ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಶುರು ಮಾಡಿದ್ಯಾ..? ಹೀಗೊಂದು ಅನುಮಾನ ದಟ್ಟವಾಗಿ ಕಾಡಲು ಶುರುಮಾಡಲು ಕಾರಣ ನಮ್ಮ ಪಕ್ಕದ ರಾಜ್ಯದ ಕಾಲಿವುಡ್. ನಮ್ಮ ಕರ್ನಾಟಕದ ಸ್ಯಾಂಡಲ್‌ವುಡ್ ರೀತಿಯಲ್ಲಿ ತಮಿಳುನಾಡಿನ ಚಿತ್ರೋದ್ಯಮವನ್ನು ಕಾಲಿವುಡ್ ಎನ್ನುವುದು ರೂಢಿ. ತಮಿಳು ಚಿತ್ರರಂಗದಲ್ಲಿ ಕನ್ನಡಿಗ ರಜಿನಿಕಾಂತ್ ಹಾಗು ವಿಜಯ್ ಇಬ್ಬರು ದೊಡ್ಡ ಸ್ಟಾರ್‌ಕಾಸ್ಟ್ ಹೊಂದಿರುವ ನಟರು. ಈ ಇಬ್ಬರು ನಟರ ನಡುವೆ ಅಭಿಪ್ರಾಯ ಬೇಧವಿದೆ. ಈ ಅಭಿಪ್ರಾಯ ಬೇಧ ಅವರ ಜೀವನದ ಮೇಲೆ ಪರಿಣಾಮ ಬೀರಿದೆ. ಆದರೆ ಆ ಅಭಿಪ್ರಾಯ ಬೇದ ರಾಜಕಾರಣಕ್ಕೆ ಸಂಬಂಧಿಸಿದಂತೆ ಪರಿಣಾಮ ಬೀರಿರುವುದು ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ನರೇಂದ್ರ ಮೋದಿ ಸರ್ಕಾರ ಇಬ್ಬರು ನಟರ ವಿಚಾರದಲ್ಲಿ ತಾರತಮ್ಯ ಮಾಡಿದೆಯಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.
ರಜಿನಿಕಾಂತ್ ಕರ್ನಾಟಕದಿಂದ ತಮಿಳುನಾಡಿಗೆ ವಲಸೆ ಹೋಗಿದ್ದರೂ ತಲೈವಾ, ಸೂಪರ್ ಸ್ಟಾರ್ ಎನ್ನುವ ಬಿರುದು ಕೊಟ್ಟು ಜನ ಆರಾಧಿಸುತ್ತಿದ್ದಾರೆ. ಈ ರೀತಿ ಜನರ ಮನಸ್ಸು ಗೆದ್ದಿರುವ ಕನ್ನಡಿಗ ರಜಿನಿಕಾಂತ್ ಮೇಲೂ ಸದ್ಯಕ್ಕೆ ಅನುಮಾನ ಮೂಡುತ್ತಿದೆ. ಕೇಂದ್ರ ಸರ್ಕಾರ ತನ್ನ ಮೇಲಿನ ಆದಾಯ ವಂಚನೆಯ 3 ಕೇಸ್‌ಗಳನ್ನು ಪಾಪಸ್ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದಕ್ಕೆ ಪೌರತ್ವ ಕಾಯ್ದೆಯನ್ನು ಬೆಂಬಲಿಸುವ ಮೂಲಕ ಪ್ರತ್ಯುಪಕಾರ ಮಾಡಿದ್ರಾ ಎನ್ನುವ ಆಲೋಚನೆ ಮೂಡುವಂತೆ ಮಾಡಿದೆ.
ಜನವರಿ 28ರಂದು ಆದಾಯ ತೆರಿಗೆ ಇಲಾಖೆ ಒಂದು ನಿರ್ಧಾರ ಮಾಡಿದ್ದು, 2002-2003, 2003-2004, 2004-2005ರ ನಡುವೆ ರಜನಿಕಾಂತ್ ತೆರಿಗೆ ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಪ್ರಕರಣ ದಾಖಲಿಸಿತ್ತು. ಆ ಬಳಿಕ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಆದಾಯ ತೆರಿಗೆ ಇಲಾಖೆ ಪ್ರಕರಣ ವಾಪಸ್ ಪಡೆದುಕೊಳ್ಳುವ ನಿರ್ಧಾರ ತೀಲಿಸಿದೆ. ಇದಾದ ಬಳಿಕ ಇಷ್ಟು ದಿನಗಳ ಕಾಲ ಮೌನ ವಹಿಸಿದ್ದ ನಟ ರಜಿನಿಕಾಂತ್, ಇದೀಗ ಮೌನ ಮುರಿದಿದ್ದಾರೆ.
ಪೌರತ್ವ ಕಾಯ್ದೆ ಜಾರಿಯಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಪೌರತ್ವ ಕಾಯ್ದೆಯಿಂದ ತೊಂದರೆ ಆದರೆ ನಾನೇ ಮೊದಲಿಗನಾಗಿ ದನಿ ಎತ್ತುತ್ತೇನೆ ಎಂದಿದ್ದಾರೆ. ರಜಿನಿಕಾಂತ್ ಹೇಳಿಕೆಯನ್ನು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಖಂಡಿಸಿದ್ದು, ಶೀಘ್ರದಲ್ಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. 66.22 ಲಕ್ಷ ರೂಪಾಯಿ ದಂಡ ಹಾಕಿದ್ದ ಕೇಸ್ ವಾಪಸ್ ಪಡೆದಿದ್ದಕ್ಕೆ ನರೇಂದ್ರ ಮೋದಿ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ರಾ ಅನ್ನೋ ಮಾತುಗಳು ಕೇಳಿ ಬಂದಿದೆ. ಈ ಮಾತಿಗೆ ಪೂರಕ ಎನ್ನುವಂತೆ ನರೇಂದ್ರ ಮೋದಿಯ ಆಡಳಿತ ವೈಖರಿ ಟೀಕಿಸಿದ್ದ ಮತ್ತೋರ್ವ ನಾಯಕನಿಗೆ ಸಂಕಷ್ಟ ಎದುರಾಗಿರುವುದು.
ನಟ ವಿಜಯ್ ನಿವಾಸ ಸೇರಿದಂತೆ 38 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಇಲ್ಲದ ಬರೋಬ್ಬರಿ 77 ಕೋಟಿ ರೂಪಾಯಿ ಸೀಜ್ ಮಾಡಲಾಗಿದೆ ಎನ್ನುವ ವರದಿಗಳು ಬಂದಿವೆ. ಜೊತೆಗೆ 300 ಕೋಟಿಗೂ ಹೆಚ್ಚು ಆಸ್ತಿ ಪತ್ತೆಯಾಗಿದೆ ಎಂದು ಐಟಿ ಅಧಿಕಾರಿಗಳ ಮೂಲಗಳು ಮಾಹಿತಿ ಕೊಟ್ಟಿವೆ. ಇನ್ನೊಂದು ಮೂಲಗಳ ಪ್ರಕಾರ ನಟ ವಿಜಯ್, ಸಿನಿಮಾದಲ್ಲಿ ಜಿಎಸ್‌ಟಿ ಬಗ್ಗೆ ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ ಕಾರಣಕ್ಕೆ ಮೋದಿ ಸರ್ಕಾರ ಟಾರ್ಗೆಟ್ ಮಾಡಿದೆ ಎನ್ನಲಾಗುತ್ತಿದೆ.
2017ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಮೆರ್ಸೆಲ್ ಚಿತ್ರವನ್ನು ತಡೆಯಲು ಎಐಎಡಿಎಂಕೆ ಸಾಕಷ್ಟು ಪ್ರಯತ್ನ ಮಾಡಿತ್ತು. ಆ ಬಳಿಕ ಕೇಂದ್ರ ಸರ್ಕಾರದ ನಿಲುವುಗಳನ್ನು ವಿಜಯ್ ಖಂಡಿಸಿದ್ದರಿಂದ ಆದಾಯ ತೆರಿಗೆ ಪ್ರಕರಣದಲ್ಲಿ ಸಿಲುಕಿಸಲಾಗ್ತಿದೆ ಎನ್ನುವ ಆರೋಪಗಳು ಎದುರಾಗಿವೆ. ಅಭಿಮಾನಿಗಳು ಇದೊಂದು ಅಭಿಯಾನ ಮಾಡುತ್ತಿದ್ದು, ವಿ ಸ್ಟ್ಯಾಂಡ್ ವಿತ್ ವಿಜಯ್ ಅನ್ನೋ ಅಭಿಯಾನ ಟ್ರೆಂಡ್ ಆಗಿದೆ. ಒಟ್ಟಾರೆ ಮೋದಿ ಸರ್ಕಾರ ನಟ ವಿಜಯ್ ಅವರನ್ನು ಟಾರ್ಗೆಟ್ ಮಾಡಿದೆ ಎನ್ನುವುದು ಅಭಿಮಾನಿಗಳ ಆರೋಪ. ಇದಕ್ಕೆ ಕಾರಣ ಬಿಜೆಪಿ ಪರವಾಗಿ ಇರುವ ನಟ ರಜಿನಿಕಾಂತ್ ಅವರ ಪ್ರಕರಣ ಕೈಬಿಟ್ಟಿರೋದು. ತಪ್ಪು ಯಾರು ಮಾಡಿದರೂ ತಪ್ಪು. ಆದರೆ ಬೆಂಬಲಿಗರಿಗೆ ಒಂದು ನ್ಯಾಯ, ವಿರೋಧಿಗಳಿಗೆ ಒಂದು ನ್ಯಾಯವೇ? ಎನ್ನುವುದು ಜನರ ಪ್ರಶ್ನೆಯಾಗಿದೆ.