ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಆಗಿದ್ದಾಗಲೆಲ್ಲ ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಯಡಿಯೂರಪ್ಪ ರೈತರಿಗಾಗಿಯೇ ವಿಶೇಷವಾಗಿ ಬಬೆಟ್ ಮಂಡಿಸಿ ದಾಖಲೆ ಮಾಡಿದ್ದವರು. ಈಗಲೂ ಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿ. ಆದರೆ, ಈ ಬಾರಿ ರೈತರಿಗಾಗಿಯೇ ವಿಶೇಷವಾಗಿ ಬಜೆಟ್ ಮಂಡಿಸುವ ಇರಾದೆ ಯಡಿಯೂರಪ್ಪ ಅವರಿಗೆ ಇದ್ದಂತಿಲ್ಲ. ಆದರೆ, ನಾಡಿನ ರೈತರು ಯಡಿಯೂರಪ್ಪ ಅವರಿಂದ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಿಸಿದ ವೇಳೆಗೆ ರಾಜ್ಯವ್ಯಾಪಿ ಸುರಿದ ಮಳೆ ಮತ್ತು ಉಕ್ಕಿಹರಿದ ಪ್ರವಾಹದಿಂದಾಗಿ ರೈತರ ಬದುಕು ಮುರಾಬಟ್ಟೆಯಾಗಿದೆ. ಆ ಹೊತ್ತಿಗೆ ರೈತ ನಾಯಕನೊಬ್ಬ ಎಷ್ಟು ಪರಿಣಾಮಕಾರಿಯಾಗಿ ಸಮರೋಪಾದಿಯಲ್ಲಿ ಪರಿಹಾರ ಒದಗಿಸಬೇಕಿತ್ತೋ ಅಷ್ಟು ಪರಿಣಾಮಕಾರಿಯಾಗಿ ಪರಿಹಾರ ಕಾರ್ಯನಡೆಯಲಿಲ್ಲ. ಅದು ಆಡಳಿತಾತ್ಮಕ ಲೋಪವೂ ಹೌದು. ರಾಜಕೀಯ ಲೋಪವೂ ಹೌದು.
ಬಜೆಟ್ ಮಂಡಿಸುವ ವೇಳೆ ಯಡಿಯೂರಪ್ಪ ಪ್ರವಾಹದ ವೇಳೆಯಲ್ಲಾದ ಲೋಪವನ್ನು ಸರಿಪಡಿಸಿಕೊಳ್ಳುವ ಮುಕ್ತ ಅವಕಾಶ ಹೊಂದಿದ್ದಾರೆ. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಜತೆಗೆ ಕೃಷಿ, ಕೃಷಿಯಾಧಾರಿತ ಕೈಗಾರಿಕೆಗಳು, ಕೃಷಿಯಾಧಾರಿತ ವ್ಯಾಪಾರೋದ್ಯಮಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸಬೇಕಿದೆ. ಈ ಅನುದಾನವು ತಾತ್ಕಾಲಿಕ ಸ್ವರೂಪದ ಪರಿಹಾರವಾಗದೇ ಕೃಷಿ ಅವಲಂಬಿತರ ಸುಸ್ಥಿರ ಅಭಿವೃದ್ಧಿ ಮತ್ತು ದೀರ್ಘಕಾಲೀನ ಲಾಭದಾಯಕವಾಗುವ ರೀತಿಯಲ್ಲಿರಬೇಕು.
ಪ್ರತಿ ಬಾರಿ ಬಜೆಟ್ ಮಂಡನೆ ಮಾಡುವಾಗಲೂ ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರವೇ ಇರಲಿ, ಕೃಷಿಯನ್ನು ಪ್ರಧಾನವಾಗಿ ಪ್ರಸ್ತಾಪಿಸಿ ಯೋಜನೆಗಳನ್ನು ಘೋಷಿಸುತ್ತವೆ. ಅದರ ಮೂಲ ಉದ್ದೇಶ ನಿಜಕ್ಕೂ ರೈತರ ಶ್ರೇಯೋಭಿವೃದ್ಧಿಯಾಗಿರುತ್ತದೆಯೇ ಎಂಬ ಪ್ರಶ್ನೆಗೆ ಖಚಿತ ಉತ್ತರ ದಕ್ಕುವುದಿಲ್ಲ. ಏಕೆಂದರೆ ವೃತ್ತಿಯಾಧಾರಿತ ಮತ ಬೇಟೆಗೆ ಇಳಿಯುವ ಪ್ರತಿಯೊಂದು ಪಕ್ಷಕ್ಕೂ ರೈತರೇ ಅಚ್ಚುಮೆಚ್ಚು. ರೈತರಿಂದ “ಮತಲಾಭ” ದಕ್ಕಿದರೆ ಅಧಿಕಾರ ಗ್ಯಾರಂಟಿ ಎಂಬನಂಬಿಕೆ ಇದೆ. ರಾಜಕೀಯ ಉದ್ದೇಶಕ್ಕಾಗಿಯೇ ಬಜೆಟ್ ನಲ್ಲಿ ರೈತಗೀತೆ ಹಾಡುವುದರಿಂದ ಆ ಸಮುದಾಯದ ಉದ್ದಾರ ಖಂಡಿತಾ ಸಾಧ್ಯವಿಲ್ಲ ಎಂಬುದು ರೈತರ ಈಗಿನ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತದೆ.
ಪ್ರಸ್ತುತ ಯಡಿಯೂರಪ್ಪ ಅವರ ಬಜೆಟ್ “ರೈತರ ಬಜೆಟ್” ಆಗಬೇಕಾಗದ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇದೆ. ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಘೋಷಿಸಿದ್ದ ಯಡಿಯೂರಪ್ಪ ಅವರಿಗೆ ನಾಡಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ರೈತರಿಗಾಗಿ ಹೆಚ್ಚಿನ ಅನುದಾನ ಒದಗಿಸುವುದು ಸಾಮಾಜಿಕ ಮತ್ತು ನೈಸರ್ಗಿಕ ನ್ಯಾಯಾ ಕೂಡ. ಆದರೆ, ಮೂಲಭೂತ ಸಮಸ್ಯೆ ಏನೆಂದರೆ ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಪಕ್ಷವಾದ ಬಿಜೆಪಿಗೆ ರೈತರ ಮೇಲೆ ಬದ್ಧತೆ ಇಲ್ಲ. ಕಾಲಕಾಲಕ್ಕೆ, ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ “ಮತಲಾಭ”ಕ್ಕಾಗಿ ಲೆಕ್ಕಾಚಾರ ಬದಲಾಯಿಸುವ ಬಿಜೆಪಿ ವರಿಷ್ಠರು ರೈತಪರವಾದ ಬಜೆಟ್ ಮಂಡನೆಗೆ ಯಡಿಯೂರಪ್ಪ ಅವರಿಗೆ ಮುಕ್ತ ಅವಕಾಶ ನೀಡುತ್ತಾರೆಯೇ ಎಂಬುದು ಐದು ಟ್ರಿಲಿಯನ್ ಡಾಲರ್ ಪ್ರಶ್ನೆ!
ಕೃಷಿ, ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಮತ್ತು ಮೀನುಗಾರಿಕೆ ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳು. ಈ ವಲಯಗಳಿಗೆ ಹೆಚ್ಚಿನ ಚೈತನ್ಯ ತುಂಬುವುದು ಈ ಹೊತ್ತಿನ ತುರ್ತು ಅಗತ್ಯ. ಅದು ರೈತರ ಸಮುದಾಯದ ಉದ್ಧಾರಕ್ಕಷ್ಟೇ ಅಲ್ಲದೇ ಕುಸಿದು ಬಿದ್ದಿರುವ ಆರ್ಥಿಕತೆಗೆ ಚೇತರಿಕೆ ನೀಡಲಿಕ್ಕೂ ಇದು ಅತ್ಯಗತ್ಯ. ಇಡೀ ಆರ್ಥಿಕತೆಗೆ ಚೇತರಿಕೆ ತುಂಬುವುದು ಉಪಭೋಗ. ಸದ್ಯಕ್ಕೆ ಗ್ರಾಮೀಣ ಪ್ರದೇಶದ ಅದರಲ್ಲೂ ಕೃಷಿಕರು ಮತ್ತು ಕೃಷಿಕಾರ್ಮಿಕರು ಮಾಡುವ ಉಪಭೋಗದ ಮೇಲಿನ ವೆಚ್ಚವು ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸುವುದು ಮತ್ತು ಕೃಷಿ ಹೆಚ್ಚು ಲಾಭದಾಯಕವನ್ನಾಗಿ ಮಾಡುವುದರ ಮೂಲಕ ಆರ್ಥಿಕತೆಗೆ ಚೇತರಿಕೆ ಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಉಪಭೋಗ ಹೆಚ್ಚಾದಾಗಲೇ ಹಂತಹಂತವಾಗಿ ಅದು ಪಟ್ಟಣ ನಗರ ಪ್ರದೇಶಗಲ್ಲೂ ಚೇತರಿಕೆಗೆ ಕಾರಣವಾಗುತ್ತದೆ.
ಆ ಕಾರಣಕ್ಕಾಗಿ ಕೃಷಿ ವಲಯದ ಸುಸ್ಥಿರ ಅಭಿವೃದ್ಧಿಗೆ ಯಡಿಯೂರಪ್ಪ ಅವರಿಂದ ಹಲವು ಯೋಜನೆಗಳನ್ನು ನಿರೀಕ್ಷಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರ ಆದಾಯ ಹೆಚ್ಚಿಸುವ ಮತ್ತು ಅವರ ಜೀವನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಧೀರ್ಘಕಾಲೀನ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಅದನ್ನು ಯಡಿಯೂರಪ್ಪ ಮಾಡುತ್ತಾರೆಂದು ಅಂದುಕೊಳ್ಳಬಹುದು.
ರಾಜ್ಯದ ಮುಂದಿರುವ ಅತಿದೊಡ್ಡ ಸವಾಲು ಶೈಕ್ಷಣಿಕ ವಲಯದ ಮೂಲಭೂತ ಸೌಲಭ್ಯಗಳನ್ನು ಮಟ್ಟ ಕುಸಿಯುತ್ತಿರುವುದು. ಆ ಕಾರಣಕ್ಕಾಗಿಯೇ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಸರ್ಕಾರಿ ಶಿಕ್ಷಕರಿಗೆ ಹೆಚ್ಚಿನ ವೇತನ ನೀಡುವ ಸರ್ಕಾರವು, ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಶಿಕ್ಷಣಕ್ಕೆ ನೀಡುವ ಬಹುತೇಕ ಅನುದಾನವು ವೇತನಕ್ಕೆ ಹೋಗುತ್ತದೆ. ಮೂಲಭೂತ ಸೌಲಭ್ಯಗಳಿಗೆ ಪ್ರತ್ಯೇಕ ಅನುದಾನ ಒದಗಿಸುವುದು ಮತ್ತು ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣಕೇಂದ್ರಗಳಾಗಿ ರೂಪುಗೊಳ್ಳುವಂತೆ ನೋಡಿಕೊಳ್ಳುವುದು ಅಗತ್ಯ. ಈಗಾಗಲೇ 2020ಕ್ಕೆ ಬಂದಿದ್ದೇವೆ. ಇನ್ನೂ ಎಷ್ಟು ವರ್ಷಗಳ ಕಾಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತಸೌಲಭ್ಯಗಳಿಲ್ಲ ಎಂದು ಹಪಹಪಿಸುವುದು? ಸೂಕ್ಷ್ಮ ಮನಸ್ಸಿನ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿರುವುದರಿಂದ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ, ಈ ಬಜೆಟ್ ನಲ್ಲಿ ಶೈಕ್ಷಣಿಕ ಮೂಲಭೂತ ಸೌಲಭ್ಯಗಳಿಗಾಗಿ ಹೆಚ್ಚಿನ ಅನುದಾನ ಪಡೆದಿರುತ್ತಾರೆಂದು ನಂಬೋಣ.
ಆರೋಗ್ಯ ಮತ್ತು ನೈರ್ಮಲ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮತ್ತೆರಡು ವಲಯಗಳು. ಸರ್ಕಾರಿ ವೈದ್ಯಕೀಯ ಸೇವೆಗಳು ಗುಣಮಟ್ಟ ಸುಧಾರಿಸದ ಹೊರತು ಒಂದು ಆರೋಗ್ಯವಂತ ಸಮುದಾಯ ಸೃಷ್ಟಿಯಾಗಲು ಸಾಧ್ಯವಿಲ್ಲ. ಎಷ್ಟು ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಭಾರಿ ಬಿಲ್ ಭರಿಸಲು ಸಾಧ್ಯ? ಸ್ವಚ್ಛ ಭಾರತ ಆಂದೋಲನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅದೆಷ್ಟೋ ಬಾರಿ ತಾವೇ ಖುದ್ದಾಗಿ ಕಸಪೊರಕೆ ಹಿಡಿಡು ಫೋಟೋ ತೆಗೆಸಿಕೊಂಡಿದ್ದಾರೆ. ಪೌರಕಾರ್ಮಿಕರ ಜತೆಗೆ ಕಸ ತೆಗೆದಿದ್ದಾರೆ. ಬೀಚಿನಲ್ಲಿ ಬಿದ್ದ ಪಾಲಿಥಿನ್ ಕವರ್ಗಳು ಮತ್ತಿತರ ಕಸಗಳನ್ನು ತೆಗೆದು ಸ್ವಚ್ಛ ಮಾಡಿದ್ದಾರೆ. ಆದರೆ, ನೈರ್ಮಲ್ಯ ಮಾತ್ರ ಮರೀಚಿಕೆ ಆಗಿಯೇ ಉಳಿದಿದೆ. ನೈರ್ಮಲ್ಯ ಕೊರತೆಯೇ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಪ್ರಸ್ತುತ ಬಜೆಟ್ ನಲ್ಲಿ ಯಡಿಯೂರಪ್ಪ ಆರೋಗ್ಯ ನೈರ್ಮಲ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಾರೆಂದು ಭಾವಿಸೋಣ.
ಸಹಕಾರ ವಲಯವನ್ನು ಸಮೃದ್ಧಿಗೊಳಿಸಲು, ಜಲಸಂಪನ್ಮೂಲವನ್ನು ಮತ್ತಷ್ಟು ಸಂಪದ್ಭರಿತ ಮಾಡಲು, ನಾಡಿನ ಕಾಡುಗಳನ್ನು ವಿಸ್ತರಿಸಲು, ಮಹಿಳೆಯರನ್ನು ಸಲಬಗೊಳಿಸಿ ಮಕ್ಕಳನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಲು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ವರ್ಗದ ವಸತಿಹೀನರಿಗೆ ವಸತಿ ಕಲ್ಪಿಸಲು, ಜಾರಿಯಲ್ಲಿರುವ ಅನ್ನಭಾಗ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು, ಸುಲಭದರದ ಇಂದಿರಾ ಕ್ಯಾಂಟೀನ್ ಗುಣಮಟ್ಟ ಹೆಚ್ಚಿಸಲು ಎಲ್ಲಕ್ಕೂ ಮಿಗಿಲಾಗಿ ಬೆಂಗಳೂರಿನಲ್ಲಿರುವ ಸಂಚಾರ ದಟ್ಟಣೆಯೆಂಬ ಶಾಪದಿಂದ ನಾಗರಿಕರಿನ್ನು ಮುಕ್ತಗೊಳಿಸಲು ಕಾರ್ಯಸಾಧ್ಯ ಯೋಜನೆಗಳನ್ನು ರೂಪಿಸುತ್ತಾರೆಂಬ ನಿರೀಕ್ಷೆಯೊಂದಿಗೆ ಯಡಿಯೂರಪ್ಪ ಅವರ ಬಜೆಟ್ ಗಾಗಿ