ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಉದ್ದೇಶಿತ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರುದ್ಧ ದೇಶದೆಲ್ಲೆಡೆ ಹೋರಾಟ ನಡೆಯುತ್ತಿದ್ದು, ಜನರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ, ಬೀದರ್ ಜಿಲ್ಲೆಯ ಶಾಹೀನ್ ಶಾಲೆ ವಾರ್ಷಿಕೋತ್ಸವದಲ್ಲಿ ಸಿಎಎ ಹಾಗೂ ಎನ್ಪಿಆರ್ ವಿರೋಧಿಸಿ ಪ್ರಸ್ತುತಪಡಿಸಿದ ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ಶಾಲೆಯ ವಿರುದ್ಧ ಪೊಲೀಸರು ದೇಶ ದೇಶದ್ರೋಹದ ಪ್ರಕರಣ ದಾಖಲಿಸಿರುವುದು ಕರ್ನಾಟಕವನ್ನು ಚರ್ಚೆಯ ಕೇಂದ್ರಕ್ಕೆ ಎಳೆದು ತಂದಿದೆ. ಆಡಳಿತ ಪಕ್ಷವಾದ ಬಿಜೆಪಿಯ ಒತ್ತಡಕ್ಕೆ ಪೊಲೀಸರು ಮಣಿದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಪೊಲೀಸರ ನಡೆ ಕಟುಟೀಕೆಗೆ ಒಳಗಾಗಿದೆ. ಅಕ್ರಮವಾಗಿ ವಿದ್ಯಾರ್ಥಿಗಳನ್ನು ತನಿಖೆಗೆ ಒಳಪಡಿಸಿದ ಪೊಲೀಸರ ಕ್ರಮವು ದೇಶದಲ್ಲಿ ಫ್ಯಾಸಿಸಂನ ಕರಾಳ ಮುಖ ಮುಖ್ಯವಾಹಿನಿಯಲ್ಲಿ ನಗ್ನವಾಗಿ ನರ್ತಿಸುತ್ತಿದೆ ಎಂಬ ಅಭಿಪ್ರಾಯ ಬಲಗೊಳ್ಳುವಂತೆ ಮಾಡಿದೆ.
ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತ ನೀಲೇಶ್ ನೀಡಿದ ದೂರು ಆಧರಿಸಿ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಬಾಲಾಪರಾಧಿ ಕಾಯ್ದೆ ಉಲ್ಲಂಘಿಸಿ ನಾಲ್ಕು ದಿನಗಳಲ್ಲಿ ಒಟ್ಟಾರೆ 11 ಗಂಟೆಗಳ ಕಾಲ ನಾಟಕದಲ್ಲಿ ಭಾಗಿಯಾಗಿದ್ದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಬೀದರ್ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರಸ್ತುತಪಡಿಸಿದ ನಾಟಕವೊಂದಕ್ಕೆ ಬಿಜೆಪಿ ಸರ್ಕಾರ ಹೆದರುತ್ತಿರುವುದೇಕೆ? ಶಾಲಾ ಮಕ್ಕಳಿಗೆ ಹೆದರುವ ಮಟ್ಟಕ್ಕೆ ಸರ್ಕಾರ ಹೇಡಿತನ ಪ್ರದರ್ಶಿಸುತ್ತಿದೆಯೇ? ವಿರೋಧವನ್ನು ಹತ್ತಿಕ್ಕಲು ಓಬೀರಾಯನ ಕಾಲದಲ್ಲಿ ಅಸ್ತಿತ್ವಕ್ಕೆ ಬಂಧಿರುವ ದೇಶದ್ರೋಹ (124A ಸೆಕ್ಷನ್) ಪ್ರಕರಣವನ್ನು ಚುನಾಯಿತ ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಚರ್ಚೆ ಆರಂಭವಾಗಿದೆ. ಇದೆಲ್ಲದರ ಮಧ್ಯೆ, ಮೋದಿ ಸರ್ಕಾರದ ಆಡಳಿತದ ಅವಧಿಯಲ್ಲಿ ಟೀಕಾಕಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದು ವಾಡಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನಿಷ್ಪಕ್ಷಪಾತವಾಗಿರಬೇಕಾಗಿದ್ದ ಪೊಲೀಸ್ ವ್ಯವಸ್ಥೆ ರಾಜಕಾರಣಿಗಳ ಒತ್ತಡಕ್ಕೆ ಮಣಿದಿದೆ ಎಂಬ ಆರೋಪವನ್ನು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಅಲ್ಲಗಳೆದಿದೆ, ಬದಲಾಗಿ ನರೇಂದ್ರ ಮೋದಿಯವರನ್ನು ಅವಮಾನಿಸುವ ಕೆಲಸ ಮಾಡಲಾಗಿದೆ ಎಂದು ತನ್ನ ವಾದ ಹಾಗೂ ಪೊಲೀಸರ ನಡೆಯನ್ನು ಬಿಜೆಪಿ ನಾಯಕತ್ವ ಸಮರ್ಥಿಸಿಕೊಂಡಿದೆ.
ಶಾಲಾ ನಾಟಕದ ಭಾಗವಾಗಿ “ಎನ್ ಪಿ ಆರ್ ಹೆಸರಿನಲ್ಲಿ ದಾಖಲೆ ಕೇಳುವವರಿಗೆ ಚಪ್ಪಲಿಯಲ್ಲಿ ಹೊಡೆಯಲಾಗುವುದು” ಎಂದು ಐದನೇ ತರಗತಿ ವಿದ್ಯಾರ್ಥಿನಿ ಹೇಳಿದ ಸಂಭಾಷಣೆ ವಿವಾದದ ಕೇಂದ್ರಬಿಂದುವಾಗಿದ್ದು, ದೇಶದ್ರೋಹ ಪ್ರಕರಣದಡಿ ಬಾಲಕಿಯ ತಾಯಿ ನಜುಮುನ್ನೀಸಾ ಹಾಗೂ ಶಾಹೀನ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಅವರನ್ನು ಬಂಧಿಸಿ ಫೆಬ್ರುವರಿ 11ರವರೆಗೆ ಜೈಲಿಗೆ ಕಳುಹಿಸಲಾಗಿದೆ. ಮಗಳ ಹೇಳಿಕೆ ಆಧರಿಸಿ ನಜುಮುನ್ನೀಸಾ ಅವರನ್ನು ಬಂಧಿಸಲಾಗಿದ್ದು, ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದ ಶಿಕ್ಷಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ರಿಯೊಂದಿಗೆ ಬೀದರ್ ನಲ್ಲಿ ನೆಲೆಸಿದ್ದ ನಜುಮುನ್ನೀಸಾ ಅವರನ್ನು ಪೊಲೀಸರು ಬಂಧಿಸಿರುವುದರಿಂದ ಐದನೇ ತರಗತಿ ವಿದ್ಯಾರ್ಥಿನಿ ನೆರೆಹೊರೆಯವರ ಮನೆಯಲ್ಲಿ ಬದುಕು ದೂಡುವಂತಾಗಿದೆ. “ಘಟನೆಯಿಂದ ಬಾಲಕಿ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದಾಳೆ. ಸರಿರಾತ್ರಿಯಲ್ಲಿ ಕಿರುಚಿಕೊಳ್ಳುವ ಬಾಲಕಿಯನ್ನು ಸಂತೈಸುವುದು ಕಷ್ಟವಾಗಿದೆ. ಆಕೆಗೆ ತಂದೆಯಿಲ್ಲ ಎಂದು” ಆಶ್ರಯ ನೀಡಿರುವವರು ತಿಳಿಸಿದ್ದಾರೆ.
ಸಾರ್ವಜನಿಕ ವಿರೋಧವನ್ನು ಪ್ರತಿಷ್ಠೆಯನ್ನಾಗಿಸಿಕೊಂಡ ಸರ್ಕಾರವು ಸಾಮಾನ್ಯ ಜನರ ಬದುಕುವ ಹಕ್ಕನ್ನೇ ಕಸಿದುಕೊಂಡಿದೆ. ಸಂವಿಧಾನದಡಿ ದೊರೆತಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜಾರಿಗೊಳಿಸುವುದರ ಜೊತೆಗೆ ಅದಕ್ಕೆ ಅಡ್ಡಿಯಾದಾಗ ಅದನ್ನು ಸಂರಕ್ಷಿಸುವುದು ಚುನಾಯಿತ ಸರ್ಕಾರದ ಕರ್ತವ್ಯವಾಗಬೇಕು. ಆದರೆ, ಶಾಹೀನ್ ಶಾಲೆಯ ಪ್ರಕರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಸಕಿ ಹಾಕಲಾಗಿದೆ. ಆಡಳಿತಗಾರರನ್ನು ಮೆಚ್ಚಿಸಲು ಪೊಲೀಸರು ಕಾನೂನನ್ನು ಸ್ಪಷ್ಟವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾನೂನು ತಜ್ಞರು, ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

ಸಿಎಎ ಜಾರಿಯಾದ ನಂತರ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇದನ್ನು ಹತ್ತಿಕ್ಕಲು ಬಿಜೆಪಿ ಹರಸಾಹಸ ಮಾಡುತ್ತಿದೆ. ಪ್ರತಿಭಟನೆ ತೀವ್ರಗೊಂಡಿದ್ದರಿಂದ ಬಿಜೆಪಿ ಆಡಳಿತವಿರುವ ಅಸ್ಸಾಂಗೆ ಭೇಟಿ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡನೇ ಬಾರಿಗೆ ಹಿಂಜರಿದಿದ್ದಾರೆ. ಸಿಎಎ ವಿರೋಧಿ ಹೋರಾಟದಲ್ಲಿ ಉತ್ತರ ಪ್ರದೇಶ, ಅಸ್ಸಾಂ, ಕರ್ನಾಟಕದಲ್ಲಿ ಪೊಲೀಸರ ಗುಂಡಿನ ದಾಳಿಗೆ ಕನಿಷ್ಠ 30 ಮಂದಿ ಅಸುನೀಗಿದ್ದಾರೆ. ಸಾವಿರಾರು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಹಲವರ ವಿರುದ್ಧ ದೇಶದ್ರೋಹದ ದೂರು ದಾಖಲಿಸಲಾಗಿದೆ. ಇದರ ಭಾಗವಾಗಿ ಬೀದರ್ ಜಿಲ್ಲೆಯ ಶಾಹೀನ್ ಶಾಲೆಯ ವಿದ್ಯಾರ್ಥಿನಿಯ ತಾಯಿ ಹಾಗೂ ಶಾಲೆಯ ಮುಖ್ಯಶಿಕ್ಷಕಿಯನ್ನು ಬಂಧಿಸಿಲಾಗಿದೆ.
ಶಾಹೀನ್ ಶಾಲೆಯ ಪ್ರಕರಣದಲ್ಲಿ, ಮಾತನಾಡುವಾಗ ನೀಡಿದ ಹೇಳಿಕೆಗಳನ್ನು ಆಧರಿಸಿ ಬಂಧಿಸುವಂತಿಲ್ಲ ಎನ್ನುವ ಸಾಮಾನ್ಯ ತಿಳಿವಳಿಕೆಯನ್ನು ಪೊಲೀಸರು ಮರೆಮಾಚಿದ್ದಾರೆ ಎಂಬ ಆರೋಪವಿದೆ. ಅಲ್ಲದೇ ಬಾಂಬೈ ಹೈಕೋರ್ಟ್ “ಹಿಂಸಾಚಾರಕ್ಕೆ ಆಸ್ಪದ ನೀಡಿದರೆ ಮಾತ್ರ ದೇಶದ್ರೋಹ” ಎಂದು ಪ್ರಕರಣ ಒಂದರಲ್ಲಿ ನೀಡಿದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದು ಕಾನೂನು ತಜ್ಞರ ಅಭಿಮತವಾಗಿದೆ.
ದೇಶದ್ರೋಹ ಪ್ರಕರಣ ದಾಖಲಿಸಿ, ಟೀಕಾಕಾರರನ್ನು ಹಿಂಸಿಸುವುದು ಸರ್ಕಾರದ ಉದ್ದೇಶ. ಪೊಲೀಸರ ಆರೋಪಗಳು ನ್ಯಾಯಾಲಯದಲ್ಲಿ ತಲೆಕೆಳಕಾಗಲಿವೆ. ಈ ಪ್ರಕ್ರಿಯೆಯಲ್ಲಿ ವಿರೋಧ ವ್ಯಕ್ತಪಡಿಸುವವರನ್ನು ಹಿಮ್ಮೆಟ್ಟಿಸಲು 1860ರಲ್ಲಿ ಬ್ರಿಟಿಷರು ಜಾರಿಗೊಳಿಸಿದ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗುತ್ತದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಸಹ ದೇಶದ್ರೋಹ ಹಾಗೂ ದೇಶದ್ರೋಹಿ ಪದಗಳ ಬಳಕೆ ವ್ಯಾಪಕವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ತನ್ನ ವಿರೋಧಿಗಳನ್ನು ಅಣಿಯಲು ದೇಶದ್ರೋಹ ಅಸ್ತ್ರ ಪ್ರಯೋಗಿಸುವ ಬಿಜೆಪಿಯು ಇದೇ ನಿಯಮವನ್ನು ತನ್ನದೇ ಬೆಂಬಲಿಗರಿಗೆ ಅನ್ವಯಿಸುವುದಿಲ್ಲ ಎಂಬುದು ಆಶ್ವರ್ಯ ಮೂಡಿಸುವಂಥದ್ದು.
ಕಾನೂನಿನ ಅಡಿ ಎಲ್ಲರೂ ಒಂದೇ ಎನ್ನುವ ಬಿಜೆಪಿಯು ಇತ್ತೀಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಮುಖಂಡ ಮಂಗಳೂರಿನ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶ್ರೀರಾಮ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸದ ಪ್ರತಿಕೃತಿಯನ್ನು ಸೃಷ್ಟಿಸಿ ಅದನ್ನು ನೆಲಸಮ ಮಾಡುವ ನಾಟಕವನ್ನು ಶಾಲೆಯಲ್ಲಿ ಪ್ರದರ್ಶಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಲ್ಲರೂ ಪಾಲ್ಗೊಂಡಿದ್ದರು. ಈ ಸಂಬಂಧ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶಾಲೆಯ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ, ಇದುವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲ. ಇನ್ನೂ ಮಹಾತ್ಮ ಗಾಂಧಿಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಗಾಂಧೀಜಿ ಕೊಂದ ಆರ್ ಎಸ್ ಎಸ್ ಬೆಂಬಲಿಗ ನಾಥೋರಾಮ್ ಗೂಡ್ಸೆ ದೇಶಭಕ್ತ ಎಂದ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಬಿಜೆಪಿ ಕಾನೂನು ಕ್ರಮಕೈಗೊಂಡಿಲ್ಲ. ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ “ದೇಶ್ ಕೆ ಗದ್ದಾರೋಂಕೊ…” ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಹಾಗೂ ಚುನಾಯಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ‘ಭಯೋತ್ಪಾದಕ’ ಎಂದು ಜರಿದ ದೆಹಲಿ ಸಂಸದ ಪರೇಶ್ ವರ್ಮಾ ಅವರ ವಿರುದ್ಧವೂ ಬಿಜೆಪಿ ಯಾವುದೇ ಕ್ರಮಕೈಗೊಂಡಿಲ್ಲ.
ಸಿಎಎ ವಿರೋಧಿಸಿ ಪ್ರತಿಭಟಿಸುತ್ತಿರುವ ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯ ಹಾಗೂ ಶಾಹೀನ್ ಬಾಗ್ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳ ವಿರುದ್ಧವೂ ದೆಹಲಿ ಪೊಲೀಸರು ಕಠಿಣ ಕ್ರಮಕೈಗೊಂಡಿಲ್ಲ. ಅಂದಹಾಗೆ, ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಾಪ್ತಿಗೆ ಒಳಪಡುತ್ತಾರೆ. ಇದು ಬಿಜೆಪಿಯ ಇಬ್ಬಗೆ ನೀತಿಗೆ ಸ್ಪಷ್ಟ ಉದಾಹರಣೆಯಾಗಿದೆ.