ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೂತನ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ʼಪರ್ಯಾಯ ಜನತಾ ಅಧಿವೇಶನʼ ಎರಡು ದಿನಗಳನ್ನು ಪೂರೈಸಿ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಭೂ ಸುಧಾರಣಾ ಮತ್ತು ಭೂ ಸ್ವಾಧೀನ ಕಾಯ್ದೆಗಳಿಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯಚ್ಛತ್ತಿ ಖಾಸಗೀಕರಣ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಸರ್ಕಾರಿ- ಸಹಕಾರಿ-ಸಾರ್ವಜನಿಕ ಉದ್ದಿಮೆಗಳು- ಬ್ಯಾಂಕ್ಗಳ ಮಾರಾಟ, ಜಿಎಸ್ಟಿ, ಸಿಎಎ, ಎನ್ಆರ್ಸಿ, ರಾಷ್ರೀಯ ಶಿಕ್ಷಣ ನೀತಿ 2020 ಮೊದಲಾದ ನೂತನ ಕಾಯ್ದೆಗಳ ವಿರೋಧಿಸಿ ಜನತಾ ಅಧಿವೇಶನವನ್ನು ಆಯೋಜಿಸಲಾಗಿದೆಯೆಂದು ʼಐಕ್ಯ ಹೋರಾಟ ಸಂಘʼ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೆಪ್ಟೆಂಬರ್ 21 ರಿಂದ ಬೃಹತ್ ಮೆರವಣಿಗೆ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ʼಪರ್ಯಾಯ ಜನತಾ ಅಧಿವೇಶನʼವನ್ನು ಆಯೋಜಿಸಲಾಗಿತ್ತು. ವಿಧಾನಸಭಾ ಅಧಿವೇಶನ ನಡೆಯುತ್ತಿರುವವರೆಗೆ ಈ ಪರ್ಯಾಯ ಜನತಾ ಅಧಿವೇಶನ ಚಾಲ್ತಿಯಲ್ಲಿರಲಿದೆ ಎಂದು ಆಯೋಜಕರು ಹೇಳಿದ್ದರು.
ಅದರಂತೆ, ಸತತ ಮೂರು ದಿನಗಳಿಂದ ಪ್ರತಿಭಟನಾ ಸ್ಥಳದಲ್ಲೇ ಬೀಡು ಬಿಟ್ಟಿರುವ ಹೋರಾಟಗಾರರು, ತಮ್ಮ ಜನತಾ ಅಧಿವೇಶನ ಮೂರನೇ ದಿನಕ್ಕೆ ಕಾಲಿಡುತ್ತಿರುವ ಹಿನ್ನಲೆಯಲ್ಲಿ ಅಧಿವೇಶನದ ನಿರ್ಣಯವನ್ನು ಪ್ರಕಟಿಸಿದ್ದಾರೆ.
ಪ್ರಕಟಣೆಯಲ್ಲಿ, ರೈತ ಮತ್ತು ಕಾರ್ಮಿಕ ವಿರೋಧಿ ಮಸೂದೆಗಳು ಮತ್ತು ಸುಗ್ರೀವಾಜ್ಞೆಗಳನ್ನು ತಿರಸ್ಕರಿಸಲು ಜನತಾ ಅಧಿವೇಶನದ ನಿರ್ಣಯವೆಂದು ತಿಳಿಸಿದ್ದಾರೆ.
ಮುಂದುವರೆಸಿ, “ದೇಶದಲ್ಲಿ ರೈತ ವಿರೋಧಿ ನೀತಿಗಳನ್ನು ಅಸೆಂಬ್ಲಿಯಲ್ಲಿ ಯಾವುದೇ ಚರ್ಚೆ, ಮತಯಾಚನೆಯೂ ಮಾಡದೆ ಸರ್ವಾಧಿಕಾರಿ ರೀತಿಯಲ್ಲಿ ಜಾರಿ ಮಾಡಲಾಗಿದೆ. ಇನ್ನು ಕರ್ನಾಟಕ ಸರ್ಕಾರವೂ ಕೂಡ ‘ಉಳುವವನೇ ಭೂಮಿಯ ಒಡೆಯರು’ ಭೂ ಸುಧಾರಣೆಗೆ ತಿದ್ದುಪಡಿ ಮಾಡಿ ಕಾರ್ಪೊರೇಟ್ ಕುಳಗಳಿಗೆ, ಹಣವಂತರಿಗೇ ಭೂಮಿ ಎಂಬಂತ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ಮುಂದಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ರೈತ, ಕಾರ್ಮಿಕ, ದಲಿತ ಹಾಗೂ ಕನ್ನಡಪರ, ಪ್ರಗತಿಪರ ದೇಶಪ್ರೇಮಿ ಎಲ್ಲಾ ಸಂಘಟನೆಗಳು ಒಟ್ಟುಗೂಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆಯ ವಿರುದ್ದ, ಕರ್ನಾಟಕದ ವಿಧಾನಸಭಾ ಅಧಿವೇಶನ ಆರಂಭವಾದ ದಿನದಿಂದ ಅಹೋರಾತ್ರಿ ಹೋರಾಟ ಮತ್ತು ಪರ್ಯಾಯ ಜನತಾ ಅಧಿವೇಶನವನ್ನು ನಡೆಸುತ್ತಿವೆ.
Also Read: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ವಿರೋಧಿಸಿ ‘ಪರ್ಯಾಯ ಜನತಾ ಅಧಿವೇಶನ’
ಪರ್ಯಾಯ ಅಧಿವೇಶನದ ಮೂರನೇ ದಿನವಾದ ಇಂದು (ಸೆ.23), ರೈತ, ಕಾರ್ಮಿಕ, ಜನವಿರೋಧಿ ಸುಗ್ರೀವಾಜ್ಞೆಗಳು ಮತ್ತು ಮಸೂದೆಗಳ ಕುರಿತು ಅರಿವು ಮೂಡಿಸುವ ವಿಚಾರಗೋಷ್ಟಿ ನಡೆಯಿತು. ವಿ. ಗಾಯತ್ರಿಯವರು ಭೂಸುಧಾರಣೆ ಕಾಯ್ದೆಗೆ ಆಗಿರುವ ತಿದ್ದುಪಡಿಗಳ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಮುಖ್ಯವಾಗಿ, ಜಲಾಶಯಗಳಿಗೆ, ಸರ್ಕಾರಿ ಯೋಜನೆಗಳಿಗೆ, ಆರೋಗ್ಯ ಮುಂತಾದ ಕಾರಣಗಳಿಗೆ ಭೂಮಿ ಕಳೆದುಕೊಂಡಿರುವ ರೈತರ ಪಾಡು ಶೋಚನೀಯವಾಗಿದ್ದು ಅವರು ಮತ್ತೆಂದೂ ಭೂಮಿಯನ್ನು ಹೊಂದಲಾರರೆಂದು ತಿಳಿಸಿದರು. ದಲಿತರ ಜಮೀನನ್ನು ಮಾರಬಾರದು. ಒಂದು ವೇಳೆ ಮಾರಿದರೂ ಅವುಗಳನ್ನು ಅವರಿಗೇ ಮರಳಿಸಬೇಕೆಂಬ ಕಾನೂನು ಇದೆ. ಆದರೆ, ಅದನ್ನು ಮಾಡದೆ ಅವರನ್ನು ಪುಸಲಾಯಿಸಿ ಅವರು ಜಮೀನು ಮಾರಿಕೊಳ್ಳುವಂತೆ ಮಾಡಲಾಗುತ್ತಿದೆ. ಅಲ್ಲದೆ, ಖರೀದಿಸಿದ ಭೂಮಿಯನ್ನು ಬಂಡವಾಳ ಹೂಡುವವರು ಹಲವಾರು ವರ್ಷಗಳು ಖಾಲಿ ಬಿಟ್ಟು ಕಪ್ಪು ಹಣವನ್ನು ಬಿಳಿಮಾಡಿಕೊಳ್ಳುವ ಹುನ್ನಾರವೂ ನಡೆಯುತ್ತಿದೆ ಎಂದು ವಿವರಿಸಿದರು. ಎಪಿಎಂಸಿ ಕಾಯ್ದೆಯಲ್ಲಿರುವ ಲೋಪಗಳನ್ನು ಸರಿಪಡಿಸಲು ರೈತಪರವಾದ ತಿದ್ದುಪಡಿಗಳ ಅವಶ್ಯಕತೆಯಿದೆ. ಆದರೆ, ಈಗಿನ ತಿದ್ದುಪಡಿಗಳು ರೈತವಿರೋಧಿಯಾಗಿವೆ ಎಂದು ನುಡಿದರು.
ರೈತ ಸಂಘದ ರಮೇಶ್ ಹೂಗಾರ್ ರವರು ವಿದ್ಯುಚ್ಛಕ್ತಿಯ ಖಾಸಗೀಕರಣದಿಂದ ರೈತರ ಪಂಪ್ ಸೆಟ್ಟುಗಳಿಗೆ ಉಚಿತ ವಿದ್ಯುಚ್ಛಕ್ತಿಯನ್ನು ನಿಲ್ಲಿಸಿ ಅವರು ಖಾಸಗಿ ಕಂಪನಿಗಳಿಗೆ ದುಬಾರಿ ಬೆಲೆ ತೆತ್ತು ಕಂಪನಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆಂದು ಹೇಳಿದರು.
Also Read: ವಿವಾದಿತ ಮೂರು ಕೃಷಿ ಮಸೂದೆ: ರಾಜ್ಯಸಭೆಯ ಬಲಾಬಲದ ಲೆಕ್ಕಾಚಾರವೇನು?
ಕರ್ನಾಟಕ ಪ್ರಾಂತ್ಯ ರೈತ ಸಂಘದ ಟಿ. ಯಶವಂತ್ ರವರು ಎಪಿಎಂಸಿ ಕಾಯ್ದೆಯನ್ನು ದುರ್ಬಲಗೊಳಿಸಿ, ಕೊನೆಗೆ ಎಪಿಎಂಸಿಗಳನ್ನು ಮುಚ್ಚುವ ಹುನ್ನಾರದ ಬಗ್ಗೆ ಚರ್ಚಿಸಿದರು. ಎಪಿಎಂಸಿಯ ಚುನಾಯಿತ ಪ್ರತಿನಿಧಿಗಳ ಅಧಕಾರ ಎಪಿಎಂಸಿಯ ಆಚೆ ಇಲ್ಲದಿರುವುದರಿಂದ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸಲಾರರು. ಅಲ್ಲದೆ, ರೈತರು ನ್ಯಾಯಾಲಯಕ್ಕೆ ಮೊರೆಹೋಗಲಾರರು; ಅವರು ನ್ಯಾಯಾಲಯಗಳಿಗೆ ಹೋದರೂ ನ್ಯಾಯಾಲಯಗಳು ಆ ವ್ಯಾಜ್ಯಗಳನ್ನು ಸ್ವೀಕರಿಸುವಂತಿಲ್ಲ ಎಂಬ ಅಪಾಯಕಾರಿ ಅಂಶ ಕಾನೂನಿನಲ್ಲಿ ತರಲಾಗಿರುವುದರ ಬಗ್ಗೆ ಎಚ್ಚರಿಸಿದರು. ಹಾಗೂ, ವರ್ತಕರು ನೀಡಬೇಕಾದ ಸೆಸ್ ಅನ್ನು ಕಡಿಮೆ ಮಾಡಿ ಎಪಿಎಂಸಿಗಳು ಆದಾಯವಿಲ್ಲದೆ ಮುಚ್ಚುವಂತೆ ಮಾಡಿ, ಕೊನೆಗೆ ಖಾಸಗಿ ಕಂಪನಿಗಳ ಪಾರಮ್ಯಕ್ಕೆ ದಾರಿಕೊಡಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಮಿಕರ ನಾಯಕರಾದ ಕಾಳಪ್ಪನವರು ಈ ಕಾನೂನುಗಳನ್ನು ಕಾರ್ಮಿಕ ವಿರೋಧಿ ಧೋರಣೆಯ ಭಾಗವಾಗಿ ನೋಡಬೇಕೆಂದು ತಿಳಿಸಿದರು. ಅನೇಕ ಕಾರ್ಮಿಕಪರ ಕಾನೂನುಗಳನ್ನು ದುರ್ಬಲಗೊಳಿಸಿ ಕಾರ್ಮಿಕರ ಶೋಷಣೆಗೆ ದಾರಿಮಾಡಿಕೊಡಲಾಗಿದೆಯೆಂದು ಹೇಳಿದರು.
ಮಾಜಿ ಶಾಸಕರಾದ ಬಿ.ಆರ್. ಪಾಟಿಲ್ ರವರು ರಾಜಕಾರಣದ ಅವನತಿಯಿಂದಾಗಿ ಈ ರೀತಿಯ ಜನವಿರೋಧಿ ಕಾಯ್ದೆಗಳು ಬರುತ್ತಿವೆ ಎಂದರು. ದುಷ್ಟ ರಾಜಕಾರಣಿ, ವರ್ತಕ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ನೈಸರ್ಗಿಕ ಸಂಪನ್ಮೂಲಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೆಲವರ ಪಾಲಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
Also Read: ರಾಜ್ಯಸಭೆಯಲ್ಲಿ ನೂತನ ಕೃಷಿ ಮಸೂದೆ ಅಂಗೀಕಾರ, ವಿಪಕ್ಷಗಳ ವಿರೋಧ!
ಇಂದಿನ ಪರ್ಯಾಯ ಜನತಾ ಅಧಿವೇಶನದ ಸಭಾಪತಿಗಳಾದ ವೀರ ಸಂಗಯ್ಯನವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ನಾಲ್ಕು ಮಸೂದೆಗಳನ್ನು ಮತಕ್ಕೆ ಹಾಕಿದಾಗ ಸರ್ವಾನುಮತದಿಂದ ಅವು ತಿರಸ್ಕತವಾದವು. ಸಭೆಯ ಪರವಾಗಿ ಬಿ.ಆರ್. ಪಾಟಿಲ್ ರವರು ಮಸೂದೆಗಳ ಪ್ರತಿಗಳನ್ನು ಹರಿಯುವುದರ ಮೂಲಕ ಸಾಂಕೇತಿಕ ಪ್ರತಿಭಟನೆಯನ್ನು ಸೂಚಿಸಿದರು.