ಕೃಷಿ ಕಾಯ್ದೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಕಾಂಗ್ರೆಸ್ ರಾಜ್ಯಮಟ್ಟದ ರೈತರ ಸಮಾವೇಶ ʼರೈತಧ್ವನಿʼಯನ್ನು ಆಯೋಜಿಸಿತ್ತು. ರೈತರನ್ನು ಉದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಭಾಷಣದ ಪ್ರಮುಖ ಅಂಶಗಳು ಈ ಕೆಳಗಿನಂತಿದೆ.
“ನಾನು ರೈತ ಕುಟುಂಬದಲ್ಲೇ ಹುಟ್ಟಿದವನು. 1980 ರಿಂದ 83ರ ವರೆಗೆ ಮೈಸೂರು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಈ ನೆಲದ ರೈತರ ಬದುಕು-ಬವಣೆ, ಕಷ್ಟ-ಸುಖಗಳನ್ನು ಕಣ್ಣಾರೆ ಕಂಡಿದ್ದೇನೆ, ಅನುಭವಿಸಿದ್ದೇನೆ. ಹಾಗಾಗಿ ರೈತರ ಪರ ಸದಾ ನಿಲ್ಲುವ ಬದ್ಧತೆ ನನ್ನಲ್ಲಿದೆ.”
“ನಾನು ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲೇ ಮೊಟ್ಟ ಮೊದಲನೆ ಬಾರಿಗೆ ಕೃಷಿ ಬೆಲೆ ಆಯೋಗ ರಚನೆ ಮತ್ತು ಎಪಿಎಂಸಿ ಮಾರುಕಟ್ಟೆಗಳಲ್ಲಿ ಆನ್‌ಲೈನ್ ಪದ್ಧತಿ ಜಾರಿಗೊಳಿಸಿದೆ. ಕಬ್ಬು ಬೆಳೆಗಾರರು ನಷ್ಟಕ್ಕೀಡಾದಾಗ ಟನ್‌ಗೆ ತಲಾ ರೂ.300 ರಂತೆ ಸುಮಾರು ರೂ. 1,800 ಕೋಟಿ ಬೆಂಬಲ ಬೆಲೆ ನೀಡಿ ಖರೀದಿಸಿದ್ದು ನಮ್ಮ ಸರ್ಕಾರ.”
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಅಂದು ನಾವು ಕೃಷಿ ಉತ್ಪನ್ನ ಮಾರುಕಟ್ಟೆಗಳ ಆನ್‌ಲೈನ್ ಪದ್ಧತಿಯನ್ನು ಜಾರಿಗೊಳಿಸಿದಾಗ ಅದನ್ನು ಹೊಗಳಿ, ದೇಶದ ಇತರೆ ರಾಜ್ಯಗಳಿಗೂ ಅಳವಡಿಕೆ ಮಾಡುವಂತೆ ತನ್ನ ಬಜೆಟ್‌ನಲ್ಲೇ ಸಲಹೆ ನೀಡಿದ್ದ ಕೇಂದ್ರದ ಬಿಜೆಪಿ ಸರ್ಕಾರವೇ ಇಂದು ಎಪಿಎಂಸಿ ಗಳ ಬಾಗಿಲು ಮುಚ್ಚಲು ಹೊರಟಿರುವುದು ವಿಪರ್ಯಾಸವಲ್ಲವೇ?”
“ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಆದರೆ ರೈತರಿಂದ ಭೂಮಿಯನ್ನು ಕಸಿದು ಯಾರಿಗೆ ಕೊಡಲು ಹೊರಟಿದ್ದೀರಿ ಎಂಬುದನ್ನೂ ಜನರಿಗೆ ಹೇಳಬೇಕಲ್ಲವೇ ಸಿಎಂ ಬಿಎಸ್‌ವೈ ಅವರೇ?”
“ಭೂ ಸುಧಾರಣಾ ಕಾಯಿದೆಯ ಉಲ್ಲಂಘನೆ ಮಾಡಿ ಕೃಷಿ ಭೂಮಿ ಖರೀದಿಸಿರುವ 1814 ಪ್ರಕರಣಗಳು ನ್ಯಾಯಾಲಯದಲ್ಲಿವೆ, ಒಟ್ಟು ಭೂಮಿಯ ಮೌಲ್ಯ ಸುಮಾರು ರೂ. 50,000 ಕೋಟಿ ಆಗಲಿದೆ. ಕಾಯ್ದೆ ತಿದ್ದುಪಡಿಯಿಂದ ಈ ಎಲ್ಲಾ ಪ್ರಕರಣಗಳು ರದ್ದಾಗುತ್ತದೆ. ಈ ಹಗರಣದಲ್ಲಿ ನಿಮ್ಮ ಪಾಲೆಷ್ಟು ಮಿಸ್ಟರ್ ಸಿಎಂ ಬಿಎಸ್‌ವೈ ಅವರೇ?”
“ಧ್ವನಿ ಮತದ ಮೂಲಕ ಸಂಸತ್ತಿನಲ್ಲಿ ಮಸೂದೆ ಪಾಸಾದರೂ, ಅದನ್ನು ಜನರ ಧ್ವನಿ ಎದುರು ಗೆಲ್ಲಲು ಬಿಡಬಾರದು. ಈ ಹೋರಾಟದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗಿಯಾಗಬೇಕು. ನಾವು ಮಣ್ಣಿನ ಮಕ್ಕಳು ಅಂತ ಹೇಳಿ ಮನೆಯಲ್ಲಿ ಕೂತರೆ ಆಗಲ್ಲ, ಬೀದಿಗಿಳಿದರೆ ಮಾತ್ರ ಆಡಿದ ಮಾತಿಗೆ ಬೆಲೆ ಬರುತ್ತೆ.”
“ನಾವು ಅಧಿಕಾರಕ್ಕೆ ಬಂದಮೇಲೆ ದೇವರಾಜ ಅರಸು ಅವರು ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯಿದೆಯನ್ನು ಯಥಾವತ್ತಾಗಿ ಮರಳಿ ಜಾರಿಗೆ ತರುತ್ತೇವೆ, ಎಪಿಎಂಸಿ ಗಳನ್ನು ಇನ್ನಷ್ಟು ರೈತಸ್ನೇಹಿ ಮತ್ತು ಪಾರದರ್ಶಕವಾಗಿಸುತ್ತೇವೆ ಎಂಬ ವಾಗ್ದಾನವನ್ನು ನಾಡಿನ ಎಲ್ಲ ರೈತರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ನೀಡುತ್ತಿದ್ದೇನೆ.”