ಬಹುಶಃ ಗಂಡಸರಿಗೆ, ಅದರಲ್ಲೂ ಭಾರತದ ಗಂಡಸರಿಗೆ ಮುಟ್ಟು ಹೆದರಿಸುವಷ್ಟು ಇನ್ಯಾವುದೂ ಹೆದರಿಸುವುದಿಲ್ಲ. ಸ್ಮೃತಿಕಾರರಿಂದ ಹಿಡಿದು ಆಧುನಿಕ ಬರಹಗಾರ ಭೈರಪ್ಪನವರೆಗೆ ಎಲ್ಲರೂ ಮುಟ್ಟನ್ನು ಮೈಲಿಗೆ ಅಂದವರೇ. ಮುಟ್ಟಾದ ಹೆಣ್ಣು ಸ್ನಾನವನ್ನೂ ಮಾಡದೆ ಮನೆಯ ಮೂಲೆಯಲ್ಲೋ ಹಿತ್ತಿಲಲ್ಲೋ ಕೂರಬೇಕು, ಯಾರನ್ನೂ, ಯಾವುದನ್ನೂ ಮುಟ್ಟಕೂಡದು, ದೇವದಿಂಡರ ಬಳಿಯಂತೂ ಸುಳಿಯಲೂಕೂಡದು ಎಂದೆಲ್ಲ ಸ್ಮೃತಿಕಾರರು ಕಾನೂನು ಮಾಡಿ ಸಾವಿರಾರು ವರ್ಷಗಳೇ ಕಳೆದಿವೆ. ಇನ್ನೂ ನಾಗರಿಕತೆಗೆ update ಆಗದ so called ಸಂತರು, ಸಾಹಿತಿಗಳು ಈ ಕಾನೂನಿಗೆ ಜೋತುಬಿದ್ದು ಅದನ್ನೇ ಪುನಃಪುನಃ ಹೇಳುತ್ತಾ ಕಾಲವನ್ನು ಶಿಲಾಯುಗಕ್ಕೆ ಕೊಂಡೊಯ್ಯುವ ಯತ್ನ ಮಾಡುತ್ತಿದ್ದಾರೆ.
ಕಳೆದ ವಾರ ಗುಜರಾತಿನ ಭುಜ್ ಜಿಲ್ಲೆಯ ಶ್ರೀ ಶಹಜಾನಂದ ಗರ್ಲ್ಸ್ ಇನ್ಸ್ಟಿಟ್ಯೂಟಿನಲ್ಲಿ ನಡೆದ ಘಟನೆ ಗೊತ್ತೇ ಇದೆ. ಮುಟ್ಟಾದ ವಿದ್ಯಾರ್ಥಿನಿಯರನ್ನು ಮೈಲಿಗೆ ಎಂದು ಪ್ರತ್ಯೇಕ ಇರಿಸುವ ನಿಯಮ ಹೊಂದಿರುವ ಈ ಸಂಸ್ಥೆ, ಕೆಲವು ಹೆಣ್ಣುಮಕ್ಕಳು ಅದನ್ನು ಅನುಸರಿಸುತ್ತಿಲ್ಲವೆಂದು ಅಸಹ್ಯಕರ ತಪಾಸಣೆ ನಡೆಸಿತ್ತು. 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಶೌಚಾಲಯಕ್ಕೆ ಕರೆದೊಯ್ದು ಒಳಉಡುಪು ತೆಗೆಸಿ ತಮ್ಮ ‘ಮಡಿ’ಯನ್ನು ಸಾಬೀತುಪಡಿಸಲು ಒತ್ತಾಯಿಸಿತ್ತು.
ಈ ಘಟನೆ ನಡೆದ ಬೆನ್ನಲ್ಲೇ ಅದೇ ಭುಜ್ ಜಿಲ್ಲೆಯ ಸ್ವಾಮಿ ನಾರಾಯಣ ದೇವಸ್ಥಾನದ ಕೃಷ್ಣಸ್ವರೂಪ ದಾಸ ಎಂಬ ಕಾವಿ ಧಾರಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಟ್ಟಾದ ಹೆಣ್ಣು ಅಡುಗೆ ಮಾಡಿದರೆ ನಾಯಿಯಾಗಿ ಹುಟ್ಟುತ್ತಾಳೆಂದೂ, ಅದನ್ನು ಉಂಡ ಗಂಡಸು ಎತ್ತಾಗಿ ಹುಟ್ಟುತ್ತಾನೆಂದೂ ಹೇಳಿದ್ದರು. ಕೃಷ್ಣಸ್ವರೂಪ ದಾಸರ ಈ ಹೇಳಿಕೆ ಭಾರತದಲ್ಲಿ ಅಚ್ಚರಿಯ ವಿಷಯವೇನಲ್ಲ.
ನಮ್ಮ ದೇಶದ ಜ್ಞಾನಪರಂಪರೆಗೆ ಮಾರಕವಾಗಿರುವ ಪುರಾಣಪರಂಪರೆ ಆರಂಭದಿಂದಲೂ ಮಾಡುತ್ತ ಬಂದಿರುವುದನ್ನೆ ಆತನೂ ಮಾಡಿದ್ದಾರೆ. ಈ ನಾಯಿಯಾಗಿ ಹುಟ್ಟುವ, ಎತ್ತಾಗಿ ಹುಟ್ಟುವ ಹೇಳಿಕೆ ಯಾವುದೋ ಒಂದು ಪುರಾಣದಲ್ಲೋ, ಸ್ಮೃತಿಯಲ್ಲೋ, ಕೊನೆಗೆ ಅವುಗಳಿಗೆ ಯಾರೋ ಸಂಕುಚಿತ so called ಆಚಾರ್ಯರು ಬರೆದ ವ್ಯಾಖ್ಯಾನದಲ್ಲೋ ಇದ್ದೇ ಇರುತ್ತದೆ. ವಿಶಾಲ ಮನೋಭಾವ, ವ್ಯಾಪಕ ಚಿಂತನೆ, ವೈವಿಧ್ಯ ಓದು – ಎಲ್ಲಕ್ಕಿಂತ ಹೆಚ್ಚಾಗಿ ಆಲೋಚಿಸಬಲ್ಲ ಸಾಮರ್ಥ್ಯ ಇದ್ಯಾವುದೂ ಇಲ್ಲದವರು ಹೀಗೆ ಮಾತಾಡುವುದು ನಮಗೆ ದೈನಂದಿನ ವಿದ್ಯಮಾನವೇ ಆಗಿಹೋಗಿದೆ.
ಶಬರಿಮಲೆಯ ವಿಷಯವನ್ನೇ ತೆಗೆದುಕೊಳ್ಳಿ. ಮೂರ್ನಾಲ್ಕು ವರ್ಷಗಳ ಹಿಂದೆ ದೇವಸ್ವಂ ಮಂಡಳಿಯ ಮುಖ್ಯಸ್ಥರು ‘ಋತುಸ್ರಾವ ಪತ್ತೆ ಮಾಡುವ ಯಂತ್ರ’ವನ್ನು ದೇಗುಲದಲ್ಲಿ ಅಳವಡಿಸುವ ಹೇಳಿಕೆ ನೀಡಿದ್ದರು. ಕೆಲವು ಹೆಂಗಸರು ಸುಳ್ಳು ಹೇಳಿಕೊಂಡು ದೇವಸ್ಥಾನಕ್ಕೆ ಬರಬಹುದು. ಆದ್ದರಿಂದ ಯಂತ್ರವನ್ನು ಸ್ಥಾಪಿಸಿ ಪ್ರತಿ ಹೆಣ್ಣನ್ನು ತಪಾಸಣೆಗೆ ಒಳಪಡಿಸುವ ವ್ಯವಸ್ಥೆ ತರುತ್ತೇವೆ ಅಂದಿದ್ದರು. ಇಡಿಯ ಶಬರಿಮಲೆ ವಿವಾದವೇ ಮುಟ್ಟಿನ ಕೇಂದ್ರದಿಂದ ಹೊರಟಿದೆ ಅಲ್ಲವೆ? ಸುಪ್ರೀಂ ಕೋರ್ಟ್ ಮುಟ್ಟು ಅಪವಿತ್ರವಲ್ಲ, ಈ ಕಾರಣಕ್ಕಾಗಿಯೇ ಹೆಣ್ಣಿಗೆ ದೇಗುಲ ಪ್ರವೇಶ ನಿಷೇಧ ಸಲ್ಲ ಎಂದು ಹೇಳಿದ ಮೇಲೂ ದೇವಸ್ವಂ, ಅದಕ್ಕಿಂತ ಹೆಚ್ಚಾಗಿ ಕರ್ಮಠ ಭಾರತ ಪ್ರವೇಶ ನಿರಾಕರಿಸುತ್ತಿದೆ.
ದೇವಸ್ಥಾನಗಳನ್ನು, ಪೂಜಾರಿಗಳನ್ನು ಸ್ವಲ್ಪ ಬದಿಗಿಟ್ಟು ಯೋಚಿಸೋಣ. ಅವರೇನೋ ಆಚರಣೆಗಳ ಸಂಕುಚಿತ ಓಣಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಡಾಡುವವರು, ಜ್ಞಾನದ ಖಡ್ಗದಿಂದ ಮೌಢ್ಯ ತೊಡೆದು ಬೆಳಕು ಹರಿಸೋಣ ಎಂದೆಲ್ಲ ನಾವು ಮಾತಾಡಿಕೊಳ್ಳಬಹುದು. ಆದರೆ, ಸರಸ್ವತಿ ಸಮ್ಮಾನ್ ಪುರಸ್ಕಾರ ಪಡೆದ ಬುದ್ಧಿವಂತ – ರಾಷ್ಟ್ರೀಯ ಪ್ರೊಫೆಸರ್ ಗೌರವಕ್ಕೆ ಪಾತ್ರರಾದ ಸಾಹಿತಿ ಎಸ್ ಎಲ್ ಭೈರಪ್ಪನಂಥವರೂ ಮುಟ್ಟನ್ನು ಮೈಲಿಗೆ ಅನ್ನುವಾಗ, ಯಾವುದರ ಮೇಲೆ ಭರವಸೆ ಇಡೋದು? ಒಂದೋ ಅವರು ಬುದ್ಧಿವಂತರಲ್ಲ, ಜ್ಞಾನಿಯಲ್ಲ. ಅಥವಾ ಸಾಮಾನ್ಯ ಜ್ಞಾನ – ನಾಗರಿಕ ಚಿಂತನೆಗೂ ಅವಕ್ಕೂ ಸಂಬಂಧವಿಲ್ಲ ಎಂದೇ!?
ಇಲ್ಲಿ ಭೈರಪ್ಪನವರ ಪ್ರಸ್ತಾಪ ಯಾಕೆಂದರೆ, ಕಳೆದ ದಸರಾ ಸಂದರ್ಭದಲ್ಲಿ ಅವರಾಡಿದ ಮಾತು ಹಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಎಂದು ಗೌರವದಿಂದ ಕರೆದರೆ, ಆತ ವೇದಿಕೆಯಲ್ಲಿ ಮುಟ್ಟು, ಮಡಿ ಎಂದೆಲ್ಲ ಮಾತಾಡಿದ್ದರು. ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ಸಂಗತಿಗಳ ಚರ್ಚೆಗೆ ಚಾಲನೆ ನೀಡಬೇಕಿದ್ದ ವೇದಿಕೆ ಹೆಂಗಸರ ಮುಟ್ಟು ಮತ್ತು ಮಡಿಯ ಅಧಿಕ ಪ್ರಸಂಗಕ್ಕೆ ಇಂಬು ನೀಡಿತ್ತು.
ಹೀಗೆ ಪ್ರತಿ ಬಾರಿ ದೇಶದುದ್ದಗಲ ಯಾರಾದರೂ ಮುಟ್ಟಿನ ವಿಷಯದಲ್ಲಿ ಕೀಳಾಗಿ ಮಾತಾಡಿದಾಗ ಪ್ರತಿರೋಧ ಹೊಮ್ಮುತ್ತದೆ. ಅದರ ಜೊತೆಗೇ ಒಂದಷ್ಟು ವಿಚಾರ ಶೂನ್ಯರು ಅತ್ತ ಸಮರ್ಥಿಸಿಕೊಳ್ಳಲೂ ಬಾಯಿ ಬಾರದೆ, ಖಂಡಿಸಲೂ ಆಗದೆ ಬೈಬಲ್‌ನಲ್ಲಿ ಇಲ್ಲವೆ, ಕುರಾನ್‌ನಲ್ಲಿ ಇಲ್ಲವೆ ಎಂದು ಪ್ರಶ್ನಿಸುತ್ತಾ ದಾರಿತಪ್ಪಿಸುವ ಯತ್ನ ಮಾಡುತ್ತಾರೆ.
ಬೈಬಲ್, ಕುರಾನ್, ಝೆಂಡ್ ಅವೆಸ್ತಾಗಳಲ್ಲಿ ಕೂಡಾ ಮುಟ್ಟು ಮಾಲಿನ್ಯವೆಂದು ಹೇಳಿ, ಆ ಅವಧಿಯಲ್ಲಿ ಹೆಣ್ಣನ್ನು ಪ್ರಾರ್ಥನೆ ಸೇರಿದಂತೆ ಕೆಲವು ಕ್ರಿಯೆಗಳಿಂದ ದೂರವಿಡಲಾಗಿದೆ. ಆದರೆ ಭಾರತದಲ್ಲಿ ಹಿಂದೂಯೇತರ ಧರ್ಮಗುರುಗಳು/ so called ಸಂತರು ಇಂಥ ಹೇಳಿಕೆಗಳನ್ನು ನೀಡಿಲ್ಲ. ಅಥವಾ ಸಾಮಾಜಿಕವಾಗಿ ಮುಟ್ಟನ್ನು ಮೈಲಿಗೆಯೆಂದು ಅತಿಯಾಗಿ ವಿಜೃಂಭಿಸಿಲ್ಲ. ಹಾಗೊಮ್ಮೆ ಸಾರ್ವಜನಿಕೆ ಹೇಳಿಕೆ ನೀಡಿದ್ದರೆ, ಆ ಎಲ್ಲ ಸಂದರ್ಭದಲ್ಲೂ ಪ್ರಶ್ನೆ – ಪ್ರತಿರೋಧ ಹೊಮ್ಮಿರದೆ ಇಲ್ಲ. ಇಷ್ಟಕ್ಕೂ ಮತ್ತೊಬ್ಬರಲ್ಲಿ ಚಾಲ್ತಿ ಇದೆ, ಮತ್ತೊಂದು ದೇಶ – ಧರ್ಮದಲ್ಲೂ ಮುಟ್ಟು ಒಂದು ಮೈಲಿಗೆಯಾಗಿದೆ ಅಂದ ಮಾತ್ರಕ್ಕೆ ಅದು ಸರಿಯಾಗಬೇಕೆಂದೇನೂ ಇಲ್ಲ! ನಾಗರಿಕತೆ ವಿಕಸನಗೊಂಡಿರದ ಕಾಲದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಸಿದ್ಧಪಡಿಸಿದ ಸೂತ್ರಗಳು ನಾಗರಿಕತೆಯ ಈ ಕಾಲದಲ್ಲಿ, ಸಮಾನತೆಗೆ ಮುನ್ನುಡಿ ಬರೆಯುತ್ತಿರುವ ಈ ದಿನಗಳಲ್ಲಿ ಪ್ರಸ್ತುತವೂ ಅಲ್ಲ. ಆದ್ದರಿಂದ ಮುಟ್ಟು ಎಂಬ ಹೆಣ್ಣುದೇಹದ ಸಹಜ ವಿದ್ಯಮಾನದ ಕುರಿತು ಅಸಂಬದ್ಧ ಪ್ರಲಾಪ ಮಾಡುತ್ತಾ ನಗೆಪಾಟಲಿಗೆ ಈಡಾಗುವುದನ್ನು ಈ so called ಸಂತರು ಮತ್ತು ಸಾಹಿತಿಗಳು ಇನ್ನಾದರೂ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ಪೀಳಿಗೆ ಈ ಮಂದಿಯನ್ನು ಜೋಕರ್ ಗಳಂತೆ ಪರಿಗಣಿಸುವುದರಲ್ಲಿ ಸಂದೇಹವಿಲ್ಲ.