ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ವಿರುದ್ಧ ಮಂಗಳೂರಿನಲ್ಲಿ ನಡೆದಿರುವ ಪ್ರತಿಭಟನೆ ವೇಳೆ ನಡೆದಿರುವ ಕೃತ್ಯ ಮತ್ತು ಕೃತಿಗಳ ಬಗ್ಗೆ ಮಂಗಳೂರು ನಗರ ಪೊಲೀಸರು ಸಾಕಷ್ಟು ವಿಚಾರಗಳನ್ನು ವಿವರಿಸಬೇಕಾಗಬಹುದು.
ಮಂಗಳೂರಿನಲ್ಲಿ ಪೊಲೀಸರು ನಡೆಸಿರುವ ಗೋಲಿಬಾರಿಗೆ ಇಬ್ಬರು ಸಾವನ್ನಪ್ಪಿದ್ದು, ಇತರ ಆರು ಮಂದಿ ಗುಂಡೇಟಿನ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಷ್ಟು ಮಂದಿಗೆ ಗುಂಡೇಟು ತಗಲಿದೆ ಎಂದು ಪೊಲೀಸರು ಬಹಿರಂಗ ಪಡಿಸಿರಲಿಲ್ಲ.
ಪೊಲೀಸರ ಮತ್ತು ಆಡಳಿತ ಪಕ್ಷದ ಮೊದಲ ವಾದವಾಗಿತ್ತು ಕೇರಳದಿಂದ ಬಂದ ಜನರು ಮಂಗಳೂರಿನಲ್ಲಿ ಹಿಂಸಾಚಾರ ನಡೆಸಿದ್ದಾರೆ ಎಂಬುದು. ಪೊಲೀಸರು ಬಂಧಿಸಿರುವ ಮತ್ತು ವಶಕ್ಕೆ ಪಡೆದುಕೊಂಡವರು, ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು, ಪೊಲೀಸರು ದಾಖಲಿಸಿರುವ ಹತ್ತಕ್ಕೂ ಹೆಚ್ಚು ಎಫ್ ಐ ಆರ್ ಗಳಲ್ಲಿ ಕೇರಳದ ಯಾರೊಬ್ಬರ ಹೆಸರು ಕೂಡ ಇಲ್ಲ.
ಪೊಲೀಸರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು, ತಮ್ಮ ಯಡವಟ್ಟುಗಳನ್ನು ಮರೆ ಮಾಚಲು ಕಾಸರಗೋಡಿನಿಂದ ಆಗಮಿಸಿದ ಕೇರಳದ ಮಲೆಯಾಳಿ ಖಾಸಗಿ ಟಿವಿ ಚಾನಲುಗಳನ್ನು ವಸ್ತುಶಃ ದಿಗ್ಬಂಧನದಲ್ಲಿ ಇರಿಸಲಾಯಿತು. ಇದರಿಂದಾಗಿ ರಾಜ್ಯ ಸರಕಾರ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಗೆ ಇನ್ನಷ್ಟು ಡ್ಯಾಮೇಜ್ ಆಯಿತೇ ಹೊರತು ಪೊಲೀಸರಿಂದ ಯಾವ ಫಲ ಸಾಧನೆಯೂ ಆಗಲಿಲ್ಲ. ಸಿದ್ದರಾಮಯ್ಯ ಸರಕಾರದಲ್ಲಿ ವಾರ್ತಾ ಇಲಾಖೆಯ ಕ್ರಿಯಾಶೀಲ ನಿರ್ದೇಶಕರಾಗಿದ್ದ ಇಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಮೊದಲಿಗೆ 50 ಮಂದಿ ನಕಲಿ ಪತ್ರಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದಿದ್ದರು. ಕಸ್ಟಡಿಯಲ್ಲಿದ್ದದ್ದು ಕೇವಲ ಏಳು ಮಂದಿ ಪತ್ರಕರ್ತರು. ಅವರಲ್ಲಿ ಮೂರು ಮಂದಿ ಕೇರಳ ಸರಕಾರದ ಮಾನ್ಯತಾ ಕಾರ್ಡ್ (ಅಕ್ರೆಡಿಶನ್) ಹೊಂದಿದ್ದರು.
ಎಲ್ಲಿಂದ ಆರಂಭ?
ಮಂಗಳೂರಿನಲ್ಲಿ ಗಲಭೆ ಆರಂಭವಾಗಿದ್ದು ಡಿಸೆಂಬರ್ 19 ರಂದು. ಅದಕ್ಕೂ ಮುನ್ನ ಹಲವು ದಿವಸಗಳಿಂದ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಕಾಂಗ್ರೆಸ್ ಪಕ್ಷ ಕೂಡ ತನ್ನದೇ ಆದ ರೀತಿಯಲ್ಲಿ ಡಿಸೆಂಬರ್ 17ರಂದು ಪ್ರತಿಭಟನಾ ಸಭೆ ನಡೆಸಿತ್ತು. ಆದರೆ, ಕೇಂದ್ರ ಸರಕಾರದ ಕಾಯಿದೆ ವಿರುದ್ಧದ ಪ್ರತಿಭಟನೆಗೆ ಮಂಗಳೂರಿನಲ್ಲಿ ನಿಜವಾದ ಕಾವು ನೀಡಿದ್ದು ಡಿಸೆಂಬರ್ 18ರಂದು ಸಂಜೆ ವಿದ್ಯಾರ್ಥಿಗಳು ನಡೆಸಿದ ಪ್ರದರ್ಶನ ಮತ್ತು ಘೋಷಣೆಗಳು. ಅಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಆರಕ್ಕೂ ಹೆಚ್ಚು ಪ್ರತಿಭಟನೆ ನಡೆದಿತ್ತು. ಸಂಜೆ ವೇಳೆ ಯಾವುದೇ ಸಂಘಟನೆ ಬ್ಯಾನರೇ ಇಲ್ಲದೆ ವಿದ್ಯಾರ್ಥಿನಿಯರು ಸೇರಿದಂತೆ ಬಹುದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿ ಸಮೂಹ ನಡೆಸಿದ ಪ್ರತಿಭಟನೆಯ ಬೆನ್ನಲ್ಲೇ ಮಂಗಳೂರು ನಗರ ಪೊಲೀಸರು ಸೆಕ್ಷನ್ 144ರ ಪ್ರಕಾರ ನಿಷೇದಾಜ್ಞೆ ಘೋಷಿಸಿದರು.
ಆದರೆ, ಮರುದಿನ ಅಂದರೆ ಈ ಗಲಭೆ ಆರಂಭವಾದ ಡಿ.19ರಂದು ಕೆಲವು ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ಪತ್ರ ನೀಡಿದ್ದರು. ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಿದ್ದಾರೆ. ಪೂರ್ವಾಹ್ನ 11 ಗಂಟೆಗೆ ಸೇರಿದ ಜನರಿಗೆ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ. ಕೇವಲ ಮೈಕಿನಲ್ಲಿ ಘೋಷಣೆ ಮಾಡಿ ಚದುರಿಸುವ ಕೆಲಸ ನಡೆಯಿತೇ ಹೊರತು ಮುಖಂಡರನ್ನು ಕರೆದು ದಾವಣಗೆರೆ, ಬೆಂಗಳೂರು ಮುಂತಾದೆಡೆ ಪೊಲೀಸ್ ಅಧಿಕಾರಿಗಳು ನಡೆಸಿದ ದೇಶಭಕ್ತಿಯ ಪಾಠ ಮಾಡುವ ಬುದ್ಧಿವಂತಿಕೆಯನ್ನು ಇಲ್ಲಿನ ಪೊಲೀಸರು ತೋರಿಸಲಿಲ್ಲ.
ಹಿರಿಯ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ದರೆ, ಡಿಸೆಂಬರ್ 18ರಂದೇ ಸೇರಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಟಾರ್ಜ್ ಮಾಡಲು ರಣೋತ್ಸಾಹಿ ಪೊಲೀಸರು ಕಾತುರರಾಗಿದ್ದರು. ಅಂತೂ ಜಿಲ್ಲಾಧಿಕಾರಿ ಕಚೇರಿ ಸಮೀಪದ ನೆಲ್ಲಿಕಾಯಿ ರಸ್ತೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಚದುರಿಸುವಲ್ಲಿ ಪೊಲೀಸರು ವೃತ್ತಿಪರತೆ ತೋರಿಸಲೇ ಇಲ್ಲ.
ಅನಂತರ ಬೀಬಿ ಅಲಾಬಿ ರಸ್ತೆಯಲ್ಲಿ ಟಯರುಗಳಿಗೆ ಬೆಂಕಿ ಹಚ್ಚಿದಾಗ ಕೂಡ ಮೀಸಲು ಪೊಲೀಸ್, ಪೊಲೀಸರು ಮತ್ತು ಅಧಿಕಾರಿಗಳಲ್ಲಿ ತಾಳ ಮೇಳ ಇರಲಿಲ್ಲ. ಗಲಭೆಯೊಂದನ್ನು ನಿಯಂತ್ರಿಸುವ ಸಿದ್ಧತೆಯಲ್ಲಿ ಪೊಲೀಸರು ಇದ್ದಂತಿರಲಿಲ್ಲ. ಉತ್ತರ ಪೊಲೀಸ್ ಠಾಣೆ ಸಮೀಪದಲ್ಲಿ ಸಂಜೆ ವೇಳೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಪೊಲೀಸರು ಹೈರಾಣರಾಗಿದ್ದರು. ಆದೇಶ ನೀಡಿದರೊ ಇಲ್ಲವೊ ಹಲವು ಸುತ್ತಿನ ಗುಂಡಿನ ಮೊರತೆ ಕೇಳಿಸಿತು. ಹಲವಾರು ಮಂದಿ ಗಾಯಗೊಂಡು ಕಾರ್ಮಿಕರೊಬ್ಬರು ಅಲ್ಲೇ ಶವವಾಗಿ ಬಿದ್ದವರು. ಸತ್ತವರು ಮತ್ತು ಗುಂಡೇಟು ತಿಂದವರು ಪ್ರತಿಭಟನೆ ವೇಳೆ ಕಲ್ಲು ಬಿಸಾಡಿದವರು ಅಲ್ಲವೇ ಅಲ್ಲ ಎನ್ನಲಾಗುತ್ತಿದೆ.