ವಿವಾದಾತ್ಮಕ ಹಿಂದುತ್ವ ಪ್ರತಿಪಾದಕ, ಮಹಾರಾಷ್ಟ್ರದ ವಿನಾಯಕ ದಾಮೋದರ ಸಾವರ್ಕರ್ ಗೆ ಪ್ರತಿಷ್ಠಿತ ಭಾರತ ರತ್ನ ನೀಡಲು ಶಿಫಾರಸು ಮಾಡಲಾಗುವುದು ಎಂಬ ಅಂಶವನ್ನೊಳಗೊಂಡ ಪ್ರಣಾಳಿಕೆಯನ್ನು ಮಹಾರಾಷ್ಟ್ರ ಬಿಜೆಪಿಯು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದೆ. ಕಳೆದ ಐದು ವರ್ಷ ಆಡಳಿತ ನಡೆಸಿದರೂ ಹೇಳಿಕೊಳ್ಳುವಂಥ ಯಾವುದೇ ಅಭಿವೃದ್ಧಿ ಕೆಲಸ ಮಾಡದ ದೇವೇಂದ್ರ ಫಡ್ನವಿಸ್ ಸರ್ಕಾರ ನೈಜ ವಿಚಾರಗಳಿಂದ ವಿಮುಖವಾಗುವ ಉದ್ದೇಶದಿಂದ ಸಾವರ್ಕರ್ ಗೆ ಭಾರತ ರತ್ನ ನೀಡುವಂಥ ವಿವಾದಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುವ ಚಾಳಿಯನ್ನು ಮುಂದುವರಿಸಿದೆ.
ಗಂಭೀರ ಸಮಸ್ಯೆಗಳನ್ನು ಗೌಣವಾಗಿಸಿ, ಜನರ ಸಮಸ್ಯೆಗಳನ್ನು ಎತ್ತದಂತೆ ವಿರೋಧಿ ಪಾಳೆಯನ್ನು ದೂರ ಇಡುವುದು ಬಿಜೆಪಿಯ ಪುರಾತನ ರಾಜಕೀಯ ತಂತ್ರ. ಇದರ ಭಾಗವಾಗಿಯೇ ಸಾವರ್ಕರ್ ಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದಿದೆ. ಇದರ ಬೆನ್ನಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾರಣಾಸಿಯ ಬನಾರಸ್ ವಿಶ್ವವಿದ್ಯಾಲಯದಲ್ಲಿ 1857ರ ಸಿಪಾಯಿ ದಂಗೆ ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಗುರುತಿಸಿದವರು ಸಾವರ್ಕರ್ ಎಂದು ಹೇಳುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಪುರುಷರೊಬ್ಬರಲ್ಲಾದ ಸಾವರ್ಕರ್ ಗುಣಗಾನ ಮಾಡಿರುವುದು ಮಹಾರಾಷ್ಟ್ರ ಬಿಜೆಪಿಯ ಭರವಸೆ ಈಡೇರಲು ಸಾಕಷ್ಟು ಸಮಯದ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ “ಇತಿಹಾಸವನ್ನು ಭಾರತದ ದೃಷ್ಟಿಕೋನದಲ್ಲಿ ಬರೆಯುವ ಅಗತ್ಯವಿದೆ” ಎಂದು ಹೇಳಿರುವ ಅಮಿತ್ ಶಾ ಮುಂದಿನ ದಿನಮಾನಗಳ ಭೀಕರತೆಯ ಸೂಚನೆಯನ್ನೂ ನೀಡಿದ್ದಾರೆ.
ಮಹಾತ್ಮ ಗಾಂಧೀಜಿ ಅವರ ಹತ್ಯೆಯ ಸಂಚಿನ ಕುರಿತು ತನಿಖೆ ನಡೆಸಲು ನ್ಯಾ. ಕಪೂರ್ ಆಯೋಗ ಸಿದ್ಧತೆ ನಡೆಸುತ್ತಿದ್ದಾಗ 1966ರಲ್ಲಿ ತಮ್ಮ 83 ನೇ ವಯಸ್ಸಿನಲ್ಲಿ ಹಿಂದೂ ಮಹಾ ಸಭಾದ ಮುಖ್ಯಸ್ಥ ಸಾವರ್ಕರ್ ಅನ್ನ-ನೀರು ತ್ಯಜಿಸಿ ಸಾವನ್ನಪ್ಪಿದ್ದರು. ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಸೇರಿದಂತೆ ಎಂಟು ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ದೃಢೀಕೃತ ದಾಖಲೆಯ ಕೊರತೆಯ ಹಿನ್ನೆಲೆಯಲ್ಲಿ ಸಾವರ್ಕರ್ ಬಚಾವಾಗಿದ್ದರು. 1948ರ ಜನವರಿಯಲ್ಲಿ ಗಾಂಧೀಜಿಯನ್ನು ಕೊಂದಾತ ಆರ್ ಎಸ್ ಎಸ್ ನ ಬೆಂಬಲಿಗ ನಾಥೂರಾಮ್ ಗೋಡ್ಸೆ, ಈತನ ಗುರುವೇ ಸಾವರ್ಕರ್.
ಸ್ವಚ್ಛ ಭಾರತದ ಹೆಸರಿನಲ್ಲಿ ಗಾಂಧೀಜಿ ಕನ್ನಡಕವನ್ನು ಮೆರೆಸುತ್ತಿರುವ ಬಿಜೆಪಿ, ಈ ವರ್ಷ ಗಾಂಧೀಜಿಯವರ 150ನೇ ವರ್ಷಾಚರಣೆಯಲ್ಲಿ ತೊಡಗಿದೆ. ಇಂಥ ಸಂದರ್ಭದಲ್ಲಿ ಗಾಂಧಿಯನ್ನು ಕೊಂದ ಗೋಡ್ಸೆ ಗುರುವಾದ ಸಾವರ್ಕರ್ ಗೆ ಭಾರತ ರತ್ನ ನೀಡುವುದಾಗಿ ಹೇಳುತ್ತಿರುವುದನ್ನು ಅರ್ಥೈಸಿಕೊಳ್ಳಬೇಕಾದ ಬಗೆ ಯಾವುದು? ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಸಾವರ್ಕರ್ ಜೊತೆಗೆ ಗೋಡ್ಸೆಗೂ ಭಾರತ ರತ್ನ ನೀಡಲು ಬಿಜೆಪಿ ನಿರ್ಧರಿಸುವುದು ಒಳಿತು. ಗೋಡ್ಸೆ ಹೆಸರಿನಲ್ಲಿ ದೇವಸ್ಥಾನ ಕಟ್ಟಿರುವಾಗ, ಗಾಂಧೀಜಿಯನ್ನು ಗೋಡ್ಸೆ ಕೊಂದಿದ್ದು ಸರಿ ಎಂದು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಬಿಜೆಪಿಯ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಬಹಿರಂಗವಾಗಿ ಹೇಳಿರುವಾಗ ಆತನಿಗೆ ಭಾರತ ರತ್ನ ಕೊಡುವ ದಿನಗಳು ದೂರವಿಲ್ಲ ಎಂದೆನಿಸುವುದು ಸಹಜ.
ಬಿಜೆಪಿ ಸೇರಿದಂತೆ ಆರ್ ಎಸ್ ಎಸ್ ನ ಬಹುತೇಕ ಸಂಘಟನೆಗಳು ಸಾವರ್ಕರ್ ಅವರನ್ನು “ವೀರ್” ಎಂದು ಹೆಮ್ಮೆಯಿಂದ ಸಂಬೋಧಿಸುತ್ತವೆ. ಆದರೆ, ಈ ಪದವಿಗೆ ನಿಜಕ್ಕೂ ಸಾವರ್ಕರ್ ಸೂಕ್ತವಾದ ವ್ಯಕ್ತಿಯೇ ಎಂದು ನೋಡಿದರೆ ಅದೂ ವ್ಯಂಗ್ಯದಂತೆ ಭಾಸವಾಗುತ್ತದೆ. ಮೂವರು ಬ್ರಿಟಿಷ್ ಅಧಿಕಾರಿಗಳು ಹಾಗೂ ಮಹಾತ್ಮ ಗಾಂಧಿಯ ಹತ್ಯೆಯಲ್ಲಿ ಸಾವರ್ಕರ್ ಪಾತ್ರ ಇದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಬ್ರಿಟಿಷ್ ಅಧಿಕಾರಿ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ಸಾವರ್ಕರ್ ಅವರನ್ನು 1911ರಲ್ಲಿ ಬ್ರಿಟಿಷರು ಅಂಡಮಾನ್ ದ್ವೀಪದ ಪೋರ್ಟ್ ಬ್ಲೇರ್ ನಲ್ಲಿರುವ ಕಾರಾಗೃಹದಲ್ಲಿ ಇರಿಸಿದ್ದರು.
ಇದೇ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಪಿತೂರಿ ನಡೆಸಿದ ಪ್ರಕರಣದಲ್ಲಿ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖದೇವ್ ಅವರಿಗೆ ವಸಹಾತು ಆಡಳಿತ ಗಲ್ಲು ಶಿಕ್ಷೆ ವಿಧಿಸಿತ್ತು. ಕ್ಷಮಾಪಣೆ ಕೇಳಲು ಒಲ್ಲದ 23 ವರ್ಷದ ಭಗತ್ ಸಿಂಗ್ ನೇಣಿಗೆ ಶರಣಾದರು. ಆದರೆ, ಸಾವರ್ಕರ್ ಹೀಗೆ ಮಾಡಲಿಲ್ಲ. ಸೆರೆಮನೆಯಿಂದ ಬಿಡುಗಡೆಯಾಗಲು ಬ್ರಿಟಿಷರಿಗೆ ಅಂಗಲಾಚಿದರು. ಹಲವಾರು ಕ್ಷಮಾಪಣೆ ಪತ್ರಗಳನ್ನು ಸಾವರ್ಕರ್ ಬ್ರಿಟಿಷರಿಗೆ ಬರೆದಿದ್ದಾರೆ. “ಸೆರೆಮನೆಯಲ್ಲಿ ಹಿಂಸೆ ಅನುಭವಿಸಲಾಗದು. ಮುಂದೆ ಬ್ರಿಟಿಷ್ ಸರ್ಕಾರದ ವಿರುದ್ಧ ಪಿತೂರಿ ನಡೆಸಿ, ಸ್ವಾತಂತ್ರ್ಯ ಹೋರಾಟ ನಡೆಸುವುದಿಲ್ಲ. ಈಗಾಗಲೇ ಸರ್ಕಾರದ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವವರನ್ನು ಮುಖ್ಯವಾಹಿನಿಗೆ ತರುತ್ತೇನೆ. ಬ್ರಿಟಿಷ್ ಸರ್ಕಾರ ನೀಡುವ ಯಾವುದೇ ಜವಾಬ್ದಾರಿ ನಿಭಾಯಿಸಲು ತಾನು ಸಿದ್ಧ” ಎಂದು ಸಾವರ್ಕರ್ ಬ್ರಿಟಿಷರಿಗೆ ಪತ್ರ ಬರೆದಿರುವುದು ಸಾರ್ವಜನಿಕ ದಾಖಲೆಯಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಸಾವರ್ಕರ್, ರಾಜಕೀಯದ ಭಾಗವಾಗಿ ಅತ್ಯಾಚಾರ ಮಾಡುವುದರಲ್ಲಿ ತಪ್ಪಿಲ್ಲ ಎಂದು ತಮ್ಮ “ಸಿಕ್ಸ್ ಗ್ಲೋರಿಯಸ್ ಇಪಾಕ್ಸ್ ಆಫ್ ಇಂಡಿಯನ್ ಹಿಸ್ಟರಿ” (Six Glorious Epochs of Indian History) ಹೊತ್ತಿಗೆಯಲ್ಲಿ ಪ್ರತಿಪಾದಿಸಿದ್ದಾರೆ. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ, ಪ್ರತೀಕಾರವನ್ನೇ ಜೀವನದ ಭಾಗವಾಗಿಸಿಕೊಂಡ ಅವರ ಬೋಧನೆಗಳು ಇಂದಿನ ಭಾರತದಲ್ಲಿ ವಾಸ್ತವವಾಗಿರುವುದು ಕಹಿಸತ್ಯ. 2002ರ ಗುಜರಾತ್ ಹತ್ಯಾಕಾಂಡ ಹಾಗೂ 2013ರ ಮುಜಾಫ್ಫರ್ ನಗರ ಕೋಮು ಗಲಭೆಯಲ್ಲಿ ಪುಂಡರು ಕಂಡ ಕಂಡ ಜಾಗದಲ್ಲಿ ಮಹಿಳೆಯರು, ಗರ್ಭಿಣಿಯರು, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವುದನ್ನು ನೆನಪಿಸಿಕೊಳ್ಳಬೇಕಿದೆ.
ಇನ್ನು, ಮುಸ್ಲಿಂರು ಹಾಗೂ ವಿದೇಶಿ ಮಹಿಳೆಯರ ಮೇಲೆ ಸಾವರ್ಕರ್ ಗೆ ಎಷ್ಟು ದ್ವೇಷ ಇತ್ತು ಎಂಬುದಕ್ಕೆ ಎರಡು ಐತಿಹಾಸಿಕ ಘಟನೆಗಳು ಉದಾಹರಣೆಯಾಗಿವೆ. ಮುಸ್ಲಿಂ ಗವರ್ನರ್ ಕಲ್ಯಾಣ್ ನನ್ನು ಸೋಲಿಸುವ ಛತ್ರಪತಿ ಶಿವಾಜಿ ಮಹಾರಾಜ್, ಕಲ್ಯಾಣ್ ಸೊಸೆಯನ್ನು ಸುರಕ್ಷಿತವಾಗಿ ಮರಳಿ ಮನೆಗೆ ಕಳುಹಿಸುತ್ತಾನೆ. ಶಿವಾಜಿಯ ಈ ನಡೆಗೆ ಸಾವರ್ಕರ್ ವಿಷಾದ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಪೇಶ್ವೆ ಚಿಮಾಜಿ ಅಪ್ಪ (1707-1740) ಅವರು ಪಶ್ಚಿಮ ಮಹಾರಾಷ್ಟ್ರದಲ್ಲಿ ಬರುವ ಅಂದಿನ ಬಸೈನ್, ಇಂದಿನ ವಸೈ ಗವರ್ನರ್ ನನ್ನು ಸೋಲಿಸಿದರೂ ಆತನ ಪತ್ನಿಗೆ ಯಾವುದೇ ಹಾನಿ ಮಾಡುವುದಿಲ್ಲ. ಈ ಘಟನೆಗೂ ಸಾವರ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಇದರರ್ಥ ಮಹಿಳೆಯರ ಬಗ್ಗೆ ಅವರಿಗೆ ಇದ್ದ ಭಾವನೆ ಎಂಥದ್ದು ಎಂಬುದು ಸುಲಭಕ್ಕೆ ಅರ್ಥವಾಗುವಂಥದ್ದು.
ಇನ್ನೊಂದು ಮಹತ್ವದ ಸಂಗತಿ ಎಂದರೆ ಹಿಂದೂಗಳು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ದೇಶದ ಅಗತ್ಯವಿದೆ ಎಂದು ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾಗೂ ಮೊದಲು ಪ್ರತಿಪಾದಿಸಿದವರೂ ಇದೇ ಸಾವರ್ಕರ್ ಎಂಬುದಕ್ಕೂ ಇತಿಹಾಸ ತಜ್ಞರು ದಾಖಲೆ ಒದಗಿಸಿದ್ದಾರೆ. ಅಭಿನವ್ ಭಾರತ್ ಆಗಿ ಬದಲಾಗಿರುವ ಮಿತ್ರ ಮೇಳ ಸಂಘಟನೆಯ ಸ್ಥಾಪಕರೂ ಇದೇ ವೀರ್ ಸಾವರ್ಕರ್. ಮಾಲೆಗಾಂವ್ ಸ್ಫೋಟ ಪ್ರಕರಣದ ಕಳಂಕಿತ ಕರ್ನಲ್ ಪುರೋಹಿತ್ ಅವರು ಇದೇ ಅಭಿನವ್ ಭಾರತ್ ಸಂಸ್ಥೆಯ ಉತ್ಪನ್ನ ಎಂಬುದನ್ನು ಸ್ಮರಿಸಬೇಕಿದೆ. “ಹಿಂದುತ್ವ ಮತ್ತು ಸಾವರ್ಕರ್” ಎಂಬ ಹೊತ್ತಿಗೆಯಲ್ಲಿ ಎ ಜಿ ನುರಾನಿ ಅವರು ಸಾವರ್ಕರ್ ಅವರ ವಿಚಾರ, ಬದುಕು, ಚಿಂತನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ಹೀಗೆ ದ್ವೇಷ, ಹಿಂಸೆಯನ್ನು ಉಸಿರಾಡಿದ ತನ್ನ ಸೈದ್ಧಾಂತಿಕ ಸಂಗಾತಿಗೆ ಭಾರತ ರತ್ನದಂಥ ಗೌರವ ಸಲ್ಲಿಸುವ ಕೆಲಸವನ್ನು ಆರ್ ಎಸ್ ಎಸ್ ಪ್ರಣೀತ ಬಿಜೆಪಿ ಆಡಳಿತ ಮಾಡಲು ಮುಂದಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಳ-ಅಗಲಗಳನ್ನು ಬಲ್ಲವರಿಗೆ ಸಾವರ್ಕರ್ ಗೆ ಭಾರತ ರತ್ನ ನೀಡುವ ತೀರ್ಮಾನ ಅಚ್ಚರಿ ಮೂಡಿಸದು.