ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ನಿನ್ನೆ ಇಡೀ ಮಂಗಳೂರು ನಗರ ಬೆಚ್ಚಿ ಬಿದ್ದಿತ್ತು, ಹೊತ್ತಿ ಉರಿದಿತ್ತು. ಪೊಲೀಸರು ಸಿಕ್ಕ ಸಿಕ್ಕವರನ್ನು ಕಂಡ ಕಂಡಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದರು. ಇವರಲ್ಲಿ ಅದೆಷ್ಟೋ ಅಮಾಯಕರು ಪೊಲೀಸರ ಲಾಠಿ ರುಚಿ, ಅಶ್ರುವಾಯುವಿನ ಘಮಲು ವಾಸನೆಯನ್ನು ಕುಡಿದರು.
ಗಲ್ಲಿ ಗಲ್ಲಿಯನ್ನೂ ಬಿಡದೆ ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿದ ಪೊಲೀಸರು ಕೆಲಸ ಮಾಡುತ್ತಿದ್ದವರನ್ನೂ ಹೊರ ಎಳೆದು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಇವೆಲ್ಲಾ ಎಲ್ಲರ ಕಣ್ಣಿಗೆ ಕಂಡ ದೃಶ್ಯಗಳು. ಆದರೆ, ಸಿಕ್ಕಿದ್ದೇ ಛಾನ್ಸ್ ಎಂಬಂತೆ ಈ ಕ್ರೂರಿ ಪೊಲೀಸ್ ಪಡೆ ಆಸ್ಪತ್ರೆಯೊಳಗೂ ನುಗ್ಗಿ ದಾಂಧಲೆ ನಡೆಸಿದೆ.
ಇಷ್ಟೇ ಅಲ್ಲ, ಆಸ್ಪತ್ರೆಯ ಐಸಿಯುಗೆ ಕೇವಲ 30 ಮೀಟರ್ ದೂರದಲ್ಲಿ ಟಿಯರ್ ಗ್ಯಾಸ್ ಸಿಡಿಸಿ ಅಲ್ಲಿದ್ದ ರೋಗಿಗಳನ್ನು ತಬ್ಬಿಬ್ಬುಗೊಳ್ಳುವಂತೆ ಮಾಡಿದ್ದಾರೆ ಪೊಲೀಸರು. ಈ ಟಿಯರ್ ಗ್ಯಾಸ್ ನಿಂದ ಬಂದ ರಾಸಾಯನಿಕದಿಂದಾಗಿ ರೋಗಿಗಳ ನರಳಾಟ ಮತ್ತಷ್ಟು ಗಂಭೀರ ಸ್ವರೂಪಕ್ಕೆ ತಿರುಗಿತ್ತು.
ಮಂಗಳೂರಿನ ಫಳ್ನೀರ್ ನಲ್ಲಿರುವ ಹೈಲ್ಯಾಂಡ್ ಆಸ್ಪತ್ರೆಯೊಳಗೆ ಈ ಬೀಭತ್ಸ ಘಟನೆಗೆ ಪೊಲೀಸರು ಕಾರಣರಾಗಿದ್ದಾರೆ. ಇಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿದಿರುವ ದೃಶ್ಯಗಳನ್ನು ಆಧರಿಸಿ ಮತ್ತು ಪ್ರತ್ಯಕ್ಷದರ್ಶಿಗಳ ಪ್ರತಿಕ್ರಿಯೆಗಳನ್ನು ಪಡೆದು ಆಂಗ್ಲ ಮಾಧ್ಯಮ Scroll.in ವರದಿಯನ್ನು ಬಿತ್ತರ ಮಾಡಿದೆ.

ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟ ಸಂದರ್ಭದಲ್ಲಿ ಆಸ್ಪತ್ರೆಯ ಹೊರಗಿದ್ದ ಸಾರ್ವಜನಿಕರೊಬ್ಬರು ಮತ್ತು ಆಸ್ಪತ್ರೆಯೊಳಗೆ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರನ್ನು Scroll.in ಮಾತನಾಡಿಸಿದಾಗ ಪೊಲೀಸರ ಪೈಶಾಚಿಕ ಕೃತ್ಯಗಳು ಬಯಲಿಗೆ ಬಂದಿವೆ.
ಸಿಬ್ಬಂದಿ ಹೇಳುವಂತೆ ದಾಂಗುಡಿಯಿಟ್ಟು ಆಸ್ಪತ್ರೆಗೆ ನುಗ್ಗಿದ ಪೊಲೀಸರು ತುರ್ತು ಚಿಕಿತ್ಸಾ ಘಟಕದ ಬಳಿ ಟಿಯರ್ ಗ್ಯಾಸ್ ಸಿಡಿಸಲಿಲ್ಲ. ಆದರೆ, ಈ ಐಸಿಯು ಮತ್ತು ವಾರ್ಡ್ ಗಳಿಂದ 30 ಅಡಿ ದೂರದಲ್ಲಿರುವ ಆಸ್ಪತ್ರೆಯ ಲಾಬಿಯಲ್ಲಿ ಸಿಡಿಸಿದರು.
ಅಮೇರಿಕಾ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಸೈನ್ಸ್ ರೀಸರ್ಚ್ ಸ್ಕಾಲರ್ ಆಗಿರುವ ಶೌನ್ನಾ ಗುರುವಾರ ಸಂಜೆ 4.30 ರ ವೇಳೆಗೆ ಮಂಗಳೂರಿನ ಹೃದಯಭಾಗದಲ್ಲಿರುವ ಹೈಲ್ಯಾಂಡ್ ಆಸ್ಪತ್ರೆಗೆ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬರುತ್ತಿದ್ದರು. ಆದರೆ, ಅಲ್ಲಿ ಗಲಾಟೆಯಾಗುತ್ತಿದೆ. ವಾಪಸ್ ಹೋಗಿ ಎಂದು ಕೆಲವು ನಾಗರಿಕರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶೌನ್ನಾ ಮತ್ತು ಅವರ ತಂದೆ ಆಸ್ಪತ್ರೆಯ ಬಳಿಯಲ್ಲಿ ಕಾರನ್ನು ನಿಲ್ಲಿಸಿ ಆಸ್ಪತ್ರೆ ಕಡೆಗೆ ಹೆಜ್ಜೆ ಹಾಕಿದ್ದಾರೆ. ಅಲ್ಲಿ ಪ್ರತಿಭಟನಾಕಾರರು ಇದ್ದರು.
ಅಲ್ಲಿ ಪ್ರತಿಭಟನೆ ಕಂಟ್ರೋಲ್ ಮಾಡುವ ವಾಹನವಿತ್ತು. 12 ರಿಂದ 15 ಜನ ಪೊಲೀಸರು ಆ ವಾಹನದೊಳಗೆ ಇದ್ದರೆ, ಹೊರಗಡೆ ಇದ್ದ ನಾಲ್ಕೈದು ಮಂದಿ 30 ರಿಂದ 40 ರಷ್ಟಿದ್ದ ಪ್ರತಿಭಟನಾನಿರತರನ್ನು ಚದುರಿಸಲು ಲಾಠಿ ಬೀಸುತ್ತಿದ್ದರು. ನಾನು ಮತ್ತು ನನ್ನ ತಂದೆ ಸ್ವಲ್ಪ ಹತ್ತಿರ ಹೋಗುತ್ತಿರುವಾಗ ಪ್ರತಿಭಟನಾಕಾರರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾರಂಭಿಸಿದರು. ಅವರ ಉದ್ದೇಶ ಪೊಲೀಸ್ ವಾಹನವನ್ನು ಹಾನಿಗೊಳಿಸುವುದಾಗಿತ್ತೆಂಬಂತೆ ಕಂಡುಬಂದಿತು.
ಗೋಲಿಬಾರ್ ನಲ್ಲಿ ಗಾಯಗೊಂಡವರನ್ನು ಇದೇ ಆಸ್ಪತ್ರೆಗೆ ತರಲಾಗಿದೆ, ಅವರನ್ನು ಹಿಂಬಾಲಿಸಿಕೊಂಡು ಪ್ರತಿಭಟನಾಕಾರರು ಬಂದಿದ್ದಾರೆ ಎಂಬುದನ್ನು ಶೌನ್ನಾ ತಿಳಿದುಕೊಂಡಿದ್ದರಂತೆ.
ನಾವು ಪೊಲೀಸ್ ವಾಹನದ ಎದುರು ನಿಂತಿದ್ದೆವು. ಪ್ರತಿಭಟನಾಕಾರರು ವಾಹನದ ಬಲಭಾಗದಲ್ಲಿ ಅನತಿ ದೂರದಲ್ಲಿದ್ದರು. ಅವರು ವಾಹನದ ಮೇಲೆ ಕಲ್ಲು ತೂರಾಟ ನಡೆಸುತ್ತಲೇ ಇದ್ದರು. ಹೊರಗೆ ಇದ್ದ ನಾಲ್ಕೈದು ಪೊಲೀಸರು ಈ ಕಲ್ಲುತೂರಾಟವನ್ನು ತಡೆಯಲು ಪ್ರಯತ್ನಿಸಿದರಾದರೂ ಸಾಧ್ಯವಾಗದೇ ವಾಹನದೊಳಗೆ ಹೋಗಿ ಕುಳಿತರು.
ನಾನು ರಾಜಕೀಯ ಶಾಸ್ತ್ರದ ಸಂಶೋಧಕಿಯಾದ್ದರಿಂದ ನಗರದಲ್ಲಿ ಏನೇನು ಆಗುತ್ತಿದೆ ಎಂಬ ಕುತೂಹಲವನ್ನು ಹೊಂದಿದ್ದೆ ಮತ್ತು ಅದನ್ನು ತಿಳಿದುಕೊಳ್ಳುವ ಕಾತುರದಲ್ಲಿದ್ದೆ. ಅಷ್ಟರಲ್ಲಿ ಲೋಕಲ್ ನ್ಯೂಸ್ ಚಾನೆಲ್ ವೊಂದು ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ ಎಂಬ ಫ್ಲ್ಯಾಶ್ ನ್ಯೂಸ್ ಅನ್ನು ಪ್ರಸಾರ ಮಾಡುತ್ತಿತ್ತು.
ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಪ್ರತಿಭಟನಾಕಾರರು ಆಸ್ಪತ್ರೆಯ ಮುಂದೆ ಜಮಾಯಿಸಲು ಆರಂಭಿಸಿದರು.
ಹತ್ತು, ಇಪ್ಪತ್ತು, ಐವತ್ತು, ನೂರು ಸಾವಿರದಷ್ಟು ಪ್ರತಿಭಟನಾಕಾರರು ಅಲ್ಲಿ ಸೇರಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಆರಂಭಿಸಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಒಳಗೆ ಆಗಿದ್ದೇನು ಎಂಬುದನ್ನು ಆಸ್ಪತ್ರೆಯ ಹಿರಿಯ ಸಿಬ್ಬಂದಿಯೊಬ್ಬರು ಹೇಳಿರುವುದನ್ನು ಅವರಿಂದಲೇ ಕೇಳಿ:-
ಪ್ರತಿಭಟನಾಕಾರರು ಆಸ್ಪತ್ರೆಯ ಸುತ್ತಲಿನ ರಸ್ತೆಗಳನ್ನು ಬ್ಲಾಕ್ ಮಾಡಿದ್ದರು. ಆಗ ಭಾರೀ ಪ್ರಮಾಣದಲ್ಲಿ ಗಲಾಟೆ ಆರಂಭವಾಗಿತ್ತು.
ಸಂಜೆ 6.30 ರ ನಂತರ ಹೆಚ್ಚಿನ ಪೊಲೀಸ್ ಪಡೆ ಆಸ್ಪತ್ರೆಯ ಬಳಿ ಬಂದಿತು. ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ಇದಕ್ಕೆ ಜಗ್ಗದಿದ್ದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಟಿಯರ್ ಗ್ಯಾಸ್ ಸಿಡಿಸಿದರು. ಆಸ್ಪತ್ರೆಯ ಹೊರಗಡೆ ಈ ಘಟನೆ ನಡೆದಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ, ಪ್ರತಿಭಟನಾಕಾರರ ಕಲ್ಲು ತೂರಾಟದಿಂದ ರಕ್ಷಿಸಿಕೊಳ್ಳುವ ನೆಪದಲ್ಲಿ ಆಸ್ಪತ್ರೆಯ ಆವರಣದೊಳಗೆ ನುಗಿದ್ದ ಪೊಲೀಸರು ಅಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಿಗೆ ಡಿಸ್ಟರ್ಬ್ ಮಾಡಬಾರದು ಎಂಬ ಕಾಮನ್ ಸೆನ್ಸ್ ಸಹ ಇಲ್ಲದೇ ಲಾಬಿಯಲ್ಲಿ ನಿಂತುಕೊಂಡೇ ಪ್ರತಿಭಟನಾಕಾರರ ಮೇಲೆ ಟಿಯರ್ ಗ್ಯಾಸ್ ಸಿಡಿಸಿದರು.
ಈ ಹಿರಿಯ ಸಿಬ್ಬಂದಿ ಹೇಳುವಂತೆ, ಪೊಲೀಸರು ಮೂರು ಟಿಯರ್ ಗ್ಯಾಸ್ ಶೆಲ್ಸ್ ಅನ್ನು ಸಿಡಿಸಲಾಯಿತು. ಅದರಲ್ಲಿ ಒಂದು ಆಸ್ಪತ್ರೆಯ ಲಾಬಿಯೊಳಗೆ ಬಂದು ಬಿದ್ದರೆ, ಇನ್ನೆರಡು ಪಾರ್ಕಿಂಗ್ ಲಾಟ್ ನಲ್ಲಿ ಬಂದು ಬಿದ್ದವು.
ಅವರು ಹೇಳುವ ಪ್ರಕಾರ ಲಾಬಿಯ ಬಲಬದಿಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್ ಗಳಿದ್ದರೆ, ಎಡಬದಿಯಲ್ಲಿ ಐಸಿಯು ಘಟಕವಿದೆ. ಈ ಎರಡೂ ಟಿಯರ್ ಗ್ಯಾಸ್ ಸಿಡಿದ ದೂರದಿಂದ ಕೇವಲ 30 ಮೀಟರ್ ಅಂತರದಲ್ಲಿವೆ. ಇದರರ್ಥ ಗಂಭೀರವಾಗಿ ಹಲವು ರೋಗಗಳಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ವಾರ್ಡ್ ಗಳಿಂದ ಕೇವಲ 30 ಮೀಟರ್ ಅಂತರದಲ್ಲಿ ಟಿಯರ್ ಗ್ಯಾಸ್ ಅನ್ನು ಸಿಡಿಸಿದ್ದರಿಂದ ಎಲ್ಲರೂ ಆತಂಕಗೊಂಡಿದ್ದೆವು. ಕೆಲವು ರೋಗಿಗಳು ದಿಗ್ಭ್ರಾಂತರಾಗಿದ್ದರು.

ಇದೆಲ್ಲಕ್ಕಿಂತ ಶಾಕಿಂಗ್ ವಿಚಾರವೆಂದರೆ, ಮದಗೂಳಿಗಳಂತೆ ಆಸ್ಪತ್ರೆಯೊಳಗೆ ನುಗ್ಗಿದ ಕೆಲವು ದುರುಳ ಪೊಲೀಸರು ಅಕ್ಕಪಕ್ಕದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾನವೀಯತೆಯೂ ಇಲ್ಲದೇ, ಕೆಲವು ಕೊಠಡಿಗಳ ಬಾಗಿಲುಗಳನ್ನು ಬೂಟುಗಾಲಿನಲ್ಲಿ ಒದ್ದು ಮುರಿದು ಒಳನುಗ್ಗಿ ಅಲ್ಲಿದ್ದ ಪ್ರತಿಭಟನಾಕಾರರನ್ನು ಹೊರ ಎಳೆದೊಯ್ದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಬೀಭತ್ಸ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಈ ಎಲ್ಲಾ ಘಟನೆಗಳನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಆತಂಕಕ್ಕೆ ಒಳಗಾದರೆ, ರೋಗಿಗಳು ಪರಿತಪಿಸಬೇಕಾಯಿತು. ಕೆಲವು ಕೊಠಡಿಗಳಿಗೆ ಪ್ರತಿಭಟನಾಕಾರರು ನುಗ್ಗಿದ್ದರಿಂದ ಅವುಗಳ ಬಾಗಿಲುಗಳನ್ನು ಮುರಿದು ಹಾಕಿರುವ ಪೊಲೀಸರು ಅಟ್ಟಹಾಸ ಮೆರೆದಿದ್ದಾರಷ್ಟೇ ಅಲ್ಲ, ಆಸ್ಪತ್ರೆಯೊಳಗೇ ನುಗ್ಗಿ ತಮ್ಮ ಪೈಶಾಚಿಕ ಕೃತ್ಯದ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದಾರೆ.
ಕೃಪೆ: Scroll.in – https://amp.scroll.in/article/947438/what-really-happened-at-the-mangaluru-hospital-on-thursday-two-eyewitnesses-describe-what-they-saw?__twitter_impression=true