ಬಿಜೆಪಿ ಅಧಿಕಾರಕ್ಕೆ ಬಂದ 2014 ರಿಂದ ದಿನದಿಂದ ದಿನಕ್ಕೆ ದೇಶದಲ್ಲಿ ಅಶಾಂತಿ ತಲೆದೋರುತ್ತಿದೆ. ಸರ್ಕಾರ ಹಲವು ಕಾರ್ಯಕ್ರಮಗಳನ್ನು ತಂದಿದ್ದಾಗ್ಯೂ ಜನರು ಬೀದಿಗಿಳಿದು ರಾಜಕೀಯೇತರ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಈ ಅಶಾಂತಿಗೆ ಕಾರಣಗಳೇನು ಎಂಬುದರ ಬಗ್ಗೆ ಸೇನೆಯ ನಿವೃತ್ತ ಕರ್ನಲ್ ಅಲೋಕ್ ಆಸ್ಥಾನ ಅವರು ಆಂಗ್ಲ ವೆಬ್ ಸೈಟ್ ದಿ ವೈರ್ ನಲ್ಲಿ ಸವಿವರವಾಗಿ ಬರೆದಿದ್ದಾರೆ. ಅದರ ಪ್ರಮುಖ ಅಂಶ ಇಲ್ಲಿದೆ.
ಕಳೆದ ಹಲವು ವಾರಗಳಿಂದ ನಾನು ಮೋದಿ ಸರ್ಕಾರ ಕಾಡ್ಗಿಚ್ಚಿನಂತೆ ದೇಶಾದ್ಯಂತ ಅಶಾಂತಿಯನ್ನು ಉಂಟು ಮಾಡುತ್ತಿರುವುದನ್ನು ನೋಡುತ್ತಾ ಬಂದಿದ್ದೇನೆ. ಪರಿಸ್ಥಿತಿಗಳು ತುಂಬಾ ವಿಕೋಪಕ್ಕೆ ಹೋಗಿವೆ. ಎರಡ್ಮೂರು ವರ್ಷಗಳ ಹಿಂದೆ ಇದೇ ಮೋದಿ ಶೇ.85 ರಷ್ಟು ಭಾರತೀಯ ಕರೆನ್ಸಿಯನ್ನು ಅಮಾನ್ಯೀಕರಣ ಮಾಡಿದಾಗ ಬಹುತೇಕ ಪ್ರತಿಭಟನೆಗಳೇ ಇರಲಿಲ್ಲ. ಆದರೆ, ಈಗ ಪ್ರತಿಭಟನೆಯ ಕಿಚ್ಚು ಹೆಚ್ಚುತ್ತಿದೆ ಮತ್ತು ದಿನದಿಂದ ದಿನಕ್ಕೆ ಅದರ ಕಾವು ಏರತೊಡಗಿದೆ.
ವಿದ್ಯಾರ್ಥಿಗಳು ಬುಲೆಟ್ ಗಳಿಗೆ ಮತ್ತು ಸ್ಟನ್ ಗ್ರೆನೇಡ್ ಗಳಿಗೆ ಎದೆ ಕೊಡಬೇಕಾಗಿದೆ. ನಿಷ್ಠಾವಂತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ನಾಗರಿಕ ಸೇವೆಗೆ ರಾಜೀನಾಮೆ ನೀಡುವಂತ ಪರಿಸ್ಥಿತಿ ಎದುರಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳು ಪದವಿ ಮತ್ತು ಪ್ರಶಸ್ತಿಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಘನತೆಗೆ ಮತ್ತಷ್ಟು ಚ್ಯುತಿ ಬರುವಂತೆ ಮಾಡಿದೆ.
ದೇಶದೆಲ್ಲೆಡೆ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಉಪನ್ಯಾಸಕರು, ಅಧಿಕಾರಿಗಳು ಮೋದಿ ಮತ್ತು ಮೋದಿ ಸರ್ಕಾರದ ವಿರುದ್ಧ ಏಕೆ ಇಷ್ಟೊಂದು ಹುಮ್ಮಸ್ಸಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದೂ ಕೂಡ ಸರ್ಕಾರ ಹಲವಾರು ರೀತಿಯಲ್ಲಿ ನೀಡಿದ ಸ್ಪಷ್ಟನೆ ಭಾಗಶಃ ಸರಿಯಾಗಿದ್ದರೂ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ. ಇಂತಹ ಪ್ರಶ್ನೆಗಳಿಗೆ ಈ ಸಮುದಾಯಗಳು ನಡೆಸುತ್ತಿರುವ ಪ್ರತಿಭಟನೆಗಳೇ ಉತ್ತರವಾಗಿ ನಿಲ್ಲುತ್ತವೆ.
ಎನ್ಆರ್ ಸಿ ಅರ್ಥಾತ್ ರಾಷ್ಟ್ರೀಯ ನಾಗರಿಕರ ನೋಂದಣಿ. ಮೋದಿ ಪ್ರಕಾರ ಈ ವಿಚಾರವನ್ನು ಕ್ಯಾಬಿನೆಟ್ ನಲ್ಲಾಗಲೀ ಅಥವಾ ಸಂಸತ್ತಿನಲ್ಲಾಗಲೀ ಚರ್ಚಿಸಿಯೇ ಇಲ್ಲವಂತೆ. ಇದು ನಿಜವೇ?
ನೆಹರೂ-ಲಿಯಾಕತ್ ಒಪ್ಪಂದವನ್ನು ಪಾಕಿಸ್ತಾನ ಪರಿಪೂರ್ಣವಾಗಿ ಜಾರಿಗೆ ತಂದಿಲ್ಲ ಎಂಬುದು ನಿಜವಾದರೂ, ಇದಕ್ಕೆ ಸಿಎಎ ಪರಿಹಾರವಾಗಬಹುದು.
ಇನ್ನು ಹಲವು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಲ್ಪಿಸುವ ಸಂವಿಧಾನದ 370 ನೇ ವಿಧಿಯನ್ನು ತೆಗೆದುಹಾಕಲಾಗಿದೆ. ಈ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ್ದರಿಂದ ಕೆಲವು ಪ್ರಯೋಜನಗಳು ಇವೆ. ಈಗ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದು ನಿರ್ವಿವಾದ. ಇದನ್ನೇ ಕಳೆದ 70 ವರ್ಷಗಳಿಂದಲೂ ಇಡೀ ದೇಶ ಕೇಳುತ್ತಿತ್ತು.
ಇಷ್ಟೆಲ್ಲಾ ಇದ್ದಾಗ್ಯೂ, ಮತ್ತೇಕೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳನ್ನು ಪ್ರತಿಪಕ್ಷಗಳು ನಡೆಸುತ್ತಿಲ್ಲ. ಬದಲಿಗೆ ದೇಶದ ಜನಸಾಮಾನ್ಯರು ಬೀದಿಗಿಳಿಯತೊಡಗಿದ್ದಾರೆ, ತಮ್ಮ ಧ್ವನಿಯನ್ನು ಎತ್ತತೊಡಗಿದ್ದಾರೆ. ಈ ಪ್ರತಿಭಟನಾಕಾರರನ್ನು ಕಾಂಗ್ರೆಸ್ ಪಕ್ಷದವರು ಕರೆ ತರುತ್ತಿದ್ದಾರೆಯೇ? ಇಲ್ಲ ಜನರೇ ಸ್ವಯಂ ಪ್ರೇರಣೆಯಿಂದ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.
ಕೆಲವು ನಿರ್ದಿಷ್ಟ ಸಮಸ್ಯೆಗಳು ಅಥವಾ ವಿಚಾರಗಳ ಬಗ್ಗೆ ಅವರ ಕೋಪದ ಕಟ್ಟೆ ಒಡೆಯುತ್ತಿಲ್ಲ. 2014 ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿ ಸರ್ಕಾರ ಜನತೆಯ ಮೇಲೆ ಹೇರುತ್ತಿರುವ ಹಲವಾರು ಅವೈಜ್ಞಾನಿಕ ನೀತಿಗಳು ಮತ್ತು ಹಲವಾರು ರಹಸ್ಯ ಕಾರ್ಯಸೂಚಿಗಳನ್ನು ಅವರ ತಲೆ ಮೇಲೆ ಹಾಕುತ್ತಿರುವುದಕ್ಕೆ ರೋಸಿಹೋಗುತ್ತಿದ್ದಾರೆ.
ಸರ್ಕಾರ ಈ ರೀತಿಯ ಒತ್ತಡಗಳನ್ನು ಹಾಕಿದ ಆರಂಭದಲ್ಲಿ ಜನತೆಗೆ ತಳಮಳ ಉಂಟಾಗುತ್ತಿತ್ತು. ಆದರೆ, ದಿನದಿಂದ ದಿನಕ್ಕೆ ಇದರ ಕಾವು ಏರುತ್ತಾ ಕಿಚ್ಚು ಹೆಚ್ಚಾಗತೊಡಗಿದೆ. ಜನತೆ ಒಟ್ಟಾಗತೊಡಗಿದ್ದಾರೆ ಮತ್ತು ಕೋಪದ ಕಟ್ಟೆ ಒಡೆಯತೊಡಗಿದೆ. ಇದು ಸರ್ಜಿಕಲ್ ಸ್ಟ್ರೈಕ್ ನಂತಲ್ಲ. ಹುಲ್ಲು ಒಂಟೆಯ ಕತ್ತನ್ನೇ ಸೀಳುವಂತಹ ಕೃತ್ಯಕ್ಕೆ ಕೇಂದ್ರ ಸರ್ಕಾರ ಕೈ ಹಾಕುತ್ತಿದೆ.
ಇದು ಉತ್ತಮ ಆಡಳಿತ ವೈಖರಿಯಲ್ಲ. ಒಬ್ಬ ವ್ಯಕ್ತಿ ಕ್ಯಾನ್ಸರ್ ನಿಂದ ಸಾವಿನ ಸನಿಹದಲ್ಲಿದ್ದ ಸಂದರ್ಭದಲ್ಲಿ ವೈದ್ಯ ರೋಗಿಯ ಕೂದಲು ಬೆಳೆಯುವಂತೆ ಹೇಗೆ ಸಹಾಯ ಮಾಡಬೇಕೆಂಬುದರ ಬಗ್ಗೆ ಸದಾ ಕಾಲ ಚರ್ಚೆ ಮಾಡುತ್ತಿದ್ದರೆ ಆ ರೋಗಿಯು ಆಕ್ಷೇಪ ವ್ಯಕ್ತಪಡಿಸದೇ ಇರಲಾರ.
ಪ್ರಸ್ತುತ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಕುಸಿತವನ್ನು ಕಾಣುತ್ತಿದೆ. ಉದ್ಯೋಗವಕಾಶಗಳು ದುಸ್ಥರವಾಗತೊಡಗಿವೆ. ಈ ಎರಡು ವಿಚಾರಗಳು ಜನರನ್ನು ಕೆರಳಿಸುವಂತೆ ಮಾಡುತ್ತವೆ. ಈ ಸಮಸ್ಯೆಗಳು ವ್ಯಕ್ತಿಗತವಾಗಿ ಕಾಡತೊಡಗಿದರೆ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯ ಕಾಲ ಬಂದಿದೆ.
ಇನ್ನೊಂದು ಬಹುದೊಡ್ಡ ಸಮಸ್ಯೆಯೆಂದರೆ ಹಿಂದುಳಿದವರಿಗೆ ಆಗುತ್ತಿರುವ ಅನ್ಯಾಯ. ಪ್ರತಿದಿನ ಹಿಂದುಳಿದವರಿಗೆ ಅನ್ಯಾಯ ಆಗುತ್ತಾ ಹೋಗುವುದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. 2014 ರಿಂದಲೂ ಹಿಂದೂ ಮೂಲದ ಭಯೋತ್ಪಾದಕರ ಉಪಟಳ ಹೆಚ್ಚಾಗತೊಡಗಿದೆ. ಅವರಿಗೆ ಸರ್ಕಾರದ ಆಶ್ರಯ ನೀಡುತ್ತಲೇ ಬಂದಿದೆ. ಆದಾಗ್ಯೂ, ಇಲ್ಲಿವರೆಗೆ ಭಾರತೀಯರು ತಾಳ್ಮೆ ಸ್ವಭಾವದವರು, ಬಹುತೇಕ ನಿಷ್ಕ್ರಿಯರಾಗಿದ್ದರು.
ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿಯನ್ನು ವಾಪಸ್ ಪಡೆದ ನಂತರ ಪರಿಸ್ಥಿತಿ ಬದಲಾಗತೊಡಗಿದೆ. ಕಾಶ್ಮೀರದ ಬೆಂಕಿಯನ್ನು ನಂದಿಸಲು ದೇಶದ ಸಾಕಷ್ಟು ಪ್ರಮಾಣದ ಸಂಪನ್ಮೂಲ ಬಳಕೆಯಾಗಿದ್ದನ್ನು ಜನತೆ ನೋಡಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗಿವೆ. ಕಲ್ಲು ತೂರಾಟ ಪ್ರಕರಣಗಳು ಇಲ್ಲದಂತಾಗಿವೆ. ಆದರೆ, ಭಾರತದ ಜನಸಾಮಾನ್ಯನ ಜೀವನ ಮಟ್ಟವೇನೂ ಸುಧಾರಣೆಯಾಗಿಲ್ಲ.
ಇನ್ನು ಅಸ್ಸಾಂನಲ್ಲಿ ಎನ್ಆರ್ ಸಿ ವಿಚಾರವನ್ನು ಪ್ರಸ್ತಾಪ ಮಾಡುವುದಾದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು ಇದರಲ್ಲಿ ತಪ್ಪಿದೆ ಎಂಬುದನ್ನು ತೋರಿಸಿಕೊಟ್ಟವು. ಇದರ ಫಲಿತಾಂಶವನ್ನು ಸ್ವೀಕರಿಸಲು ಸರ್ಕಾರ ಹಿಂಜರಿಯಲಿಲ್ಲ. ಇದರಿಂದ ಕೈಕಟ್ಟಿ ಕುಳಿತುಕೊಳ್ಳದ ಸರ್ಕಾರ ಹಠಕ್ಕೆ ಬಿದ್ದವರಂತೆ ಸಿಎಎ ಮತ್ತು ಎನ್ಆರ್ ಸಿಯನ್ನು ಜಾರಿಗೆ ತರುವ ಪ್ರಯತ್ನವನ್ನು ಆರಂಭಿಸಿತು. ಎನ್ಆರ್ ಸಿ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಇದರ ಮತ್ತೊಂದು ಸ್ವರೂಪದಂತಿರುವ ಎನ್ ಪಿಆರ್ ಅನ್ನು ತರಲು ಹೊರಟಿದೆ.
ಕಾಶ್ಮೀರ ವಿಚಾರ, ಸಿಎಎ ಮತ್ತು ಎನ್ಆರ್ ಸಿಗಳು ತಮ್ಮ ದೈನಂದಿನ ಹೊಟ್ಟೆ ಹೊರೆಯುವುದಿಲ್ಲ. ತಮಗೆ ಒಪ್ಪೊತ್ತಿನ ತುತ್ತು ತರಲು ನೆರವಾಗುವುದಿಲ್ಲ ಎಂಬುದನ್ನು ಜನತೆ ಅರಿತುಕೊಳ್ಳಲು ಆರಂಭಿಸಿದರು. ಸರ್ಕಾರ ತಮಗೆ ಒಪ್ಪೊತ್ತಿನ ತುತ್ತಿನ ಬದಲಾಗಿ ತನ್ನ ವೋಟ್ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಳ್ಳಲು ಈ ತಂತ್ರಗಳನ್ನು ಹೆಣೆಯುತ್ತಿದೆ ಎಂಬುದನ್ನು ತಿಳಿಯಲು ಜನತೆಗೆ ಹೆಚ್ಚು ದಿನ ಬೇಕಾಗಲಿಲ್ಲ. ಒಂದು ವೇಳೆ ಸರ್ಕಾರ ಕುಸಿದು ಬೀಳುತ್ತಿರುವ ದೇಶದ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರುವಲ್ಲಿ, ಜಿಡಿಪಿಯನ್ನು ಹೆಚ್ಚಳ ಮಾಡಲು, ಉದ್ಯೋಗವಕಾಶಗಳನ್ನು ಹೆಚ್ಚು ಮಾಡಿದ್ದೇ ಆದಲ್ಲಿ ಜನತೆ ಈ ಕಾಶ್ಮೀರ, ಎನ್ಆರ್ ಸಿ ಮತ್ತು ಸಿಎಎಗಳನ್ನು ಒಪ್ಪುತ್ತಿದ್ದರೇನೋ? ಆದರೆ, ಸರ್ಕಾರದಿಂದ ಈ ಯಾವುದೇ ಉಪಕ್ರಮಗಳು ಬರಲೇ ಇಲ್ಲ. ಪರಿಣಾಮ ಜನತೆ ತಮ್ಮ ಹಕ್ಕನ್ನು ಉಳಿಸಿಕೊಳ್ಳುವ ಸಲುವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಯಿತು.
ತಮ್ಮದೇ ಜೀವನದಲ್ಲಿ ಬ್ಯುಸಿಯಾಗಿದ್ದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಅಧಿಕಾರಿಗಳು, ಬುದ್ಧಿಜೀವಿಗಳು ಕಳೆದ ಐದೂವರೆ ವರ್ಷಗಳಿಂದ ತಮ್ಮ ಸಮಯವನ್ನು ಇಂತಹ ಸಮಸ್ಯೆಗಳಿಗೆ ಮೀಸಲಿಡಲಿಲ್ಲ. ಆದರೆ, ಈ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಿರುವುದನ್ನು ಕಂಡು ಇದರ ಗಂಭೀರತೆಯನ್ನು ಅರಿತು ಇದೀಗ ಧ್ವನಿ ಎತ್ತಲು ಆರಂಭಿಸಿದ್ದಾರೆ. ಅವರಿಗೆ ಈಗ ಕೆಟ್ಟ ಆಡಳಿತದ ಅನುಭವವಾಗುತ್ತಿದೆ. ಇದರ ಪರಿಣಾಮವೇ ಪ್ರತಿಭಟನೆ.
ದೇಶದ ಜಿಡಿಪಿ ಶೇ.8 ರಿಂದ ಶೇ.4.5ಕ್ಕೆ ಕುಸಿದಿದೆ. ಆಮದು ಪ್ರಮಾಣ – 6% ಕ್ಕೆ ಇಳಿದಿದ್ದರೆ, ಸರಕು ಉದ್ಯಮದ – 10% ಕ್ಕೆ ಇಳಿದಿದೆ. ಇದನ್ನು ಗಮನಿಸಿದರೆ 1991 ಕ್ಕಿಂತ ಮಿಗಿಲಾದ ಆರ್ಥಿಕ ಪರಿಸ್ಥಿತಿಯ ಭೀಕರತೆಯನ್ನು ಅನಾವರಣ ಮಾಡುತ್ತದೆ. ಇದರ ಪರಿಣಾಮ ನಾವು 30 ವರ್ಷದ ಹಿಂದಿನ ಆರ್ಥಿಕ ಸ್ಥಿತಿಗೆ ಮರಳಿದ್ದೇವೆ. 1991 ರಲ್ಲಿ ಜಿಡಿಪಿ ಕೇವಲ ಶೇ.1.1 ರಷ್ಟಿತ್ತು. ಈಗಿನ ಪರಿಸ್ಥಿತಿಯನ್ನು ನೋಡಿದರೆ 1991 ಕ್ಕಿಂತ ಭಿನ್ನವಾಗಿಲ್ಲ.
ಕೃಪೆ: ದಿ ವೈರ್