ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಮಂಗಳೂರು ನಗರ ಪೊಲೀಸರು ಕೇರಳದ ನಾಗರಿಕರಿಗೆ ನೊಟೀಸ್ ನೀಡುತ್ತಿರುವುದರ ವಿರುದ್ಧ ಜನವರಿ 23ರಂದು ಗುರುವಾರ ಕಾಸರಗೋಡು ಜಿಲ್ಲಾ ಪಂಚಾಯತ್ ನಿರ್ಣಯ ಅಂಗೀಕರಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಡಿ.19ರಂದು ನಗರದ ಸ್ಟೇಟ್‌ಬ್ಯಾಂಕ್ ಸರ್ಕಲ್ ಪರಿಸರದಲ್ಲಿ ಉಂಟಾದ ಗಲಭೆಯ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಕೇರಳ ಮತ್ತು ಕರ್ನಾಟಕ ಗಡಿಭಾಗದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು, ಮಹಿಳೆಯರು ಎನ್ನದೆ ನೊಟೀಸು ಜಾರಿ ಮಾಡುತ್ತಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಈಗಾಗಲೇ ನೊಟೀಸು ಕಳುಹಿಸಲಾಗಿತ್ತು, ಸುಮಾರು ಎರಡು ಸಾವಿರ ಮಂದಿಗೆ ನೊಟೀಸು ಕಳುಹಿಸಲಾಗುತ್ತಿದೆ ಎನ್ನಲಾಗಿದೆ.
ಭಾರತೀಯ ದಂಡ ಸಂಹಿತೆ (CRPC) ಸೆಕ್ಷನ್ 41-ಎ ಪ್ರಕಾರ ನೊಟೀಸು ನೀಡಲಾಗುತ್ತಿದೆ. ಭಾರತೀಯ ದಂಡ ಸಂಹಿತೆಯ (IPC)143 (ಕಾನೂನುಬಾಹಿರ ಗುಂಪುಗೂಡಿವಿಕೆ), 147 (ಗಲಭೆಯಲ್ಲಿ ಭಾಗಿ), 148 (ಅಕ್ರಮ ಆಯುಧ ಹೊಂದುವಿಕೆ), 188 (ನಿಷೇಧಾಜ್ಞೆ ಉಲ್ಲಂಘನೆ), 353 (ಹಲ್ಲೆ), 332 (ಕರ್ತವ್ಯಕ್ಕೆ ಅಡ್ಡಿ), 324 (ಹಿಂಸೆ), 427 (ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ), 307 (ಕೊಲೆಯತ್ನ), 120 ಬಿ (ಪಿತೂರಿ) ಪ್ರಕಾರ ಅಪರಾಧವಾಗಿರುವ ಪ್ರಕರಣದಲ್ಲಿ ನೀವು ಆರೋಪಿಯಾಗಿದ್ದು, ತನಿಖೆಗಾಗಿ ಮಂಗಳೂರಿನ ಉತ್ತರ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೊಟೀಸಿನಲ್ಲಿ ಸೂಚಿಸಲಾಗಿದೆ. ಸಿಟಿ ಕ್ರೈಂ ರೆಕಾರ್ಡ್ ಬ್ಯುರೋ ಸಹಾಯಕ ಆಯುಕ್ತರ (ಎಸಿಪಿ) ಕಚೇರಿಯಿಂದ ಸ್ಪೀಡ್ ಪೋಸ್ಟಿನಲ್ಲಿ ನೊಟೀಸ್ ನೀಡಲಾಗುತ್ತಿದೆ.
ಮಂಗಳೂರಿನಲ್ಲಿ ಡಿ.19ರಂದು ಸೆ.144 ಜಾರಿಗೊಳಿಸಲಾಗಿತ್ತು. ಆದರೂ ಕೆಲವು ಪ್ರತಿಭಟನಾಕಾರರು ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ಜಮಾಯಿಸಿದ್ದು, ಅನಂತರ ನಡೆದ ಕಲ್ಲು ತೂರಾಟ, ಗಲಭೆಯ ನಡುವೆ ಪೊಲೀಸ್ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು. ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ನಡೆದಿರುವ ಈ ಘಟನೆಗಳಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಎರಡು ಡಜನಿಗಿಂತಲೂ ಹೆಚ್ಚು ಎಪ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ ಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅನಾಮಧೇಯ ಆರೋಪಿಗಳ ಸಂಖ್ಯೆಯನ್ನು ನಮೂದಿಸಲಾಗಿತ್ತು.
ಈಗ ಪೊಲೀಸರು ಅಂದು ಮಂಗಳೂರಿಗೆ ಆಗಮಿಸಿದವರು ಮೊಬೈಲ್ ಫೋನ್ ಟವರ್ ಲೊಕೇಶನ್ ಆಧರಿಸಿ ನೊಟೀಸ್ ನೀಡುತ್ತಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ. ಮಾತ್ರವಲ್ಲದೆ, ಪೊಲೀಸರು ನಗೆಪಾಟಲಿಗೂ ಗುರಿಯಾಗುತ್ತಿದ್ದಾರೆ. ಇದರೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸರ ಈ ನೊಟೀಸು ವಿಚಾರ ಸುದ್ದಿಯಾಗಿದೆ. ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಇದೊಂದು ನಿತ್ಯ ಚರ್ಚೆಯ ಸುದ್ದಿಯಾಗಿದ್ದು, ಮಂಗಳೂರು ಪೊಲೀಸರ ನೊಟೀಸು ಬರುತ್ತಲೇ ಇದೆ ಎನ್ನುತ್ತಾರೆ ಕಾಸರಗೋಡಿನ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷದ್ ವರ್ಕಾಡಿ.
ಶಿಕ್ಷಣ, ಆರೋಗ್ಯ ಸೇವೆ, ವಾಣಿಜ್ಯ ಚಟುವಚಿಕೆ, ಉದ್ಯೋಗಕ್ಕಾಗಿ ಕಾಸರಗೋಡಿನ ಜನತೆ ಸಂಪೂರ್ಣವಾಗಿ ಮಂಗಳೂರು ನಗರವನ್ನು ಆಶ್ರಯಿಸಿದ್ದಾರೆ. ಕಾಸರಗೋಡು ಮತ್ತು ಮಂಗಳೂರು ಮಧ್ಯೆ ಪ್ರತಿ ಎರಡು ನಿಮಿಷಕ್ಕೊಂದು ಬಸ್ಸುಗಳು ಓಡಾಡುತ್ತಿವೆ.ಎರಡೂ ರಾಜ್ಯಗಳ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಈ ಸೇವೆ ನೀಡುತ್ತಿವೆ. ಕನ್ನಡ ಮಾಧ್ಯಮದ ಬಹುತೇಕ ವಿದ್ಯಾರ್ಥಿಗಳು ಮಂಗಳೂರಿನ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಹೀಗಿರುವಾಗ ಮಂಗಳೂರಿನ ಬಹುತೇಕ ಪ್ಲೋಟಿಂಗ್ ಪೊಪ್ಯುಲೇಷನ್ ಕಾಸರಗೋಡಿನವರೇ ಆಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಂಗಳೂರು ನಗರ ಪೊಲೀಸರು ಮೊಬೈಲ್ ಟವರ್ ಆಧಾರದಲ್ಲಿ ನೊಟೀಸು ನೀಡುತ್ತಿರುವುದು ಎಷ್ಟರ ಮಟ್ಟಿಗೆ ನ್ಯಾಯ ಸಮ್ಮತ ಮತ್ತು ವೈಜ್ಞಾನಿಕ ವಿಧಾನ ಎಂಬುದಷ್ಟೇ ಅಲ್ಲದೆ, ಇದು ಅಧಿಕಾರದ ದುರುಪಯೋಗ ಕೂಡ ಆಗಿದೆ.
ಮಂಗಳೂರು ಪೊಲೀಸರು ಕಿರುಕುಳಕಾಗಿ ನೊಟೀಸಿಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಸರಗೋಡು ಜಿಲ್ಲಾ ಪಂಚಾಯತ್ ಮಂಗಳೂರು ಪೊಲೀಸರ ಕ್ರಮದ ವಿರುದ್ಧ ತನ್ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಇಂತಹ ಕ್ರಮವನ್ನು ತಕ್ಷಣ ನಿಲ್ಲಿಸುವಂತೆ ಕರ್ನಾಟಕ ಮತ್ತು ಕೇರಳ ರಾಜ್ಯ ಸರಕಾರಗಳನ್ನು ಒತ್ತಾಯಿಸಿದೆ. .
ಈಗಾಗಲೇ ಪೊಲೀಸರು ಹೊರಡಿಸಿದ್ದ ನೋಟಿಸ್‌ನ್ನು ಸ್ವೀಕರಿಸಿದ ಹಲವರು ಬಂದರು ಠಾಣೆಗೆ ಹಾಜರಾಗಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಠಾಣೆಗೆ ಹಾಜರಾದವರ ಹೆಸರು, ಮೊಬೈಲ್ ಸಂಖ್ಯೆ, ಸಹಿ ಮತ್ತು ಕೆಲವರ ಫೋಟೊ ಕೂಡ ತೆಗೆದುಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುವ ಸಿಐಡಿಯಿಂದ ನೋಟಿಸ್ ಬಂದರೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.
ನೊಟೀಸ್ ಪಡೆದವರಲ್ಲಿ ಬಹುಪಾಲು ಮಂದಿ ಮುಸ್ಲಿಂ ಸಮುದಾಯವರಾಗಿದ್ದು, ಮೀನುಗಾರಿಕಾ ಧಕ್ಕೆಯಲ್ಲಿ ಕೆಲಸ ಮಾಡುವ ಮಂಜೇಶ್ವರ ಪ್ರದೇಶದ ಇತರ ಕಾರ್ಮಿಕರಿಗೂ ಕೂಡ ನೊಟೀಸ್ ಬಂದಿದೆ. ಪೊಲೀಸ ಎದುರು ಹಾಜರಾಗಿರುವ ಬಹುತೇಕ ಜನರು ಅಮಾಯಕರಾಗಿದ್ದು, ಅಂದಿನ ಗಲಭೆ, ಪ್ರತಿಭಟನೆಯಲ್ಲಿ ಭಾಗವಹಿಸಿದವರೂ ಅಲ್ಲ, ನಿಷೇದಾಜ್ಞೆಯನ್ನು ಉಲ್ಲಂಘಿಸಿದವರೂ ಕೂಡ ಅಲ್ಲ.
ಕೆಲವು ಪ್ರಕರಣಗಳಲ್ಲಿ ಪೊಲೀಸರು ಕ್ರಮ ಹಾಸ್ಯಾಸ್ಪದವಾಗಿದೆ. ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಇವರು ಆರೋಪಿಗಳನ್ನು ಆಯ್ಕೆ ಮಾಡುವಾಗ ಬಹಳಷ್ಟು ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ತಾಯಿಯಂದಿರಿಗೆ, ವಯೋವೃದ್ಧ ಮಹಿಳೆಯರಿಗೆ ಕೂಡ ನೊಟೀಸ್ ನೀಡಿದ್ದಾರೆ. ಮಂಗಳೂರಿಗೆ ಕಾಲೇಜಿಗೆ ಬರುತ್ತಿದ್ದ ಮಗ ತಾಯಿಯ ಹೆಸರಿನಲ್ಲಿ ಮೊಬೈಲ್ ಸಂಪರ್ಕ ಪಡೆದಿದ್ದು, ತಾಯಿಗೆ ಪೊಲೀಸರು ನೊಟೀಸು ನೀಡಿದ್ದಾರೆ.
ಮಂಗಳೂರು ಹಳೆ ಬಂದರು ಪ್ರದೇಶದಲ್ಲಿ ಮೀನುಗಾರಿಕೆ ಕೆಲಸ ಮಾಡುವವರು, ಸಮುದ್ರ ಮೀನುಗಾರಿಕೆ ಕಾರ್ಮಿಕರು, ಧಕ್ಕೆಯಿಂದ ಮೀನು ಖರೀದಿಸಿ ಕೇರಳ ಗಡಿ ಪ್ರದೇಶದಲ್ಲಿ ಮಾರಾಟ ಮಾಡುವವರು ಇತ್ಯಾದಿ ಎಲ್ಲರಿಗೂ ನೊಟೀಸ್ ಜಾರಿ ಮಾಡಿರುವ ಪೊಲೀಸರು ಏನು ಮಹಾನ್ ಸಾಧನೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಅದಕ್ಕೂ ಮುನ್ನ ಕೇರಳದ ಕೆಲವು ರಾಜಕೀಯ ಮುಖಂಡರು ನ್ಯಾಯಾಲಯ ಮತ್ತು ಮಾನವ ಹಕ್ಕುಗಳ ವೇದಿಕೆ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಸ್ಥಳೀಯ ಮಾಧ್ಯಮಗಳಲ್ಲಿ ಈ ವಿಚಾರ ಸುದ್ದಿಯಾಗಿಲ್ಲ. ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಏಕೆಂದರೆ, ಮಂಗಳೂರು ಪೊಲೀಸರು ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ.