ಇವರಿಬ್ಬರಿಗೆ ಅಧಿಕಾರದ ರುಚಿ ಹೇಗೆ ಹತ್ತಿದೆಯೆಂದರೆ ಮಹಾರಾಷ್ಟ್ರದಲ್ಲಿ ಚುನಾವಣೆ ಫಲಿತಾಂಶ ಬರುತ್ತಿದ್ದಂತೆಯೇ ದೇಶದ ವಾಣಿಜ್ಯ ರಾಜಧಾನಿಯಿಂದ ಅಧಿಕಾರ ಕೈತಪ್ಪಿ ಹೋಯಿತಲ್ಲಾ ಎಂದು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದರು. ಆದರೆ, ಈ ಯೋಚನೆ ಕೇವಲ ಕ್ಷಣಿಕದ್ದಾಗಿತ್ತು. ಇಡೀ ದೇಶದ ಬಹತೇಕ ರಾಜ್ಯಗಳಲ್ಲಿ ಅಧಿಕಾರದ ರುಚಿ ಕಂಡಿರುವ ಇವರಿಬ್ಬರಿಗೆ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರವನ್ನು ಗಿಟ್ಟಿಸಲು ರಾಜಕೀಯ (ಕು)ತಂತ್ರಗಳನ್ನು ಹೆಣೆಯುವುದು ಅಷ್ಟೇನೂ ಕಷ್ಟವೆನಿಸಲಿಲ್ಲ.
ಫಲಿತಾಂಶ ಬಂದ ದಿನದಿಂದಲೇ ಈ ಇಬ್ಬರೂ ಕಮಲದ ಸರ್ಕಾರವನ್ನು ಮತ್ತೆ ಪ್ರತಿಷ್ಠಾಪಿಸುವುದು ಹೇಗೆಂಬ ಲೆಕ್ಕಾಚಾರದಲ್ಲಿ ತೊಡಗಿ ಅದಕ್ಕೆ ಸದ್ದಿಲ್ಲದೇ ವೇದಿಕೆಯನ್ನು ಸಿದ್ಧಪಡಿಸಿದ್ದರು. ಕಳೆದ ಎರಡು ದಶಕಗಳಿಂದಲೂ ತನ್ನದೇ ಆದ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಮೈತ್ರಿ ಮಾಡಿಕೊಳ್ಳುತ್ತಾ ಅಧಿಕಾರ ಬಂದಾಗಲೆಲ್ಲಾ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದ ಶಿವಸೇನೆಯನ್ನು ಪಕ್ಕಕ್ಕೆ ತಳ್ಳಿ ಎನ್ ಸಿಪಿಯೊಂದಿಗೆ ಕೈಜೋಡಿಸಿ ಮತ್ತೆ ಅಧಿಕಾರದ ಗದ್ದುಗೆಗೇರಿದೆ ಬಿಜೆಪಿ.
ವಾರಾಂತ್ಯದ ಗುಂಗಿನಲ್ಲೇ ಮಹಾರಾಷ್ಟ್ರದ ಜನತೆ ಶನಿವಾರ ಗಾಢ ನಿದ್ದೆಯಲ್ಲಿದ್ದರು. ಇಂತಹ ಗಾಢನಿದ್ದೆಯಲ್ಲಿದ್ದವರು ಎಚ್ಚರವಾಗುತ್ತಿದ್ದಂತೆಯೇ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಅವರು ತಮ್ಮ ನೆಚ್ಚಿನ ಮಾಧ್ಯಮವಾದ ಟ್ವಿಟರ್ ನಲ್ಲಿ ಸಂವಿಧಾನದ ಕಟ್ಟುಪಾಡುಗಳನ್ನು ಗಾಳಿಗೆ ತೂರುವಂತಹ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಸಾವಿನ ಸುದ್ದಿಯನ್ನು ಬಿತ್ತರ ಮಾಡಿದ್ದನ್ನು ನೋಡಿ ಆವಕ್ಕಾದರು.
ಕುತೂಹಲಕಾರಿ ಅಂಶವೆಂದರೆ ಶನಿವಾರ ಬೆಳಗಿನ ಪತ್ರಿಕೆಗಳಲ್ಲಿ ಶಿವಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಘೋಷಣೆ ಮಾಡಿದ್ದ ಸುದ್ದಿಯೇ ಹೆಡ್ ಲೈನ್ ಆಗಿ ಬಂದಿತ್ತು. ಈ ನಿಟ್ಟಿನಲ್ಲಿ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ ಸಿಪಿಗಳು ತಮ್ಮ ರಾಜಕೀಯ ವಿಚಾರಗಳನ್ನು ಬದಿಗೊತ್ತಿ ಬಿಜೆಪಿಯನ್ನು ದೂರವಿಡುವ ಮತ್ತು ಠಾಕ್ರೆಗೆ ಬೆಂಬಲ ನೀಡಲು ಶುಕ್ರವಾರ ತಡರಾತ್ರಿ ನಿರ್ಧರಿಸಿದ್ದವು.
ಶರದ್ ಪವಾರ್ ಯಾವಾಗ ಈ ಘೋಷಣೆ ಮಾಡಿದರೋ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಎಚ್ಚರಿಕೆಯ ಗಂಟೆಯೊಡೆಯಿತು. ಈ ವಿಚಾರವನ್ನು ಇವರಿಬ್ಬರಿಗೂ ಅರಗಿಸಿಕೊಳ್ಳಲಾಗಲಿಲ್ಲ ಮತ್ತು ಮಹಾರಾಷ್ಟ್ರದ ಅಧಿಕಾರ ತಮ್ಮ ಕೈತಪ್ಪಿ ಹೋಗಲು ಬಿಡಬಾರದು ಎಂಬ ನಿರ್ಣಯವನ್ನು ಮೊದಲ ದಿನದಿಂದಲೇ ಅಂದುಕೊಂಡು ಬಂದಿದ್ದರು ಮತ್ತು ಅದಕ್ಕಾಗಿ ವೇದಿಕೆಯನ್ನೂ ಸಜ್ಜು ಮಾಡುತ್ತಾ ಇದ್ದರು. ಅದಕ್ಕೆಂದೇ ಎಲ್ಲಾ ತತ್ತ್ವಾದರ್ಶಗಳನ್ನು ಗಾಳಿಗೆ ತೂರಿ ಕ್ಷಿಪ್ರಗತಿಯಲ್ಲಿ ರಾಜಕೀಯ ದಾಳಗಳನ್ನು ಉದುರಿಸಲು ಆರಂಭಿಸಿದರು. ಇದರ ಪರಿಣಾಮವೇ ಎನ್ ಸಿಪಿಯನ್ನು ರಾತ್ರೋರಾತ್ರಿ ಇಬ್ಭಾಗ ಮಾಡಿ ದಿನ ಬೆಳಗಾಗುವುದರೊಳಗಾಗಿ ಅಧಿಕಾರದ ಗದ್ದುಗೆಯನ್ನೂ ಅಲಂಕರಿಸುವಂತೆ ಮಾಡಿದರು.
ಅಂದ ಹಾಗೆ ಈ ಎಲ್ಲಾ ಮಾಸ್ಟರ್ ಪ್ಲಾನ್ ಮಾಡಿದ ನರೇಂದ್ರ ಮೋದಿ ಮತ್ತು ಅಮಿತ್ ಶಾ. ಮಹಾರಾಷ್ಟ್ರದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನೇ ಕೊಂದು ಹಾಕಿದ್ದಾರೆ. ಹಾಗೆ ನೋಡುವುದಾದರೆ, ಈ ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆಗೆ ಅವರಿಬ್ಬರು ಇಟ್ಟ 10 ಹೆಜ್ಜೆಗಳನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
1. ಚುನಾವಣೆಗೆ ಮುನ್ನ ಇದೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎನ್ ಸಿಪಿ ನಾಯಕರಾದ ಶರದ್ ಪವಾರ್, ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಆರಂಭಿಸುತ್ತದೆ.
2. ಚುಣಾವಣೆ ನಂತರ ಮಿಶ್ರ ಫಲಿತಾಂಶ ಬರುತ್ತದೆ. ಬಿಜೆಪಿಗೆ ಸ್ವತಂತ್ರವಾಗಿ ಸರ್ಕಾರ ರಚನೆಗೆ ಬೇಕಾದಷ್ಟು ಶಾಸಕರ ಸಂಖ್ಯೆ ಇರಲಿಲ್ಲ. ಮತ್ತೊಂದು ಕಡೆ ತನ್ನ ಮೈತ್ರಿ ಪಕ್ಷ ಶಿವಸೇನಾಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತಯಾರಿರಲಿಲ್ಲ. ಹೇಗಿದ್ದರೂ ತಮ್ಮದೇ ವ್ಯಕ್ತಿ ಭಗತ್ ಸಿಂಗ್ ಕೊಶಿಯಾರಿ ಅವರು ರಾಜಭವನದಲ್ಲಿ ರಾಜ್ಯಪಾಲರಾಗಿ ವಿರಾಜಮಾನರಾಗಿದ್ದರು. ಈ ಜೀ ಹುಜೂರ್ ಕೈಲಿ ಎಷ್ಟು ಸಾಧ್ಯವಾಗುತ್ತದೋ ಅಷ್ಟರ ಕಾಲ ಸರ್ಕಾರ ರಚನೆಗೆ ಪಕ್ಷಗಳನ್ನು ಆಹ್ವಾನಿಸುವ ಪ್ರಕ್ರಿಯೆಯನ್ನು ತಡವಾಗುವಂತೆ ಮಾಡಿತು ಕೇಂದ್ರ ಸರ್ಕಾರ.
3. ರಾಜ್ಯಪಾಲ ಕೊಶಿಯಾರಿ ಅವರು ನವೆಂಬರ್ 9 ರಂದು ದೇವೇಂದ್ರ ಫಡ್ನಾವಿಸ್ ಗೆ 48 ಗಂಟೆಯೊಳಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡುತ್ತಾರೆ. ಆದರೆ, ಫಡ್ನಾವಿಸ್ ಈ ಆಹ್ವಾನವನ್ನು ತಿರಸ್ಕರಿಸುತ್ತಾರೆ. ಇದಾದ ಬಳಿಕ ಎರಡನೇ ಅತಿ ದೊಡ್ಡ ಪಕ್ಷವಾದ ಶಿವಸೇನಾಗೆ ಆಹ್ವಾನವಿತ್ತ ಗೌರವಾನ್ವಿತ ರಾಜ್ಯಪಾಲರು ಸರ್ಕಾರ ರಚನೆಗೆ 24 ಗಂಟೆ ಕಾಲಾವಕಾಶ ನೀಡುತ್ತಾರೆ. ಆಗ ಮತ್ತಷ್ಟು ಕಾಲಾವಕಾಶ ಬೇಕೆಂದು ಕೋರಿದಾಗ ರಾಜ್ಯಪಾಲರು ಎನ್ ಸಿಪಿಗೆ 24 ಗಂಟೆ ಸಮಯ ನೀಡುತ್ತಾರೆ. ಆದರೆ, ಈ ಗಡುವು ಮುಗಿಯುವುದರೊಳಗಾಗಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುತ್ತಾರೆ. ರಾಜ್ಯಪಾಲರ ಈ ಕ್ರಮ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಸ್ಪಷ್ಟ ಉಲ್ಲಂಘನೆ.
4. ಕೇಂದ್ರ ಸರ್ಕಾರ ಅತ್ಯಂತ ವೇಗವಾಗಿ ರಾಷ್ಟ್ರಪತಿ ಆಳ್ವಿಕೆಗೆ ಮಾಡಿದ ಶಿಫಾರಸನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತವನ್ನೂ ಹಾಕಿದರು. ಇದು ಬಿಜೆಪಿಗೆ ಇತರೆ ಪಕ್ಷಗಳನ್ನು ಒಡೆಯಲು ಸಾಕಷ್ಟು ಸಮಯವನ್ನು ಒದಗಿಸಿಕೊಟ್ಟಿತು.
5. ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನಾ ಪಕ್ಷಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸೇನಾದ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರ್ಕಾರ ರಚನೆಗೆ ಮುಂದಡಿ ಇಡುತ್ತಿದ್ದಂತೆಯೇ ಮೋದಿ ಮತ್ತು ಅಮಿತ್ ಶಾ ಯಾವುದೇ ಕಾರಣಕ್ಕೂ ಪ್ರತಿಪಕ್ಷಗಳಿಗೆ ಅಧಿಕಾರ ಸಿಗಬಾರದು ಎಂದು ನಿರ್ಧರಿಸಿ ಈ ರಾತ್ರೋರಾತ್ರಿಯ ಆಪರೇಷನ್ ಅನ್ನು ಮಾಡಿ ಮುಗಿಸಿದರು.
6. ಎಂಎಚ್ ಡಿಸಿ ಹಗರಣದಲ್ಲಿ ಎನ್ ಸಿಪಿಯ ಅಜಿತ್ ಪವಾರ್ ವಿರುದ್ಧ ಇಡಿಯಲ್ಲಿ ತನಿಖೆಯನ್ನು ಕಳೆದ ಸೆಪ್ಟಂಬರ್ ನಲ್ಲಿ ಆರಂಭಿಸಲಾಗಿತ್ತು ಮತ್ತು ನೀರಾವರಿ ಹಗರಣದಲ್ಲಿ ಅವರ ವಿರುದ್ಧ ತನಿಖೆ ಆರಂಭಿಸುವ ಪ್ರಕ್ರಿಯೆ ಜಾರಿಯಲ್ಲಿತ್ತು. ಇದರಿಂದ ತಪ್ಪಿಸಿಕೊಳ್ಳಲು ಅಜಿತ್ ಪವಾರ್ ಅವರು ದೇವೇಂದ್ರ ಫಡ್ನಾವಿಸ್ ಗೆ ಬೆಂಬಲ ನೀಡಲು ಮುಂದಾದರು ಅಥವಾ ಅವರ ಮೇಲೆ ಇರುವ ಕೇಸ್ ಗಳನ್ನು ರದ್ದುಪಡಿಸುವ ಭರವಸೆಯನ್ನು ಕೇಂದ್ರ ಸರ್ಕಾರದ ಪ್ರತಿನಿಧಿಗಳು ನೀಡಿದ್ದಾರೆ. ಅಲ್ಲದೇ, ಅಜಿತ್ ಪವಾರ್ ಗೆ ಉಪಮುಖ್ಯಮಂತ್ರಿ ಸ್ಥಾನದ ಆಫರ್ ಅನ್ನೂ ನೀಡಲಾಯಿತು.
7. ಈ ಆಫರ್ ಸಿಕ್ಕಿದ್ದೇ ತಡ ಅಜಿತ್ ಪವಾರ್ ಒಂದು ತುಂಡು ಕಾಗದದಲ್ಲಿ ತನ್ನ ಶಾಸಕರ ಸಹಿಯನ್ನು ಮಾಡಿಸಿಕೊಂಡರು. ಆದರೆ, ದುರುದ್ದೇಶಪೂರ್ವಕವಾಗಿ ತಮ್ಮ ಸಹಿಯನ್ನು ಹಾಕಿಸಿಕೊಳ್ಳಲಾಗಿದೆ ಎಂದು ಕೆಲವು ಶಾಸಕರು ಆರೋಪಿಸಿದ್ದಾರೆ. ಅವರು ಹೇಳುವ ಪ್ರಕಾರ ದೇವೇಂದ್ರ ಫಡ್ನಾವಿಸ್ ಮುಖ್ಯಮಂತ್ರಿ ಆಗಲಿ ಎಂಬುದನ್ನು ಬೆಂಬಲಿಸಿ ಹಾಕಿದ ಸಹಿ ಅದಲ್ಲ, ನಾವು ಸಭೆಗೆ ಹಾಜರಿದ್ದ ಸಹಿ ಅದು ಎಂದು ಸ್ಪಷ್ಟನೆ ನೀಡಿದ್ದಾರೆ.
8. ಈ ಎಲ್ಲಾ ಬೆಳವಣಿಗೆಗಳು ಅರ್ಧರಾತ್ರಿಯಲ್ಲಿ ನಿರ್ವಿಜ್ಞವಾಗಿ ಆಗುತ್ತಿದ್ದಂತೆಯೇ ಅತ್ತ ರಾಷ್ಟ್ರಪತಿ ಭವನದಲ್ಲಿ ಎಚ್ಚರಗೊಂಡ ರಾಷ್ಟ್ರಪತಿ ಕೋವಿಂದ್ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯುವ ಕಡತಕ್ಕೆ ಬೆಳಗಿನ ಜಾವ 5.47 ಕ್ಕೆ ಸಹಿ ಹಾಕಿದರು. ಆದರೆ, ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಸಂಪುಟದ ಶಿಫಾರಸಿನ ಆಧಾರದಲ್ಲಿ ಈ ಕ್ರಮವನ್ನು ಕೈಗೊಳ್ಳಬೇಕು. ಅಷ್ಟಕ್ಕೂ ಆ ಸಂದರ್ಭದಲ್ಲಿ ಯಾವುದೇ ಸಂಪುಟ ಸಭೆ ನಡೆದಿದ್ದಾಗಲೀ ಅಥವಾ ಶಿಫಾರಸು ಮಾಡಿದ್ದಾಗಲೀ ವರದಿಯಾದಂತೆ ಕಂಡುಬರುತ್ತಿಲ್ಲ.
9. ಈ ಪ್ರಶ್ನಾರ್ಥಕವಾದ ದಾಖಲೆ ಆಧಾರದಲ್ಲಿಯೇ ರಾಜ್ಯಪಾಲ ಕೊಶಿಯಾರಿ ಅವರು ಫಡ್ನಾವಿಸ್ ಗೆ ಬೆಳಗ್ಗೆ 7.30 ಕ್ಕೆ ಮುಖ್ಯಮಂತ್ರಿ ಹುದ್ದೆಯ ಪ್ರಮಾಣ ವಚನ ಬೋಧಿಸಿದ್ದಾರೆ. ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಠಾಕ್ರೆ ನೇತೃತ್ವದ ಸರ್ಕಾರ ರಚನೆಗೆ ತಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದು ಘೋಷಣೆ ಮಾಡಿದ್ದನ್ನೂ ಕೊಶಿಯಾರಿ ಪರಿಗಣನೆಗೆ ತೆಗೆದುಕೊಳ್ಳಲೇ ಇಲ್ಲ.
10. ಇದೀಗ ಫಡ್ನಾವಿಸ್ ಮುಂದಿರುವ ಅಗ್ನಿ ಪರೀಕ್ಷೆಯೆಂದರೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದು. ಇದು ಅಜಿತ್ ಪವಾರ್ ಅವರು ಎನ್ ಸಿಪಿಯ ಎಷ್ಟು ಶಾಸಕರನ್ನು ಕರೆ ತರುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈಗಾಗಲೇ ಶರದ್ ಪವಾರ್ ಅವರು ತಮ್ಮ ಪಕ್ಷ ಫಡ್ನಾವಿಸ್ ಗೆ ಬೆಂಬಲ ನೀಡುತ್ತಿಲ್ಲ. ಅಜಿತ್ ಪವಾರ್ ಅವರ ವೈಯಕ್ತಿಕ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಹೊರತು ಅದು ಎನ್ ಸಿಪಿ ನಿರ್ಧಾರವಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ 56 ಸದಸ್ಯ ಬಲದ ಎನ್ ಸಿಪಿಯ ಮೂರನೇ ಎರಡು ಭಾಗದಷ್ಟು ಅಂದರೆ 38 ಶಾಸಕರನ್ನು ಅಜಿತ್ ಪವಾರ್ ತಮ್ಮ ಬುಟ್ಟಿಗೆ ಹಾಕಿಕೊಂಡರೆ ಅದಕ್ಕೆ ಮಾನ್ಯತೆ ದೊರೆಯುತ್ತದೆ. ಇಲ್ಲವಾದಲ್ಲಿ ಅಜಿತ್ ಪವಾರ್ ಜತೆ ಹೋಗುವ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯ ಉರುಳಲ್ಲಿ ಸಿಲುಕಿಕೊಳ್ಳುತ್ತಾರೆ. ಆದರೆ, ಕಾನೂನಿನಲ್ಲಿ ಮತ್ತು ಅನುಷ್ಠಾನದಲ್ಲಿ ಹಲವಾರು ಬಗೆಯ ಒಳದಾರಿಗಳೂ ಇವೆ. ಏಕೆಂದರೆ ಪಕ್ಷಾಂತರ ನಿಷೇಧ ಕಾಯ್ದೆ ವಿಚಾರಕ್ಕೆ ಬಂದಾಗ ಆಡಳಿತ ಪಕ್ಷದವರೇ ಆದ ಸ್ಪೀಕರ್ ಗಳು ಎಷ್ಟೋ ಸಂದರ್ಭದಲ್ಲಿ ತಮ್ಮ ಪಕ್ಷಕ್ಕೆ ಹಿತವಾಗುವ ನಿರ್ಧಾರಗಳನ್ನೂ ಕೈಗೊಂಡಿರುವ ನಿದರ್ಶನಗಳು ಸಾಕಷ್ಟಿವೆ.
ಲೇಖಕರು: ಸಿದ್ಧಾರ್ಥ ವರದರಾಜನ್, ಸಂಸ್ಥಾಪಕ ಸಂಪಾದಕರು, ದಿ ವೈರ್.
ಈ ಸುದ್ದಿಯ ಇಂಗ್ಲೀಷ್ ಅವತರಣಿಕೆಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:-
https://thewire.in/politics/maharashtra-amit-shah-narendra-modi-democracy