೀದಿ ವರ್ಸಸ್ ದಾದಾ’ ಎನ್ನುವುದು ಮಾತ್ರ ಖಚಿತ.