ಕೇಂದ್ರದ ಬಿಜೆಪಿ ಸರ್ಕಾರದ ಯಾವುದೇ ಬೆದರಿಕೆ, ದಬ್ಬಾಳಿಕೆಗೆ ಬಗ್ಗದೇ ಸಿಎಎ ವಿರುದ್ಧ ಹೋರಾಟ ನಡೆಸುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಯಾವುದೇ ಕಾರಣಕ್ಕೂ ತಮ್ಮ ರಾಜ್ಯದಲ್ಲಿ ಈ ಜನವಿರೋಧಿ ಕಾನೂನನ್ನು ಜಾರಿಗೆ ತರುವುದೇ ಇಲ್ಲ ಎಂದು ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕೆಂಡಾಮಂಡಲರಾಗಿರುವ ಮಮತಾ ಬ್ಯಾನರ್ಜಿ, ಬಿಜೆಪಿ ನೇತೃತ್ವದ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಕ್ರೂರ ಭದ್ರತಾ ಪಡೆಗಳನ್ನು ಬಳಸಿ ಸಿಎಎ ವಿರುದ್ಧದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ನಾನು ಬಿಜೆಪಿಗೊಂದು ನೇರ ಎಚ್ಚರಿಕೆ ಕೊಡುತ್ತಿದ್ದೇನೆ, ಯಾವುದೇ ಕಾರಣಕ್ಕೂ ಚಳವಳಿಯನ್ನು ಹತ್ತಿಕ್ಕಲು ಭದ್ರತಾ ಪಡೆಗಳ ಮೂಲಕ ಬಲಪ್ರದರ್ಶನಕ್ಕೆ ಮುಂದಾಗಬೇಡಿ, ಪರಿಣಾಮ ನೆಟ್ಟಗಿರುವುದಿಲ್ಲ. ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಬೇಕಾದರೆ ಪೊಲೀಸ್ ಪಡೆಗಳನ್ನು ಬಳಸಿ. ಆದರೆ, ದೇಶದ ಜನರು ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಪಡೆಗಳನ್ನು ಬಳಸಬೇಡಿ ಎಂದು ನೇರ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸಿಎಎಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ. ಇದರ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ಒಂದು ವೇಳೆ ಈ ಹೋರಾಟದಲ್ಲಿ ಒಬ್ಬ ಪ್ರಾಣತ್ಯಾಗ ಮಾಡಿದರೂ ಪ್ರತಿಭಟನೆ ಮುಂದುವರಿಯುತ್ತದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ,

ರಾಜ್ಯಾದ್ಯಂತ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ ವಿರುದ್ಧದ ಹೋರಾಟದ ನೇತೃತ್ವ ವಹಿಸಿರುವ ಮಮತಾ ಬ್ಯಾನರ್ಜಿ ಉತ್ತರ ಕೋಲ್ಕತ್ತಾದ ರಾಜಬಜಾರ್ ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಈ ಕಾನೂನನ್ನು ಹಿಂಪಡೆಯುವ ನಿರ್ಧಾರ ಪ್ರಕಟವಾಗುವವರೆಗೆ ಹೋರಾಟ ಮುಂದುವರಿಯುತ್ತದೆ. ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ, ಪ್ರತಿಭಟನೆ ನಡೆಸೀರಿ ಜೋಕೆ, ನಿಮ್ಮ ಶೈಕ್ಷಣಿಕ ಜೀವನ ಮುಗಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳೇ ಯಾವುದೇ ಕಾರಣಕ್ಕೂ ನೀವು ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗ ಬೇಡಿ, ಕುಗ್ಗಬೇಡಿ. ನಿಮ್ಮ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಹೋರಾಟವನ್ನು ನಿಲ್ಲಿಸಬೇಡಿ ಎಂದು ಅಭಯ ನೀಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಭಾರೀ ಸವಾಲು ಹಾಕಿದ್ದಾರೆ.

ಗೋಲಿಬಾರ್ ನಲ್ಲಿ ಬಲಿಯಾದವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ
ಈ ಮಧ್ಯೆ ಕಳೆದ ವಾರ ಮಂಗಳೂರಿನಲ್ಲಿ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ಇಬ್ಬರು ಯುವಕರಾದ ಜಲೀಲ್ ಮತ್ತು ನೌಶೀಲ್ ಸಾವನ್ನಪ್ಪಿದ್ದರು. ಈ ಇಬ್ಬರು ಪ್ರತಿಭಟನೆ ನಡೆಸುತ್ತಾ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದವರ ಗುಂಪಿನಲ್ಲಿದ್ದರು. ಅವರು ಆರೋಪಿಗಳ ಸ್ಥಾನದಲ್ಲಿದ್ದಾರೆ. ಆದ್ದರಿಂದ ಅವರ ಕುಟುಂಬಗಳಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳಿರುವ ರಾಜ್ಯ ಸರ್ಕಾರ, ಈ ಬಗ್ಗೆ ತನಿಖೆ ನಡೆಯುತ್ತಿದ್ದು, ನಿರಪರಾಧಿಗಳು ಎಂದು ಸಾಬೀತಾದರೆ ಪರಿಹಾರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.
ಆದರೆ, ರಾಜ್ಯ ಬಿಜೆಪಿ ಸರ್ಕಾರದ ಈ ಕ್ರಮವನ್ನು ಖಂಡಿಸಿರುವ ಪ್ರತಿಪಕ್ಷಗಳ ನಾಯಕರು ರಾಜ್ಯ ಬಿಜೆಪಿ ಸರ್ಕಾರ ಅಮಾಯಕರ ಸಾವಿನಲ್ಲಿಯೂ ಕೋಮುವಾದವನ್ನು ಸೃಷ್ಟಿ ಮಾಡಲು ಹೊರಟಿದೆ. ಇದು ಅಕ್ಷಮ್ಯ. ಸರ್ಕಾರವೇ ಪೊಲೀಸರಿಗೆ ಸೂಚನೆ ನೀಡಿ ಅಮಾಯಕರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದೆ ಎಂದು ಆರೋಪಿಸಿದ್ದರು.
ಈ ಮಧ್ಯೆ, ರಾಜ್ಯ ಸರ್ಕಾರಕ್ಕೆ ಸವಾಲೆಂಬಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಯುವಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.