ಗ್ರಾಮೀಣ ಪ್ರದೇಶದ ಜನರು ಆಹಾರ ಮತ್ತು ಉಪಭೋಗದ ಮೇಲೆ ಮಾಡುತ್ತಿರುವ ವೆಚ್ಚವು ನಲ್ವತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಕಡಮೆ ಆಗಿದೆ ಎಂಬ ನ್ಯಾಷನಲ್ ಸ್ಯಾಂಪಲ್ ಆಫೀಸ್ (ಎನ್ಎಸ್ಒ) ನಡೆಸಿರುವ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡದಿರಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಎನ್ಎಸ್ಒ ಸಿದ್ದ ಪಡಿಸಿರುವ ಸಮೀಕ್ಷಾ ವರದಿಯು ಮೋದಿ ಸರ್ಕಾರದ ಸಚಿವಾಲಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಕೊಳೆಯುತ್ತಾ ಬಿದ್ದಿದೆ. ಜೂನ್ 2019ರಲ್ಲಿ ಕೇಂದ್ರ ಸರ್ಕಾರದ ಅನುಮೋದನೆ ನೀಡಿ ಪ್ರಕಟಿಸಬೇಕಿತ್ತು. ಆದರೆ, ಅದಕ್ಕೆ ಅನುಮೋದನೆಯನ್ನೇ ನೀಡದೇ ಉಳಿಸಿಕೊಂಡಿದೆ.
ಅನುಮೋದನೆಗೆ ಕಾದಿರುವ, ಆದರೆ, ಸೋರಿಕೆ ಆಗಿರುವ ಎನ್ಎಸ್ಒ ಸಮೀಕ್ಷಾ ವರದಿ ಪ್ರಕಾರ ದೇಶದ ಗ್ರಾಮೀಣ ಪ್ರದೇಶದ ಜನರ ಸ್ಥಿತಿ ತೀರಾ ಹದಗೆಟ್ಟಿದೆ. ಅವರ ಆಹಾರ ಮತ್ತಿತರ ಉಪಭೋಗಗಳ ಮೇಲೆ ವೆಚ್ಚ ಮಾಡುವ ಮೊತ್ತವು ಕಳೆದ ನಲ್ವತ್ತು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ತಗ್ಗಿದೆ. 2017-18ರ ಗ್ರಾಮೀಣ ಪ್ರದೇಶದ ಜನರ ಉಪಭೋಗ ಕುರಿತ ಸಮೀಕ್ಷಾ ವರದಿ ಪ್ರಕಾರ, 2011-12ರಲ್ಲಿ ಗ್ರಾಮೀಣ ಪ್ರದೇಶದ ಜನರ ಕುಟುಂಬದ ಮಾಸಿಕ ಉಪಭೋಗ ವೆಚ್ಚವು 1501 ರುಪಾಯಿ ಇದ್ದದ್ದು, 2017-18ರಲ್ಲಿ 1446 ರುಪಾಯಿಗೆ ಕುಸಿದಿದೆ.
ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಕುಟುಂಬದ ಉಪಭೋಗ ವೆಚ್ಚವು ಹೆಚ್ಚುತ್ತಾ ಹೋಗುತ್ತದೆ, ಹೆಚ್ಚುತ್ತಾ ಹೋಗಬೇಕು. ಏಕೆಂದರೆ ನಮ್ಮ ದೇಶದ ಜಿಡಿಪಿ ಶೇ.7ರ ಆಜುಬಾಜಿನಲ್ಲಿ ಬೆಳವಣಿಗೆ ದಾಖಲಿಸುವಾಗ ಗ್ರಾಮೀಣ ಪ್ರದೇಶದ ಉಪಭೋಗವು ಕನಿಷ್ಠ ವಾರ್ಷಿಕ ಶೇ.1ರಿಂದ 3ರಷ್ಟಾದರೂ ಏರಿಕೆ ದಾಖಲಿಸಬೇಕು. ಆದರೆ, ಗ್ರಾಮೀಣ ಪ್ರದೇಶದ ಉಪಭೋಗವು ಋಣಾತ್ಮಕ ಬೆಳವಣಿಗೆ ಸಾಧಿಸಿದ್ದರೆ, ಅದು ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರ ಸಂಕೇತ. ಹೀಗಾಗಿ ನರೇಂದ್ರಮೋದಿ ನೇತೃತ್ವದ ಸರ್ಕಾರವು ತನ್ನದೇ ಅಧೀನದಲ್ಲಿ ಕಾರ್ಯನಿರ್ವಹಿಸುವ ಎನ್ಎಸ್ಒ ಸಮೀಕ್ಷಾ ವರದಿಯನ್ನು ಪ್ರಕಟಿಸದೇ ಇರಲು ನಿರ್ಧರಿಸದೆ.
ಅದಕ್ಕೆ ನೀಡಿರುವ ಕಾರಣಗಳೇನೆಂದರೆ- ಸಮೀಕ್ಷಾ ವರದಿ ಸರಿಯಾಗಿಲ್ಲ, ಅದರಲ್ಲಿ ಲೋಪದೋಷಗಳಿವೆ ಎಂಬುದಾಗಿದೆ. ಇಷ್ಟು ವರ್ಷವೂ ಎನ್ಎಸ್ಒ ನಡೆಸಿದ ಸಮೀಕ್ಷಾ ವರದಿಗಳನ್ನು ಅತ್ಯಂತ ಪವಿತ್ರವಾದ ಮತ್ತು ಕರಾರುವಕ್ಕಾದ ಸಮೀಕ್ಷೆಗಳು ಎಂದು ಪರಿಗಣಿಸಿ ಇದುವರೆಗಿನ ಸರ್ಕಾರಗಳು ಮುಂದಿನ ಯೋಜನೆಗಳನ್ನು ರೂಪಿಸಲು ಬಳಸಿಕೊಳ್ಳುತ್ತಿದ್ದವು. ಆದರೆ, ಕಳೆದ ಸಾಲಿನಲ್ಲಿ ಇದೇ ನರೇಂದ್ರಮೋದಿ ಸರ್ಕಾರವು ನಿರುದ್ಯೋಗ ಕುರಿತಂತೆ ಎನ್ಎಸ್ಒ ನಡೆಸಿದ ಸಮೀಕ್ಷಾ ವರದಿಯನ್ನು ಬುಟ್ಟಿಗೆಸೆದಿತ್ತು. ಏಕೆಂದರೆ ನಿರುದ್ಯೋಗವು ಸರ್ಕಾವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ ಎಂಬುದು ಸಮೀಕ್ಷಾ ವರದಿಯ ಸಾರಾಂಶವಾಗಿತ್ತು. ಆದರೆ, ದೇಶದಲ್ಲಿನ ರಿಯಲ್ ಟೈಮ್ ನಿರುದ್ಯೋಗ ಮಟ್ಟವನ್ನು ಅಳೆಯುವ ವ್ಯವಸ್ಥೆಯನ್ನು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆಯು ಹೊಂದಿದೆ.
ಹೀಗಾಗಿ ಎನ್ಎಸ್ಒ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ ತಡೆಹಿಡಿದು, ಅದನ್ನು ಮುಚ್ಚಿಹಾಕಲು ಯತ್ನಿಸಿದರೂ ಸಿಎಂಐಇ ಅಂಕಿಅಂಶಗಳು ದೇಶದ ನಿಜವಾದ ನಿರುದ್ಯೋಗ ಪರಿಸ್ಥಿತಿಯನ್ನು ಜಗತ್ತಿಗೆ ತೋರಿಸಿದ್ದವು.
ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂಬುದನ್ನು ಸಾಬೀತು ಮಾಡುವ ಯಾವುದೇ ಅಂಕಿಅಂಶಗಳನ್ನು ಬಿಡುಗಡೆ ಮಾಡದೇ ಮುಚ್ಚಿ ಹಾಕುತ್ತಿರುವ ನರೇಂದ್ರಮೋದಿ ಸರ್ಕಾರ ಎನ್ಎಸ್ಒ ಅಂಕಿಅಂಶಗಳನ್ನಷ್ಟೇ ಅಲ್ಲಾ ಜಿಡಿಪಿ ಕುರಿತ ಅಂಕಿಅಂಶಗಳನ್ನೂ ತಡೆ ಹಿಡಿದಿತ್ತು. ಹೊಸ ಸರಣಿಯ ಜಿಡಿಪಿ ಲೆಕ್ಕಾಚಾರಗಳ ಪ್ರಕಾರ, ಮೋದಿ ಸರ್ಕಾರಕ್ಕಿಂತ ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಹೆಚ್ಚಿತ್ತು ಎಂಬ ಅಂಶವನ್ನು ರಾಷ್ಟ್ರೀಯ ಸಾಂಖ್ಯಿಕ ಆಯೋಗ ನಿಯೋಜಿಸಿದ್ದ ಸುದಿಪ್ತೊ ಮಂಡಲ್ ನೇತೃತ್ವದ ಸಮಿತಿ ತನ್ನ ಕರಡು ವರದಿಯಲ್ಲಿ ತಿಳಿಸಿತ್ತು. ನಂತರ ಮೋದಿ ಸರ್ಕಾರ ಸುದಿಪ್ತೊ ಮಂಡಲ್ ವರದಿಯನ್ನು ಹಿಂಪಡೆದು ಅಂಕಿಅಂಶಗಳನ್ನು ತಿರುಚಿ, ತನ್ನದೇ ಅವಧಿಯಲ್ಲೇ ಹೆಚ್ಚಿನ ಅಭಿವೃದ್ಧಿಯಾಗಿದೆ ಎಂದು ಬಿಂಬಿಸುವ ಹತಾಶ ಪ್ರಯತ್ನ ಮಾಡಿತ್ತು.
2015 ಜನವರಿಯಿಂದ ಜಿಡಿಪಿ ಲೆಕ್ಕಚಾರವನ್ನು 2011-12ನೇ ವಿತ್ತೀಯ ವರ್ಷವನ್ನು ಮೂಲಾಧಾರವಾಗಿಟ್ಟುಕೊಂಡು ಲೆಕ್ಕಹಾಕಲಾಗುತ್ತಿದೆ. ಅದಕ್ಕು ಹಿಂದೆ 2004-05ನೇ ವಿತ್ತೀಯ ವರ್ಷವನ್ನು ಮೂಲಾಧಾರವಾಗಿಟ್ಟುಕೊಂಡು ಲೆಕ್ಕಹಾಕಲಾಗುತ್ತಿತ್ತು. ಹೊಸ ಸರಣಿ ಲೆಕ್ಕಾಚಾರವೇ ಹೆಚ್ಚು ವೈಜ್ಞಾನಿಕವಾಗಿದೆ ಮತ್ತು ಹೆಚ್ಚು ವಿಸ್ತೃತವಾಗಿದೆ ಎಂದು ಮೋದಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಮೋದಿ ಸರ್ಕಾರದ ಹೊಸ ಸರಣಿಯ ಜಿಡಿಪಿ ಲೆಕ್ಕಾಚಾರವೇ ತಪ್ಪಾಗಿದೆ ಎಂಬ ಆಘಾತಕಾರಿ ಅಂಶವನ್ನು ಎನ್ಎಸ್ಒ ತನ್ನ ವರದಿಯಲ್ಲಿ ತಿಳಿಸಿರುವುದನ್ನು ‘ದಿ ಮಿಂಟ್’ ಪತ್ರಿಕೆ ವರದಿ ಮಾಡಿತ್ತು. ವರದಿ ಪ್ರಕಾರ, ಹೊಸ ಸರಣಿ ಜಿಡಿಪಿ ಲೆಕ್ಕಾಚಾರದಲ್ಲಿ ಒಳಗೊಂಡಿರುವ ಕಂಪನಿಗಳ ಪೈಕಿ ಶೇ.37ರಷ್ಟು ಅಸ್ತಿತ್ವದಲ್ಲೇ ಇಲ್ಲ ಅಥವಾ ತಪ್ಪಾಗಿ ವರ್ಗೀಕರಿಸಲಾಗಿದೆ. ಅಂಕಿ ಅಂಶಗಳನ್ನು ತಿರುಚುವ ಕೆಲಸವನ್ನು ಕಾರ್ಪೊರೆಟ್ ವ್ಯವಹಾರಗಳ ಸಚಿವಾಲಯವೇ ಮಾಡಿದೆಯೇ ಎಂಬ ಅನುಮಾನ ಮೂಡಿಸಿತ್ತು. ಏಕೆಂದರೆ ಎನ್ಎಸ್ಒ ವರದಿ ಪ್ರಕಾರ, ಎಂಸಿಎ-21 ವರ್ಗೀಕರಣದಲ್ಲಿರುವ ಶೇ.37ರಷ್ಟು ಕಂಪನಿಗಳು ಕಾರ್ಯನಿರ್ವಹಿಸುತ್ತಿಲ್ಲ, ಅಸ್ವಿತ್ತದಲ್ಲೇ ಇಲ್ಲಾ ಅಥವಾ ತಪ್ಪಾಗಿ ವರ್ಗೀಕರಿಸಲಾಗಿದೆ.
ಜಿಡಿಪಿ ಹೊಸ ಸರಣಿಯಡಿ ಯುಪಿಎ ಸರ್ಕಾರದಲ್ಲಿ ಅವಧಿಯಲ್ಲೇ ಅಭಿವೃದ್ಧಿ ಹೆಚ್ಚಿತ್ತು. 2011ರಲ್ಲಿ ಜಿಡಿಪಿ ಶೇ.10.3ರಷ್ಟಾಗಿತ್ತು ಎಂಬ ಸುದಿಪ್ತೊ ಮಂಡಲ್ ನೇತೃತ್ವದ ವರದಿಯಲ್ಲಿನ ಅಂಶವನ್ನು ಶತಾಯಗತಾಯ ವಿರೋಧಿಸಿದ್ದ ಮೋದಿ ಸರ್ಕಾರವು, ನಂತರ ಹೊಸ ಸರಣಿಯ ಅಂಕಿ ಅಂಶಗಳನ್ನೇ ತಿರುಚಿ 2011ರಲ್ಲಿನ ಜಿಡಿಪಿ ಅಭಿವೃದ್ಧಿ ದರವನ್ನು 8.5ಕ್ಕೆ ತಗ್ಗಿಸಿತ್ತು. ಅಲ್ಲದೇ ಯುಪಿಎ ಅವಧಿಯಲ್ಲಿನ ಅಂದರೆ 2006-2012ರ ನಡುವಿನ ಆರ್ಥಿಕ ಅಭಿವೃದ್ಧಿ ದರ ಶೇ.7.75 ಇದ್ದದ್ದನ್ನು ಶೇ.6.82ಕ್ಕೆ ಇಳಿಸಿತ್ತು. ಜತೆಗೆ ಮೋದಿ ಸರ್ಕಾರದ ಮೊದಲ ನಾಲ್ಕು ವರ್ಷಗಳ ಅಭಿವೃದ್ಧಿ ದರವನ್ನು ಶೇ.7.35ಕ್ಕೆ ಹಿಗ್ಗಿಸಿಕೊಂಡು ತನ್ನ ಬೆನ್ನನ್ನು ತಾನೆ ತಟ್ಟಿಕೊಂಡಿತ್ತು.
ಈ ಹಿಂದೆ ಪ್ರಕಟಿತ ಅಂಕಿಅಂಶಗಳನ್ನೇ ತಿರುಚಿ ತನ್ನ ಸರ್ಕಾರದ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಚನ್ನಾಗಿದೆ ಎಂದು ಬಿಂಬಿಸಲು ಹತಾಶ ಯತ್ನ ನಡೆಸಿ, ವ್ಯಾಪಕವಾಗಿ ಟೀಕೆಗೆ ಒಳಗಾದ ಮೋದಿ ಸರ್ಕಾರ, ಈಗ ಎನ್ಎಸ್ಒ ಪ್ರಕಟಿಸಿರುವ ಗ್ರಾಮೀಣ ಪ್ರದೇಶದ ಉಪಭೋಗ ಸಮೀಕ್ಷಾ ವರದಿಯನ್ನು ಲೋಪದೋಷಗಳಿವೆ ಎಂಬ ನೆಪವೊಡ್ಡಿ ಮುಚ್ಚಿಹಾಕಲು ನಿರ್ಧರಿಸಿದೆ. ಅಂದರೆ, ವರದಿ ಪ್ರಕಟಿಸದೇ ಮುಂದಿನ ವಿತ್ತೀಯ ವರ್ಷದಲ್ಲಿ ಹೊಸದಾಗಿ ಸಮೀಕ್ಷೆ ನಡೆಸಿ ಪ್ರಕಟಿಸಲು ನಿರ್ಧರಿಸಿದೆ. ಆಗ ಪರಿಸ್ಥಿತಿ ಹೇಗೆ ಇದ್ದರೂ ಗ್ರಾಮೀಣ ಪ್ರದೇಶದ ಉಪಭೋಗ ಯುಪಿಎ ಸರ್ಕಾರಕ್ಕಿಂತ ಹೆಚ್ಚಾಗಿದೆ ಎಂಬುದೇ ಸಮೀಕ್ಷೆಯ ಫಲಿತಾಂಶ ಆಗಿರುತ್ತದೆ ಎಂಬುದನ್ನು ಯಾರೂ ಬೇಕಾದರೂ ನಿರೀಕ್ಷಿಸಬಹುದು. ಏಕೆಂದರೆ ತನ್ನ ಸರ್ಕಾರದ ವಿರುದ್ಧ ಏನೇ ಅಂಕಿಅಂಶ ಬಂದರೂ ಅದನ್ನು ತಿರುಚಿಯೇ ಮೋದಿ ಸರ್ಕಾರ ಪ್ರಕಟಿಸೋದು.
ಮೋದಿ ಸರ್ಕಾರ ಅಂಕಿ ಅಂಶಗಳನ್ನು ತಿರುಚುತ್ತದೆ ಎಂಬುದನ್ನು ನಾವು ಹೇಳುತ್ತಿಲ್ಲ. ಬಿಜೆಪಿ ರಾಜ್ಯ ಸಭಾಸದಸ್ಯ ಸುಬ್ರಮಣಿಯನ್ ಸ್ವಾಮಿ, ಆರ್ಬಿಐ ಮಾಜಿ ಗವರ್ನರ್ ರಂಗರಾಜನ್, ಎನ್ಡಿಎ ಸರ್ಕಾರದಲ್ಲೇ ವಿತ್ತ ಸಚಿವರಾಗಿದ್ದ ಯಶ್ವಂತ್ ಸಿನ್ಹಾ ಸೇರಿದಂತೆ ಹಲವು ಮಂದಿ ನುರಿದ ಆರ್ಥಿಕ ತಜ್ಞರೇ ಹೇಳಿದ್ದಾರೆ! ಅವರು ಹೇಳಿದ್ದನ್ನು ನಾವು ತಾತ್ಪೂರ್ತಿಕವಾಗಿ ನೆನಪಿಸುತ್ತಿದ್ದೇವೆ ಅಷ್ಟೇ!