ಮಹದಾಯಿ ಯೋಜನೆಯ ಒಪ್ಪಿತ ಪರಿಷ್ಕ್ರತ ವಿಸ್ತೃತ ಯೋಜನಾ ವರದಿಯ ಮೇಲೆ ಸ್ಟೇ ತರಲು ಗೋವಾ ಸರ್ಕಾರ ಸುಪ್ರೀಂಕೋರ್ಟ್ ಗೆ ಹೋಗಲಿದ್ದಾರೆ. ಇದರ ಜತೆಗೆ, ನಮ್ಮ ರಾಜ್ಯ ಸರ್ಕಾರಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಲವು ಸ್ಪಷ್ಟನೆ ಕೇಳಿದೆ ಎಂಬ ವರದಿಗಳು ಮಾಧ್ಯಮದಲ್ಲಿ ಪ್ರಕಟವಾಗಿವೆ. ಒಟ್ಟಿನಲ್ಲಿ ಮಹತ್ವಾಕಾಂಕ್ಷಿ ಯೋಜನೆಗೆ ಮತ್ತೆ ಕೊಕ್ಕೆ ಹಾಕಲಾಗುತ್ತಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಗೋವಾದಲ್ಲೂ ಬಿಜೆಪಿ ಸರ್ಕಾರ. ಇವರೆಲ್ಲರಿಗೂ ಒಂದೇ ಹೈಕಮಾಂಡ್. ಹಾಗಿದ್ದೂ ಕೂಡ, ಈ ಯೋಜನೆಯನ್ನು ಅನಗತ್ಯ ವಿವಾದಕ್ಕೀಡು ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಬದುಕು ಹಸನಾಗಿಸುವ ಇಂತಹ ಯೋಜನೆ, ರಾಜ್ಯ ಬಿಜೆಪಿ ಸರ್ಕಾರದ ಪಾಲಿಗೆ ಬರೀ ರಾಜಕಾರಣದ ಟ್ರಂಪ್ ಕಾರ್ಡ್. ಅವರಿಗೆ ಎಂತಹ ಬದ್ಧತೆಯೂ ಇಲ್ಲ.
ಚುನಾವಣೆ ಹತ್ತಿರ ಬಂದಾಗ ಮಾತ್ರ ಈ ಟ್ರಂಪ್ ಕಾರ್ಡ್ ಬಳಸುವ, ತಮ್ಮ ಲಾಭಕ್ಕೆ ತಕ್ಕಂತೆ ವಿಷಯದ ದುರುಪಯೋಗ ಪಡಿಸಿಕೊಳ್ಳುವ ವರ್ತನೆ ಜನದ್ರೋಹಿಯಾದದ್ದು. ಓಟಿಗಾಗಿ ಏನೂ ಮಾಡಲು ಹೇಸದ ಕೊಳಕು ರಾಜಕಾರಣವಿದು. ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಸುಮ್ಮನೆ ಕಾಲಹರಣ ಮಾಡುವ ಇಂತಹ ಹೈಕಮಾಂಡ್ ಗುಲಾಮಿ ಸರ್ಕಾರ ಕಿತ್ತೊಗೆಯಲೇಬೇಕು.
ಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸ ತಪ್ಪಿದ್ದಲ್ಲ ಅನ್ನುವ ಹಾಗೆ, ಉತ್ತರ ಕರ್ನಾಟಕದ ಜನರ ಬವಣೆಗೆ ಕೊನೆ ಇಲ್ಲದಂತಾಗಿದೆ. ಇಂತಹ ಹೀನ ರಾಜಕಾರಣದಿಂದಾಗಿ ಗೋವಾದಲ್ಲಿ ವಾಸಿಸುವ ಕನ್ನಡಿಗರಿಗೂ ಮಾನಸಿಕ ಹಿಂಸೆ ಅನುಭವಿಸುವ ಸ್ಥಿತಿ ಉಲ್ಬಣವಾಗುತ್ತಿದೆ. ಈ ರೀತಿಯ ಅನಗತ್ಯ ಕಿರುಕುಳಗಳ ಬಗ್ಗೆ ಮಾಧ್ಯಮಗಳು ಈಗಾಗಲೇ ವರದಿ ಮಾಡಿವೆ.
ಇತ್ತ ಯೋಜನೆಗೆ ಹಾತೊರೆಯುತ್ತಿರುವ ಕನ್ನಡಿಗರ ಬಾಯಿಗೆ ಮಣ್ಣುಹಾಕುವ ಬಿಜೆಪಿಯವರೆ, ನಿಮ್ಮದು ಕಲ್ಲು ಮನಸ್ಸು. ಒಟ್ಟಿನಲ್ಲಿ ಕನ್ನಡಿಗರು ನಿಮ್ಮ ರಾಜಕೀಯ ಬೇಗೆಯಲ್ಲಿ ಬೆಂದು ಹೋಗಬೇಕು, ನೀವು ಅದರಲ್ಲಿ ಚಳಿ ಕಾಯಿಸಿಕೊಂಡು ಲಾಭ ಮಾಡಿಕೊಳ್ಳಬೇಕು. ಇಷ್ಟೇ ತಾನೆ ನಿಮ್ಮ ಉದ್ದೇಶ? ಜನರ ಬದುಕು ಹದಗೆಡಿಸುವ ನಿಮಗೆ ಎಷ್ಟು ಉಗಿದರೂ ಕಮ್ಮಿ.