ವಿಶ್ವವ್ಯಾಪಿ ತನ್ನ ಆರ್ಭಟ ನಡೆಸುತ್ತಿರುವ ಕರೋನಾ ವೈರಸ್ ಭಾರತದಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಅದರಲ್ಲೂ ನಮ್ಮ ಕರ್ನಾಟಕದ ಕಲಬುರಗಿ ಜಿಲ್ಲೆಯ ವೃದ್ಧರೊಬ್ಬರು ಮಾರಕ ಕರೋನಾ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಮುಸ್ಲಿಂ ಸಮುದಾಯದ ಧಾರ್ಮಿಕ ಕೇಂದ್ರಗಳಾದ ಮೆಕ್ಕಾ, ಮದೀನಕ್ಕೆ ತೆರಳಿದ್ದರು. ಜನವರಿ 29ಕ್ಕೆ ಸೌದಿಗೆ ತೆರಳಿದ್ದ 76 ವರ್ಷದ ವೃದ್ಧ ಫೆಬ್ರವರಿ 29ಕ್ಕೆ ಭಾರತಕ್ಕೆ ವಾಪಸ್ ಆಗಿದ್ದರು. ಹೈದ್ರಾಬಾದ್ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ್ದ ಇವರಿಗೆ ಏರ್ಪೋರ್ಟ್‌ನಲ್ಲಿ ಸ್ಕ್ರೀನಿಂಗ್ ಮಾಡಲಾಗಿತ್ತು. ಶನಿವಾರ ವಾಪಸ್ ಆದ ಬಳಿಕ ಮಾರ್ಚ್ 6ರ ವೇಳೆಗೆ ನೆಗಡಿ, ಶೀತ, ಜ್ವರ ಕಾಣಿಸಿಕೊಂಡಿತ್ತು. ಕುಟುಂಬದ ವೈದ್ಯರಿಂದ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಯಾವಾಗ ರೋಗ ನಿಯಂತ್ರಣಕ್ಕೆ ಬಾರದೆ ಹೋಯಿತು, ಆಗ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು.
ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಲಾಗಿತ್ತು. ಆದರೆ ಪ್ರವಾಸದ ಬಗ್ಗೆ ಮಾಹಿತಿ ಪಡೆದುಕೊಂಡ ವೈದ್ಯರು, ಚಿಕಿತ್ಸೆ ನೀಡಲು ನಿರಾಕರಿಸಿ, ಹೈದ್ರಾಬಾದ್‌ಗೆ ರವಾನೆ ಮಾಡಿದ್ದರು. ಅಲ್ಲಿಯೂ ಸರಿಯಾದ ಚಿಕಿತ್ಸೆ ಸಿಗದೆ ಕಾರಣ ಪರದಾಡಿದ ಕುಟುಂಬಸ್ಥರನ್ನು, ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಸಂಪರ್ಕಿಸಿ ಜಿಮ್ಸ್‌ನಲ್ಲಿ ದಾಖಲು ಮಾಡುವಂತೆ ಸೂಚಿಸಿದರು. ಮಾರ್ಚ್ 11ರ ಬೆಳಗಿನ ಜಾವ ಜಿಮ್ಸ್ ಆಸ್ಪತ್ರೆಗೆ ವಾಪಸ್ ಬರಲಾಯ್ತು. ಅಷ್ಟರಲ್ಲಿ ವಯೋವೃದ್ಧ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದರು.
ಕಲಬುರಗಿಯಲ್ಲಿ 76 ವರ್ಷದ ವಯೋವೃದ್ಧ ಸಾವನ್ನಪ್ಪಿದ್ದ ವಿಚಾರ ಮಾರ್ಚ್ 11ರ ಮಧ್ಯಾಹ್ನದ ವೇಳೆಗೆ ಗೊತ್ತಾಗಿತ್ತು. ಮಾಹಿತಿ ಬಹಿರಂಗ ಆಗಲು ಕಾರಣ ಜಿಲ್ಲಾಧಿಕಾರಿಗಳು ತೆಗೆದುಕೊಂಡಿದ್ದ ಮುಂಜಾಗ್ರತಾ ಕ್ರಮ.ಕರೋನಾ ವೈರಸ್ ಶಂಕೆ ವ್ಯಕ್ತವಾಗಿದ್ದು, ಪರೀಕ್ಷೆಗಾಗಿ ಗಂಟಲ ದ್ರಾವಣವನ್ನು ಪರೀಕ್ಷಾಲಯಕ್ಕೆ ರವಾನೆ ಮಾಡಲಾಗಿದೆ ಎನ್ನುತ್ತಿದ್ದಂತೆ ಸೂಚನೆ ರವಾನಿಸಿದ ಜಿಲ್ಲಾಧಿಕಾರಿ, ಶಂಕಿತ ವ್ಯಕ್ತಿಯ ಅಂತಿಮ ವಿಧಿವಿಧಾನ ಮುಕ್ತಾಯವಾಗುವ ತನಕ ತಾಲೂಕು ವೈದ್ಯಾಧಿಕಾರಿ ಸ್ಥಳದಲ್ಲೇ ಇರಬೇಕೆಂದು ಆದೇಶ ಮಾಡಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದ ಹಾಗೆ ಉಲ್ಟಾ ಹೊಡೆದ ರಾಜ್ಯ ಸರ್ಕಾರ, 76 ವರ್ಷದ ವಯೋವೃದ್ಧ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅಸ್ತಮಾ ಕೂಡ ಅವರನ್ನು ಬಾಧಿಸುತ್ತಿತ್ತು. ಆ ಕಾರಣದಿಂದ ಸಾವನ್ನಪ್ಪಿದ್ದಾರೆ. ಅವರು ಸೌದಿಯಿಂದ ವಾಪಸ್ ಆಗಿದ್ದ ಕಾರಣಕ್ಕೆ ಶಂಕಿತ ಎಂದು ಗುರುತಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ನೋಡೋಣ ಎಂದು ಹೇಳಿಕೆ ನೀಡಿದ್ದರು. ಅಂತ್ಯಕ್ರಿಯೆಯಲ್ಲಿ ಅಧಿಕಾರಿಗಳೇ ಮುಂದೆ ನಿಂತು 10 ರಿಂದ 12 ಅಡಿ ಆಳದ ಗುಂಡಿ ತೋಡಿಸಿ (ಸಾಮಾನ್ಯವಾಗಿ 6 – 7 ಅಡಿ ಮಾತ್ರ) ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲಾಗಿದೆ.
ಇನ್ನು ಆ ವ್ಯಕ್ತಿ ಜೊತೆ ಸಂಪರ್ಕ ಹೊಂದಿದ್ದ ಬರೋಬ್ಬರಿ 43 ಜನರನ್ನು ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಿ ತಪಾಸಣೆ ಮಾಡಲಾಗ್ತಿದೆ. ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ ಬರೋಬ್ಬರಿ 400 ಬೆಡ್ ಐಸೋಲೇಟೆಡ್ ವಾರ್ಡ್ ಸ್ಥಾಪಿಸಲಾಗಿದೆ. ಆದರೂ ಸರ್ಕಾರ ಮಾತ್ರ ವರದಿ ಬಂದಿಲ್ಲ ಎನ್ನುವ ಏಕೈಕ ಕಾರಣಕ್ಕೆ ಕೋವಿಡ್ – 19ನಿಂದ ಸಾವನಪ್ಪಿದ ವೃದ್ಧನ ಬಗ್ಗೆ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಮಾರ್ಚ್ 11ರ ಮಧ್ಯಾಹ್ನ ಕೋವಿಡ್ 19ನಿಂದ ಕಲಬುರಗಿಯಲ್ಲಿ ವೃದ್ಧನೊಬ್ಬ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಹೊರ ಬೀಳುತ್ತಲೇ ರಾಜ್ಯ ಸರ್ಕಾರ 1 ವರ್ಷದ ಅವಧಿಗೆ ಹೊಸ ಕಾನೂನು ಜಾರಿ ಮಾಡಿದ್ದು (karnataka Epidemic Diseases, COVID-19 Regulations, 2020) ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್ – 19 ನಿಯಂತ್ರಣ ಕಾಯ್ದೆ ಜಾರಿ ಮಾಡಲಾಗಿದೆ. ಒಂದು ವೇಳೆ ಕೋವಿಡ್ – 19 ಶಂಕಿತ ವ್ಯಕ್ತಿ ಚಿಕಿತ್ಸೆಗೆ ನಿರಾಕರಿಸಿದರೆ ಬಂಧಿಸಿ, ಚಿಕಿತ್ಸೆ ನೀಡುವುದು, ಸೋಂಕಿತ ವ್ಯಕ್ತಿ ವಾಸ ಮಾಡುವ ಇಡೀ ವಾರ್ಡ್, ಏರಿಯಾ, ಪಟ್ಟಣಕ್ಕೆ ದಿಗ್ಬಂಧನ ಹಾಕುವುದು ಸೇರಿದಂತೆ 13 ಅಂಶಗಳು ಸೇರಿಸಲಾಗಿದೆ. ಇದೆಲ್ಲವನ್ನೂ ನೋಡಿದರೆ, ಸರ್ಕಾರಕ್ಕೆ ಕೋವಿಡ್ 19ನಿಂದ ಸಾವನ್ನಪ್ಪಿರುವುದು ಖಚಿತವಾಗಿತ್ತಾ..? ಆದರೂ ಸರ್ಕಾರ ಬಹಿರಂಗವಾಗಿ ಒಪ್ಪಿಕೊಳ್ಳಲು ತಡಮಾಡಿದ್ದು ಯಾಕೆ..? ಎನ್ನುವ ಅನುಮಾನ ಕಾಡುತ್ತಿದೆ.
ಫೆಬ್ರವರಿ 29ರಂದು ಹೈದ್ರಾಬಾದ್ ಏರ್ಪೋರ್ಟ್ಗೆ ಬಂದು ಇಳಿದ ಬಳಿಕ ಕುಟುಂಬಸ್ಥರು ತೆರಳಿರುತ್ತಾರೆ. ಮನೆಗೆ ಕರೆದುಕೊಂಡು ಬರುವ ವೇಳೆ ಅದೆಷ್ಟು ಜನರನ್ನು ಭೇಟಿಯಾಗಿದ್ದರೋ ಈ ವೃದ್ಧ..? ಬಲ್ಲವರು ಯಾರು. ಸೌದಿಯಿಂದ ಬರುವಾಗ ಸೋಂಕು ಇರಲಿಲ್ಲ ಎಂದು ಒಪ್ಪಿಕೊಳ್ಳೋಣ. ಆದರೆ ಮಾರ್ಚ್ ಮೊದಲ ವಾರದಲ್ಲಿ ಕರೋನಾ ಆರ್ಭಟ ಜೋರಾಗಿತ್ತು. ವಿದೇಶದಿಂದ ವಾಪಸ್ ಆದವರ ಮೇಲೆ ನಾವು ನಿಗಾ ಇಡುತ್ತೇವೆ ಎಂದಿದ್ದರು. ಆದರೆ ಕಲಬುರಗಿಯ ಈ ವ್ಯಕ್ತಿ ಮೇಲೆ ಯಾಕೆ ನಿಗಾ ಇಟ್ಟಿರಲಿಲ್ಲ ಎನ್ನುವ ಪ್ರಶ್ನೆಯೂ ಉದ್ಬವವಾಗುತ್ತದೆ. ಮಾರ್ಚ್ 6ರಂದು ಫ್ಯಾಮಿಲಿ ಡಾಕ್ಟರ್ ಕರೆದುಕೊಂಡು ಬಂದು ತೋರಿಸಿದ್ದಾರೆ ಎನ್ನಲಾಗಿದೆ.
ನೆಗಡಿ, ಶೀತ, ಜ್ವರದಿಂದ ಬಳಲುತ್ತಿದ್ದರೆ ಅದು ಕರೋನಾ ಸೋಂಕಿನ ಮುಖ್ಯ ಲಕ್ಷಣ ಎಂದು ಎಲ್ಲಾ ಮಾಧ್ಯಮಗಳಲ್ಲೂ ಬಿತ್ತರ ಆಗುತ್ತಿದ್ದರೂ ಆ ವೈದ್ಯರು ಆದಷ್ಟು ಬೇಗನೇ ಆಸ್ಪತ್ರೆಗೆ ಸೇರಿಸಲು ಮನಸ್ಸು ಮಾಡಲಿಲ್ಲ ಯಾಕೆ..? ಅಷ್ಟೇ ಅಲ್ಲದೆ ಈಗ ಮೃತಪಟ್ಟಿರುವ ವ್ಯಕ್ತಿ ಜನಸಾಮಾನ್ಯ ಅಷ್ಟೇ ಅಲ್ಲ. ಮಸೀದಿಗಳ ಖಾಜಿಗಳ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮುಸ್ಲಿಂ ಧಾರ್ಮಿಕ ಕೇಂದ್ರವಾದ ಮೆಕ್ಕಾ, ಮದೀನಾಗೆ ಹೋಗಿ ಬಂದ ಬಳಿಕ ಅದೆಷ್ಟು ಮಂದಿ ಇವರನ್ನು ಮಾತನಾಡಿಸಲು ಆಗಮಿಸಿದ್ದು..? ಅವರಿಗೆಲ್ಲಾ ನಿಧಾನವಾಗಿ ಕರೋನಾ ದಾಳಿ ಎದುರಾದರೆ ಎದುರಿಸಲು ಸರ್ಕಾರ ಸಿದ್ಧವಾಗಿದೆಯೇ..? ಮಾರ್ಚ್ 9ರಂದು ಶಂಕಿತ ಕರೋನಾ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆಗೆ ಒಳಗಾದರೆ, ಮೂರು ದಿನಗಳಾದರೂ ಪರೀಕ್ಷಾ ವರದಿ ಬರುವುದಿಲ್ಲ ಎಂದರೆ, ನಮ್ಮಲ್ಲಿರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಆಕ್ರೋಶ ಹೊರಹಾಕುವುದು ಸಾಮಾನ್ಯವಾಗುತ್ತದೆ. 76 ವರ್ಷದ ವೃದ್ಧ ಕರೋನಾಗೆ ಬಲಿಯಾಗಿರುವುದು ಮುಗಿದ ಅಧ್ಯಾಯ. ಆದರೆ ಈ ವ್ಯಕ್ತಿ ಅದೆಷ್ಟು ಜನರನ್ನು ಭೇಟಿ ಮಾಡಿದ್ದರು..? ಯಾರಿಗೆಲ್ಲಾ ಕರೋನಾ ದಾಳಿ ಆಗಿರಬಹುದು ಎನ್ನುವ ಆತಂಕ ಎದುರಾಗಿದೆ. ಸರ್ಕಾರ ಸತ್ತ ದಿನವೇ ಶಂಕಿತನ ಸಾವು ಎಂಬುದನ್ನು ಘೋಷಣೆ ಮಾಡಿದ್ದರೆ, ಯಾವುದೇ ಅನುಮಾನ ಇರಲಿಲ್ಲ. ಆದ್ರೆ, ಇದೀಗ 3 ದಿನದ ಬಳಿಕ ಘೋಷಣೆ ಮಾಡಿರುವುದು ಸರ್ಕಾರದ ಕರೊನಾ ತಡೆಗಟ್ಟಲು ಯಾವ ರೀತಿ ತಂತ್ರಗಾರಿಕೆ ನಡೆಸಿದೆ ಎಂಬುದರ ಮೇಲೆ ಶಂಕೆ ಮೂಡುವಂತೆ ಮಾಡುತ್ತಿದೆ.