ಜಗತ್ತಿನ ಅಗ್ರ ರಫ್ತು ರಾಷ್ಟ್ರ ಹಾಗೂ ಮೂರನೇ ಅತಿ ದೊಡ್ಡ ಉತ್ಪಾದಕ ಶಕ್ತಿಯಾಗಿರುವ ಚೀನಾವನ್ನು ತತ್ತರಿಸುವಂತೆ ಮಾಡಿರುವ ಕರೋನವೈರಸ್ ಅಥವಾ ಕೋವಿಡ್-19 ವೈರಸ್, ಭಾರತವನ್ನೂ ಸೇರಿ ಇಡೀ ಜಾಗತಿಕ ಅರ್ಥವ್ಯವಸ್ಥೆಯನ್ನು ಹೈರಾಣು ಮಾಡಿದೆ. ಈಗಾಗಲೇ ಕುಂಟುತ್ತಾ ಸಾಗುತ್ತಿದ್ದ ಆರ್ಥಿಕ ಅಭಿವೃದ್ಧಿಯನ್ನು ತೆವಳುವಂತೆ ಮಾಡಿರುವ ಮಹಾಮಾರಿ ವೈರಸ್, ಚೀನಾದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದ್ದು, ಅದರ ಒಟ್ಟಾರೆ ಆರ್ಥಿಕ ಚಟುವಟಿಕೆ ಬಹುತೇಕ ಶೇ. 40ರಷ್ಟು ಕುಸಿತ ಕಂಡಿದೆ.
ಈಗಾಗಲೇ ಮೂರು ಸಾವಿರಕ್ಕೂ ಅಧಿಕ(ವಾಸ್ತವ ಚಿತ್ರಣ ಭೀಕರವಾಗಿದೆ ಎಂಬ ಮಾತುಗಳೂ ಇವೆ!) ಅಧಿಕ ಮಂದಿ ಚೀನಾ ಒಂದರಲ್ಲೇ ಕೇವಲ 60 ದಿನದಲ್ಲಿ ಬಲಿಯಾಗಿದ್ದಾರೆ. ಚೀನಾದ ಹುಬೈ ಪ್ರಾಂತ್ಯದಲ್ಲಿ ಸಂಪೂರ್ಣ ಉತ್ಪಾದನಾ ಚಟುವಟಿಕೆ ಸ್ಥಗಿತಗೊಂಡಿದೆ. ಹಲವು ನಗರ ಪ್ರದೇಶಗಳನ್ನು ಲಾಕ್ ಡೌನ್ ಮಾಡಲಾಗಿದೆ. ಈ ನಡುವೆ ರೋಗಕ್ಕೆ ಬಲಿಯಾದವರ ಸಂಖ್ಯೆ 3000 ತಲುಪಿದ್ದು, ಜಾಗತಿಕವಾಗಿ ಸುಮಾರು 80 ಸಾವಿರ ಮಂದಿ ರೋಗ ಸೋಂಕಿತರಾಗಿದ್ದಾರೆ ಹಾಗೂ ಸುಮಾರು 60 ದೇಶಗಳಿಗೆ ರೋಗ ವ್ಯಾಪಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಈ ವರದಿಗಳ ಬೆನ್ನಲ್ಲೇ ಮುಂಬೈ ಷೇರುಪೇಟೆಯ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಕುಸಿತ ಕಂಡಿದ್ದ ಸೆನ್ ಸೆಕ್ಸ್ ಸುಮಾರು 1448 ಅಂಶ ಕುಸಿತ ದಾಖಲಿಸಿತ್ತು. ನಿಫ್ಟಿ ಕೂಡ 432 ಅಂಶ ಕುಸಿತ ಕಂಡು, ಇತಿಹಾಸಲ್ಲೇ ಏಕ ದಿನದ ಮೂರನೇ ದೊಡ್ಡ ಕುಸಿತವಾಗಿ ದಾಖಲೆ ಮಾಡಿತ್ತು. ಸೋಮವಾರ ಷೇರು ಮಾರುಕಟ್ಟೆ ಆಶ್ಚರ್ಯಕರ ರೀತಿಯಲ್ಲಿ 600ಕ್ಕೂ ಹೆಚ್ಚು ಅಂಶ ಏರಿಕೆ ಕಂಡಿದೆ.
ಆದರೆ, ಕೋವಿಡ್ -19 ಜಾಗತಿಕ ಪರಿಣಾಮ ಮತ್ತು ಚೀನಾದ ಆಂತರಿಕ ಉತ್ಪಾದನಾ ವಲಯದ ಮೇಲಿನ ಅದರ ದಾಳಿಯ ಪರಿಣಾಮದಿಂದ ಭಾರತ ತಪ್ಪಿಸಿಕೊಳ್ಳಲಾಗದು ಎಂಬುದು ಅರ್ಥ ತಜ್ಞರ ಅಭಿಮತ. ಷೇರುಪೇಟೆಯ ದಿಢೀರ್ ಮರು ಜಿಗಿತ ಕೂಡ ತಾತ್ಕಾಲಿಕ. ಜಾಗತಿಕವಾಗಿ ಅರ್ಥವ್ಯವಸ್ಥೆ ಸುಧಾರಣೆಗಾಗಿ ಜಾಗತಿಕ ಕೇಂದ್ರೀಯ ಬ್ಯಾಂಕ್ ತೆಗೆದುಕೊಂಡು ಹಣಕಾಸು ಪೂರೈಕೆಯ ನಿರ್ಧಾರ ಕಾರಣವಿರಬಹುದು. ಜೊತೆಗೆ, ಕರೋನಾ ವೈರಸ್ ಹರಡುವಿಕೆ ಚೀನಾದಲ್ಲಿ ನಿಯಂತ್ರಣಕ್ಕೆ ಬಂದಿದೆ ಮತ್ತು ಭಾರತ ವೈರಸ್ ಸೋಂಕು ತಡೆಯುವ ವ್ಯಾಪಕ ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆ ಹೊಂದಿದೆ ಎಂಬ ಸಕಾರಾತ್ಮಕ ಅಂಶಗಳು ಷೇರುಪೇಟೆಯಲ್ಲಿ ವಿಶ್ವಾಸ ತುಂಬಿರಬಹುದು ಎಂದು ಷೇರುಪೇಟೆ ಪುನರ್ ಜಿಗಿತಕ್ಕೆ ಕಾರಣಗಳನ್ನು ಹುಡುಕಲಾಗುತ್ತಿದೆ.
ಆದರೆ, ವಾಸ್ತವವಾಗಿ ಭಾರತದ ತಯಾರಿಕಾ ವಲಯ ಪ್ರಮುಖವಾಗಿ ಬಿಡಿಭಾಗಗಳಿಗಾಗಿ ನೆಚ್ಚಿಕೊಂಡಿರುವುದು ಚೀನಾವನ್ನೇ. ದೇಶದ ಒಟ್ಟಾರೆ ಆಮದಿನ ಪೈಕಿ ಶೇ. 28ರಷ್ಟು ಪ್ರಮಾಣದ ಸರಕು ಮತ್ತು ಸರಂಜಾಮು ಬರುವುದು ಚೀನಾದಿಂದಲೇ. ಅದರಲ್ಲೂ ಮುಖ್ಯವಾಗಿ ಮುಖ್ಯವಾಗಿ ಎಲೆಕ್ಟ್ರಾನಿಕ್ ಯಂತ್ರೋಪಕರಣ, ಮಷಿನರಿ ಮತ್ತು ಮೆಕಾನಿಕಲ್ ಅಪ್ಲೈಯನ್ಸ್, ಆರ್ಗಾನಿಕ್ ಕೆಮಿಕಲ್ಸ್, ಪ್ಲಾಸ್ಟಿಕ್ ಮತ್ತು ಸರ್ಜಿಕಲ್ ಸಾಧನಗಳು ಸೇರಿದಂತೆ ಒಟ್ಟು ಐದು ಬಗೆಯ ಸರಕುಗಳ ವಿಷಯದಲ್ಲಿ ಭಾರತದ ತಯಾರಿಕಾ ವಲಯ ಚೀನಾದ ಬಿಡಿಭಾಗಗಳ ಉತ್ಪಾದಕರನ್ನೇ ಪ್ರಮುಖವಾಗಿ ಅವಲಂಬಿಸಿದೆ. ಹಾಗಾಗಿ ಚೀನಾದ ಉತ್ಪಾದನಾ ಚಟುವಟಿಕೆಗೆ ಗ್ರಹಣ ಹಿಡಿಸಿರುವ ಕೋವಿಡ್-19 ಪರಿಣಾಮವಾಗಿ ಭಾರತದ ನಿರ್ಮಾಣ ವಲಯ, ಸಾಗಣೆ, ರಾಸಾಯನಿಕ ಮತ್ತು ಯಂತ್ರೋಪಕರಣ ಉತ್ಪಾದನಾ ವಲಯ ಹಾಗೂ ಸರ್ಜಿಕಲ್ ಉತ್ಪಾದನಾ ವಲಯಗಳಿಗೆ ಪೆಟ್ಟು ಬೀಳಲಿದೆ. ಈಗಾಗಲೇ ಈ ವಲಯಗಳಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ ಎಂಬುದು ‘ದ ಬ್ಯುಸಿನೆಸ್ ಸ್ಟ್ಯಾಂಡರ್ಡ್’ ವಿಶ್ಲೇಷಣೆಯ ಸಾರ.
ಆಮದು ದೃಷ್ಟಿಯಿಂದ ನೋಡಿದರೆ, ಚೀನಾದ ಮೇಲಿನ ಭಾರತದ ಅವಲಂಬನೆ ಹೆಚ್ಚಿದೆ. ಅದರಲ್ಲೂ ಎಲೆಕ್ಟ್ರಾನಿಕ್ ವಸ್ತುಗಳ ಭಾರತದ ಒಟ್ಟು ಆಮದಿನಲ್ಲಿ ಚೀನಾದ ಪಾಲು ಶೇ.45ರಷ್ಟಿದೆ. ಯಂತ್ರೋಪಕರಣಗಳ ಆಮದಿಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಅಗಾಧ ಪ್ರಮಾಣದ ಸರಕು ಚೀನಾದಿಂದ ಬರುತ್ತದೆ. ಆರ್ಗಾನಿಕ್ ಕೆಮಿಕಲ್ಸ್ ಆಮದಿನಲ್ಲೂ ಚೀನಾದ ಪಾಲು ಸುಮಾರು ಐದನೇ ಎರಡು ಭಾಗದಷ್ಟು ದೊಡ್ಡದಿದೆ. ಆಟೋಮೊಬೈಲ್ ವಲಯದಲ್ಲೂ ಭಾರತದ ಆಮದಿನಲ್ಲಿ ಶೇ.25ರಷ್ಟು ಚೀನಾದಿಂದಲೇ ಬರುತ್ತದೆ. ಫಾರ್ಮಾ ವಲಯದಲ್ಲಂತೂ ಶೇ.70ರಷ್ಟು ಆಮದು ಚೀನಾದಿಂದಲೇ ಆಗುತ್ತಿದೆ. ಇನ್ನು ಮೊಬೈಲ್ ಫೋನ್ ಮತ್ತು ಬಿಡಿಭಾಗಗಳ ವಿಷಯದಲ್ಲಂತೂ ಒಟ್ಟಾರೆ ಆಮದಿನ ಪೈಕಿ ಶೇ.90ರಷ್ಟು ಚೀನಾ ಮೂಲದಿಂದಲೇ ಬರಬೇಕಿದೆ.
ಹಾಗಾಗಿ ಚೀನಾದ ತಯಾರಿಕಾ ವಲಯಕ್ಕೆ ಕರೋನಾ ವೈರಸ್ ಒಡ್ಡಿರುವ ಸಂಕಷ್ಟದ ಪರಿಣಾಮವಾಗಿ ಅದರ ರಫ್ತು ಕುಸಿತ ಕಂಡಿದೆ ಎಂದರೆ, ಅದರ ಪರಿಣಾಮ ಜಗತ್ತಿನ ಇತರ ದೇಶಗಳ ಮೇಲಾದಂತೆ ಭಾರತದ ಮೇಲೂ ಆಗಲಿದೆ. ಮತ್ತು ಈಗಾಗಲೇ ಆ ಪರಿಣಾಮಗಳು ಕಾಣಲಾರಂಭಿಸಿವೆ. ಇದು ನೇರ ಪರಿಣಾಮವಾಯಿತು. ಇನ್ನು ಪರೋಕ್ಷವಾಗಿ ಚೀನಾ ಉತ್ಪಾದಿತ ಸರಕುಗಳು ಕೊರಿಯಾ, ವಿಯೆಟ್ನಾಂ, ಅಮೆರಿಕ, ಜರ್ಮನ್ ಮುಂತಾದ ರಾಷ್ಟ್ರಗಳ ಉತ್ಪಾದನಾ ಚಟುವಟಿಕೆಯಲ್ಲಿ ಬಳಕೆಯಾಗಿ, ಆಮದಿನ ಮೂಲಕ ಭಾರತಕ್ಕೆ ಬರುವ ಪ್ರಮಾಣ ಕೂಡ ಗಣನೀಯ ಪ್ರಮಾಣದಲ್ಲೇ ಇದೆ. ಅಂತಹ ಸರಕುಗಳ ಆಮದಿನ ಮೇಲೆಯೂ ಚೀನಾದ ಈ ಬಿಕ್ಕಟ್ಟು ಪರೋಕ್ಷ ಪರಿಣಾಮ ಬೀರಲಿದೆ. ಇದು ಭಾರತದ ಮೇಲಿನ ಪರೋಕ್ಷ ಪರಿಣಾಮ.
ಹಾಗೇ ಚೀನಾದೊಂದಿಗೆ ಭಾರತ ಹೊಂದಿರುವ ರಫ್ತು ವಹಿವಾಟಿನ ಮೇಲೆಯೂ ಪರಿಣಾಮ ಬೀರುತ್ತಿದ್ದು, ಪ್ರಮುಖವಾಗಿ ವಿವಿಧ ಅದಿರು, ಲೋಹ, ಸಾಗರೋತ್ಪನ್ನ, ರಾಸಾಯನಿಕಗಳ ವಿಷಯದಲ್ಲಿ ಚೀನಾದೊಂದಿಗೆ ಭಾರತಕ್ಕೆ ರಫ್ತು ವಹಿವಾಟು ಇದೆ. ಆ ವಲಯದ ಚಟುವಟಿಕೆಗಳು ಕೂಡ ಚೀನಾದಲ್ಲಿ ಸ್ಥಗಿತವಾಗಿರುವುದರಿಂದ ಸಹಜವಾಗೇ ರಫ್ತು ವಹಿವಾಟು ಕೂಡ ಸಂಕಷ್ಟಕ್ಕೊಳಗಾಗಿದೆ.
ಹಾಗಾಗಿ, ಈಗಾಗಲೇ ನೋಟು ರದ್ದತಿಯ ಅಕಾಲಿಕ ಕ್ರಮ, ಜಿಎಸ್ ಟಿಯ ಅವಸರದ ಜಾರಿ, ಕೃಷಿ ವಲಯದ ಬಿಕ್ಕಟ್ಟು, ಉದ್ಯೋಗ ಕಡಿತ, ನಿರುದ್ಯೋಗ ಏರಿಕೆ, ಬ್ಯಾಂಕಿಂಗ್ ವಲಯದ ಬಿಕ್ಕಟ್ಟು ಮುಂತಾದ ಕಾರಣಗಳಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಭಾರತದ ಮೇಲೆ ಚೀನಾದ ಈ ಬಿಕ್ಕಟ್ಟು, 130 ಕೋಟಿ ಭಾರತೀಯರ ಆರೋಗ್ಯದ ಮೇಲಷ್ಟೇ ಅಲ್ಲ; ಅವರ ಕಿಸೆಯ ಆರೋಗ್ಯದ ಮೇಲೂ ಭಾರೀ ಪರಿಣಾಮ ಬೀರಲಿದೆ.
ಮಾರ್ಚ್ ಕೊನೆಯ ಹೊತ್ತಿಗೆ ಆರ್ಥಿಕ ವರ್ಷದ ಅಂತ್ಯದ ಹೊತ್ತಿಗೆ ದೇಶದ ಅರ್ಥವ್ಯವಸ್ಥೆಯ ನೈಜ ಚಿತ್ರಣ ಸಿಗಲಿದೆ. ವಸೂಲಾಗದ ಸಾಲದ ಭಾರ ಸುಮಾರು 9 ಲಕ್ಷ ಕೋಟಿಯಷ್ಟಾಗಿದ್ದು, ಇಡೀ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿದುಹೋಗುವ ಭೀತಿ ಇದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಚೀನಾದಲ್ಲಿ ಬಾಗಿಲು ಮುಚ್ಚಿರುವ ತಯಾರಿಕಾ ವಲಯದ ಉತ್ಪಾದನೆ ಸ್ಥಗಿತದ ಪರಿಣಾಮ ಕೂಡ ಸರಿಸುಮಾರು ಅದೇ ಹೊತ್ತಿಗೆ(ಮಾರ್ಚ್ ಅಂತ್ಯ) ಭಾರತದಲ್ಲಿ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯಕ್ಕೆ ಇರುವ ದಾಸ್ತಾನು ಮತ್ತು ಇತರ ಮೂಲಗಳ ಬಿಡಿಭಾಗ ಮತ್ತು ಸರಕಿನ ಮೇಲೆ ಆಯಾ ವಲಯದ ಉತ್ಪಾದಕರು ಮತ್ತು ವಹಿವಾಟುದಾರರು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಹಾಗಾಗಿ ಕರೋನಾ ವೈರಸ್ಸಿನ ತತಕ್ಷಣದ ಪರಿಣಾಮ ಭಾರತದ ಮಾರುಕಟ್ಟೆಯಲ್ಲಿ ಕಾಣಿಸುತ್ತಿಲ್ಲ. ಆದರೆ, ಇನ್ನು ಕೆಲವೇ ದಿನಗಳಲ್ಲಿ ದಾಸ್ತಾನು ಖಾಲಿಯಾಗಿ, ಇತರ ಮೂಲಗಳ ಮೇಲೂ ಜಾಗತಿಕ ಬೇಡಿಕೆಯ ಒತ್ತಡ ಹೆಚ್ಚಾಗಲಿದೆ. ಆಗ ನೈಜ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಐಎಂಎಫ್ ಕೂಡ ಕಳೆದ ವಾರ ಇದೇ ಆತಂಕ ವ್ಯಕ್ತಪಡಿಸಿದೆ.
ಜಾಗತಿಕವಾಗಿ ಮುಂಚೂಣಿ ರಫ್ತುದಾರ ರಾಷ್ಟ್ರ ಚೀನಾದ ಈ ಬಿಕ್ಕಟ್ಟಿನ ಹೊತ್ತಿನಲ್ಲಿ ಭಾರತದ ಅರ್ಥವ್ಯವಸ್ಥೆಯನ್ನು ಚಾಣಾಕ್ಷತನದಿಂದ ನಿಭಾಯಿಸಿದ್ದರೆ, ಚೀನಾದ ಬಿಕ್ಕಟ್ಟನ್ನೇ ಭಾರತದ ಸುವರ್ಣಾವಕಾಶವಾಗಿ ಬಳಸಿಕೊಳ್ಳಬಹುದಿತ್ತು. ಮೇಕ್ ಇಂಡಿಯಾದ ನೈಜ ಬಲವರ್ಧನೆಗೆ ಇದೊಂದು ಅವಕಾಶವಿತ್ತು. ಆದರೆ, ಚೀನಾ- ಅಮೆರಿಕ ಟ್ರೇಡ್ ವಾರ್ ಸಂದರ್ಭವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವಲ್ಲಿ ಪ್ರಯತ್ನವನ್ನೇ ಮಾಡದೇ ಕೈಚೆಲ್ಲಿದ ಭಾರತ, ಈಗಿನ ಚೀನಾದ ಅಸಾಯಕತೆಯ ಹೊತ್ತಲ್ಲೂ ಅದೇ ತಪ್ಪು ಮಾಡುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ, ಉದ್ಯಮ ಪೂರಕ ವಾತಾವರಣ ಮತ್ತು ನೀತಿ ಪಾಲನೆಯ ಬದಲಾಗಿ, ಕೋಮು ಹಿಂಸೆ, ಮತೀಯ ದ್ವೇಷ, ಜನಾಂಗೀಯ ಹತ್ಯೆಯಂತಹ ಸಂಗತಿಗಳ ಬಗ್ಗೆ ಸರ್ಕಾರ ಮತ್ತು ಸರ್ಕಾರದ ಪ್ರಮುಖರು ಹೆಚ್ಚುಗಮನ ನೀಡುತ್ತಿದ್ದಾರೆ. ದೇಶದ ಆರ್ಥಿಕತೆ ಪುನಃಶ್ಚೇತನದ ಬಗ್ಗೆ ಸ್ವತಃ ಹಣಕಾಸು ಸಚಿವರ ಮುಂದೆಯೇ ಯಾವುದೇ ಸ್ಪಷ್ಟ ರೂಪುರೇಷೆಗಳೇ ಇಲ್ಲದ ಹೀನಾಯ ಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ, ಸದ್ಯದ ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಟ ಜಿಡಿಪಿ ದರ(4.7%), ನಾಲ್ಕು ದಶಕದಲ್ಲೇ ಅತ್ಯಂತ ಗರಿಷ್ಟ ನಿರುದ್ಯೋಗ ಪ್ರಮಾಣ(7.2%), ಆತಂಕಕಾರಿ ಹಣದುಬ್ಬರ ದರ(7.59%)ಗಳ ಹಿನ್ನೆಲೆಯಲ್ಲಿ ಏದುಸಿರು ಬಿಡುತ್ತಿರುವ ಆರ್ಥಿಕತೆಗೆ ಇನ್ನೂ ಗಂಡಾಂತರ ಕಾದಿದೆ. ಭವಿಷ್ಯದ ಮೂರ್ನಾಲ್ಕು ತಿಂಗಳು ದೇಶದ ಮುಂದಿನ ದಶಕದ ದೇಶದ ಏಳಿಗೆಯನ್ನು ನಿರ್ಧರಿಸಲಿದೆ ಎಂಬುದು ಅರ್ಥಶಾಸ್ತ್ರಜ್ಞರ ಭವಿಷ್ಯನುಡಿ. ಆದರೆ, ಈ ಮೂರ್ನಾಲ್ಕು ತಿಂಗಳಲ್ಲಿ ದೇಶದ ಆರ್ಥಿಕತೆಗೆ ಚೈತನ್ಯ ನೀಡುವ ಕ್ರಮಗಳನ್ನಾಗಲೀ, ಬರಲಿರುವ ವಿಪತ್ತಿನಿಂದ ಪಾರಾಗುವ ಉಪಾಯಗಳನ್ನಾಗಲೀ ಕಂಡುಕೊಳ್ಳುವ ಪ್ರಯತ್ನಗಳು ಅರ್ಥ ಸಚಿವಾಲಯದ ಕಡೆಯಿಂದಲಾಗಲೀ, ಸ್ವತಃ ಪ್ರಧಾನಿ ಕಚೇರಿಯ ಕಡೆಯಿಂದಲಾಗಲೀ ಆಗುತ್ತಿವೆ ಎಂಬ ಆಶಾದಾಯಕ ಬೆಳವಣಿಗೆಗಳು ಕಾಣುತ್ತಿಲ್ಲ. ಅದು ನಿಜಕ್ಕೂ ಅಚ್ಛೇದಿನ ಕನಸು ಕಂಡ ಭಾರತೀಯರ ದುರಾದೃಷ್ಟ!