ಕೋವಿಡ್ ರೋಗ ನಿರ್ವಹಣೆಯಲ್ಲಿ ವಿಫಲವಾಗಿರುವ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಸಾಂಕ್ರಾಮಿಕ ರೋಗ ತಡೆಯಲು ಅಗತ್ಯವಾದ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಭ್ರಷ್ಟಾಚಾರ ಹಗರಣ ಹೈರಾಣಾಗಿಸುವ ಸಾಧ್ಯತೆ ಹೆಚ್ಚಿದೆ. ಪದವಿ, ಮಂತ್ರಿ ಸ್ಥಾನದ ಬಗ್ಗೆ ಆಸೆ ಇಟ್ಟುಕೊಂಡು ಭ್ರಮನಿರಸನಗೊಂಡಿರುವ ಬಿಜೆಪಿಯ ಹಿರಿಯ ನಾಯಕರು ರಾಜಕೀಯ ಆಸ್ಫೋಟಕ್ಕೆ ಕಾದು ಕುಳಿತಿದ್ದಾರೆ. ಇದರ ಮಧ್ಯೆ, ವಯೋವೃದ್ಧರಾದ ಯಡಿಯೂರಪ್ಪನವರನ್ನು ಹುದ್ದೆಯಿಂದ ಕೆಳಗಿಳಿಸುವ ಪಿತೂರಿ ಮೊದಲಿನಿಂದಲೂ ಅವರ ವಿರೋಧಿ ಬಣದಲ್ಲಿ ಸುಪ್ತವಾಗಿದೆ. ಈ ಎಲ್ಲಾ ಕಾರಣಗಳಿಂದ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪವು ನೆಪವಾಗಿ ಯಡಿಯೂರಪ್ಪನವರ ತಲೆದಂಡವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂಬುದು ರಾಜಕೀಯ ತಜ್ಞರ ಗ್ರಹಿಕೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ಮೊನಚುಗೊಳಿಸಿದ್ದು, ಯಡಿಯೂರಪ್ಪ ಸರ್ಕಾರವನ್ನು ಸಾರ್ವಜನಿಕರ ಮನದಲ್ಲಿ ಭ್ರಷ್ಟ ಸರ್ಕಾರ ಎಂದು ಬಿಂಬಿಸುವ ಯತ್ನದಲ್ಲಿ ಮೇಲ್ನೋಟಕ್ಕೆ ಮೇಲುಗೈ ಸಾಧಿಸಿದಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿರುವ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಬಂಧ ಹೇರಿದ್ದಾರೆ. ಇದು ಸರ್ಕಾರದ ನಡೆಯ ಬಗ್ಗೆ ಅನುಮಾನ ದೃಢಗೊಳ್ಳುವಂತೆ ಮಾಡಿದೆ. ಇದರ ಮಧ್ಯೆ, ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಕರೆದಿದ್ದ ಐವರು ಸಚಿವರ ಸುದ್ದಿಗೋಷ್ಠಿಯು ನಿರೀಕ್ಷಿತ ಫಲ ನೀಡಿಲ್ಲ. ಯಡಿಯೂರಪ್ಪನವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾದ ಅಶ್ವತ್ ನಾರಾಯಣ, ಗೋವಿಂದ ಕಾರಜೋಳ, ಹಿರಿಯ ಸಚಿವ ಆರ್ ಅಶೋಕ್ ಅವರು ವಿರೋಧ ಪಕ್ಷದ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಉಡಾಫೆ, ವ್ಯಂಗ್ಯ, ಹಾರಿಕೆ ಉತ್ತರ ನೀಡುತ್ತಿರುವುದು ಸಹಜವಾಗಿ ಸರ್ಕಾರದ ನಡೆಯ ಬಗ್ಗೆ ಸಂಶಯ ವ್ಯಾಪಕಗೊಳ್ಳುವಂತೆ ಮಾಡಿದೆ. ಇನ್ನೊಂದೆಡೆ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಹಾಗೂ ಆರೋಗ್ಯ ಸಚಿವ ಬಿ ಶ್ರೀರಾಮುಲು ನಡುವೆ ಆರಂಭದಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಚಿವರ ಮುಸುಕಿನ ಗುದ್ದಾಟ ವಿಪಕ್ಷಗಳ ದಾಳಿಗೆ ಮತ್ತೊಂದು ಪ್ರಬಲ ಅಸ್ತ್ರವಾಗಿ ಪರಿಣಮಿಸುವುದನ್ನು ಅಲ್ಲಗಳೆಯಲಾಗದು. ಸಚಿವಾಕಾಂಕ್ಷಿಗಳಲ್ಲೊಬ್ಬರಾದ ಕೊಡಗಿನ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಅಕ್ರಮದ ಕುರಿತು ತನಿಖೆ ನಡೆಸಿ ಸತ್ಯ ಬಯಲುಗೊಳಿಸುವಂತೆ ಒತ್ತಾಯಿಸಿರುವುದು ಬಿಜೆಪಿಯಲ್ಲಿನ ಬಿರುಕುಗಳು ಬೃಹದಾಕಾರವಾಗಿ ಬೆಳೆಯಬಹುದು ಎಂಬುದರ ಮುನ್ಸೂಚನೆಯಂತೆ ಭಾಸವಾಗುತ್ತಿವೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದರ ಮಧ್ಯೆ, ನಿರಂತರ ಲಾಕ್ ಡೌನ್ ನಿಂದಾಗಿ ರಾಜ್ಯದ ಆದಾಯ ಕ್ರೋಢೀಕರಣದಲ್ಲಿ ಖೋತವಾಗಿರುವುದು ಹಣಕಾಸು ಸಚಿವರೂ ಆದ ಯಡಿಯೂರಪ್ಪನವರ ತಲೆ ನೋವು ಹೆಚ್ಚಿಸಿದೆ. ಕೇಂದ್ರದಿಂದ ಬರಬೇಕಾದ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ತಮ್ಮದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಅಧಿಕಾರಿಯುತವಾಗಿ ಮಾತನಾಡುವ ಸ್ಥಿತಿಯಲ್ಲಿ ಯಡಿಯೂರಪ್ಪ ಇಲ್ಲ. ಎಲ್ಲಾ ರೀತಿಯಲ್ಲೂ ಇಕ್ಕಟ್ಟಿಗೆ ಸಿಲುಕಿರುವ ಯಡಿಯೂರಪ್ಪನವರು ಯಾವ ಸಮಸ್ಯೆಯನ್ನೂ ಮುಚ್ಚಿಡುವ ಸ್ಥಿತಿಯಲ್ಲಿ ಇಲ್ಲ. “ಕೆಟ್ಟದ್ದಕ್ಕೆಲ್ಲಾ ಶನೇಶ್ವರನೇ ಕಾರಣ” ಎಂಬಂತೆ ಸಮಸ್ಯೆಗಳಿಗೆ ಯಡಿಯೂರಪ್ಪನವರೇ ಕಾರಣ ಎಂದು ಬಿಂಬಿಸಿ ಸಂಘ ಪರಿವಾರದ ನಾಯಕರನ್ನು ಹಾಟ್ ಸೀಟ್ ಗೆ ತಂದು ಕೂರಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂಬುದು ಬಿಎಸ್ ವೈ ಆಪ್ತ ವಲಯದಲ್ಲಿರುವವರ ಆತಂಕ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ ತಂದುಕೊಟ್ಟ ಕೀರ್ತಿ ಹೊಂದಿರುವ ಯಡಿಯೂರಪ್ಪನವರು ಮೊದಲ ಅವಧಿಯಲ್ಲಿಯೂ ಗಣಿ ಹಗರಣದಲ್ಲಿ ಪಾಲು ಪಡೆದ ಆರೋಪದಲ್ಲಿ ಅಧಿಕಾರ ಕಳೆದುಕೊಂಡು ಜೈಲು ಪಾಲಾಗಿದ್ದರು. ಅಂದಿನ ಹೋರಾಟದಲ್ಲೂ ಕಾಂಗ್ರೆಸ್ ನಿಂದ ಮುಂಚೂಣಿಯಲ್ಲಿದ್ದವರು ಸಿದ್ದರಾಮಯ್ಯ ಎಂಬುದು ಕಾಕತಾಳೀಯ. ಈಗ ಅದೇ ಮಾದರಿಯ ಭ್ರಷ್ಟಾಚಾರ ಆರೋಪದ ಕೇಂದ್ರಬಿಂದುವಿನ ಸ್ಥಾನದಲ್ಲಿ ದುರಂತ ನಾಯಕ ಯಡಿಯೂರಪ್ಪ ನಿಂತಿದ್ದಾರೆ.
ಸಭ್ಯತೆಯ ಎಲ್ಲಾ ಹಾದಿಗಳನ್ನು ಮೀರಿ ಅಧಿಕಾರ ಹಿಡಿದಿರುವ ಯಡಿಯೂರಪ್ಪನವರಿಗೆ ಆರಂಭದಲ್ಲೇ ಅಗ್ನಿ ಪರೀಕ್ಷೆ ಎದುರಾಗಿತ್ತು. ಕಾಂಗ್ರೆಸ್-ಜೆಡಿಎಸ್ ನ 17 ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಅಧಿಕಾರ ಹಿಡಿದಿರುವ ಬಿ ಎಸ್ ಯಡಿಯೂರಪ್ಪನವರು ಏಕಾಂಗಿಯಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೃಷ್ಟಿಯಾಗಿದ್ದ ನೆರೆ ಸ್ಥಿತಿಯನ್ನು ನಿಭಾಯಿಸುವಷ್ಟೊತ್ತಿಗೆ ಹೈರಾಣಾಗಿದ್ದರು. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಒಂದೆಡೆಯಾದರೆ ಆಗಷ್ಟೇ ಅಧಿಕಾರ ಸ್ವೀಕರಿಸಿದ್ದ ಬಿಎಸ್ ವೈಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ದೊರೆಯದೇ ಸಂಪುಟ ರಚಿಸುವ ಸ್ವಾತಂತ್ರ್ಯ ಇರಲಿಲ್ಲ. ಸುಮಾರು 20 ದಿನಗಳಿಗೂ ಹೆಚ್ಚು ಕಾಲ ಏಕಾಂಗಿಯಾಗಿ ನೆರೆಪೀಡಿತರು ಹಾಗೂ ಸಂತ್ರಸ್ತರನ್ನು ಸಂತೈಸುವ ಕೆಲಸವನ್ನು ಅನಿವಾರ್ಯವಾಗಿ ಯಡಿಯೂರಪ್ಪ ಮಾಡಿದ್ದರು. ಕಂಡೂ ಕೇಳರಿಯದ ಜಲಪ್ರಳಯದಿಂದ ಜನರ ಬದುಕು ಮುರಾಬಟ್ಟೆಯಾದರೂ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡದೇ ಬಿಎಸ್ ವೈ ಅವರನ್ನು ಅಕ್ಷರಶಃ ಕಾಡಿಸಿತ್ತು. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಯಾರೊಬ್ಬರು ರಾಜ್ಯದ ಸ್ಥಿತಿಯನ್ನು ನರೇಂದ್ರ ಮೋದಿ ಸರ್ಕಾರದ ಮುಂದಿಟ್ಟು ಪರಿಹಾರ ಪಡೆಯುವ ಪ್ರಯತ್ನ ಮಾಡಲಿಲ್ಲ. ಅದಾಗಲೇ ಯಡಿಯೂರಪ್ಪ ಅಸಮರ್ಥರು ಎಂದು ವಿಪಕ್ಷಗಳು ದಾಳಿ ನಡೆಸಿದ್ದವು. ಬಳಿಕ ಹಲವು ರಾಜಕೀಯ ನೇಮಕಾತಿ, ಪಕ್ಷದ ಹುದ್ದೆಗಳಿಗೆ ಪದಾಧಿಕಾರಿಗಳ ಆಯ್ಕೆ, ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಲೆಕ್ಕಕ್ಕೇ ಇಟ್ಟುಕೊಂಡಿರಲಿಲ್ಲ ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.
ಇಮೇಜ್ ಬಗ್ಗೆ ಬಹಳ ಕಾಳಜಿವಹಿಸುವ ನರೇಂದ್ರ ಮೋದಿಯವರು ತಾವು ಭ್ರಷ್ಟಾಚಾರದ ಕಡುವೈರಿ ಎಂದು ಬಿಂಬಿಸಿಕೊಳ್ಳಲು ಶತಪ್ರಯತ್ನ ನಡೆಸುವುದುಂಟು. ಈ ನಕಲಿ ಇಮೇಜ್ ಆಗಾಗ್ಗೆ ಠುಸ್ ಆಗಿರುವುದಕ್ಕೆ ಹೇರಳ ಉದಾಹರಣೆಗಳಿವೆ. ರಾಜ್ಯದಲ್ಲಿ ಬಿಎಸ್ವೈ ನಂತರದ ನಾಯಕತ್ವದ ಹುಡುಕಾಟದಲ್ಲಿರುವ ಬಿಜೆಪಿಯು ಭ್ರಷ್ಟಾಚಾರ ಆರೋಪವನ್ನು ನೆಪವಾಗಿ ಬಳಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಯಡಿಯೂರಪ್ಪನವರ ಸರ್ಕಾರದ ವಿರುದ್ಧ ಎದ್ದಿರುವ ಬಹುಕೋಟಿ ವೈದ್ಯಕೀಯ ಉಪಕರಣ ಖರೀದಿ ಹಗರಣದ ಕುರಿತು ಮೋದಿ ಹಾಗೂ ಅಮಿತ್ ಶಾ ಜೋಡಿಯು ಮುಂದಿನ ದಿನಗಳಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.