ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆಯಷ್ಟೇ 227 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯು ಎಲ್ಲ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಪ್ರತಿಷ್ಠೆಯಾಗಿ ಪರಿಣಮಿಸಿದೆ. ಸತತವಾಗಿ ಮುಂಬೈ ಮಹಾನಗರ ಪಾಲಿಕೆಯು ಬಿಜೆಪಿಯೇತರ ಹಾಗೂ ಶಿವಸೇನೆಯ ತೆಕ್ಕೆಯ ಪಾಲಾಗುತ್ತಿತ್ತು.
ಆದರೆ ಈ ಬಾರಿಯ ಚುನಾವಣೆಯು ಹಲವಾರು ಪ್ರಮುಖ ವಿಚಾರಗಳಿಂದ ಸದ್ದು ಮಾಡಿತ್ತು. ಆಡಳಿತಾರೂಢ ಮಹಾಯುತಿ ಸರ್ಕಾರ ಠಾಕ್ರೆ ಸಹೋದರರನ್ನು ಮಣಿಸಿ ಅಧಿಕಾರದ ಗದ್ದುಗೆ ಹಿಡಿಯುವ ನಿಟ್ಟಿನಲ್ಲಿ ಎಲ್ಲ ರೀತಿಯಿಂದಲೂ ಸಿದ್ಧತೆ ಮಾಡಿಕೊಂಡಿದೆ. ಠಾಕ್ರೆ ಬ್ರದರ್ಸ್ ಒಂದಾದ ಬಳಿಕ ಇಡೀ ಮಹಾರಾ಼ಷ್ಟ್ರದ ರಾಜಕಾರಣದಲ್ಲಿ ಹಲವು ನೂತನ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದಂತಾಗಿದೆ. ಅದರ ಮುಂದುವರೆದ ಭಾಗವಾಗಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ, ಎನ್‌ಸಿಪಿ ಹಾಗೂ ಕಾಂಗ್ರೆಸ್ ವಿರುದ್ಧ ಠಾಕ್ರೆ ಸಹೋದರರು ಸೆಡ್ಡು ಹೊಡೆದು ಪಾಲಿಕೆ ಚುನಾವಣೆಯಲ್ಲಿ ಗೆಲ್ಲುವ ಸಂಕಲ್ಪತೊಟ್ಟಿದ್ದಾರೆ.
ಪ್ರಮುಖವಾಗಿ 20 ವರ್ಷಗಳ ಬಳಿಕ ಒಂದಾಗಿರುವ ಸಹೋದರರು ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಶಾಕ್ ನೀಡಲು ಮುಂದಾಗಿದ್ದರು. ಆದರೆ ಹಲವು ವರ್ಷಗಳ ಹೋರಾಟದ ಬಳಿಕ ಹೇಗಾದರೂ ಮಾಡಿ ಮುಂಬೈನ ಮಹಾರಾಜ ಆಗಿ ಏಷ್ಯಾದಲ್ಲೇ ಅತ್ಯಂತ ದೊಡ್ಡದಾಗಿರುವ ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂದು ಬಿಜೆಪಿ ಟೀಂ ಹಠ ತೊಟ್ಟಿದೆ. ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಶಿವಸೇನೆಯು ಕೂಡ ಬಿಜೆಪಿಯೊಂದಿಗೆ ಮೈತ್ರಿಯಲ್ಲಿದೆ. ಹೀಗಾಗಿ ಉದ್ಧವ್ ಠಾಕ್ರೆ ಹಾಗೂ ಎಂಎನ್‌ಎಸ್ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಇಬ್ಬರೂ ಸೇರಿ ಶಿಂಧೆಗೆ ಏಟು ನೀಡಲು ಯೋಚಿಸಿದ್ದಾರೆ.
ಭಾಷಾ ಅಸ್ಮಿತೆಯೇ ಠಾಕ್ರೆ ಅಸ್ತ್ರ, ಹಿಂದುತ್ವವೇ ದೇವೇಂದ್ರನ ಪ್ರತ್ಯಸ್ತ್ರ..
ಮುಖ್ಯವಾಗಿ ಉದ್ಧವ್ ಠಾಕ್ರೆ ನೇತೃತ್ವದ ಯುಬಿಟಿಯು ಹಾಗೂ ರಾಜ್ ಠಾಕ್ರೆಯ ಎಂಎನ್‌ಎಸ್, ಭಾಷಾ ಅಸ್ತ್ರವನ್ನು ಬಳಸಿ ಮರಾಠಿ ಭಾಷಿಕರನ್ನು ಸೆಳೆಯುವ ತಂತ್ರಗಾರಿಕೆಯನ್ನು ನಡೆಸಿದ್ದವು. ಆದರೆ ಇದಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಶಿಂಧೆ ಬಣ ಹಿಂದುತ್ವದ ಪ್ರತ್ಯಸ್ತ್ರವನ್ನು ಬಳಸುವ ಮೂಲಕ ಧರ್ಮದ ಆಧಾರಿತವಾಗಿಯೇ ಠಾಕ್ರೆ ಸಹೋದರರಿಗೆ ಕೌಂಟರ್ ಪ್ಯ್ಲಾನ್ ರೂಪಿಸಿದ್ದವು. ಇದಕ್ಕೆ ಪೂರಕವಾಗಿಯೇ ಸ್ಟಾರ್ ಪ್ರಚಾರಕರಾಗಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿಯ ಯುವ ನಾಯಕ ಅಣ್ಣಾಮಲೈ ಅವರನ್ನು ಬಿಜೆಪಿ ಬಳಸಿಕೊಳ್ಳುವ ಜಾಣ ನಡೆಯನ್ನು ಅನುಸರಿಸಿತ್ತು.
ಹೀಗಾಗಿಯೇ 20 ವರ್ಷಗಳ ಇತಿಹಾಸ ಅಳಿದು ಮಹಾನಗರ ಪಾಲಿಕೆಯ ಅಧಿಕಾರ ಹಿಡಿದು ಇನ್ನೊಂದು ಹೊಸ ದಾಖಲೆ ನಿರ್ಮಿಸಲು ಬಿಜಿಪಿ ಹಾಗೂ ಶಿವಸೇನೆ ಸಜ್ಜಾಗಿದೆ. ಸದ್ಯದಲ್ಲೇ ಹೊರಬೀಳಲಿರುವ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಬಹುತೇಕ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆಗಳು ದಟ್ಟವಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡ ಇದೇ ರೀತಿಯಾದ ಭವಿಷ್ಯ ನುಡಿದಿವೆ.
ವಿವಾದಕ್ಕೆ ಕಾರಣವಾಗಿದ್ದ ಬೆರಳಿನ ಶಾಯಿ..
ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಬಳಸುವ ಶಾಯಿಯು ಅಳಿಸಿಹೋಗುತ್ತಿದೆ ಎಂದು ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಆರೋಪಿಸಿದ್ದರು. ಅಲ್ಲದೆ ಇದು ಮಾರ್ಕರ್ ಗುರುತನ್ನು ಬಳಸಿರುವುದರಿಂದ ಅಳಿಸಿ ಹೋಗಬಹುದು, ಮಾರ್ಕರ್ ಬಳಸಲಾಗುತ್ತಿದೆ ಎಂದು ಠಾಕ್ರೆ ಬ್ರದರ್ಸ್ ಕಿಡಿಕಾರಿದ್ದರು.
ನನಗೂ ಮಾರ್ಕರ್ ನಿಂದಲೇ ಗುರುತು ಹಾಕಲಾಗಿತ್ತು, ಅದು ಅಳಿಸಿ ಹೋಗುತ್ತಿದೆಯೇ? ಚುನಾವಣಾ ಆಯೋಗ ಈ ಬಗ್ಗೆ ಪರಿಶೀಲಿಸಲಿ. ಬೇಕಿದ್ದರೆ ಅವರು ಆಯಿಲ್ ಪೇಂಟ್ ಅನ್ನೇ ಬಳಸಲಿ, ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂಬುದಷ್ಟೇ ಮುಖ್ಯವಾಗಿರುವ ವಿಚಾರ. ಆದರೆ ಪ್ರತಿಯೊಂದಕ್ಕೂ ಗಲಾಟೆ ಮಾಡುವುದು ಸರಿಯಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಠಾಕ್ರೆ ಸಹೋದರರಿಗೆ ತಿರುಗೇಟು ನೀಡಿದ್ದಾರೆ.
ಇನ್ನೂ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಮಹಾರಾಷ್ಟ್ರದ ಚುನಾವಣಾ ಆಯುಕ್ತ ದಿನೇಶ್ ವಾಘಮಾರೆ, ಮತದಾರರ ಬೆರಳುಗಳನ್ನು ಗುರುತಿಸಲು ಬಳಸಲಾಗುವ ಶಾಯಿ ಅಳಿಸಲು ಆಗುವುದಿಲ್ಲ. ಅಲ್ಲದೆ ಹಲವು ಚುನಾವಣೆಗಳಲ್ಲಿ ಭಾರತ ಚುನಾವಣಾ ಆಯೋಗವು ಬಳಸುವ ಶಾಯಿಯನ್ನೇ ಇಲ್ಲಿಯೂ ಬಳಕೆ ಮಾಡಲಾಗಿದೆ. ಇಲ್ಲಿ ಕಂಡುಬರುವ ಏಕೈಕ ವ್ಯತ್ಯಾಸವೆಂದರೆ ಅದನ್ನು ಮಾರ್ಕರ್ ರೂಪದಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆದರೆ ಈ ಅಳಿಸಲು ಆಗದ ಶಾಯಿಯ ಮಾರ್ಕರ್ ರೂಪವನ್ನು 2011 ರಿಂದ ಬಳಸಲಾಗುತ್ತಿದೆ. ಹೀಗಾಗಿ, ಈ ಅಳಿಸಲಾಗದ ಶಾಯಿಯ ಬಗ್ಗೆ ಶಂಕೆ ವ್ಯಕ್ತಪಡಿಸುವ ಅಥವಾ ಗೊಂದಲ ಸೃಷ್ಟಿಸುವುದು ಅರ್ಥವಿಲ್ಲದ ವಿಚಾರವಾಗಿದೆ. ಶಾಯಿ ಹಾಕಿದ 12-15 ಸೆಕೆಂಡುಗಳಲ್ಲಿ ಈ ಶಾಯಿ ಒಣಗುತ್ತದೆ ಎಂದು ಆಯುಕ್ತ ವಾಘಮಾರೆ ಹೇಳಿದ್ದಾರೆ.











