ಭೀಮಾ ಕೋರೆಗಾಂವ್- ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಬಂಧಿಸಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹನಿ ಬಾಬು ಎಂ ಟಿ ಅವರನ್ನು ಬುಧವಾರ ಮುಂಬೈನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆಗಸ್ಟ್ 4ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
“ಆರೋಪಿ ಹನಿ ಬಾಬು ಮುಸಲಿಯಾರ್ ವಿಟ್ಟಿಲ್ ತಾರಾಯಿಲ್, ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕಾರಣವಾದ ಎಲ್ಗಾರ್ ಪರಿಷತ್ ಘಟನೆಗೆ ಸಂಬಂಧಿಸಿದ ಇತರ ಬಂಧಿತರೊಂದಿಗೆ ನಂಟು ಹೊಂದಿದ್ದಾರೆ ಮತ್ತು ಸಂಚಿನಲ್ಲಿ ಪಾಲುದಾರರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅವರನ್ನು ಇನ್ನಷ್ಟು ವಿಚಾರಣೆಗೊಳಪಡಿಸಬೇಕಾಗಿದೆ” ಎಂದು ತನಿಖಾ ಸಂಸ್ಥೆ ಹೇಳಿದೆ. ತನಿಖೆಯ ವೇಳೆ ವಶಪಡಿಸಿಕೊಂಡಿರುವ ಹಲವು ಪತ್ರಗಳು ಮತ್ತು ಎಲೆಕ್ಟ್ರಾನಿಕ್ ಪತ್ರಗಳು ಪ್ರಕರಣದಲ್ಲಿ ಅವರ ಪಾಲುದಾರಿಕೆಯನ್ನು ಸೂಚಿಸುತ್ತಿವೆ ಎಂದೂ ಎನ್ಐಎ ಹೇಳಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ದೆಹಲಿ ನಿವಾಸಿಯಾದ 54 ವರ್ಷದ ಹನಿ ಬಾಬು ಅವರನ್ನು ಜು.23ರಿಂದಲೇ ಎನ್ಐಎ ಕಚೇರಿಯಲ್ಲಿ ವಿಚಾರಣೆಗೊಳಪಡಿಸಲಾಗಿದ್ದು, ಆರು ದಿನಗಳಿಂದ ಎನ್ಐಎ ಪ್ರಮುಖವಾಗಿ ಹನಿಬಾಬು ಅವರ ಕಂಪ್ಯೂಟರಿನ ಡಿಸ್ಕಿನ ವಿಭಾಗೀಕರಣದ ಕುರಿತ ಪ್ರಮುಖವಾಗಿ ಪ್ರಶ್ನೆಗಳನ್ನು ಕೇಳುತ್ತಿದೆ. 2019ರ ಫೆಬ್ರವರಿ ಮತ್ತು ಏಪ್ರಿಲ್ ನಡುವೆ ಇದ್ದ ಕಂಪ್ಯೂಟರ್ ಡಿಸ್ಕಿನಲ್ಲಿ ಎರಡು ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದ್ದು, ಒಂದು ವಿಭಾಗದಲ್ಲಿ 62 ಕಡತಗಳಿದ್ದು, ಎಲ್ಲವೂ ಮಾವೋವಾದಿ(ನಕ್ಸಲ್) ಚಳವಳಿಯೊಂದಿಗೆ ಅವರ ನಂಟಿಗೆ ಸಂಬಂಧಿಸಿದ್ದಾಗಿದ್ದು, ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮಾಹಿತಿ ಹೊಂದಿವೆ ಎಂದು ಎನ್ಐಎ ಹೇಳಿದೆ. ಆದರೆ, ಬಾಬು, ಆ ವಿಭಾಗೀಕರಣದ ಬಗ್ಗೆಯಾಗಲೀ, ಅದರಲ್ಲಿನ ಕಡತಗಳ ಬಗ್ಗೆಯಾಗಲೀ ತಮಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ ತನಿಖಾ ಸಂಸ್ಥೆ, ಆ ವಿಷಯದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ, ನಿಮ್ಮ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಈ ಡಿಸ್ಕ್ ವಿಭಾಗೀಕರಣ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದೆ ಎಂದು ಬಾಬು ಅವರ ಪತ್ನಿ ಜೆನ್ನಿ ರೊವೇನಾ ಹೇಳಿದ್ದಾರೆ.
ಜೊತೆಗೆ, ನಿಮ್ಮ ಟ್ರ್ಯಾಕ್ ರೆಕಾರ್ಡ್ ‘ಕ್ಲಿಯರ್’ ಇದೆ. ಆದರೆ, ಯಾವುದೋ ಸಂದರ್ಭದಲ್ಲಿ ಯಾರೋ ನಿಮ್ಮ ಲ್ಯಾಪ್ ಟಾಪಿನಲ್ಲಿ ಈ ಅಪಾಯಕಾರಿ ಮಾಹಿತಿಯನ್ನು ಸೇರಿಸಿರುವ ಸಾಧ್ಯತೆ ಇದೆ ಎಂದೂ ಎನ್ ಐಎ ಅಧಿಕಾರಿಗಳು ಹನಿ ಬಾಬು ಅವರಿಗೆ ಹೇಳಿದ್ದು, “ನಿಮಗೆ ಅಂತಹ ಕೃತ್ಯ ಮಾಡಿದ ಬಗ್ಗೆ ಯಾರ ಮೇಲಾದರೂ ಅನುಮಾನವಿದೆಯಾ? ಯಾರಾದರೂ ನಿಮ್ಮ ವಿದ್ಯಾರ್ಥಿಗಳು, ಅಥವಾ ಸಹೋದ್ಯೋಗಿಗಳು, ಅಥವಾ ಬೇರಾವುದೇ ವ್ಯಕ್ತಿ ನಿಮ್ಮ ವಿರುದ್ಧ ಈ ಕೃತ್ಯ ಎಸಗಿರಬಹುದೆ?” ಎಂದು ನಿರಂತರವಾಗಿ ಪ್ರಶ್ನಿಸಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಇನ್ನಷ್ಟು ಜನರನ್ನು ಸಿಲುಕಿಸುವ ಯತ್ನ ನಡೆದಿದೆ. ಈ ಎಲ್ಲಾ ಮಾಹಿತಿಯನ್ನು ಪ್ರತಿ ದಿನದ ವಿಚಾರಣೆಯ ಬಳಿಕ ಬಾಬು ಅವರೇ ತಮಗೆ ಹೇಳಿದ್ದಾರೆ ಎಂದು ಜೆನ್ನಿ ಹೇಳಿರುವುದಾಗಿ ‘ದ ವೈರ್’ ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ತನಿಖೆ ನಡೆಸಿದ್ದ ಪುಣೆ ಪೊಲೀಸರು ಕಳೆದ ವರ್ಷದ ಸೆಪ್ಟೆಂಬರ್ 10ರಂದು ನೋಯ್ಡಾದ ಹನಿ ಬಾಬು ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಆ ವೇಳೆ, ಲ್ಯಾಪ್ ಟಾಪ್, ಮೊಬೈಲ್ ಫೋನ್, ಜಿ ಎನ್ ಸಾಯಿಬಾಬಾ ಸಮರ್ಥನಾ ಸಮಿತಿಗಾಗಿ ಬರೆದುಕೊಟ್ಟಿದ್ದ ಎರಡು ಕಿರುಹೊತ್ತಿಗೆ, ಮತ್ತು ಎರಡು ಪುಸ್ತಕಗಳನ್ನು ವಶಪಡಿಸಿಕೊಂಡಿದ್ದರು. ಜೊತೆಗೆ, ಎಲ್ಗಾರ್ ಪರಿಷತ್ ಸಂಬಂಧಿಸಿದಂತೆ ತಮ್ಮ ಪಾತ್ರವೇನು ಮತ್ತು ಅದಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಜೊತೆಗಿನ ನಂಟು ಏನು ಎಂಬ ಬಗ್ಗೆ ವಿಚಾರಣೆಯನ್ನು ನಡೆಸಿದ್ದರು.
ಭಾರತೀಯ ಸಮಾಜದ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಶೋಷಣೆ ಬಗ್ಗೆ ದಿಟ್ಟ ಪ್ರಶ್ನೆಗಳನ್ನು ಎತ್ತುವ ಮೂಲಕ ಹೆಸರಾಗಿರುವ ದೆಹಲಿ ವಿವಿಯ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಬಾಬು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಹಲವು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಮಾವೋವಾದಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ದೆಹಲಿ ವಿವಿ ಪ್ರಾಧ್ಯಾಪಕ ಜಿ ಎನ್ ಸಾಯಿಬಾಬಾ ಅವರ ಸಮರ್ಥನೆಗಾಗಿ ರಚಿಸಲಾಗಿದ್ದ ಹೋರಾಟ ಸಮಿತಿಯ ಸಕ್ರಿಯ ಸದ್ಯಸ್ಯರೂ ಆಗಿದ್ದಾರೆ. ಪ್ರಮುಖವಾಗಿ ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರದ ದಬ್ಬಾಳಿಕೆಯ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದರು. ಹಾಗೇ ವಿವಿಗಳಲ್ಲಿ ಒಬಿಸಿ ಮೀಸಲಾತಿಯ ಪರಿಣಾಮಕಾರಿ ಜಾರಿಯ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ, ದೇಶದಲ್ಲಿ ಜಾತಿವಾರು ಜನಗಣತಿಯ ಜರೂರಿನ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು.
Also Read: ಕರೋನಾ ಭೀತಿ: ಸುಧಾ ಭಾರದ್ವಾಜ್- ಶೋಮಾ ಸೇನ್ ಬಿಡುಗಡೆಗೆ ಗಣ್ಯರ ದನಿ
ಜುಲೈ 15ರಂದೇ ವಿಚಾರಣೆಗೆ ಹಾಜರಾಗುವಂತೆ ಎನ್ ಐಎ ಬಾಬು ಅವರಿಗೆ ಸೂಚಿಸಿತ್ತು. ಆದರೆ, ಅವರು ಜು.23ರವರೆಗೆ ಸಮಯಾವಕಾಶ ಕೋರಿದ್ದರು. ಜು.23ರಂದು ದಕ್ಷಿಣ ಮುಂಬೈನ ಎನ್ ಐಎ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಅವರೊಂದಿಗೆ ಹೈದರಾಬಾದ್ ಮೂಲದ ಪತ್ರಕರ್ತ ಮತ್ತು ಕವಿ ಕ್ರಾಂತಿ ತೇಕುಲಾ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ. ಎಲ್ಗಾರ್ ಪರಿಷತ್ ಗೆ ಸಂಬಂಧಿಸಿದ ಪುಣೆ ಮೂಲದ ಕಬೀರ್ ಕಲಾ ಮಂಚ್ ನ ಜೊತೆ ನಂಟು ಹೊಂದಿರುವ ಹಲವು ರಾಜಕೀಯ ಮತ್ತು ಸಾಂಸ್ಕೃತಿಕ ವ್ಯಕ್ತಿಗಳು ಮತ್ತು ಕಾರ್ಯಕರ್ತರನ್ನೂ ಈ ಸಂಬಂಧ ವಿಚಾರಣೆಗೊಳಪಡಿಸಲಾಗಿದೆ.
ಸುಮಾರು ಮೂರು ವರ್ಷಗಳ ಹಿಂದೆ, 2017ರ ಡಿಸೆಂಬರ್ 31ರಂದು ಪುಣೆಯಲ್ಲಿ ‘ಭೀಮಾ ಕೋರೆಗಾಂವ್ ಶೌರ್ಯ ದಿನ ಪ್ರೇರಣಾ ಅಭಿಯಾನ’ ಎಂಬ ಹೆಸರಿನಲ್ಲಿ ಎಲ್ಗಾರ್ ಪರಿಷತ್ ಸಮಾವೇಶ ನಡೆದಿತ್ತು. ಆ ಸಮಾವೇಶದ ವೇಳೆ ದಲಿತರ ಯುವಕರ ಮೇಲೆ ಹಿಂದುತ್ವವಾದಿಗಳು ಹಲ್ಲೆ ದಾಳಿ ನಡೆಸಿ, ಇಡೀ ಸಮಾವೇಶ ಹಿಂಸಾ ಸಂಘರ್ಷಕ್ಕೆ ತಿರುಗಿತ್ತು. ಆ ಬಳಿಕ ಮಹಾರಾಷ್ಟ್ರದಾದ್ಯಂತ ಸಾಮುದಾಯಿಕ ಸಂಘರ್ಷಕ್ಕೆ ಈ ಘಟನೆ ಕಾರಣವಾಗಿತ್ತು. ಘಟನೆಯ ತನಿಖೆ ನಡೆಸಿದ್ದ ಪುಣೆ ಪೊಲೀಸರು, 2018ರ ಜೂನ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿದ್ದರು. ವಿಚಾರಣೆಯ ಬಳಿಕ, ಪೊಲೀಸರು ಸಲ್ಲಿಸಿದ ಮೊದಲ ಆರೋಪ ಪಟ್ಟಿಯಲ್ಲಿ, ಎಲ್ಗಾರ್ ಪರಿಷತ್ ಸಂಘಟನೆಯ ಹಿಂದೆ ನಿಷೇಧಿತ ಮಾವೋವಾದಿ ಸಂಘಟನೆಯ ಕೈವಾಡ ಇದೆ ಎಂದು ಆರೋಪಿಸಿದ್ದರು.
ಬಳಿಕ 2019ರ ಫೆಬ್ರವರಿಯಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿದ್ದ ಪುಣೆ ಪೊಲೀಸರು, ಎಲ್ಗಾರ್ ಪರಿಷತ್ ಹಿಂದೆ ತಲೆಮರೆಸಿಕೊಂಡಿರುವ ಮಾವೋವಾದಿ ನಾಯಕ ಗಣಪತಿ ಕೈವಾಡ ಇದ್ದು, ಇಡೀ ಘಟನೆಯ ರೂವಾರಿ ಆತನೇ ಎಂದು ಆರೋಪಿಸಿದ್ದರು.
ಈ ನಡುವೆ, ಎಲ್ಗಾರ್ ಪರಿಷತ್ ಸಂಘಟಕರು ಪ್ರಧಾನಿ ಮೋದಿಯ ಹತ್ಯೆಗೂ ಸಂಚು ರೂಪಿಸಿದ್ದರು ಎಂಬ ಪುಣೆ ಪೊಲೀಸರ ಆರೋಪದ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಕಳೆದ ಜನವರಿಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಎನ್ ಐಎ ಅಂಬೇಡ್ಕರವಾದಿ ಚಿಂತಕ ಆನಂದ್ ತೇಲ್ದುಂಬ್ದೆ, ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಗೌತಮ್ ನವಲೇಖಾ ಅವರನ್ನು ಬಂಧಿಸಿ ವಿಚಾರಣೆ ನಡೆಸಿದೆ.
Also Read: ಭೀಮಾ ಕೋರೆಗಾಂವ್ ಪ್ರಕರಣದ ಹಿಂದಿದೆ ಮಾಲ್ ವೇರ್ ಅಸ್ತ್ರದ ಪಿತೂರಿ!
ಆ ಮುನ್ನ ಪುಣೆ ಪೊಲೀಸರು, ಭೀಮಾ ಕೋರೆಗಾಂವ್ ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದ್ದು, ಆ ಪೈಕಿ ದಲಿತ ಹೋರಾಟಗಾರ ಮತ್ತು ಲೇಖಕ ಸುಧೀರ್ ಧಾವಲೆ, ಸಾಮಾಜಿಕ ಹೋರಾಟಗಾರ ಮಹೇಶ್ ರಾವತ್, ನಾಗ್ಪುರ ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಶೋಮಾ ಸೇನ್, ವಕೀಲರಾದ ಅರುಣ್ ಫೆರೇರಾ ಮತ್ತು ಸುಧಾ ಭಾರದ್ವಾಜ್, ವೆರ್ನಾನ್ ಗೋನ್ಸಾಲ್ವೀಸ್, ಕೈದಿಗಳ ಹಕ್ಕಿನ ಪರ ಹೋರಾಟಗಾರ ರೋನಾ ವಿಲ್ಸನ್, ವಕೀಲ ಸುರೇಂದ್ ಗಾದಿಲಿಂಗ್ ಹಾಗೂ ಖ್ಯಾತ ಕವಿ ವರವರ ರಾವ್ ಪ್ರಮುಖರು. ಸದ್ಯ ಶೋಮಾ ಸೇನ್ ಮತ್ತು ಸುಧಾ ಭಾರದ್ವಾಜ್ ಅವರು ಬೈಕುಲ್ಲಾದ ಮಹಿಳಾ ಬಂಧೀಖಾನೆಯಲ್ಲಿದ್ದಾರೆ. ಉಳಿದವರನ್ನು ಮುಂಬೈನ ಟಲೋಜಾ ಸೆಂಟ್ರಲ್ ಜೈಲಿನಲ್ಲಿಡಲಾಗಿದೆ. ಆ ಪೈಕಿ ವಯೋವೃದ್ಧ ಕವಿ ವರವರ ರಾವ್ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಕರೋನಾ ಪಾಸಿಟಿವ್ ಕೂಡ ಆಗಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Also Read: ಜನ ಹೋರಾಟ ಬಗ್ಗುಬಡಿಯಲು ಭೀಮಾ ಕೋರೆಗಾಂವ್ ಮಾಡೆಲ್!
2017ರ ಡಿಸೆಂಬರಿನಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರ ನಡೆದ ಬಳಿಕ ಈವರೆಗೆ ಪುಣೆ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಸರಣಿ ಬಂಧನಗಳನ್ನು ನಡೆಸಿದ್ದರೂ, ಪ್ರಕರಣದ ವಿಷಯದಲ್ಲಿ ಹಲವು ಅನುಮಾನಗಳು ಮತ್ತು ಶಂಕೆಗಳು ಮುಂದುವರಿದಿವೆ. ಪ್ರಮುಖವಾಗಿ ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿರುವ ಲ್ಯಾಪ್ ಟಾಪ್ ಮತ್ತು ಹಾರ್ಡ್ ಡಿಸ್ಕ್ ಗಳ ವಿಷಯದಲ್ಲಿ ಸ್ವತಃ ತನಿಖಾ ಸಂಸ್ಥೆಗಳ ಮೇಲೆಯೇ ಕೆಲವು ಆರೋಪಗಳು ಕೇಳಿಬಂದಿದ್ದು, ಪ್ರಧಾನಿ ಮೋದಿ ಮತ್ತು ಹಿಂದುತ್ವವಾದಿ ಸಂಘಟನೆಗಳ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ ದೇಶದ ವಿಚಾರವಾದಿಗಳು ಮತ್ತು ಚಿಂತಕರನ್ನು ಈ ಪ್ರಕರಣದಲ್ಲಿ ಸಿಲುಕಿಸಿ ಬಗ್ಗುಬಡಿಯುವ ಯತ್ನ ನಡೆಯುತ್ತಿದೆ. ಆ ಉದ್ದೇಶದಿಂದ ಹ್ಯಾಕಿಂಗ್ ಮತ್ತಿತರ ತಂತ್ರಜ್ಞಾನವನ್ನು ಬಳಸಿಕೊಂಡು ಆರೋಪಿತರ ಎಲೆಕ್ಟ್ರಾನಿಕ್ ಸಲಕರಣೆಗಳಲ್ಲಿ ಆರೋಪಕ್ಕೆ ಪೂರಕ ಮಾಹಿತಿಯನ್ನು ಸೇರಿಸಲಾಗಿದೆ. ಜೊತೆಗೆ ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಮೊಬೈಲ್ ಸೇರಿದಂತೆ ಬಂಧಿತರ ಎಲೆಕ್ಟ್ರಾನಿಕ್ ಸಲಕರಣೆಗಳಲ್ಲಿ ಹೇಗೆ ಆರೋಪಕ್ಕೆ ಪೂರಕವಾಗಿ ಬೇಕಾದ ಮಾಹಿತಿಯನ್ನು, ಪತ್ರಗಳನ್ನು ಮಾಲ್ ವೇರ್ ಮೂಲಕ ಸೇರಿಸಲಾಗಿದೆ ಎಂಬ ಬಗ್ಗೆ ಈ ಮೊದಲು ಪ್ರಮುಖ ಸುದ್ದಿಜಾಲತಾಣ ದ ಕ್ಯಾರವಾನ್ ಸರಣಿ ತನಿಖಾ ವರದಿಗಳನ್ನೂ ಮಾಡಿತ್ತು.
ಬಿಜೆಪಿ ಸರ್ಕಾರ ತನ್ನ ನೀತಿ ಮತ್ತು ನಿಲುವುಗಳನ್ನು ಪ್ರಶ್ನಿಸುವ ಸಾಹಿತಿಗಳು, ಹೋರಾಟಗಾರರು, ಪತ್ರಕರ್ತರು, ವಕೀಲರು ಮುಂತಾದವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗೆ ಅಟ್ಟುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದೀಗ ಈ ಸರಣಿ ಬಂಧನಗಳ ಸಾಲಿಗೆ ಹನಿ ಬಾಬು ಬಂಧನ ಹೊಸ ಸೇರ್ಪಡೆ.