ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಬಿಜೆಪಿಗೆ ಹೇಗಾದರೂ ಮಾಡಿ ಇಡೀ ದೇಶವನ್ನು ಕೇಸರಿಮಯವನ್ನಾಗಿ ಮಾಡಬೇಕೆಂಬ ಇರಾದೆ ಬಂದಿರುವುದು ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ಮಂತ್ರವನ್ನು ಜಪಿಸುತ್ತಾ ಬಂದಿರುವ ಕಮಲಪಾಳಯ ಅದಕ್ಕೆ ತಕ್ಕಂತೆ ರಾಜಕಾರಣವನ್ನು ಮಾಡುತ್ತಿದೆ. ಅದು ಕಾನೂನು ಪ್ರಕಾರವಾಗಿರಲಿ ಅಥವಾ ಕಾನೂನು ಬಾಹಿರವಾಗಿರಲಿ. ಒಟ್ಟು ಭಾರತದ ಎಲ್ಲಾ ರಾಜ್ಯಗಳಲ್ಲಿ ಕಮಲ ಅರಳಬೇಕೆಂಬುದು ಆ ಪಕ್ಷದ ಮೇನ್ ಅಜೆಂಡಾವಾಗಿದೆ.
ಅಂತಹ ಅಜೆಂಡಾವನ್ನು ಈಗ ಮಹಾರಾಷ್ಟ್ರದಲ್ಲಿಯೂ ಜಾರಿಗೆ ತಂದು ರಾತ್ರಿ ಬೆಳಗಾಗುವುದರೊಳಗಾಗಿ ಕಾಂಗ್ರೆಸ್-ಎನ್ ಸಿಪಿ- ಶಿವಸೇನೆಯ ಮಹಾಮೈತ್ರಿಯನ್ನೇ ಬುಡಮೇಲು ಮಾಡುವಲ್ಲಿ ಯಶಸ್ಸು ಕಂಡಿರುವ ಬಿಜೆಪಿ ನಾಯಕರು ಶನಿವಾರ ಬೆಳ್ಳಂಬೆಳಗ್ಗೆ ಎನ್ ಸಿಪಿಯ ಅಜಿತ್ ಪವಾರ್ ಜತೆ ಮೈತ್ರಿ ಸಾಧಿಸಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಿದ್ದಾರೆ.
ಅಧಿಕಾರ ಬರುತ್ತದೆ ಎಂದರೆ ಬಿಜೆಪಿ ನಾಯಕರಿಗೆ ಯಾವುದೇ ರಾಜಕೀಯ ಸಿದ್ಧಾಂತಗಳೂ ಅಡ್ಡ ಬರುವುದಿಲ್ಲ. ಚುನಾವಣೆ ವೇಳೆ ಇದೇ ಎನ್ ಸಿಪಿ ನಾಯಕರ ವಿರುದ್ಧ ವಾಚಾಮಗೋಚರವಾಗಿ ನಿಂದಿಸಿದ್ದ, ಟೀಕಿಸಿದ್ದ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅದೇ ಎನ್ ಸಿಪಿ ಜತೆ ರಾತ್ರೋರಾತ್ರಿ ಸಂಬಂಧ ಬೆಳೆಸಿದ್ದಾರೆ.
ಕಳೆದ ಆರು ವರ್ಷಗಳಿಂದ ಬಿಜೆಪಿಗೆ ಅಧಿಕಾರದ ಅಮಲು ಸಾಕಷ್ಟು ಬಂದಿದೆ. ಈ ಅಧಿಕಾರದ ಮದದಿಂದಲೇ ತನಗೆ ಕೆಲವು ಕಡೆ ಜನಾಭಿಪ್ರಾಯವಿಲ್ಲದಿದ್ದರೂ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರಗಳನ್ನೂ ರಚಿಸಿ ಕಮಲವನ್ನು ವಿರಾಜಮಾನವಾಗಿರುವಂತೆ ನೋಡಿಕೊಂಡಿದ್ದಾರೆ ಬಿಜೆಪಿ ನಾಯಕರು.
ಕರ್ನಾಟಕದಲ್ಲಿ 17 ಮಂದಿ ಶಾಸಕರ ರಾಜೀನಾಮೆ ಕೊಡಿಸಿ ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಹೊಡೆದುರುಳಿಸಿ ಅಧಿಕಾರದ ಗದ್ದುಗೆಯನ್ನೇರಿದೆ. ಇನ್ನು ಮಹಾರಾಷ್ಟ್ರದಲ್ಲಿ ಹಲವು ದಶಕಗಳಿಂದ ಮೈತ್ರಿ ಮಾಡಿಕೊಂಡು ತನ್ನ ಹಿಂದುತ್ವ ವಾದಕ್ಕೆ ನೀರೆರೆದು ಬೆಳೆಯುವಂತೆ ಮಾಡಿದ್ದ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಕೊಡದೇ ಎಡಗಾಲಲ್ಲಿ ದೂಡಿದ್ದ ಬಿಜೆಪಿ ನಾಯಕರು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಒಮ್ಮೆಯಾದರೂ ಸಿಎಂ ಪದವಿ ಗಿಟ್ಟಿಸಲು ಹೊರಟಿದ್ದ ಶಿವಸೇನೆ ನಾಯಕರ ಆಸೆಗೆ ತಣ್ಣೀರೆರಚಿದ್ದಾರೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಎನ್ ಸಿಪಿಯ ಅಧಿನಾಯಕ ಶರದ್ ಪವಾರ್ ಶಿವಸೇನೆಯ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ನಮ್ಮ ಪಕ್ಷ ಒಪ್ಪಿದೆ. ಠಾಕ್ರೆ ನೇತೃತ್ವದ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮಹಾ ಕೂಟದ ಸರ್ಕಾರ ಬರಲಿದೆ ಎಂದು ಘೋಷಿಸಿದ್ದರು.
ಆಗಲೇ ಬಿಜೆಪಿ ನಾಯಕರಿಗೆ ಮುಳ್ಳು ಚುಚ್ಚಿದಂತಾಗಿದ್ದು. ಇದಾಗುತ್ತಿದ್ದಂತೆಯೇ ತನ್ನ ಅಸಲಿಯಾಟ ಶುರುವಿಟ್ಟುಕೊಂಡ ಬಿಜೆಪಿ ನಾಯಕರು ಎನ್ ಸಿಪಿಯನ್ನೇ ಒಡೆಯುವ ಹಂತಕ್ಕೆ ಹೋದರು. ಎನ್ ಸಿಪಿಯ ಶಾಸಕರನ್ನು ನೇರವಾಗಿ ಸಂಪರ್ಕಿಸಿ ಬೆಂಬಲ ಕೋರಿದರು. ಅಲ್ಲಿ ಶರದ್ ಪವಾರ್ ಮತ್ತು ಅವರ ಬಲಗೈ ಬಂಟನಂತಿರುವ ಪ್ರಫುಲ್ ಪಟೇಲ್ ಅವರಿಗೆ ಪಕ್ಷವನ್ನು ಉಳಿಸಿಕೊಳ್ಳುವುದು ಮತ್ತು ತಮ್ಮ ವಿರುದ್ಧ ಕೇಂದ್ರ ಸರ್ಕಾರ ಛೂ ಬಿಟ್ಟಿರುವ ಇಡಿ, ಸಿಬಿಐ ಮತ್ತಿತರೆ ತನಿಖೆಗಳ ಉರುಳಿನಿಂದ ಪಾರಾಗುವುದು ಬೇಕಿತ್ತು.
ಶಿವಸೇನೆ ಜತೆ ಹೋದರೆ ಕೇವಲ ಮಹಾರಾಷ್ಟ್ರದಲ್ಲಿ ಸರ್ಕಾರದಲ್ಲಿ ಭಾಗಿಯಾಗಬಹುದು. ಆದರೆ, ಬಿಜೆಪಿ ಜತೆ ಹೋದರೆ ಹಲವು ಲಾಭಗಳು ಆಗುತ್ತವೆ ಎಂದು ಪರಿಭಾವಿಸಿದ ಎನ್ ಸಿಪಿ ನಾಯಕರು ರಾತ್ರೋರಾತ್ರಿ ತಮ್ಮ ಬಣ್ಣ ಬದಲಿಸಿ ಬಿಜೆಪಿಗೆ ಬೆಂಬಲವಾಗಿ ನಿಲ್ಲುವ ಘೋಷಣೆ ಮಾಡಿದ್ದಾರೆ. ಮೂಲಗಳ ಪ್ರಕಾರ ಇದೀಗ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ದೇವೇಂದ್ರ ಫಡ್ನಾವೀಸ್ ಜತೆಗೆ ಎನ್ ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಬೆಳಗಿನ ಜಾವ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಎನ್ ಸಿಪಿಗೆ ಮಹಾರಾಷ್ಟ್ರ ಸರ್ಕಾರದಲ್ಲಿ ಭಾಗಿಯಾಗುವುದಷ್ಟೇ ಲಾಭವಲ್ಲ. ಭವಿಷ್ಯದಲ್ಲಿ ಅಂದರೆ ಕೆಲವೇ ತಿಂಗಳಲ್ಲಿ ಆ ಪಕ್ಷದ ಒಂದಿಬ್ಬರು ಸಂಸದರಿಗೆ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗುವ ಲಾಭ ಒಂದು ಕಡೆಯಾದರೆ, ಇಡಿ, ಸಿಬಿಐನಂತಹ ಗುಮ್ಮಗಳಿಂದ ತಪ್ಪಿಸಿಕೊಳ್ಳುವುದು ಮತ್ತೊಂದು ಲಾಭ. ಈ ಮೂಲಕ ಎನ್ ಸಿಪಿ ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಯಾವುದೇ ತನಿಖೆ, ವಿಚಾರಣೆ ಎಂಬ ತಲೆನೋವುಗಳಿಂದ ದೂರ ಇರಬಹುದಾಗಿದೆ. ಈ ಕಾರಣದಿಂದಲೇ ಎನ್ ಸಿಪಿ ರಾತ್ರೋರಾತ್ರಿ ಶಿವಸೇನೆಗೆ ಚಳ್ಳೆ ಹಣ್ಣು ತಿನ್ನಿಸಿ ತನ್ನ ಬೆಂಬಲವನ್ನು ಬಿಜೆಪಿಗೆ ಘೋಷಣೆ ಮಾಡಿದೆ ಎಂಬ ಅಭಿಪ್ರಾಯಗಳು ಮೂಡತೊಡಗಿವೆ.
ರಾಜ್ಯಪಾಲರು ಸರ್ಕಾರ ರಚಿಸುವಂತೆ ಆಹ್ವಾನ ನೀಡಿದಾಗ ತಾನು ಸರ್ಕಾರ ರಚಿಸುವುದಿಲ್ಲ ಎಂದು ಹೇಳಿದ್ದ ಬಿಜೆಪಿ ಬೆಳಗಾಗುವುದರೊಳಗಾಗಿ ಅದ್ಹೇಗೆ ಸರ್ಕಾರ ರಚನೆ ಮಾಡಿತು? ಅದ್ಹೇಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟರು ಎಂಬುದು ಜನಸಾಮಾನ್ಯರಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಆದರೆ, ಹೇಳಿಕೇಳಿ ರಾಜ್ಯಪಾಲರು ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವವರಲ್ಲವೇ? ಹೀಗಾಗಿ ಅಲ್ಲಿಂದ ಬಂದ ಸೂಚನೆಯಂತೆ ಬೆಳಗಿನ `ಶುಭ ಮುಹೂರ್ತ’’ ದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಕೊಡುವ ಪ್ರಮಾಣ-ಗೌಪ್ಯತೆಯನ್ನು ಬೋಧನೆ ಮಾಡಿದ್ದಾರೆ.
ಈ ಮೊದಲೇ ಹೇಳಿದಂತೆ ಬಿಜೆಪಿಗೆ ಅಧಿಕಾರದ ದಾಹ, ಎನ್ ಸಿಪಿಗೆ ತನ್ನ ಅವ್ಯವಹಾರಗಳನ್ನು ಮುಚ್ಚಿಕೊಳ್ಳುವ ಹಪಾಹಪಿ. ಈ ಎರಡರ ಸಮ್ಮಿಳಿತವಾಗಿ ಮೈತ್ರಿ ಸರ್ಕಾರ ಸ್ಥಾಪಿತವಾಗಿದೆ. ಏಕೆಂದರೆ, ಶರದ್ ಪವಾರ್ ಮತ್ತು ಇದೀಗ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಅಜಿತ್ ಪವಾರ್ ಅವರಿಗೆ ಬಹುದೊಡ್ಡ ಸಂಕಟದಿಂದ ಪಾರಾಗುವುದು ಬೇಕಿತ್ತು. ಆ ಬಹುದೊಡ್ಡ ಸಂಕಟವೇನೆಂದರೆ, ಮಹಾರಾಷ್ಟ್ರ ಸ್ಟೇಟ್ ಕೋಆಪರೇಟಿವ್ ಬ್ಯಾಂಕ್ ನಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ಇವರಿಬ್ಬರ ಕೊರಳಿಗೆ 25 ಸಾವಿರ ಕೋಟಿ ರೂಪಾಯಿಗಳ ಹಗರಣದ ಉರುಳು ಸುತ್ತಿಕೊಂಡಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈ ವರ್ಷದ ಸೆಪ್ಟಂಬರ್ ನಲ್ಲಿ ಇವರಿಬ್ಬರು ಸೇರಿದಂತೆ ಇನ್ನೂ ಹಲವರ ವಿರುದ್ಧ ವಿಚಾರಣೆಯನ್ನು ನಡೆಸುತ್ತಿದೆ. ಇದರಿಂದ ಪಾರಾಗುವುದು ಎನ್ ಸಿಪಿಯ ಈ ನಾಯಕರಿಬ್ಬರಿಗೆ ಬೇಕಿತ್ತು.
ಇಲ್ಲಿ ಅಧಿಕಾರದ ಹೊಸ್ತಿಲಲ್ಲಿದ್ದ ಶಿವಸೇನೆ ಸಾಕಷ್ಟು ಎಡವಿತು. ಕಳೆದ ಹಲವು ದಿನಗಳಿಂದ ಬಿಜೆಪಿ ಜತೆ ನಡೆಸಿದ ಮಾತುಕತೆಯಲ್ಲಿ ರಾಜಕೀಯ ತಂತ್ರಗಾರಿಕೆಯನ್ನು ಎಣೆಯುವಲ್ಲಿ ವಿಫಲವಾಯಿತು. ಪೂರ್ಣಾವಧಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಕಟ್ಟು ಬೀಳದೇ ಸೌಹಾರ್ದಯುತವಾಗಿ ಮೈತ್ರಿ ಮಾಡಿಕೊಂಡಿದ್ದರೆ ಮೊದಲ ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಮತ್ತೊಂದೆಡೆ, ಶುಕ್ರವಾರ ಎನ್ ಸಿಪಿ, ಕಾಂಗ್ರೆಸ್ ಜತೆ ಮಾತುಕತೆ ಮುಗಿದ ತಕ್ಷಣ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡಿಸಬಹುದಿತ್ತು. ಆದರೆ, ಇದರಿಂದ ಶಿವಸೇನೆ ನಾಯಕರು ಹಿಂದೆ ಬಿದ್ದರು. ಪರಿಣಾಮ ಮೊದಲ ಬಾರಿಗೆ ಮುಖ್ಯಮಂತ್ರಿ ಪಟ್ಟ ಗಿಟ್ಟಿಸುವ ಮತ್ತೊಂದು ಅವಕಾಶದಿಂದ ವಂಚಿತರಾದರು.
ಹಾಗಂತ ಕಾಂಗ್ರೆಸ್ ಬೇರಿನಿಂದ ಹುಟ್ಟಿಕೊಂಡಿರುವ ಎನ್ ಸಿಪಿಯೇನೂ ಬಿಜೆಪಿಗೆ ಶತ್ರುವೇನಲ್ಲ. 2014 ರಲ್ಲಿಯೂ ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿತ್ತು. ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜಾತ್ಯತೀತ ಜನತಾದಳ ಪಕ್ಷದ ರೀತಿಯಲ್ಲಿ ಶರದ್ ಪವಾರ್ ಪಕ್ಷ ಎಲ್ಲಾ ಪಕ್ಷಗಳಿಗೂ ತನ್ನ ಮೈತ್ರಿ ಬಾಗಿಲನ್ನು ಸದಾ ತೆರೆದಿಟ್ಟಿರುತ್ತದೆ. ಈ ಕಾರಣದಿಂದಲೇ ಕಾಂಗ್ರೆಸ್ ಆಗಿರಲಿ, ಬಿಜೆಪಿ, ಶಿವಸೇನೆ ಆಗಿರಲಿ ಎಲ್ಲಾ ಪಕ್ಷಗಳು ಪವಾರ್ ಮನೆ ಬಾಗಿಲಿಗೆ ಹೋಗುತ್ತವೆ.
ಆದರೆ, ಈ ರಾತ್ರೋರಾತ್ರಿ ಬೆಳವಣಿಗೆ ಬಗ್ಗೆ ಪಾಪ ಶರದ್ ಪವಾರ್ ಅವರಿಗೆ ತಿಳಿದೇ ಇಲ್ಲವಂತೆ! ಅವರ ಸಂಬಂಧಿಯಾಗಿರುವ ಅಜಿತ್ ಪವಾರ್ ನೇತೃತ್ವದಲ್ಲಿ ಈ ಅರ್ಧರಾತ್ರಿಯ ಬೆಳವಣಿಗೆಯಾಗಿದ್ದು, ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಫಡ್ನವೀಸ್ ಮತ್ತು ಪವಾರ್ ಪ್ರಮಾಣ ವಚನ ಸ್ವೀಕರಿಸಿದಾಗಲೇ ನನಗೆ ಈ ವಿಚಾರ ಗೊತ್ತಾಗಿದ್ದು ಎಂದು ಪವಾರ್ ಹೇಳುತ್ತಾರೆ. ರಾಜಕೀಯ ಮುಂದಾಳುಗಳೆಂದರೆ ತಮ್ಮ ಪಕ್ಷದಲ್ಲಿ ಏನೆಲ್ಲಾ ಬೆಳವಣಿಗೆಗಳಾಗುತ್ತವೆ ಎಂಬುದನ್ನು ದಿನದ 24 ಗಂಟೆಯೂ ಅರಿತಿರುತ್ತಾರೆ. ಆದರೆ, ಪವಾರ್ ಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಒಂದು ರೀತಿಯ ಗುಬ್ಬಕ್ಕ ಕತೆ ಹೇಳಿದ್ದಾರೆ.
ಮುಖ್ಯಮಂತ್ರಿ ಪದವಿ ಎಂಬ ಸುಲಭದ ತುತ್ತನ್ನು ಸವಿಯುವಲ್ಲಿ ಶಿವಸೇನೆ ವಿಫಲವಾಗಿ ಬರಿಗೈಲಿ ಕೂರುವಂತಾಗಿದ್ದರೆ, ಶರದ್ ಪವಾರ್ ನೇತೃತ್ವದ ಎನ್ ಸಿಪಿ ತನಿಖೆಗಳಿಂದ ಪಾರಾಗುವುದರ ಜತೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದ ರುಚಿಯನ್ನೂ ಸವಿಯುವಂತಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷ ಎಂದಿನಂತೆ ವಿರೋಧ ಪಕ್ಷದ ಸ್ಥಾನವೇ ತನಗೆ ಗಟ್ಟಿ ಎಂಬಂತೆ ಕುಳಿತುಕೊಳ್ಳುವಂತಾಗಿದೆ.
ಬಿಜೆಪಿ ಜತೆ ಸೇರಿ ಮಾಡಿಕೊಂಡಿರುವ ಮೈತ್ರಿ ಎನ್ ಸಿಪಿಯ ಅಧಿಕೃತ ಮೈತ್ರಿಯಲ್ಲ. ಇದಕ್ಕೂ ಎನ್ ಸಿಪಿಗೂ ಸಂಬಂಧವಿಲ್ಲ ಎಂದು ಶರದ್ ಪವಾರ್ ಹೇಳಿಕೊಂಡಿದ್ದಾರೆ. ಹಾಗಾದರೆ, ಎನ್ ಸಿಪಿಯನ್ನೇ ಬಿಜೆಪಿ ಇಬ್ಭಾಗ ಮಾಡುವಲ್ಲಿ ಯಶಸ್ವಿಯಾಗಿದೆಯೇ? ಅಥವಾ ಶರದ್ ಪವಾರ್ ಅವರ ಅಣತಿ ಮೇರೆಗೆ ಮೈತ್ರಿ ಸಾಧಿಸಲಾಗಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಒಂದು ವೇಳೆ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದರೆ, ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತವನ್ನು ವಾಪಸ್ ತೆಗೆದುಕೊಳ್ಳಲು ಸಾಕಷ್ಟು ಸಮಯವನ್ನು ವ್ಯರ್ಥ ಮಾಡುತ್ತಿತ್ತು. ಆದರೆ, ರಾತ್ರೋರಾತ್ರಿ ಬಿಜೆಪಿ-ಎನ್ ಸಿಪಿ ಮೈತ್ರಿ ಆಗುತ್ತಿದ್ದಂತೆಯೇ ಬೆಳಗಿನ ಜಾವ 5.47 ಕ್ಕೆ ರಾಷ್ಟ್ರಪತಿ ಆಡಳಿತವನ್ನು ಹಿಂಪಡೆದ ಆದೇಶವನ್ನು ರಾಜಭವನಕ್ಕೆ ರವಾನಿಸಿತು. ಇದಾದ ಕೇವಲ ಒಂದು ಗಂಟೆಯಲ್ಲಿ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.