ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿದ್ದರೂ ಗ್ರಾಮೀಣ ಭಾಗದಲ್ಲಿ ಇನ್ನೂ ಅಸ್ಪಶ್ಯತೆ ಜೀವಂತವಾಗಿರುವುದಕ್ಕೆ ಮೈಸೂರು ಜಿಲ್ಲೆಯ ಹಳ್ಳಿಯೊಂದು ಉದಾಹರಣೆ ಆಗಿದೆ. ಪರಿಶಿಷ್ಟ ಜಾತಿಯ ವ್ಯಕ್ತಿಗೆ ಕ್ಷೌರ ಮಾಡಿದ ಕ್ಷೌರಿಕನ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಿಂದ ವರದಿ ಆಗಿದೆ.
ಹಲ್ಲರೆ ಗ್ರಾಮದಲ್ಲಿ ಕ್ಷೌರಿಕ ಮಲ್ಲಿಕಾರ್ಜುನ ಶೆಟ್ಟಿ (48) ಕುಟುಂಬವು ಬಹಳ ಹಿಂದಿನಿಂದಲೂ ಕ್ಷೌರಿಕ ವೃತ್ತಿ ಮಾಡಿಕೊಂಡು ಬರುತ್ತಿದೆ. ಈ ಗ್ರಾಮದಲ್ಲಿ ಸವರ್ಣಿಯರೇ ಬಹುಸಂಖ್ಯಾತರಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೂರು ತಿಂಗಳ ಹಿಂದೆ ಮೇಲ್ವರ್ಗದ ನಾಯಕ ಸಮುದಾಯದ ಮುಖಂಡರಾದ ಮಹಾದೇವ ನಾಯಕ್, ಶಂಕರ, ಶಿವರಾಜು ಮತ್ತು ಅವರ ಸಂಗಡಿಗರು ಕ್ಷೌರಿಕ ಮಲ್ಲಿಕಾರ್ಜುನ ಶೆಟ್ಟಿ ಅಂಗಡಿಗೆ ಹೋಗಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಜನರಿಗೆ ಕೂದಲು ಕತ್ತರಿಸುತ್ತೀರಾ ಎಂದು ಪ್ರಶ್ನಿಸಿದರು. ಶೆಟ್ಟಿ ಅವರು ತಾವು ಜಾತಿ ತಾರತಮ್ಯ ಮಾಡದೇ ಎಲ್ಲರಿಗೂ ಕೂದಲನ್ನು ಕತ್ತರಿಸುತ್ತೇನೆ ಎಂದು ಹೇಳಿದ್ದೇ ಮೇಲ್ವರ್ಗದವರ ಆಕ್ರೋಶಕ್ಕೆ ಕಾರಣವಾಯಿತು. ಬಂದಿದ್ದವರು ದಲಿತ ಜನಾಂಗದ ವ್ಯಕ್ತಿಗಳಿಗೆ ಶೇವ್ ಮಾಡಲು 200 ರೂಪಾಯಿ ಮತ್ತು ಕಟ್ಟಿಂಗ್ ಮಾಡಲು 300 ರೂಪಾಯಿ ದರ ವಿಧಿಸಬೇಕೆಂದು ತಾಕೀತು ಮಾಡಿದ್ದರು. ಆದರೆ ಶೆಟ್ಟಿ ಅವರು ತಾವು ಈ ಕೆಲಸಕ್ಕೆ ಎಲ್ಲರಿಂದಲೂ ಪಡೆಯುವಂತೆ 60 ರೂಪಾಯಿ ಮತ್ತು 80 ರೂಪಾಯಿ ದರ ಪಡೆಯುವುದಾಗಿ ತಿಳಿಸಿದ್ದಾರೆ.

ಇದರಿಂದ ಕೆರಳಿದ ಮಹಾದೇವ ನಾಯಕ ಮತ್ತು ಸಂಗಡಿಗರು ಗ್ರಾಮದ ಜನರಿಗೆ ಶೆಟ್ಟಿ ಅವರ ಕ್ಷೌರದ ಅಂಗಡಿಗೆ ಹೋಗದಂತೆ ಪ್ರಚಾರ ಮಾಡಲು ತೊಡಗಿದರು. ಅಲ್ಲದೆ ಎರಡು ತಿಂಗಳ ಹಿಂದೆ ಶೆಟ್ಟಿ ಅವರ 21 ವರ್ಷ ಪ್ರಾಯದ ಮಗನನ್ನು ಕರೆದುಕೊಂಡು ಹೋಗಿ ಒತ್ತಾಯದಿಂದ ಮದ್ಯಪಾನ ಮಾಡಿಸಿದ್ದಾರೆ. ಆತ ಅಮಲಿನಲ್ಲಿದ್ದಾಗ ಅವನನ್ನು ನಗ್ನಗೊಳಿಸಿ ಮೊಬೈಲ್ ಮೂಲಕ ವೀಡಿಯೋ ಮಾಡಿದ್ದಾರೆ ಎಂದೂ ಶೆಟ್ಟಿ ತಿಳಿಸಿದ್ದಾರೆ. ಅಲ್ಲದೆ ಮಗನನ್ನು ನಾಯಕ ಸಮುದಾಯ ಬೈಯುವಂತೆ ಪ್ರಚೋದಿಸಿ ಅದನ್ನೂ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇವರ ದೌರ್ಜನ್ಯದ ವಿರುದ್ದ ಪೋಲೀಸರಿಗೆ ದೂರು ನೀಡಿದರೆ ನಿನ್ನ ಮಗನ ಬೆತ್ತಲೆ ವೀಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಾಕಿ ಮರ್ಯಾದೆ ಕಳೆಯುವುದಾಗಿ ಅವರು ಬೆದರಿಸಿದ್ದಾರೆ. ಅಲ್ಲದೆ ತಮ್ಮ ಮಾತನ್ನು ಮೀರಿದ್ದಕ್ಕೆ ಗ್ರಾಮದಲ್ಲಿ 5000 ರೂಪಾಯಿಗಳ ದಂಡವನ್ನು ಹಾಕಿದ್ದಾರೆ. ಅದನ್ನೂ ನಾನು ಪಾವತಿಸಿದ್ದೇನೆ ಎಂದು ಶೆಟ್ಟಿ ತಿಳಿಸಿದರು.

ನಾನು ಅವರ ಮಾತನ್ನು ಕೇಳಲು ನಿರಾಕರಿಸಿದ್ದಕ್ಕೆ ಪುನಃ ನನಗೆ ಈಗ ಅವರು 50,000 ರೂ.ಗಳ ದಂಡವನ್ನು ಕಟ್ಟಬೇಕೆಂದು ತಾಕೀತು ಮಾಡಿದ್ದಾರೆ. ನನ್ನ ಬಳಿ ಇಷ್ಟೊಂದು ಹಣವಿಲ್ಲ. ನಾನು ನನಗೆ ವಿಧಿಸಿರುವ ಈ ಸಾಮಾಜಿಕ ಬಹಿಷ್ಕಾರದ ವಿರುದ್ದ ನಂಜನಗೂಡು ತಹಶೀಲ್ದಾರ್ ಅವರ ಬಳಿ ದೂರು ದಾಖಲಿಸಿದ್ದೇನೆ. ಆದರೆ ಏನೂ ಪ್ರಯೋಜನವಾಗದ ಕಾರಣ ಮಾಧ್ಯಮಗಳ ಮುಂದೆ ಬಂದಿದ್ದೇನೆ ಎಂದು ಶೆಟ್ಟಿ ತಿಳಿಸಿದರು. ಕಳೆದ ಮೂರು ತಿಂಗಳಿನಿಂದ ಮೇಲ್ವರ್ಗದ ಜನರು ನೀಡುತ್ತಿರುವ ಕಿರುಕುಳದ ವಿರುದ್ದ ನಂಜನಗೂಡು ತಹಶೀಳ್ದಾರ್ ಮಹೇಶ ಕುಮಾರ್ ಅವರಿಗೆ ಲಿಖಿತ ದೂರು ಮತ್ತು ನಂಜನಗೂಡು ಗ್ರಾಮಾಂತರ ಠಾಣೆಯ ಪೋಲೀಸರಿಗೂ ದೂರು ನೀಡಿದ್ದರೂ ಯಾರೂ ಏನೂ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಶೆಟ್ಟಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ನಂಜನಗೂಡು ಗ್ರಾಮೀಣ ಪೊಲೀಸರು, ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ್ ಶೆಟ್ಟಿ ಅವರ ಮೌಖಿಕ ದೂರನ್ನು ಸ್ವೀಕರಿಸಿ ದ ನಂತರ ಅವರು ಮಹಾದೇವ ನಾಯಕ್ ರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಮಲ್ಲಿಕಾರ್ಜುನ ಅವರು ಪ್ರಕರಣ ದಾಖಲಿಸಲು ತಿಳಿಸಿಲ್ಲ ಬದಲಿಗೆ ಈಗಿನ ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಕೋರಿದ್ದಾರೆ ಎಂದು ತಿಳಿಸಿದರು. ನಂತರ ಮಹಾದೇವ ನಾಯಕ್ ಅವರು ಮಲ್ಲಿಕಾರ್ಜುನ್ ಅವರ ಮಗನ ವೀಡಿಯೊವನ್ನು ನಮಗೆ ತೋರಿಸಿದರು. ಮಲ್ಲಿಕಾರ್ಜುನ್ ಅವರು ದೂರು ದಾಖಲಿಸದ ಕಾರಣ ನಾವು ಇಬ್ಬರನ್ನೂ ಕರೆಸಿ ಸಂಧಾನ ಮಾಡಿಸಿ ವಾಪಸ್ ಕಳುಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾದೇವ ನಾಯಕ್ ತಮ್ಮ ಮಗನ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ತಾವು ದೂರು ದಾಖಲಿಸಲು ಹೆದರಿದ್ದಾಗಿ ಮಲ್ಲಿಕಾರ್ಜುನ ಹೇಳಿದ್ದಾರೆ. ಈ ಕುರಿತು ಮಾತನಾಡಿದ ತಹಸೀಲ್ದಾರ್ ಮಹೇಶ್ ಕುಮಾರ್ ಅವರು ತಾವು ಶೀಘ್ರದಲ್ಲೆ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ನಡೆಸಲಿದ್ದೇನೆ ಎಂದು ಹೇಳಿದರಲ್ಲದೆ ಯಾವುದೇ ರೀತಿಯ ದೌರ್ಜನ್ಯ ನಡೆಸಿರುವುದು ಖಚಿತವಾದರೆ ಕೂಡಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಎಫ್ಐಆರ್ ಮಾಡಲು ಪೊಲೀಸರಿಗೆ ಆದೇಶಿಸುತ್ತೇನೆ ಎಂದು ಹೇಳಿದರು.
ಕಳೆದ ಮೂರು ತಿಂಗಳಿನಿಂದ ಮೇಲ್ವರ್ಗದ ಕೆಲವರಿಂದ ಕಿರುಕುಳ ಅನುಭವಿಸುತ್ತಿರುವ ಮಲ್ಲಿಕಾರ್ಜುನ ಶೆಟ್ಟಿ ಅವರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕಿದೆ.
