ಲಾಕ್‌ಡೌನ್ನಿಂದಾಗಿ ಕಳೆದ 55 ದಿನಗಳಿಂದ ಸ್ಥಗಿತಗೊಂಡಿದ್ದ ನಾಗರಿಕ ವಿಮಾನಯಾನ ಸೇವೆ ಮೇ25ರಿಂದ (ಸೋಮವಾರ) ಮತ್ತೆ ಆರಂಭವಾಗಲಿದೆ. ದೇಶೀಯ ವಿಮಾನಯಾನ ಸೇವೆಗಳನ್ನು ಪುನಾರಂಭಿಸುತ್ತಿರುವುದಾಗಿ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ತಮ್ಮ ಟ್ವಿಟರ್‌ನಲ್ಲಿ ಪ್ರಕಟಣೆ ನೀಡಿದ್ದಾರೆ.
ಸೋಮವಾರದಿಂದ ನಾಗರಿಕ ವಿಮಾನ ಯಾನ ಸೇವೆಗಳನ್ನು ಹಂತಹಂತವಾಗಿ ಆರಂಭಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ರವಾನಿಸಲಾಗಿದೆ ಎಂದು ಪುರಿ ಹೇಳಿದ್ದಾರೆ. ಇದೇ ವೇಳೆ ವಿಮಾನ ನಿಲ್ದಾಣಗಳಲ್ಲಿ, ವಿಮಾನಗಳಲ್ಲಿ ಅನುಸರಿಸಬೇಕಾದು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾರ್ಗಸೂಚಿಯನ್ನು ಸಹ ಕಳುಹಿಸಿಕೊಡಲಾಗಿದೆ.
ಅಲ್ಲದೇ ವಿಮಾನಗಳಲ್ಲಿ ಪ್ರಯಾಣ ಮಾಡ ಬಯಸುವವರು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಸ್ಪಷ್ಟ ಮಾರ್ಗಸೂಚಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದೂ ಹೇಳಿದ್ದಾರೆ. ಪ್ರಸ್ತುತ ಲಾಕ್‌ಡೌನ್ ಮೇ 31ರವರೆಗೆ ವಿಸ್ತರಣೆಯಾಗಿದ್ದು, ಸಾಕಷ್ಟು ಸೇವೆಗಳಿಗೆ ವಿನಾಯಿತಿ ನಿಡಲಾಗಿದೆ. ಬಸ್ಸು, ರೈಲು ಪ್ರಯಾಣಕ್ಕೆ ಅನುಮತಿ ನೀಡಿದ್ದರೂ ವಿಮಾನ ಯಾನ ಸೇವೆಗಳಿಗೆ ಅನುಮತಿ ಇರಲಿಲ್ಲ. ಕೊರೋನಾ ಕಾರಣ ಮಾರ್ಚ್ 22ಕ್ಕೆ ನಾಗರಿಕ ವಿಮಾನಯಾನ ಸೇವಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿತ್ತು. ಹೊರದೇಶಗಳಲ್ಲಿರುವ ಭಾರತೀಯರನ್ನು ಕರೆತರಲು ಮತ್ತು ಸರಕು ಸರಂಜಾಮು ಒಯ್ಯಲಷ್ಟೇ ವಿಮಾನಗಳು ಹಾರಾಡಿದ್ದವು.