ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಪುಟ್ಟ ರಾಷ್ಟ್ರ ನೇಪಾಳವು ಪೂರ್ವ ಕಾಲದಿಂದಲೂ ಭಾರತದೊಂದಿಗೆ ಅತ್ಯತ್ತಮ ಸಂಭಂಧ ಹೊಂದಿರುವ ದೇಶವಾಗಿದೆ. ಭಾರತದ ಕರೆನ್ಸಿಯೇ ನೇಪಾಳದಲ್ಲಿ ಹೆಚ್ಚು ಚಲಾವಣೆಯಲ್ಲಿರುವ ಕರೆನ್ಸಿ ಆಗಿದೆ. ನೇಪಾಳದ ಲಕ್ಷಾಂತರ ಮಂದಿ ಭಾರತದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ . ಎರಡೂ ದೇಶಗಳ ನಡುವೆ ಸಂಚರಿಸಲು ವೀಸಾ ಕೂಡ ಅವಶ್ಯಕತೆಯಿಲ್ಲ. ಎರಡೂ ದೇಶಗಳ ನಡುವೆ ಉತ್ತಮ ವಾಣಿಜ್ಯ ಸಂಭಂದಗಳೂ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಆದರೆ ಎರಡು ದೇಶಗಳ ನಡುವೆ ಇರುವ 35 ಚದರ ಕಿಲೋಮೀಟರ್ ಭೂ ಪ್ರದೇಶವೊಂದು ಎರಡೂ ದೇಶಗಳ ನಡುವೆ ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿದೆ. ಈ ಪುಟ್ಟ ಭೂ ಪ್ರದೇಶವನ್ನು ಎರಡೂ ರಾಷ್ಟ್ರಗಳು ತಮ್ಮ ದೇಶದ ಅವಿಭಾಜ್ಯ ಅಂಗವೆಂದು ಹೇಳುತ್ತಿವೆ. ಭಾರತವು ಈ ಭೂ ಪ್ರದೇಶ ಉತ್ತರಖಂಡ್ ರಾಜ್ಯದ ಪಿತೋರಾಘರ್ ಜಿಲ್ಲೆಗೆ ಸೇರಿದ್ದು ಎಂದು ಹೇಳುತಿದ್ದರೆ ನೇಪಾಳವು ಇದು ತನ್ನ ದಾರ್ಚುಲಾ ಜಿಲ್ಲೆಗೆ ಸೇರಿದ ಭೂ ಪ್ರದೇಶ ಎಂದು ಹೇಳಿಕೊಳ್ಳುತ್ತಿದೆ.
ಈ ವಿಚಾರದ ಕುರಿತು ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸಲು ನೇಪಾಳದ ಪ್ರಧಾನ ಮಂತ್ರಿ ಕೆ ಪಿ ಶರ್ಮಾ ಒಲಿ ಅವರ ವಿಶೇಷ ದೂತ ಮಾಧವ್ ಕುಮಾರ್ ಅವರು ಈ ವಾರದ ಮೊದಲ ಭಾಗದಲ್ಲಿ ಭಾರತಕ್ಕೆ ಭೇಟಿ ನೀಡಲು ಯೋಜಿಸಿದ್ದರು , ಆದರೆ ಕೇಂದ್ರ ಸರ್ಕಾರ ಮಾಧವ್ ಒಲಿ ಅವರ ಭೇಟಿಯನ್ನೇ ತಿರಸ್ಕರಿಸಿದೆ. ಮಾಧವ್ ಕುಮಾರ್ ಅವರು ನೇಪಾಳದ ಮಾಜಿ ಪ್ರಧಾನ ಮಂತ್ರಿಯೂ ಆಗಿದ್ದು ನೇಪಾಳದ ಕಮ್ಯನಿಸ್ಟ್ ಪಕ್ಷದ ಹಿರಿಯ ನಾಯಕರೂ ಆಗಿದ್ದಾರೆ. ಇವರು ಮುಂದಿನ ದಿನಗಳಲ್ಲಿ ಇದೆ ವಿಚಾರದ ಕುರಿತು ಚರ್ಚೆ ನಡೆಸಲು ಭಾರತಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಗಳ ಪ್ರಕಾರ ಈ ತಿಂಗಳ 4 ಮತ್ತು 5 ರಂದು ನೇಪಾಳ ಸರ್ಕಾರದ ದೂತ ಮಾಧವ್ ಒಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವಾದವನ್ನು ಬಗೆ ಹರಿಸಲು ಕೂಡಲೇ ಎರಡೂ ದೇಶಗಳ ನಡುವೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಏರ್ಪಡಿಸುವಂತೆ ಒತ್ತಾಯಿಸಲು ಯೋಜಿಸಿದ್ದರು. ಆದರೆ ಭಾರತ ಸರ್ಕಾರ ಈ ವಿಶೇಷ ದೂತರ ಭೇಟಿಯನ್ನೇ ನಿರಾಕರಿಸಿದ್ದರಿಂದ ಉದ್ದೇಶಿತ ಭೇಟಿಯನ್ನೇ ರದ್ದು ಮಾಡಲಾಗಿದೆ.
ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗ್ಯಾವಳಿ ಅವರ ಪ್ರಕಾರ ಭಾರತದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಮಾಡಿಕೊಂಡ ಮನವಿಗೆ ಇನ್ನೂ ಪ್ರತಿಕ್ರಿಯೆ ಸಿಕ್ಕಿಲ್ಲ . ವಾಸ್ತವವಾಗಿ ಎರಡೂ ರಾಷ್ಟ್ರಗಳ ನಡುವೆ ವಿದೇಶಾಂಗ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯಲ್ಲಿ ಕಲಾಪಾನಿ ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕೆಂದು ತೀರ್ಮಾನವನ್ನು ತೆಗೆದುಕೊಂಡಿದ್ದೇ ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮ ಸ್ವರಾಜ್ ಅವರು. 2014 ರ ಜುಲೈ ತಿಂಗಳಿನಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದ ಸಚಿವೆ ಸುಷ್ಮ ಅವರು ನೇಪಾಳದ ಪ್ರಧಾನ ಮಂತ್ರಿಗಳನ್ನು ಭೇಟಿಯಾದಾಗ ಈ ತೀರ್ಮಾನ ತೆಗೆದುಕೊಂಡಿದ್ದರು.

ಆದರೆ ಅದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೇಪಾಳಕ್ಕೆ ಭೇಟಿ ನೀಡಿದ್ದಾಗ ನೇಪಾಳದೊಂದಿಗೆ ಬಾಕಿ ಇರುವ ಎಲ್ಲ ಗಡಿ ವಿಚಾರಗಳನ್ನು ಬಗೆಹರಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದರು. ಆದರೆ ಈ ವಿಷಯದಲ್ಲಿ ಯಾವುದೇ ವಿಷಯ ಚರ್ಚಿತವಾಗಲಿಲ್ಲ.
ಈಗ ನೇಪಾಳವು ಕಾಲಪಾನಿ ಹಾಗೂ ಸುಸ್ತಾ ಪ್ರದೇಶಗಳ ಭೂ ವಿವಾದವನ್ನು ಬಗೆಹರಿಸಿಕೊಳ್ಳಲು ಆತುರತೆಯಿಂದ ಇರುವುದು ನೇಪಾಳದ ವಿರೋಧ ಪಕ್ಷಗಳ ಒತ್ತಡದಿಂದಾಗಿ ಎನ್ನಲಾಗಿದೆ. ಈ ಎರಡೂ ಪ್ರದೇಶಗಳು ನೇಪಾಳದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿದ್ದು ಇವುಗಳ ವಿವಾದ ಬಗೆಹರಿಸಿಕೊಳ್ಳಲು ಭಾರತದ ವಿರುದ್ದ ಕಠಿಣ ನಿಲುವು ತಳೆಯಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿವೆ.
ಕಳೆದ ನವೆಂಬರ್ 2 ರಂದು ಭಾರತವು ಕಾಲಪಾನಿ ಭೂ ಪ್ರದೇಶವು ತನಗೆ ಸೇರಿದ್ದೆಂದು ಹೊಸ ನಕಾಶೆ ಬಿಡುಗಡೆ ಮಾಡಿದ ಬೆನ್ನಲ್ಲೇ ನೇಪಾಳದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ನೇಪಾಳದ ಪ್ರಮುಖ ವಿರೋಧ ಪಕ್ಷ ನೇಪಾಳಿ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿರುವ ವಿದ್ಯಾರ್ಥಿ ಸಂಘಟನೆಯು ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಭಾರೀ ಪ್ರತಿಭಟನೆ ನಡೆಸಿ ಭಾರತದ ನಕಾಶೆಯನ್ನು ಸುಟ್ಟಿತು.
ಈ ಭಾರೀ ಪ್ರತಿಭಟನೆಯ ಹಿಂದೆ ಬೀಜಿಂಗ್ ನ ಕಾಣದ ಕೈಗಳು ಇರುವ ಸಾದ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ. ಚೀನಾವು ಈ ಬೆಳವಣಿಗೆಗಳನ್ನು ಹದ್ದಿನ ಕಣ್ಣಿಟ್ಟು ಗಮನಿಸುತ್ತಿದೆ. ಚೀನಾವು ನೇಪಾಳದ ಸಹಯೋಗದೊಂದಿಗೇ ಎರಡೂ ದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಹೊಸ ರೈಲ್ವೇ ಮಾರ್ಗವನ್ನು ನಿರ್ಮಿಸಲು ಮುಂದಾಗಿದೆ.
ಭಾರತವು ಬಾಂಗ್ಲಾದೇಶದೊಡನೆ ಬಹಳ ಹಿಂದಿನಿಂದಲೇ ಹೊಂದಿದ್ದ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗಿದೆ. ಇದರಲ್ಲಿ ಬಾಂಗ್ಲಾದೇಶಕ್ಕೆ ಅವಶ್ಯಕತೆಗಿಂತಲೂ ಹೆಚ್ಚಿನ ಭೂ ಪ್ರದೇಶಗಳನ್ನೂ ಭಾರತ ಬಿಟ್ಟುಕೊಟ್ಟಿದೆ . ಹೀಗಿರುವಾಗ ಭಾರತದೊಂದಿಗೆ ವಿಶೇಷ ಸ್ನೇಹ ಸಂಭಂದ ಹೊಂದಿರುವ ನೇಪಾಳದೊಂದಿಗೂ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಅಡ್ಡಿ ಏನಿದೆ ಎಂದು ನೇಪಾಳದ ರಾಜತಾಂತ್ರಿಕರೊಬ್ಬರು ಕೇಳುತ್ತಾರೆ. ಈ ವಿವಾದವನ್ನು ಬಗೆಹರಿಸಿಕೊಳ್ಳಲು ವಿಳಂಬವಾದಷ್ಟೂ ಎರಡೂ ದೇಶಗಳ ನಡುವೆ ಈಗಿರುವ ಸ್ನೇಹ ಸಂಭಂದಗಳು ಹುಳಿಯಾಗುತ್ತವೆ ಎಂದು ಅವರ ಅಭಿಪ್ರಾಯವಾಗಿದೆ.
ನೇಪಾಳದಲ್ಲಿ ನೆಲೆಸಿರುವ ಮಧೇಶಿ ಸಮುದಾಯವು ಭಾರತೀಯ ಮೂಲದವರಾಗಿದ್ದು ಅಲ್ಲಿನ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿಯ ಮೂಲಕ ನೂತನ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಾಗ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬಹಿಷ್ಕರಿಸಿ ಭಾರೀ ಪ್ರತಿಭಟನೆಯನ್ನೇ ನಡೆಸಿತು. ಕಳೆದ ಸೆಪ್ಟೆಂಬರ್ 2015 ಹಾಗೂ 2016 ರ ಫೆಬ್ರವರಿಯ ಮದ್ಯೆ ನಡೆದ ಪ್ರತಿಭಟನೆಯಲ್ಲಿ ಪೋಲೀಸರ ಗುಂಡಿಗೆ 50 ಪ್ರತಿಭಟನಾಕಾರರು ಬಲಿಯಾಗಿದ್ದರು. ನೂತನ ಸಂವಿಧಾನದಲ್ಲಿ ತಮ್ಮ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬುದೇ ಮಧೇಶಿಗಳ ಪ್ರತಿಭಟನೆಗೆ ಮೂಲ ಕಾರಣವಾಗಿತ್ತು. ಈ ಪ್ರತಿಭಟನೆಯ ನಂತರ ಭಾರತ -ನೇಪಾಳ ಸಂಬಂಧ ಇನ್ನಷ್ಟು ಕಹಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ, ನವದೆಹಲಿಯು ಕಠ್ಮಂಡುವಿಗೆ ರಾಜತಾಂತ್ರಿಕ ಮಟ್ಟದಲ್ಲಿ ಗಡಿ ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸುತ್ತಿದ್ದರೆ, ನೇಪಾಳದ ಶರ್ಮಾ ಒಲಿ ಸರ್ಕಾರ ಅದಕ್ಕೆ ನಿರಾಕರಿಸುತ್ತಿದೆ. ಇದು ಭಾರತವನ್ನು ಕೆರಳಿಸಿದೆ ಎನ್ನಲಾಗಿದೆ. ಈ ಹಿಂದೆಯೂ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕುವಂತೆ ಭಾರತವು ನೇಪಾಳವನ್ನು ಹಲವು ಬಾರಿ ಕೇಳಿದೆ, ಆದರೆ ನೇಪಾಳವು ಇದಕ್ಕೆ ನಿರಾಕರಿಸುತ್ತಲೇ ಬಂದಿದೆ. ವಿದೇಶಾಂಗ ಕಾರ್ಯದರ್ಶಿಯ ಮಟ್ಟದಲ್ಲಿ ಒಂದು ಸ್ಥಾಪಿತ ಕಾರ್ಯವಿಧಾನವಿದೆ, ಅದನ್ನು ಸಕ್ರಿಯಗೊಳಿಸಬಹುದು ಮತ್ತು ಈ ಸಮಸ್ಯೆಯನ್ನು ಮತ್ತು ಇತರ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂದು 2013 ರಿಂದ 2017 ರವರೆಗೆ ನೇಪಾಳದ ಭಾರತದ ರಾಯಭಾರಿಯಾಗಿದ್ದ ರಂಜಿತ್ ರೇ ಅವರ ಅಭಿಪ್ರಾಯವಾಗಿದೆ.
ಕಳೆದ ತಿಂಗಳು ನೇಪಾಳದ ಭಾರತೀಯ ರಾಯಭಾರಿ ನಿಲಾಂಬರ್ ಆಚಾರ್ಯ ಅವರು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ಭೇಟಿ ಮಾಡಿ ಕಲಾಪಾನಿ ವಿಷಯವನ್ನು ಓಲಿ ಆಡಳಿತವು ಹೊಂದಿರುವ ನಿಲುವಿನ ಬಗ್ಗೆ ಒಂದು ದಾಖಲೆಯನ್ನು ಹಸ್ತಾಂತರಿಸಿದರು. ಅಲ್ಲದೆ ಈ ಕುರಿತು ತುರ್ತು ಸಭೆ ಕರೆಯಬೇಕೆಂದು ಆಚಾರ್ಯ ಅವರು ಮನವಿ ಮಾಡಿದ್ದರು.
ಕಲಾಪಣಿ ವಿಷಯದಲ್ಲಿ ಭಾರತ ಮತ್ತು ನೇಪಾಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮಹಾಕಾಳಿ ನದಿಯ ಮೂಲಕ್ಕೆ ಸಂಬಂಧಿಸಿದೆ. ನವದೆಹಲಿ ಈ ನದಿಯು ಉತ್ತರಾಖಂಡದಲ್ಲಿರುವ ಕಲಾಪಾನಿಯಿಂದ ಹುಟ್ಟಿಕೊಂಡಿದೆ ಎಂದು ನಂಬಿದರೆ, ನೇಪಾಳವು ಇದರ ಮೂಲ ಲಿಪುಲೆಖ್ ಎಂದು ಹೇಳುತ್ತದೆ, ಇದು ಭಾರತ, ನೇಪಾಳ ಮತ್ತು ಚೀನಾ ನಡುವಿನ ಮೂರು ರಾಷ್ಟ್ರಗಳ ನಡುವಿನ ಭೂಪ್ರದೇಶದಲ್ಲಿ ಇದೆ. 1816 ರ ಸುಗಾಲಿ ಒಪ್ಪಂದದ ಭಾಗವಾಗಿ, ಬ್ರಿಟಿಷರು ನೇಪಾಳದ ಪಶ್ಚಿಮ ಗಡಿಯಲ್ಲಿ ನದಿಯನ್ನು ಗುರುತಿಸಿದ್ದರು.
ಒಂದೆಡೆ ನೆರೆಯ ಚೀನಾ ಪದೇ ಪದೇ ಭಾರತದೊಂದಿಗೆ ಗಡಿ ವಿಷಯದಲ್ಲಿ ಕ್ಯಾತೆ ತೆಗೆಯುತಿದ್ದರೆ ಇದೀಗ ಸ್ನೇಹಿ ರಾಷ್ಟ್ರವೆಂದೇ ಗುರ್ತಿಸಿಕೊಂಡಿರುವ ನೇಪಾಳವೂ ಗಡಿ ವಿಷಯದಲ್ಲಿ ವಿವಾದ ಎತ್ತಿರುವುದು ಭಾರತಕ್ಕೆ ಹೊಸ ತಲೆನೋವಿನ ಸಂಗತಿಯಾಗಿದೆ.