ದಶಕದಿಂದ ಈಚೆಗೆ ಮಲೆನಾಡಿನಲ್ಲಿ ಆಹಾರ ಬೆಳೆಗಳ ಕೃಷಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಭತ್ತದ ಗದ್ದೆಗಳೆಲ್ಲಾ ಮಾಯವಾಗಿ, ಶುಂಠಿ, ಅಡಕೆ, ರಬ್ಬರ್ ಆವರಿಸಿಕೊಂಡಿದೆ. ಈ ಬಿಕ್ಕಟ್ಟು ಎಷ್ಟರಮಟ್ಟಿಗೆ ಸೃಷ್ಟಿಯಾಗಿದೆ ಎಂದರೆ ಭೂಮಿ ಹುಣ್ಣಿಮೆ ಹಬ್ಬಕ್ಕೂ ಗದ್ದೆಗಳಿಲ್ಲದೇ ತೋಟಗಳಲ್ಲಿ ಆಚರಿಸುವ ಪರಿಸ್ಥಿತಿಗೆ ರೈತರು ಬಂದಿದ್ದಾರೆ.
ಮಲೆನಾಡಿನಲ್ಲಿ ಭತ್ತ ಲಾಭದಾಯಕ ಬೆಳೆಯಲ್ಲದೇ ಇರುವುದಕ್ಕೆ ಸಾಕಷ್ಟು ಕಾರಣಗಳಿವೆ, ಇಳುವರಿ ಕಡಿಮೆ, ಕೂಲಿ ಕಾರ್ಮಿಕರ ಅಭಾವ, ರೋಗಬಾಧೆ ಹಾಗೂ ನೆರೆಹಾವಳಿ, ಬಹಳ ಮುಖ್ಯವಾಗಿ ಬೆಂಕಿರೋಗ, ಕಂದುಜಿಗಿ, ಸೈನಿಕ ಹುಳುಬಾಧೆ ಭತ್ತದ ಬೆಳೆಯನ್ನ ನಾಶ ಮಾಡಿದೆ. ಈ ಪ್ರತಿಕೂಲ ಸಂದರ್ಭದಲ್ಲಿ ಅಜ್ಜಂದಿರ ಕಾಲದ ರೋಗ ನಿರೋಧಕ ಭತ್ತದ ತಳಿಗಳ ಅನಿವಾರ್ಯ ಮಲೆನಾಡಲ್ಲಿ ಸೃಷ್ಟಿಯಾಗುತ್ತಿದೆ.
ಮಲೆನಾಡು ಹಾಗೂ ಸುತ್ತಲಿನಲ್ಲಿ ನಶಿಸಿಹೋಗುತ್ತಿರುವ ಸಾಂಪ್ರದಾಯಿಕ ಬೆಳೆಗಳನ್ನು ಸಂವರ್ಧನೆ ಮಾಡಲು ಶಿವಮೊಗ್ಗದ ನವುಲೆಯಲ್ಲಿರುವ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಪಣತೊಟ್ಟಿದೆ. ಇಲ್ಲಿನ ಯುವ ಸಂಶೋಧಕ ಉಲ್ಲಾಸ್ ಎಂವೈ ವಿಶ್ವವಿದ್ಯಾಲಯದ ಕೃಷಿ ಭೂಮಿಯಲ್ಲಿ ಸುಮಾರು 250 ಭತ್ತದ ತಳಿಗಳನ್ನ ಪ್ರಾಯೋಗಿಕವಾಗಿ ಬೆಳೆದಿದ್ದಾರೆ. ಇದರಲ್ಲಿ ಬಹಳ ಮುಖ್ಯವಾಗಿ ಮಲೆನಾಡಿನ ಸಾಂಪ್ರದಾಯಿಕ ತಳಿಗಳನ್ನ ಕಾಣಬಹುದು.
ದೇಶದಲ್ಲಿ ಅರವತ್ತರ ದಶಕದಲ್ಲಿ ಆರಂಭವಾದ ಹಸಿರು ಕ್ರಾಂತಿ ಸಾಂಪ್ರದಾಯಿಕ ತಳಿಗಳನ್ನೆಲ್ಲಾ ಆವರಿಸಿಕೊಂಡು ಅವಸಾನ ಹಂತಕ್ಕೆ ತಂದಿತ್ತು, ವಿಶೇಷ ತಳಿಗಳನ್ನ ಯೋಗ್ಯ ಪ್ರದೇಶದಲ್ಲಿ ಬೆಳೆಯಲು ಉತ್ತೇಜನ ನೀಡಿ, ಅಲ್ಲಿಗೆ ಸಾರಿಗೆ ಸಂವಹನದ ಮೂಲಕ ಮಾರುಕಟ್ಟೆಗೆ ಸಾಗಿಸುವ ಭರದಲ್ಲಿ ಸ್ವಾವಲಂಬಿಯಾಗಿದ್ದ ರೈತರು ಕೂಡ ಕಾಲಕ್ರಮೇಣ ಭತ್ತಕ್ಕೆ ಪರಾವಲಂಬಿಯಾದರು.
ಎಂಟು ದಶಕಗಳ ಹಿಂದೆ ಅದೊಂದು ಕ್ರಾಂತಿಯಾಗಿ ಹೊರಹೊಮ್ಮಿದರೂ ವರ್ಷಗಳು ಉರುಳಿದಂತೆ ದೇಸಿ ತಳಿಗಳು ಮಾಯವಾದವು. ಮಲೆನಾಡನ್ನೇ ಗಣನೆಗೆ ತೆಗೆದುಕೊಂಡರೆ ಬುಡ್ಡಭತ್ತ, ಏಡಿಕುಣಿ, ಮದ್ರಾಸ್ ಸಣ್ಣ, ಕರಿಜಡ್ಡು, ಬಿಳಿ ಜಡ್ಡು ಹೀಗೆ ಹಲವಾರು ತಳಿಗಳು ಇಲ್ಲಿನ ಹವಾಗುಣಕ್ಕನುಗುಣವಾಗಿ ವರ್ಷದಿಂದ ವರ್ಷಕ್ಕೆ ಅವುಗಳೇ ತಳಿಯಲ್ಲಿ ಮಾರ್ಪಾಡು ಮಾಡಿಕೊಂಡು ರೈತರಿಗೆ ವರದಾನವಾಗಿದ್ದವು, ಆದರೆ ಈಗ ಈ ತಳಿಗಳು ಮಾಯವಾಗಿವೆ. ವೈಜ್ಞಾನಿಕ ಆವಿಷ್ಕಾರದಿಂದ ವಿಶೇಷ ತಳಿಗಳ ಅನಾವರಣ ರೈತರನ್ನ ಈಗ ಆತಂಕಕ್ಕೀಡು ಮಾಡಿವೆ.
ಸುಮಾರು 250 ತಳಿಗಳನ್ನ ಸಂವರ್ಧನೆ ಮಾಡಿಟ್ಟಿರುವ ಸಂಶೋಧಕ ಡಾ. ಉಲ್ಲಾಸ್ ಎಂವೈ ಪ್ರಕಾರ, ದೇಸಿ ಭತ್ತಗಳೇ ಮಲೆನಾಡಿಗೆ ಸೂಕ್ತ. ಹಾಗೂ ರಾಜ್ಯದೆಲ್ಲಡೆಗೆ ಹೋಲಿಸಿದರೆ ಮಲೆನಾಡಿನ ಕೃಷಿಯಲ್ಲೇ ಸಾವಯವ ಪದ್ಧತಿ ಅಡಕವಾಗಿದೆ. ಮಳೆ, ಜವುಗು, ಕ್ಷಾರ, ಬರ ಹೀಗೆ ಭೂ ವೈವಿಧ್ಯಕ್ಕೆ ತಕ್ಕಂತೆ ಮಲೆನಾಡಿನ ತಳಿಗಳು ರೈತರಿಗೆ ವರದಾನವಾಗಿದ್ದವು.
ಆದರೆ ಇವುಗಳ ಇಳುವರಿ ಕಡಿಮೆ ಎಂಬ ಕಾರಣಕ್ಕೆ ಸಂಶೋಧನಾ ತಳಿಗಳಿಗೆ ದುಂಬಾಲು ಬಿದ್ದು ಈಗ ಮಲೆನಾಡಿನಲ್ಲಿ ಭತ್ತವೇ ಅಳಿವಿನಂಚಿನಲ್ಲಿದೆ. ಉದಾಹರಣೆಗೆ ಸೊರಬ ತಾಲೂಕಿನ ವರದಾ ನದಿ ಅಚ್ಚುಕಟ್ಟಿನಲ್ಲಿ ಪ್ರತೀ ಮಳೆಗಾಲದಲ್ಲಿ ನೀರು ಗದ್ದೆಗಳನ್ನ ಆವರಿಸಿಕೊಳ್ಳುತ್ತೆ, ಅಲ್ಲಿ ಏಡಿಕುಣಿಯಂತಹ ಸಾಂಪ್ರದಾಯಿಕ ಭತ್ತವನ್ನ ಹಿಂದೆ ಬೆಳೆಯುತ್ತಿದ್ದರು, ಆಶ್ಚರ್ಯ ಎಂದರೆ ಈಗ ಅಲ್ಲಿ ಈ ತಳಿ ಮಾಯವಾಗುತ್ತಾ ಬಂದಿದೆ, ಜೊತೆಗೆ ಭತ್ತದ ಗದ್ದೆಗಳೂ ಕೂಡ ಅಡಕೆ ತೋಟಗಳಾಗಿ ಮಾರ್ಪಟ್ಟಿವೆ.
ಮಧ್ಯ ಕರ್ನಾಟಕ ಭತ್ತದ ಕಣಜವಾದರೂ ಅಲ್ಲಿನ ಹವಾಗುಣ ಮಲೆನಾಡಿಗೆ ಹೋಲಿಕೆಯಾಗದು, ಅಂತಹ ನೀರಾವರಿ ಪ್ರದೇಶದಲ್ಲಿ ಸಂಶೋಧನಾ ತಳಿಗಳಿಂದ ಉತ್ತಮ ಇಳುವರಿ ಪಡೆಯಬಹುದು, ಆದರೆ ಮಲೆನಾಡಿನಲ್ಲಿ ಅಸಾಧ್ಯ ಈ ಕಾರಣದಿಂದಲೇ ಹಸಿರು ಕ್ರಾಂತಿ ಪರಿಣಾಮಕಾರಿಯಾಗಿದ್ದು ಪಂಚನದಿಗಳ ಬೀಡು ಪಂಜಾಬ್‌ನಲ್ಲಿ ಮಾತ್ರ.
ಅದರಲ್ಲೂ ಎರಡು ವರ್ಷಗಳ ಈಚೆಗೆ ಮಲೆನಾಡಿನಲ್ಲಿ ಮಳೆ ಬೀಳುವಿಕೆಯಲ್ಲಿ ಭಾರೀ ವ್ಯತ್ಯಾಸಗಳಾಗಿದ್ದು ತಲೆಮಾರಿನ ಹಿಂದೆ ಕಂಡುಬರುತ್ತಿದ್ದ ಅನಿರ್ಧಿಷ್ಟಾವಧಿ ಮಳೆ ಮರುಕಳಿಸಿದೆ. ಆಶ್ಲೇಷ ಮಳೆಗಿದ್ದ ಗಾದೆಗಳು ಈಗ ಪುನಃ ಕೇಳಿ ಬರುತ್ತಿವೆ. ಇಂತಹ ಬದಲಾವಣೆಯಲ್ಲಿ ಪುನಃ ದೇಸಿ ತಳಿಗಳ ಅನಿವಾರ್ಯ ಎದುರಾಗಿದೆ.
ವಿಶ್ವವಿದ್ಯಾಲಯದಲ್ಲಿ 120 ದಿನಗಳಿಂದ 180 ದಿನಗಳವರೆಗೆ ಬೆಳೆಯಬಲ್ಲ ತಳಿಗಳಿವೆ, ಮಂಡಕ್ಕಿಗೆಂದೇ ಬಳಸುವ ಬ್ಲಾಕ್ ರೈಸ್, ಬರ್ಮಾ ಬ್ಲಾಕ್, ಕಾಲಭಾತಿ, ಕರಿಭತ್ತ, ಚಕಾವೋ, ಆನೆಕೊಂಬು. ಸುಗಂಧ ಬೀರುವ ದೇಸಿ ತಳಿಗಳಾದ ರಾಜಮುಡಿ, ಗಂಧಸಾಲೆ, ಜೀರಿಗೆ ಸಣ್ಣ, ಚಿನ್ನಪೊನ್ನಿ ವಿಶೇಷವಾಗಿ ಮೈಸೂರಿನ ರೈತ ಲಿಂಗಮಾದಯ್ಯ ಸಂಶೋಧಿಸಿದ ಮೈಸೂರು ಮಲ್ಲಿಗೆ ಭತ್ತದ ತಳಿಯೂ ಸೇರಿಕೊಂಡಿವೆ.
ಈ ಬೆಳೆಗಳನ್ನ ರೈತರು ಈಗಲೂ ಬೆಳೆದರೆ ಸ್ವಾವಲಂಬನೆ ಸಾಧಿಸಿಕೊಳ್ಳಬಹುದು ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಬಹುದು. ಧಾರವಾಡ ಹಾಗೂ ದಾವಣಗೆರೆಯಲ್ಲಿ ಪ್ರತೀ ಶನಿವಾರ ಮಧ್ಯಾಹ್ನ ರೈತರ ಸಂತೆಯಲ್ಲಿ ವಿವಿಧ ಭತ್ತದ ತಳಿಗಳನ್ನ ಮಾರಲಾಗುತ್ತೆ, ಆದರೆ ಈ ಸಂತೆಗಳು ಬೇರೆಡೆ ಇಲ್ಲ. ಮಲೆನಾಡಲ್ಲೂ ಈ ಪದ್ಧತಿ ಬಂದು ಸಾಂಪ್ರದಾಯಿಕ ತಳಿಗಳನ್ನ ಬೆಳೆದರೆ ಮುಂದಿನ ದಿನಗಳಲ್ಲಿ ಸ್ವಾವಲಂಬನೆ ಸಾಧ್ಯ ಎಂಬುದು ಉಲ್ಲಾಸ್ ಅವರ ಅಭಿಪ್ರಾಯ.