ಗಡಿ ನಿಯಂತ್ರಣ ರೇಖೆ ವಿವಾದ ಕುರಿತು ತಾನು ನರೇಂದ್ರ ಮೋದಿಯೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಭಾರತೀಯ ಸರ್ಕಾರಿ ಅಧಿಕಾರಿಗಳು ಶುಕ್ರವಾರ ನಿರಾಕರಿಸಿದ್ದಾರೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಕುರಿತು ಎಪ್ರಿಲ್ 4 ರಂದು ನಡೆದ ಸಂಭಾಷಣೆ ಬಳಿಕ ಭಾರತದ ಪ್ರಧಾನಿ ಹಾಗೂ ಅಮೇರಿಕಾ ಅಧ್ಯಕ್ಷರ ನಡುವೆ ಯಾವ ಮಾತುಕತೆಯೂ ಇತ್ತೀಚೆಗೆ ನಡೆದಿಲ್ಲ ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ.
ತಾನು ಮೋದಿ ಬಳಿ ಮಾತನಾಡಿದ್ದು, ನರೇಂದ್ರ ಮೋದಿ ಮನಸ್ಸು ಈಗ ಸರಿಯಿಲ್ಲ ಎಂದು ಟ್ರಂಪ್ ಹೇಳಿರುವುದು ನಮಗೆ ಆಶ್ಚರ್ಯವೆನಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮಾತನಾಡಿದ್ದೇನೆ, ಚೀನಾ-ಭಾರತ ಗಡಿ ವಿವಾದದ ಕುರಿತು ಎದ್ದಿರುವ ವಿವಾದದಿಂದ ಅವರ ಮನಸ್ಸು ಹಾಳಾಗಿದೆ. ಅವರು ಒಳ್ಳೆಯ ಮೂಡ್ನಲ್ಲಿಲ್ಲ ಎಂದು ಗುರುವಾರದಂದು ಅಮೇರಿಕಾ ಅಧ್ಯಕ್ಷ ಟ್ರಂಪ್ ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದರು.
ಭಾರತ ಮತ್ತು ಚೀನಾ ನೇರ ಸಂಪರ್ಕದಲ್ಲಿದೆ ಎಂದ ಭಾರತ ಆ ಮೂಲಕ ಪರೋಕ್ಷವಾಗಿ ಮೂರನೆಯ ದೇಶವೊಂದು ಮಧ್ಯಸ್ಥಿಕೆ ವಹಿಸಬೇಕಿಲ್ಲ ಎಂದು ಟ್ರಂಪ್ಗೆ ಚಾಟಿ ಬೀಸಿದೆ. ಭಾರತ ಮತ್ತು ಚೀನಾದ ನಡುವೆ ಸಂಧಾನ ನಡೆಸಲು ತಾನು ಸಿದ್ಧವಿರುವುದಾಗಿ ಟ್ರಂಪ್ ಟ್ವೀಟ್ ಮಾಡಿದ್ದರು.
ಟ್ರಂಪ್ ಟ್ವೀಟ್ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಭಾರತ ಹಾಗೂ ಚೀನಾ ಶಾಂತಿಯುತ ಮಾತುಕತೆ ನಡೆಸುವ ಹಾದಿಯಲ್ಲಿದೆಯೆಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ್ ಹೇಳಿದ್ದಾರೆ.
ಭಾರತ ಹಾಗೂ ಚೀನಾದ ನಡುವಿನ ವಿವಾದವನ್ನು ತನಗೆ ಬಗೆಹರಿಸಲು ಸಾಧ್ಯವಿದೆಯೆಂದು ನಂಬಿರುವ ಟ್ರಂಪ್ ಸುದ್ದಿಗಾರರೊಂದಿಗೆ ಭಾರತ-ಚೀನಾ ತನ್ನನ್ನು ಮಧ್ಯಸ್ಥಿಕೆ ವಹಿಸಲು ಕೇಳಿಕೊಂಡರೆ ನಾನು ಮಧ್ಯಸ್ಥಿಕೆ ವಹಿಸುತ್ತೇನೆ, ತನಗೆ ಅದು ಸಾಧ್ಯವಿದೆ ಎಂದಿದ್ದಾರೆ.
ಭಾರತದಲ್ಲಿ ತನ್ನನ್ನು ಅಪಾರವಾಗಿ ಪ್ರೀತಿಸುತ್ತಾರೆ. ಅಮೇರಿಕಾದ ಮಾಧ್ಯಮಗಳಿಗಿಂತ ಭಾರತದ ಜನರು ನನ್ನನ್ನು ಹೆಚ್ಚು ಆದರಿಸುತ್ತಾರೆಂದು, ತನ್ನನ್ನು ಟೀಕೆ ಮಾಡುವ ಅಮೇರಿಕಾದ ಮಾಧ್ಯಮಗಳ ಮೇಲೆ ಅಸಮಾಧನ ವ್ಯಕ್ತಪಡಿಸಿದ್ದರು.