ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚಿಸಲು ನೆರವಾದ ಕಾಂಗ್ರೆಸ್-ಜೆಡಿಎಸ್ ನ 10 ಮಂದಿ ಶಾಸಕರಿಗೆ ಸಾಕಷ್ಟು ಸರ್ಕಸ್ ನಂತರ ಬಿ ಎಸ್ ಯಡಿಯೂರಪ್ಪ ಅಂತಿಮವಾಗಿ ಸಚಿವ ಸ್ಥಾನ ಕಲ್ಪಿಸಿ, ಖಾತೆ ಹಂಚಿಕೆ ಮಾಡಿದ್ದಾರೆ. ಈ ಮೂಲಕ ತಕ್ಷಣಕ್ಕೆ ವಚನ ಭ್ರಷ್ಟತೆಯ ಆರೋಪದಿಂದ ಪಾರಾಗಿ, ನಿಟ್ಟುಸಿರು ಬಿಟ್ಟಿದ್ದಾರೆ. ವಲಸಿಗರಿಗೆ ಮಾತ್ರ ಸ್ಥಾನಮಾನ ದೊರೆತಿರುವುದು ಮೂಲ ಬಿಜೆಪಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸದ್ಯಕ್ಕೆ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ “ಮೂಲ ಬಿಜೆಪಿಗರು ಇದನ್ನೆಲ್ಲಾ ನೋಡಿಕೊಂಡು ಕಡುಬು ತಿನ್ನುತ್ತಾ ಕುಳಿತುಕೊಳ್ಳುತ್ತಾರೆಯೇ” ಎಂದು ಹೇಳುವ ಮೂಲಕ ಬಿಜೆಪಿಯ ಆಂತರಿಕ ಬೇಗುದಿಗೆ ತುಪ್ಪು ಸುರಿಯುವ ಕೆಲಸ ಮಾಡಿದ್ದಾರೆ.
ಸಾಕಷ್ಟು ಹಗ್ಗಜಗ್ಗಾಟದ ನಂತರ ನೂತನ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ಕುರಿತು ಚರ್ಚೆ ಆರಂಭವಾಗಿದೆ. ನಿರೀಕ್ಷೆಯಂತೆ ಭಿನ್ನಮತೀಯರ ನಾಯಕ ರಮೇಶ್ ಜಾರಕಿಹೊಳಿ ಅವರು ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಡಿ ಕೆ ಶಿವಕುಮಾರ್ ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆ ಪಡೆಯುವ ಮೂಲಕ ಕಾಂಗ್ರೆಸ್ ನಾಯಕನಿಗೆ ಸೆಡ್ಡು ಹೊಡೆದಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಿ ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಜವಾಬ್ದಾರಿ ದೊರೆತಿದೆ. ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಸಹಕಾರದಂಥ ಪ್ರಮುಖ ಖಾತೆ ನೀಡಲಾಗಿದ್ದು, ಕೆ ಆರ್ ಪುರಂ ಸಚಿವ ಬೈರತಿ ಬಸವರಾಜು ಅವರಿಗೆ ಅಷ್ಟೇನು ಮಹತ್ವದ್ದಲ್ಲದ ನಗರಾಭಿವೃದ್ಧಿ ಖಾತೆ ನೀಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ ಗೋಪಾಲಯ್ಯ (ಸಣ್ಣ ಕೈಗಾರಿಕೆ), ಬಿ ಸಿ ಪಾಟೀಲ್ (ಅರಣ್ಯ), ಶ್ರೀಮಂತ ಪಾಟೀಲ್ (ಜವಳಿ), ಆನಂದ್ ಸಿಂಗ್ (ಆಹಾರ ಮತ್ತು ನಾಗರಿಕ ಪೂರೈಕೆ), ಕೆ ಆರ್ ಪೇಟೆ ಶಾಸಕ ನಾರಾಯಣಗೌಡ (ತೋಟಗಾರಿಕೆ ಮತ್ತು ಪೌರಾಡಳಿತ), ಯಲ್ಲಾಪುರದ ಶಿವರಾಂ ಹೆಬ್ಬಾರ್ ಗೆ ಕಾರ್ಮಿಕ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ.
ಹಣಕಾಸು, ಇಂಧನ ಹಾಗೂ ಬೆಂಗಳೂರು ನಗರಾಭಿವೃದ್ಧಿಯಂಥ ಅತ್ಯಂತ ಮಹತ್ವದ ಖಾತೆಗಳನ್ನು ಯಡಿಯೂರಪ್ಪ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಈ ಎಲ್ಲಾ ಖಾತೆಗಳ ಪೈಕಿ ಹೆಚ್ಚು ಬೇಡಿಕೆಯಲ್ಲಿದ್ದುದು ಬೆಂಗಳೂರು ನಗರಾಭಿವೃದ್ಧಿ ಖಾತೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ಜಲ ಮತ್ತು ನೈರ್ಮಲ್ಯ ಅಭಿವೃದ್ಧಿ ಮಂಡಳಿ (ಬಿಡಬ್ಲುಎಸ್‌ಎಸ್‌ಬಿ), ಬೆಂಗಳೂರು ಮೆಟ್ರೋ ರೈಲು ಅಭಿವೃದ್ಧಿ ನಿಗಮದಂಥ (ಬಿಎಂಆರ್‌ಸಿಎಲ್) ಹಣದ ತೈಲಿ ಹಾಗೂ ಪ್ರತಿಷ್ಠಿತ ಸಂಸ್ಥೆಗಳನ್ನು ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಒಳಗೊಂಡಿದೆ.
ಬೆಂಗಳೂರಿನ ಮೂಲ ಬಿಜೆಪಿಗರಾದ ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ ನಾರಾಯಣ, ಕಂದಾಯ ಸಚಿವ ಆರ್ ಅಶೋಕ್, ವಸತಿ ಸಚಿವ ವಿ ಸೋಮಣ್ಣ ಹಾಗೂ ವಲಸಿಗರಾದ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜು ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿರುವುದರಿಂದ ಯಡಿಯೂರಪ್ಪ ಇದನ್ನು ತಮ್ಮಲ್ಲಿಯೇ ಉಳಿಸಿಕೊಂಡಿರುವುದು ಸ್ಪಷ್ಟ. ಪ್ರತಿಷ್ಠೆ, ಹಣದ ತೈಲಿ ಹಾಗೂ ಪ್ರಭಾವದ ದೃಷ್ಟಿಯಿಂದ ಮಹತ್ವದ ಸ್ಥಾನ ಹೊಂದಿರುವ ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದುವವರು ಸಹಜವಾಗಿ ಪರ್ಯಾಯ ಶಕ್ತಿ ಕೇಂದ್ರವಾಗುತ್ತಾರೆ ಎಂಬ ಮಾತು ವಿಧಾನಸಭೆಯ ಮೊಗಸಾಲೆಯಲ್ಲಿ ಪ್ರಬಲವಾಗಿ ಕೇಳಿಬರುವ ಮಾತು.
ರಾಜ್ಯದ ಒಟ್ಟು ಬಜೆಟ್ ಗಾತ್ರವು 2.3 ಲಕ್ಷ ಕೋಟಿ ರುಪಾಯಿಯಷ್ಟಿದೆ. ರಾಜ್ಯದ ಶೇ. 20ರಷ್ಟು ಜನಸಂಖ್ಯೆ ಹೊಂದಿರುವ ಬೆಂಗಳೂರು, ರಾಜ್ಯದ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಅಂದಾಜಿನ ಪೈಕಿ 1 ಲಕ್ಷ ರುಪಾಯಿಗೂ ಅಧಿಕ ಕೋಟಿ ಆದಾಯ ಬೆಂಗಳೂರಿನಿಂದಲೇ ರಾಜ್ಯದ ಬೊಕ್ಕಸಕ್ಕೆ ಬರುತ್ತದೆ ಎನ್ನಲಾಗುತ್ತದೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕಂಪನಿಗಳಿಗೆ ತವರಾದ ಬೆಂಗಳೂರು ದೇಶದ ಒಟ್ಟಾರೆ ಸಾಫ್ಟವೇರ್ ಉತ್ಪನ್ನಗಳ ರಫ್ತಿನಲ್ಲಿ ಶೇ.30ರಷ್ಟನ್ನು ಸಿಲಿಕಾನ್ ಸಿಟಿ ಒಂದೇ ಪೂರೈಸುತ್ತದೆ. ಸುಮಾರು 7,000 ಸ್ಟಾರ್ಟ್‌ಅಪ್ ಕಂಪನಿಗಳಿಗೆ ನೆಲೆಯಾದ ಬೆಂಗಳೂರು ಸ್ಟಾರ್ಟ್ ಅಪ್ ತವರು. ಗಣ್ಯರು, ಉದ್ಯಮಿಗಳು, ಸಿನಿಮಾ ಮಂದಿ ಹೀಗೆ ಸಮಾಜದ ಮೇಲಸ್ಥರದಲ್ಲಿರುವವರು ನೆಲೆಸಿರುವ ಬೆಂಗಳೂರು ನಗಾರಭಿವೃದ್ಧಿ ಇಲಾಖೆ ಹೊಂದುವುದು ರಾಜಕೀಯ ಪ್ರಭಾವ, ಪ್ರತಿಷ್ಠೆ ಹಾಗೂ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದು. ಬಹುರಾಷ್ಟ್ರೀಯ ಕಂಪನಿಗಳು ಉದ್ಯಮ ಆರಂಭಿಸಲು ಬೆಂಗಳೂರಿಗೆ ಮಹತ್ವ ನೀಡುವುದರಿಂದ ರಿಯಲ್ ಎಸ್ಟೇಟ್ ಗೆ ಭಾರಿ ಮಹತ್ವವಿದೆ. ಬೆಂಗಳೂರು ವಲಯದಲ್ಲಿ ಕೈಗೊಳ್ಳುವ ಎಲ್ಲಾ ಚಟುವಟಿಕೆಗಳಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತಿಗೆ ಭಾರಿ ಪ್ರಾಮುಖ್ಯತೆ ಇರುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಸೋಮಶೇಖರ್ ಹಾಗೂ ಬೈರತಿ ಬಸವರಾಜು ಕಣ್ಣಿಟ್ಟಿದ್ದಾರೆ. ಒಂದೊಮ್ಮೆ ಇಬ್ಬರು ವಲಸಿಗರ ಪೈಕಿ ಯಾರಿಗಾದರೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಣೆ ನೀಡಿದರೆ ಮೂಲ ಬಿಜೆಪಿಗರಾದ ಆರ್ ಅಶೋಕ್, ಅಶ್ವತ್ ನಾರಾಯಣ ಹಾಗೂ ವಿ ಸೋಮಣ್ಣ ಸಿಡಿದೇಳಬಹುದು ಎಂಬುದು ಯಡಿಯೂರಪ್ಪನವರಿಗೆ ಗೊತ್ತಿದೆ. ಇದೇ ಕಾರಣಕ್ಕಾಗೆ ಅವರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಸೃಷ್ಟಿಸಲಾಗಿತ್ತು. ಪೊಲೀಸ್ ಅಧಿಕಾರಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶದಿಂದ ಗೃಹ ಸಚಿವರಾಗಿದ್ದ ಟಿ ಜೆ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಜಿ ಪರಮೇಶ್ವರ್ ನೇಮಕವಾಗಿದ್ದರು. ಕೇಂದ್ರೀಯ ತನಿಖಾ ವಿಭಾಗವು (ಸಿಐಡಿ), ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದು, ಜಾರ್ಜ್ ಪಾತ್ರವಿರಲಿಲ್ಲ ಎಂದು ಕ್ಲೀನ್ ಚಿಟ್ ನೀಡಿದ ನಂತರ ಅವರನ್ನು ಸಿದ್ದರಾಮಯ್ಯ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಪ್ರಭಾವಿಯಾದ ಜಾರ್ಜ್ ಗೆ ಮಹತ್ವದ ಸ್ಥಾನ ಕಲ್ಪಿಸುವ ಉದ್ದೇಶದಿಂದ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆಯ ದೃಷ್ಟಿಯಿಂದ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂಬ ಕೂಗು ಹೆಚ್ಚಾಗಿತ್ತು. ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಿರುಗಿಸಿಕೊಂಡ ಸಿದ್ದರಾಮಯ್ಯ ಅವರು ರಿಯಲ್ ಎಸ್ಟೇಟ್ ಉದ್ಯಮಿಯೂ ಆದ ಜಾರ್ಜ್‌ಗಾಗಿ ಬೆಂಗಳೂರು ನಗರಾಭಿವೃದ್ಧಿಯಂಥ ಮಹತ್ವದ ಹಾಗೂ ಹಣದ ತೈಲಿ ಹೊಂದಿರುವ ಸಚಿವಾಲಯವನ್ನು ಸೃಷ್ಟಿಸಿದ್ದರು. ಇದರಿಂದ ಅಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಬಿಟಿಎಂ ಲೇಔಟ್ ಶಾಸಕ ಬಿ ರಾಮಲಿಂಗಾರೆಡ್ಡಿ ಅವರು ಕಣ್ಣಿಟ್ಟಿದ್ದರು ಎಂಬುದು ಗಮನಾರ್ಹ. ಆದರೆ, ಸಿದ್ದರಾಮಯ್ಯ ಅವರು ಜಾರ್ಜ್ ಅವರನ್ನು ಎರಡನೇ ಬಾರಿಗೆ ಸಂಪುಟಕ್ಕೆ ಸೇರಿಸಿಕೊಂಡ ನಂತರ ಅವರ ಸ್ಥಾನವನ್ನು ಬದಲಿಸಲಿಲ್ಲ.
ಕಾಂಗ್ರೆಸ್-ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಜಿ ಪರಮೇಶ್ವರ್ ಅವರಿಗೆ ಗೃಹ ಇಲಾಖೆಯ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಲಾಗಿತ್ತು. ಹಲವು ದಶಕಗಳ ನಂತರ 2018ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್, ಬಿಜೆಪಿಯನ್ನು ಹಿಂದಿಕ್ಕಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 16 ಸ್ಥಾನ ಗೆದ್ದಿತ್ತು. ಇಷ್ಟಾದರೂ ತುಮಕೂರಿನ ಕೊರಟಗೆರೆ ಕ್ಷೇತ್ರದ ಶಾಸಕರಾದ ಜಿ ಪರಮೇಶ್ವರ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿದೆ ಎಂಬ ಅಪಸ್ವರ ಎದ್ದಿತ್ತು. ಹಲವು ಸಂದರ್ಭಗಳಲ್ಲಿ ಸೋಮಶೇಖರ್, ಬೈರತಿ ಬಸವರಾಜು, ಕಾಂಗ್ರೆಸ್ ಶಾಸಕ ಬೈರತಿ ಸುರೇಶ್, ಎಂಟಿಬಿ ನಾಗರಾಜ್, ರಾಮಲಿಂಗಾ ರೆಡ್ಡಿ ಅವರು ಪರೋಕ್ಷವಾಗಿ ಪರಮೇಶ್ವರ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಗಳೂರು ಅಭಿವೃದ್ಧಿ ಕುರಿತಾದ ಸಭೆಗಳಿಗೆ ಕಾಂಗ್ರೆಸ್ ನ ಬೆಂಗಳೂರು ನಗರ ಶಾಸಕರೇ ಗೈರಾಗುವ ಮೂಲಕ ತಮ್ಮ ವಿರೋಧ ದಾಖಲಿಸಿದ್ದರು ಎಂಬುದನ್ನು ನೆನೆಯಬಹುದು.
ಸದ್ಯದ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಐವರು ಸಚಿವರ ಕಣ್ಣು ನೆಟ್ಟಿದೆ. 2008-2013ರ ಬಿಜೆಪಿ ಆಡಳಿತದಲ್ಲಿ ಅಶೋಕ್ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ದು ಅವರು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದರು. ಬಿಜೆಪಿಯಿಂದ ಬೆಂಗಳೂರಿನ ಮೇಲೆ ಅಶೋಕ್ ಪ್ರಭಾವ ಹೊಂದಿದ್ದಾರೆ. ಆದರೆ, ಬಿಬಿಎಂಪಿಯಲ್ಲಿ ಬಿಜೆಪಿಗೆ ಅಧಿಕಾರ ಧಕ್ಕಿಸಿಕೊಡಲು ವಿಫಲವಾಗಿದ್ದು, ಕೇಂದ್ರ ಸಚಿವ ಡಿ ವಿ ಸದಾನಂದಗೌಡರ ಪ್ರಭಾವ ಕುಗ್ಗಿಸಲು ಯತ್ನಿಸಿದ್ದು, ಬಿಜೆಪಿಯ ಭದ್ರಕೋಟೆ ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ವಿಫಲವಾದ ಘಟನೆಗಳು ಪಕ್ಷದಲ್ಲಿ ಅಶೋಕ್ ಸ್ಥಾನ ಕುಗ್ಗಿಸಿವೆ. ಇದರಿಂದಾಗಿ ವಯಸ್ಸಿನಲ್ಲಿ ಚಿಕ್ಕವರಾದ ತಮ್ಮದೇ ಒಕ್ಕಲಿಗ ಸಮುದಾಯದ ಮಲ್ಲೇಶ್ವರಂ ಶಾಸಕ ಸಿ ಎನ್ ಅಶ್ವತ್ ನಾರಾಯಣ ಅವರಿಗೆ ಬಿಜೆಪಿ ಹೈಕಮಾಂಡ್ ಉಪಮುಖ್ಯಮಂತ್ರಿ ಪಟ್ಟ ಕಟ್ಟಿದೆ. ಇದರರ್ಥ ಅಶೋಕ್ ಅವರಿಗಿಂತ ಅಶ್ವಥ್ ನಾರಾಯಣ ಅವರನ್ನು ಪಕ್ಷ ಪ್ರಮುಖವಾಗಿ ಗುರುತಿಸುತ್ತದೆ ಎಂಬುದೇ ಆಗಿದೆ. ಈ ಆಟದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಪಾತ್ರ ಪ್ರಮುಖವಾಗಿದೆ ಎಂಬ ಗುಮಾನಿ ಇದೆ. ಮಾಜಿ ಸಚಿವ ಅನಂತ್ ಕುಮಾರ್ ಆಪ್ತವಲಯದಲ್ಲಿ ಅಶೋಕ್ ಇದ್ದರು ಎಂಬುದು ಇದಕ್ಕೆ ಬಿಜೆಪಿಗರು ನೀಡುವ ಸಬೂಬು. ಇನ್ನು ಗೋವಿಂದರಾಜನಗರ ಶಾಸಕ ವಿ ಸೋಮಣ್ಣ ಅವರು ಯಡಿಯೂರಪ್ಪನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರೂ ಒತ್ತಡ ಹಾಕುವ ಸ್ಥಿತಿಯಲ್ಲಿ ಇಲ್ಲ. ಹೈಕಮಾಂಡ್ ಮರ್ಜಿಗೆ ಸಿಲುಕಿರುವ ಬಿಎಸ್‌ವೈ ಸ್ಥಿತಿ ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ. ಇದೇ ಕಾರಣಕ್ಕಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.