ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಬೇಕೆಂಬ ಕೂಗು ಮತ್ತೊಮ್ಮೆ ಕೇಳಿ ಬರುತ್ತಿದೆ. ಇದೇ ಮೀಸಲಾತಿ ವಿಚಾರವಾಗಿ ದೇಶದ ಹಲವು ರಾಜ್ಯಗಳಲ್ಲಿ ದೊಡ್ಡ ದೊಡ್ಡ ಹೋರಾಟಗಳೇ ನಡೆಯುತ್ತಲೇ ಇವೆ. ಎರಡು ವರ್ಷಗಳ ಹಿಂದೆಯಷ್ಟೇ ಗುಜರಾತ್ನಲ್ಲಿ ಪಾಟೇದಾರ್ ಸಮುದಾಯ ಹಾಗೂ ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದವರು ನಡೆಸಿದ ಬೃಹತ್ ಪ್ರತಿಭಟನೆಗಳು. ಹಾಗಾದರೆ ಈ ಮೀಸಲಾತಿ ಎಂದರೇನು, ಮೀಸಲಾತಿ ಏಕೆ ಬೇಕು, ಅದರಿಂದ ಆಗುವ ಪ್ರಯೋಜನ, ಸಾಧಕ-ಬಾಧಕಗಳ ಕುರಿತು ಹಿರಿಯ ವಕೀಲ, ಪ್ರಗತಿಪರ ಚಿಂತಕ ಡಾ. ಸಿ.ಎಸ್ ದ್ವಾರಕನಾಥ್ ಅವರೊಂದಿಗೆ ನಡೆಸಿದ ಸಂದರ್ಶನ.
ನಚಿಕೇತ್: ಮೀಸಲಾತಿ ಎಂದರೇನು?
ಸಿ.ಎಸ್ ದ್ವಾರಕನಾಥ್: ಮೀಸಲಾತಿ ಎಂಬ ಪದ ಪ್ರಯೋಗವೇ ತಪ್ಪು! ಸಂವಿಧಾನದಲ್ಲಿ ಇದಕ್ಕಾಗಿ ಬಳಸಿರುವ ಪದ ಪ್ರಾತಿನಿಧ್ಯ. ವೈಯಕ್ತಿಕ ನೆಲೆಗಟ್ಟಿನಲ್ಲಿ ಇದನ್ಯಾರಿಗು ನೀಡಲಾಗಿಲ್ಲ. ವೈಯಕ್ತಿಕವಾಗಿ ನೀಡಿರುವುದು ಅವರು ಪ್ರತಿನಿಧಿಸುವ ಶೋಷಿತ ಸಮುದಾಯಗಳ ಕಾರಣಕ್ಕೆ ಮಾತ್ರ. ಈ ಅವಕಾಶವನ್ನು ಪಡೆದವರು ತಮ್ಮ ಸಮುದಾಯದ ಇತರೇ ಜನರಿಗೆ ಸಹಾಯಕವಾಗಲೆಂಬ ಕಾರಣದಿಂದ.
ನಚಿಕೇತ್: ಮೀಸಲಾತಿ ಏಕೆ?
ಸಿ.ಎಸ್ ದ್ವಾರಕನಾಥ್: ಸಮುದಾಯಗಳ ನಡುವಿನ ತಾರತಮ್ಯ ಹೋಗಲಾಡಿಸಿ, ಅವಕಾಶ ವಂಚಿತ ಸಮುದಾಯಗಳಿಗೆ ಸಹಾಯ ಮಾಡುವುದು ಮೀಸಲಾತಿಯ ಉದ್ದೇಶ. ಸಮಾಜದ ಹಲವಾರು ಸಮುದಾಯಗಳು ಅಸ್ಪೃಶ್ಯತೆಯ ಕಾರಣದಿಂದಾಗಿ ಶಿಕ್ಷಣದ ಹಕ್ಕು, ಸಂಪತ್ತಿನ ಹಕ್ಕು, ವ್ಯಾಪಾರದ ಹಕ್ಕು ಸೇರಿದಂತೆ ಅನೇಕ ನಾಗರಿಕ ಹಕ್ಕುಗಳಿಂದ ವಂಚಿತವಾಗಿವೆ. ಇತಿಹಾಸದಲ್ಲಿನ ಇಂತಹ ತಾರತಮ್ಯಗಳನ್ನು ನಿವಾರಿಸಿ ಭವಿಷ್ಯದಲ್ಲಿ ಅವರ ಹಕ್ಕುಗಳನ್ನು ಸಂರಕ್ಷಿಸಲು ಈ ಮೀಸಲಾತಿಯನ್ನು ಕಲ್ಪಿಸಲಾಗಿದೆ.
ನಚಿಕೇತ್: ಸಂವಿಧಾನಕರ್ತರು ಮೀಸಲಾತಿಯನ್ನು ಕೇವಲ ಹತ್ತು ವರ್ಷಗಳಿಗೆ ಮಾತ್ರ ಸೀಮಿತಗೊಳಿಸಿರಲಿಲ್ಲವೇ?
ಸಿ.ಎಸ್ ದ್ವಾರಕನಾಥ್: ಕೇವಲ ರಾಜಕೀಯ ಮೀಸಲಾತಿಯನ್ನು ಮಾತ್ರ ಹತ್ತು ವರ್ಷಗಳವರೆಗೆ ನಿಗದಿ ಪಡಿಸಲಾಗಿದ್ದು, ತದನಂತರ ಅದನ್ನು ಪುನರ್ ಪರಿಶೀಲಿಸಲಾಯಿತು. ಹಾಗಾಗಿಯೇ ಎಲ್ಲ ರಾಜಕೀಯ ಮೀಸಲಾತಿಗಳನ್ನು ಪ್ರತಿ ಹತ್ತು ವರ್ಷಕ್ಕೊಮ್ಮೆ ಪುನರ್ ನಿಗದಿ ಪಡಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಗೆ ಹತ್ತು ವರ್ಷಗಳ ಮಿತಿ ಹಾಕಲಾಗಿಲ್ಲ. ಆದ್ದರಿಂದ ರಾಜಕೀಯ ಮೀಸಲಾತಿಯ ರೀತಿಯಲ್ಲಿ ನಾವು ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿಲ್ಲ.
ನಚಿಕೇತ್: ಜಾತಿಯ ಆಧಾರದ ಮೇಲೆ ಮೀಸಲಾತಿ ಏಕೆ?
ಸಿ.ಎಸ್ ದ್ವಾರಕನಾಥ್: ಇದಕ್ಕೆ ಉತ್ತರಿಸುವ ಮುಂಚೆ ನಾವು ಮೀಸಲಾತಿಯ ಅನಿವಾರ್ಯತೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಸಾವಿರಾರು ವರ್ಷಗಳಿಂದ ಜಾತಿಯ ಕಾರಣಕ್ಕೆ ಹಲವು ಹಕ್ಕುಗಳನ್ನು, ಅವಕಾಶಗಳನ್ನು ಧರ್ಮದ ಹೆಸರಿನಲ್ಲಿ ಕೆಳವರ್ಗಗಳಿಗೆ ನಿರಾಕರಿಸುತ್ತ ಬರಲಾಗಿದೆ. ಆದ್ದರಿಂದ ಕೆಳಜಾತಿಗಳ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ಅನ್ಯಾಯ, ಶೋಷಣೆ, ತಾರತಮ್ಯ ವಂಚನೆಗಳಿಗೆ ಮುಖ್ಯ ಕಾರಣ ಜಾತಿಪದ್ದತಿಯೇ ಆಗಿದೆ. ಜಾತಿಯ ಕಾರಣಕ್ಕೆ ಅವಕಾಶಗಳಿಂದ ವಂಚಿತರಾದ ಬಹುಜನ ಸಮಾಜಕ್ಕೆ ಅದೇ ಜಾತಿಯ ಆಧಾರದಲ್ಲೇ ಅವಕಾಶಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ.
ನಚಿಕೇತ್: ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿ ಏಕಿಲ್ಲ?
ಸಿ.ಎಸ್ ದ್ವಾರಕನಾಥ್: ಯಾವತ್ತಿಗೂ ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡುವುದು ಸಾಧ್ಯವಿಲ್ಲ, ಯಾಕೆಂದರೇ:
(ಅ) ಬಹುಜನ ಸಮಾಜದ ಇವತ್ತಿನ ಬಡತನಕ್ಕೆ ಮೂಲಕಾರಣವಾಗಿರುವುದೇ ಅವರ ಜಾತಿಯಾಗಿದೆ. ಬಡತನ ಒಂದು ಪರಿಣಾಮವಾದರೆ, ಜಾತಿ ಒಂದು ಕಾರಣವಾಗಿದೆ. ಆದ್ದರಿಂದ ನಾವು ಪರಿಣಾಮದ ಬಗ್ಗೆ ನೋಡದೆ ಕಾರಣವನ್ನು ಇಲ್ಲವಾಗಿಸಬೇಕಿದೆ.
(ಆ) ವೈಯುಕ್ತಿಕವಾಗಿ ಒಬ್ಬನ ಆದಾಯ ಬದಲಾಗಬಹುದು. ಆದರೆ ಹಣದ ಕೊಳ್ಳುವ ಶಕ್ತಿ ಭಾರತದಲ್ಲಿ ಅವನ ಜಾತಿಯನ್ನು ಆಧರಿಸಿರುತ್ತದೆ. ಉದಾಹರಣೆಗೆ ಬಹಳ ಕಡೆ ದಲಿತನೊಬ್ಬ ದುಡ್ಡಿದ್ದರೂ ಒಂದು ಕಪ್ ಚಹಾವನ್ನು ಕೊಳ್ಳಲಾಗದ ಪರಿಸ್ಥಿತಿಯಿದೆ.
(ಇ) ತನ್ನ ಆರ್ಥಿಕ ಸ್ಥಿತಿಯನ್ನು ಸಾಬೀತುಪಡಿಸುವುದು ನಮ್ಮ ವ್ಯವಸ್ಥೆಯ ಲೋಪದೋಷಗಳಿಂದಾಗಿ ನಿಖರವಾಗಿರಲು ಸಾಧ್ಯವಿಲ್ಲ. ಇದರಿಂದಾಗಿ ಮತ್ತೆ ವಂಚಿತರೇ ವಂಚನೆಗೊಳಗಾಗುತ್ತಾರೆ.
(ಈ) ಜಾತೀಯತೆಯಿಂದ ನರಳುತ್ತಿರುವ ಇಂಡಿಯಾದಲ್ಲಿ ಬದಲಾಗದೆ ಇರುವ ಒಂದು ವಿಷಯವೆಂದರೆ ಅದು ಜಾತಿಯಾಗಿದೆ. ಇಲ್ಲಿನ ಭ್ರಷ್ಟ ವ್ಯವಸ್ಥೆಯಲ್ಲಿ ಹಣ ನೀಡಿ ಜಾತಿಯ ಪ್ರಮಾಣಪತ್ರವನ್ನು ಪಡೆಯಬಹುದಾಗಿದ್ದು, ವರಮಾನದ ಪ್ರಮಾಣ ಪತ್ರವನ್ನು ಪಡೆಯುವುದು ಇನ್ನೂ ಸುಲಭವಾದ ವಿಷಯವಾಗಿದೆ. ಹಾಗಾಗಿ ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿಯನ್ನು ನೀಡುವುದು ವ್ಯಾವಹಾರಿಕವಾಗಿ ಆಗದ ಮಾತು. ಹಣ ಕೊಟ್ಟು ಪಡೆಯಬಲ್ಲಂತಹ ಎರಡು ಪ್ರಮಾಣಪತ್ರಗಳನ್ನಿಟ್ಟುಕೊಂಡು ಮೀಸಲಾತಿಯ ಬಗ್ಗೆ ಚರ್ಚೆ ನಡೆಸುದು ಅನಗತ್ಯವೆನಿಸುತ್ತದೆ. ಅದೂ ಅಲ್ಲದೆ ಈ ನೆಲದಲ್ಲಿ ಹಣ ಕೊಟ್ಟು ಆದಾಯ ಪ್ರಮಾಣಪತ್ರ ಪಡೆಯುವುದು ಬಹಳ ಸುಲಭ, ಆದರೆ ಜಾತಿಯ ಪ್ರಮಾಣಪತ್ರ ಪಡೆಯುವುದು ಕಷ್ಟಕರ.
(ಉ) ಮೀಸಲಾತಿಯೇ ಅಂತಿಮ ಗುರಿಯಲ್ಲ. ಬದಲಿಗೆ ಅಂತ್ಯದತ್ತ ಒಂದು ದಾರಿಯಷ್ಟೆ! ಮೀಸಲಾತಿಯ ಮುಖ್ಯ ಉದ್ದೇಶವೇ ಮುಖ್ಯವಾಹಿನಿಯಿಂದ ಹೊರಗಿರುವವರಿಗೆ ಸರ್ವಕ್ಷೇತ್ರಗಳಲ್ಲಿಯು ಅವಕಾಶಗಳ ಬಾಗಿಲುಗಳನ್ನು ತೆರೆಯುವುದಾಗಿದೆ. ಆದ್ದರಿಂದಲೆ ಮೀಸಲಾತಿ ಶಾಶ್ವತವೂ ಅಲ್ಲ, ಜಾತಿ ಪದ್ದತಿಗೆ ದಿವ್ಯೌಷಧಿಯೂ ಅಲ್ಲ. ಎಲ್ಲಿಯವರೆಗು ರಾಷ್ಟ್ರದ ಪತ್ರಿಕೆಗಳ ಜಾಹಿರಾತುಗಳಲ್ಲಿ ಜಾತಿಯ ಪ್ರಸ್ತಾಪವಿರುತ್ತದೆಯೊ ಅಲ್ಲಿಯವರೆಗು ಇದು ಸಾಗಬೇಕಾಗುತ್ತದೆ.

ನಚಿಕೇತ್: ಮೀಸಲಾತಿಯಲ್ಲಿ ಕೆನೆಪದರ ಇರಬೇಕೇ ಬೇಡವೇ?
ಸಿ.ಎಸ್ ದ್ವಾರಕನಾಥ್: ಮೀಸಲಾತಿಯಲ್ಲಿ ಕೆನೆಪದರದ ಅಗತ್ಯವನ್ನು ಎತ್ತಿ ಹೇಳುತ್ತಿರುವವರ ಮುಖ್ಯ ಉದ್ದೇಶವೇ ಮೀಸಲಾತಿಯ ಮೂಲ ಗುರಿಯನ್ನು ಮಣ್ಣುಪಾಲು ಮಾಡುವುದಾಗಿದೆ. ಉದಾಹರಣೆಗೆ ಈಗಲೂ ಐ.ಐ.ಟಿ.ಯಂತಹ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿಟ್ಟ ಸ್ಥಾನಗಳಲ್ಲಿ ಶೇಕಡ 25 ಕ್ಕಿಂತ ಹೆಚ್ಚು ಸ್ಥಾನಗಳು ಸೂಕ್ತ ಅಭ್ಯರ್ಥಿಗಳಿಲ್ಲದ ಕಾರಣಕ್ಕೆ ಖಾಲಿ ಉಳಿದಿವೆ. ಅಕಸ್ಮಾತ್ ನೀವು ಕೆನೆಪದರವನ್ನು ಜಾರಿಗೆ ತಂದರೆ ಆರ್ಥಿಕವಾಗಿ ಪರಿಶಿಷ್ಟರಿಗಿಂತ ಸ್ವಲ್ಪ ಬಲಾಢ್ಯವಾಗಿರುವ ಕೆಳ ಮತ್ತು ಮಧ್ಯಮವರ್ಗದವರು ಪರಿಶಿಷ್ಟರ ಎಲ್ಲ ಸ್ಥಾನಗಳನ್ನು ಸುಲಭವಾಗಿ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಹೀಗೆ ಕೆನೆಪದರದ ವಿದ್ಯಾರ್ಥಿಗಳ ಜೊತೆ ಸ್ಪರ್ಧೆ ಮಾಡಲು ಪರಿಶಿಷ್ಟರಿಗೆ ಸಾಧ್ಯವಾಗುವುದಿಲ್ಲ.
ನಚಿಕೇತ್: ಮೀಸಲಾತಿ ಎಷ್ಟು ಕಾಲ ಮುಂದುವರೆಯಬೇಕು?
ಸಿ.ಎಸ್ ದ್ವಾರಕನಾಥ್: ಮೀಸಲಾತಿಯನ್ನು ವಿರೋಧಿಸುವ ಎಲ್ಲರೂ ಸಹಜವಾಗಿ ಕೇಳುವ ಪ್ರಶ್ನೆ ಇದು. ಎಲ್ಲಿಯವರೆಗು ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಎಲ್ಲ ವಿಭಾಗಗಳಲ್ಲಿಯೂ ಮೇಲ್ಜಾತಿಯವರೇ ತುಂಬಿಕೊಂಡಿದ್ದು, ಎಲ್ಲವನ್ನು ನಿಯಂತ್ರಿಸುತ್ತಿರುತ್ತಾರೊ ಅಲ್ಲಿಯವರಗು ಇದು ಮುಂದುವರೆಯುತ್ತದೆ. ನಮ್ಮ ಮೇಲ್ಜಾತಿಗಳು ಸುಮಾರು ಮೂರು ಸಾವಿರ ವರ್ಷಗಳಿಂದಲೂ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತ ಬಂದಿದ್ದು, ಇದೀಗ ಇಪ್ಪತ್ತನೆಯ ಶತಮಾನದಲ್ಲಿಯು ಎಲ್ಲ ಧಾರ್ಮಿಕ ಸ್ಥಾನಗಳಲ್ಲಿಯು ತನ್ನದೇ ಪಾರುಪತ್ಯವನ್ನು ನಡೆಸುತ್ತಿದೆ. ಇದೀಗ ಅವರೇ ಮೀಸಲಾತಿ ಎಲ್ಲಿಯವರೆಗೆ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ಅವರು ತಮ್ಮನ್ನು ತಾವೇ ಕೇಳಿಕೊಳ್ಳಲಿ: ಇನ್ನು ಎಷ್ಟು ವರ್ಷಗಳ ಕಾಲ ಅವರೇ ಎಲ್ಲ ಧಾರ್ಮಿಕ ಸ್ಥಾನಗಳಲ್ಲಿ ಇರುತ್ತಾರೆಂದು? ಮೂರು ಸಾವಿರ ವರ್ಷಗಳ ತಾರತಮ್ಮವನ್ನು ನಿವಾರಿಸಲು ಎಪ್ಪತ್ತು ವರ್ಷಗಳು ಸಾಕಾಗಿಬಿಡುತ್ತದೆಯೇ ಎಂದು ಅವರೇ ಕೇಳಿಕೊಳ್ಳಲಿ?
ನಚಿಕೇತ್: ಮೀಸಲಾತಿ ವ್ಯವಸ್ಥೆ ಸಮಾಜನ್ನು ಒಡೆಯುವುದಿಲ್ಲವೆ?
ಸಿ.ಎಸ್ ದ್ವಾರಕನಾಥ್: ಈ ಪ್ರಶ್ನೆಯೇ ಅಸಂಬದ್ದವಾದುದು. ಈಗಾಗಲೇ ಚಾಲ್ತಿಯಲ್ಲಿರುವ ಜಾತಿ ಪದ್ದತಿ ಸಮಾಜವನ್ನು ಛಿದ್ರಗೊಳಿಸಿಯಾಗಿದೆ. ಆದರೆ ಮೀಸಲಾತಿ ಅದನ್ನು ಸರಿಪಡಿಸುವ ದಿಸೆಯಲ್ಲಿ ಸಾಗಿದೆ. ನಮ್ಮ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜಾತಿಗಳಿವೆ. ಅವನ್ನೆಲ್ಲ ಸೇರಿಸಿ ಎಸ್.ಸಿ, ಎಸ್.ಟಿ. ಮತ್ತು ಓಬಿಸಿ ಎಂಬ ಕೊಡೆಯ ಅಡಿಯಲ್ಲಿ ತಂದಿರುವುದು ಜಾತಿ ವಿನಾಶದತ್ತ ದೊಡ್ಡ ಹೆಜ್ಜೆಯಾಗಿದೆ. ಆದ್ದರಿಂದ ಮೀಸಲಾತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜಾತಿಪದ್ದತಿಯನ್ನು ನಿವಾರಿಸಲು ಮೇಲ್ಜಾತಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. ಮೀಸಲಾತಿಯನ್ನು ವಿರೋಧಿಸುವವರು ಈ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆಯೆ? ಎಂದರೆ ಅದಕ್ಕೆ ಉತ್ತರ: ಇಲ್ಲ! ಇವತ್ತು ಮೀಸಲಾತಿಯನ್ನು ವಿರೋಧಿಸುತ್ತಿರುವವರೆಲ್ಲ ಜಾತಿ ತಮಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಿರುವವರೇ ಆಗಿದ್ದಾರೆ. ಜಾತಿಯ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುತ್ತಲೇ ಜಾತಿಯಾಧಾರಿತ ಮೀಸಲಾತಿಯನ್ನು ವಿರೋಧಿಸುವವರ ಆತ್ಮವಂಚನೆ ಇದರಿಂದ ಗೊತ್ತಾಗುತ್ತದೆ.
ನಚಿಕೇತ್: ಮೀಸಲಾತಿಯು ಅರ್ಹತೆಯನ್ನು ನಾಶ ಮಾಡುತ್ತಿಲ್ಲವೆ?
ಸಿ.ಎಸ್ ದ್ವಾರಕನಾಥ್: ನಾವು ಅರ್ಹತೆ ಎಂಬುದರ ವ್ಯಾಖ್ಯೆಯನ್ನೆ ಸರಿಯಾಗಿ ಅರ್ಥೈಸಿಕೊಂಡಿಲ್ಲವೆನಿಸುತ್ತೆ. ಕಾನ್ಪುರದ ಐ.ಐ.ಟಿ.ಯ ಪ್ರೊಫೆಸರ್ ರಾಹುಲ್ ಬರ್ಮನ್ ರವರ ಪ್ರಕಾರ: ಮೆರಿಟ್ ಎಂದರೇನು? ಕೇವಲ ಪರೀಕ್ಷೆಗಳನ್ನು ಪಾಸು ಮಾಡುವುದೇ? ಪಾಸ್ ಎನ್ನುವುದು ಒಂದು ದಾರಿಯೆ ಹೊರತು ಅದೇ ಅಂತ್ಯವಲ್ಲ. ಪರೀಕ್ಷೆಗಳು ಒಬ್ಬ ವೈದ್ಯನನ್ನೊ ಒಬ್ಬ ಎಂಜಿನಿಯರ್ನನ್ನೊ ಮಾಡುವುದಷ್ಟೇ ಆಗಿದ್ದರೆ, ಹಾಗೆ ಮಾಡಲು ಪರೀಕ್ಷೆಗಳಿಗಿಂತ ಉತ್ತಮ ಮಾರ್ಗಗಳು ಇವೆ. ನನ್ನ ಕಾಲೇಜಿನ ದಿನಗಳಲ್ಲಿ ಹೀಗೆ ಹೇಳಲಾಗುತ್ತಿತ್ತು: ಒಬ್ಬ ಒಳ್ಳೆಯ ಇಂಜಿನಿಯರ್ ಅಂದರೆ ಕಡಿಮೆ ಸಂಪನ್ಮೂಲಗಳಲ್ಲಿ ಉತ್ತಮವಾದುದ್ದನ್ನು ಮಾಡುವವನು. ಮ್ಯಾನೇಜ್ ಮೆಂಟ್ ಕೂಡ ಅಷ್ಟೆ ಇರುವ ಸಂಪನ್ಮೂಲಗಳನ್ನೇ ಬಳಸಿ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಬಲ್ಲವನು ಎಂದು!. ಆದರೆ ನಾನು ನೋಡಿದ ಹಾಗೆ ಬಹುತೇಕ ಆದಿವಾಸಿಗಳು, ದಲಿತರು, ಹಿಂದುಳಿದವರೆ ನಡೆಸುವ ಮೊರಾದಾಬಾದಿನ ಹಿತ್ತಾಳೆ, ವಾರಣಾಸಿಯ ರೇಶ್ಮೆ, ಕಾನ್ಪುರದ ಚರ್ಮದ ಸಣ್ಣ ಕೈಗಾರಿಕೆಗಳು ತಮ್ಮ ಸೀಮಿತ ಸಂಪನ್ಮೂಲಗಳನ್ನೇ ಬಳಸಿ ಅತ್ಯುತ್ತಮವಾದ ಉತ್ಪನ್ನಗಳನ್ನು ತಯಾರಿಸುತ್ತಿವೆ. ಅವು ನಿಮ್ಮ ಐ.ಟಿ. ಬಿ.ಟಿ. ಕೈಗಾರಿಕೆಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಿವೆ ಮತ್ತು ಹೆಚ್ಚು ರಫ್ತು ವ್ಯವಹಾರವನ್ನೂ ಸಹ ಮಾಡುತ್ತಿವೆ. ಇವರುಗಳು ಅತ್ಯಂತ ಕಡಿಮೆ ಬಂಡವಾಳ ಹೂಡಿದ್ದು, ಸಮರ್ಪಕವಾದ ಶಿಕ್ಷಣವಿಲ್ಲದೆ, ಸಾಕಷ್ಟು ವಿದ್ಯುತ್ ಇಲ್ಲದೆ, ಸರಿಯಾದ ಸಾರಿಗೆ ವ್ಯವಸ್ಥೆಯಿರದೆ ತುಂಬಾ ಸೀಮಿತ ಸಂಪನ್ಮೂಲಗಳ ಸಹಾಯದಿಂದ ಇಂತಹ ಅದ್ಬುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಯಾರೂ ನಿಮ್ಮ ಸಾಂಪ್ರದಾಯಿಕ ಶಿಕ್ಷಣ ಪಡೆದು ಇಂಜಿನಿಯರುಗಳಾದವರು ಇಲ್ಲ. ಇದರ ನಿರ್ವಹಣೆ ಮಾಡುತ್ತಿರುವವರ್ಯಾರು ಎಂ.ಬಿ.ಎ. ಪದವಿ ಪಡೆದವರಲ್ಲ.ಅದೂ ಅಲ್ಲದೇ ಇವ್ಯಾವ ಕೈಗಾರಿಗೆಳು ದೊಡ್ಡ ಕೈಗಾರಿಕೆಗಳೊಂದಿಗೆ ಯಾವ ಸಂಪರ್ಕವನ್ನು ಹೊಂದಿಲ್ಲ.
ದಕ್ಷಿಣದ ನಾಲ್ಕು ರಾಜ್ಯಗಳು ಮಾತ್ರ ಶೇಕಡಾ 60ರಷ್ಟು ಮೀಸಲಾತಿಯನ್ನು ಕಲ್ಪಿಸಿವೆ. ಇನ್ನು ಉತ್ತರದ ಬಹುತೇಕ ರಾಜ್ಯಗಳು ಕೇವಲ ಶೇಕಡಾ15 ರಷ್ಟು ಮಾತ್ರ ಮೀಸಲಾತಿಯನ್ನು ಕಲ್ಪಿಸಿ ಉಳಿದೆಲ್ಲವನ್ನು ಮೇಲ್ವರ್ಗಗಳಿಗೆ ಬಿಟ್ಟು ಕೊಟ್ಟಿವೆ. ಹೀಗಾಗಿಯೆ ಇವತ್ತು ದಕ್ಷಿಣದ ರಾಜ್ಯಗಳು ಬಹುತೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿವೆಯೆಂದು ವಿಶ್ವ ಬ್ಯಾಂಕಿನ ಅಧ್ಯಯನವೇ ಹೇಳಿದೆ. ಸಾಮಾಜಿಕ ಕಳಕಳಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ದಕ್ಷಿಣದ ರಾಜ್ಯಗಳು ಸಾಕಷ್ಟು ಅಭಿವೃದ್ದಿಯನ್ನು ಸಾಧಿಸಿವೆ.
ನಚಿಕೇತ್: ಈಗಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿರುವ ಮೀಸಲಾತಿ ಪರಿಣಾಮಕಾರಿಯಾಗಿದೆಯೆ?
ಸಿ.ಎಸ್ ದ್ವಾರಕನಾಥ್: ಸಾರ್ವಜನಿಕ ಉದ್ದಿಮೆಗಳಲ್ಲಿರುವ ಮೀಸಲಾತಿಯಿಂದ ಸಾಕಷ್ಟು ಅನುಕೂಲವಾಗಿದೆ. ಕೇಂದ್ರ ಸರಕಾರದಲ್ಲಿಯೆ 14 ಲಕ್ಷ ಉದ್ಯೋಗಿಗಳಿದ್ದಾರೆ. ಆದರೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮೂರು ಮತ್ತು ನಾಲ್ಕನೇ ದರ್ಜೆಯ ನೌಕರರ ಹೊರತಾಗಿ ಒಂದನೇ ಮತ್ತು ಎರಡನೆ ದರ್ಜೆಯ ನೌಕರರಲ್ಲಿ ಕೇವಲ ಶೇಕಡಾ 8ರಿಂದ 10 ರಷ್ಟು ಮಾತ್ರ ಎಸ್.ಸಿ. ಮತ್ತು ಎಸ್.ಟಿ.ಗಳಿದ್ದಾರೆ. ಇವತ್ತು ಬಹುಜನ ಸಮಾಜವೇನಾದರು ದೆಹಲಿಯನ್ನು ಮುಟ್ಟಲು ಸ್ವಲ್ಪವಾದರು ಸಾಧ್ಯವಾಗಿದ್ದರೆ ಅದು ಮೀಸಲಾತಿಯ ಸೌಲಭ್ಯದಿಂದ ಮಾತ್ರ. ಮೀಸಲಾತಿಯೇ ಇಲ್ಲದಿದ್ದರೆ ಉದ್ಯೊಗಗಳಿರಲಿ, ಶಿಕ್ಷಣ ಕ್ಷೇತ್ರಕ್ಕೂ ಬಹುಜನರು ಪ್ರವೇಶಿಸಲು ಸಾಧ್ಯವಿರುತ್ತಿರಲಿಲ್ಲ. ಆದ್ದರಿಂದ ಮೀಸಲಾತಿ ಇವತ್ತಿಗೂ ಪ್ರಸ್ತುತವಾಗಿದೆ.