ಏಳು ದಶಕಗಳ ಹಿಂದೆ ದೇಶದ ಕಾಡುಗಳಿಂದ ಕಣ್ಮರೆಯಾದ ಏಷ್ಯಾಟಿಕ್ ಚೀತಾಗಳ ದೂರದ ಸಹೋದರ ಸಂಬಂಧಿಗಳಾದ ಆಫ್ರಿಕನ್ ಚೀತಾಗಳನ್ನು ಭಾರತದ ವನ್ಯಸಂಕುಲದ ವ್ಯವಸ್ಥೆಗೆ ಪರಿಚಯಿಸಲು ಸಿದ್ಧತೆಗಳು ನಡೆಯುತ್ತಿವೆ.
ಭೂಮಿ ಮೇಲಿನ ಅತ್ಯಂತ ವೇಗವಾಗಿ ಓಡಬಲ್ಲ ಪ್ರಾಣಿಗಳಾದ ಈ ಚೀತಾಗಳು ಇರಲು ಅಗತ್ಯವಿರುವ ವಾತಾವರಣ ಹಾಗೂ ಭೌಗೋಳಿಕ ಪರಿಸ್ಥಿತಿಗಳನ್ನು ಮರು ನಿರ್ಮಿಸಲಾಗಿದ್ದು, ದೇಶದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಕಳೆದು ಹೋದ ವನ್ಯಸಂಕುಲದ ಪರಂಪರೆಗೆ ಮರುಜೀವ ನೀಡಬಹುದಾಗಿದೆ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ (WII) ಹಿರಿಯ ವಿಜ್ಞಾನಿ ವೈ.ವಿ. ಝಲಾ ತಿಳಿಸಿದ್ದಾರೆ.
ವಲಸಿಗ ಪ್ರಬೇಧಗಳು ಹಾಗೂ ವನ್ಯಜೀವಿಗಳ ಸಂರಕ್ಷಣೆ ಸಂಬಂಧ ನಡೆ ಸಭೆಯೊಂದರಲ್ಲಿ ಮಾತನಾಡಿದ ಅವರು, ಆಫ್ರಿಕಾದ ಚೀತಾಗಳನ್ನು ಕರೆತಂದು ಭಾರತದಲ್ಲಿ ಅವಕ್ಕೆ ಸೂಕ್ತವಾಗಿರುವ ಪ್ರದೇಶದಲ್ಲಿ ಬಿಟ್ಟು, ಅವುಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಬಲ್ಲವೇ ಎಂದು ಪರೀಕ್ಷಿಸಲು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಅನುಮತಿ ನೀಡಿದ ವಿಚಾರವಾಗಿ ಮಾತನಾಡುತ್ತಾ ಹೀಗೆ ತಿಳಿಸಿದ್ದಾರೆ.
“ಚೀತಾಗಳು ನಶಿಸಿ ಹೋಗಲು ಪ್ರಮುಖ ಕಾರಣವೆಂದರೆ ವ್ಯಾಪಕವಾದ ಬೇಟೆ ಹಾಗೂ ನಿಯಂತ್ರಣವಿಲ್ಲದ ಜನಸಂಖ್ಯೆಯ ಹೆಚ್ಚಳವಾಗಿರುವ ಜೊತೆ ಚೀತಾಗಳ ವಾಸಸ್ಥಾನಗಳನ್ನು ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಅತಿಕ್ರಮಣ ಮಾಡಿಕೊಂಡಿರುವುದಾಗಿದೆ,” ಎಂದು ಝಾಲಾ ವಿವರಿಸುತ್ತಾರೆ.

“ವಾಸಸ್ಥಗಳ ಪುನರ್ ನಿರ್ಮಾಣವು ಜಾಗತಿಕವಾಗಿ ಸಾಮಾನ್ಯವಾದ ವಿಚಾರವಾಗಿಬಿಟ್ಟಿದೆ. ಚೀತಾಗಳು ಇರಲು ಸೂಕ್ತವಾದ ವಾತಾವರಣಗಳನ್ನು ನಾವು ಸೃಷ್ಟಿಸಿದ್ದೇವೆ. ಆರ್ಥಿಕ ಚೈತನ್ಯದ ಜೊತೆಗೆ ರಾಜಕೀಯ ಇಚ್ಛಾಶಕ್ತಿ ಹಾಗೂ ಸರ್ಕಾರದ ಕ್ರಿಯಾಯೋಜನೆಗಳ ಮೂಲಕ ಚೀತಾಗಳನ್ನು ಭಾರತಕ್ಕೆ ಕರೆತರಲು ಬೇಕಾದ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಬಹುದಾಗಿದೆ,” ಎಂದು ಆಶಾಭಾವನೆ ವ್ಯಕ್ತಪಡಿಸುತ್ತಾರೆ ಝಾಲಾ.
ನಮೀಬಿಯಾಗೂ ಮುನ್ನ ಇರಾನ್ ಅನ್ನು ಈ ವಿಚಾರವಾಗಿ ಸಂಪರ್ಕಿಸಿದ್ದ ಭಾರತ, ಏಷ್ಯಾಟಿಕ್ ಚೀತಾಗಳನ್ನು ನೀಡಲು ಕೋರಿದ್ದ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಳ್ಳಲು ವಿಫಲವಾಗಿತ್ತು. ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (IUCN) ಕೆಂಪು ಪಟ್ಟಿಗೆ ಸೇರಿಸುವ ಮಟ್ಟಿಗೆ ವಿರಳಾತಿವಿರಳವಾಗಿಬಿಟ್ಟಿರುವ ಏಷ್ಯಾಟಿಕ್ ಚೀತಾಗಳು ಸದ್ಯ ಇರಾನ್‌ನಲ್ಲಿ ಮಾತ್ರವೇ ಕಾಣಸಿಗುತ್ತವೆ.
1990ರ ದಶಕದ ಆರಂಭದಲ್ಲಿ 400ರಷ್ಟಿದ್ದ ಈ ಚೀತಾಗಳ ಸಂಖ್ಯೆಯು ಇಂದಿಗೆ 50-70ಕ್ಕೆ ಕುಸಿದಿದೆ. ವ್ಯಾಪಕವಾದ ಬೇಟೆ, ಕಳ್ಳಸಾಗಾಟ, ಚೀತಾಗಳ ಪ್ರಮುಖ ಆಹಾರ ಮೂಲವಾದ ಗಝೇಲ್‌ಗಳ ಬೇಟೆ ಹಾಗೂ ಅವುಗಳ ವಾಸಸ್ಥಾನದ ಅತಿಕ್ರಮಣಗಳ ಕಾರಣದಿಂದ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಏಷ್ಯಾಟಿಕ್ ಹಾಗೂ ಆಫ್ರಿಕಾ ಚೀತಾಗಳ ನಡುವೆ ಅಷ್ಟೊಂದು ವ್ಯತ್ಯಾಸಗಳೇನೂ ಕಾಣಸಿಗುವುದಿಲ್ಲ ಎನ್ನುತ್ತಾರೆ ಜಾರ್ಖಂಡ್ ಮೂಲದ ಪರಿಸರ ಸಂರಕ್ಷಕ ರಾಜಾ ಕಾಜ್ಮಿ.

ಭಾರತದಲ್ಲಿದ್ದ ಏಷ್ಯಾಟಿಕ್ ಚೀತಾಗಳಿಗೆ ಏನಾಯಿತು?
ಭಾರತದಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಏಷ್ಯಾಟಿಕ್ ಚೀತಾವನ್ನು 1947ರಲ್ಲಿಯೇ ಕೋರಿಯಾದ (ಇಂದಿನ ಛತ್ತೀಸ್‌ಘಡಸಲ್ಲಿದೆ) ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್ ದೇವ್ ಬೇಟೆಯಾಡಿ ಕೊಂದಿದ್ದರು. ಅದೇ ವರ್ಷದಲ್ಲಿ, ತನ್ನದೇ ಪ್ರಾಂತ್ಯದಲ್ಲಿದ್ದ ಇದೇ ಚೀತಾದ ಸಹೋದರ ಸಂಬಂಧಿಗಳಾದ ಇನ್ನೂ ಮೂರು ಚೀತಾಗಳನ್ನು ಬೇಟೆಯಾಡಿಬಿಟ್ಟಿದ್ದರು. ಇದಾದ ಬಳಿಕವೂ ಸಹ ಇಲ್ಲಿನ ಸುರ್ಗುಜಾ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಗರ್ಭಿಣಿ ಚೀತಾ ಸೇರಿದಂತೆ ಕೆಲವಷ್ಟು ಚೀತಾಗಳು ಇದ್ದಿದ್ದಾಗಿ ಕೇಳಿ ಬರುತ್ತಿದ್ದವು.
ಆಂಧ್ರ ಪ್ರದೇಶ – ಒಡಿಶಾ ಗಡಿ ಹಾಗೂ ಆಂಧ್ರದ ಚಿತ್ತೂರು ಜಿಲ್ಲೆಯಲ್ಲೂ ಸಹ 1951-52ರ ಅವಧಿಯಲ್ಲಿ ಕೆಲವಷ್ಟು ಚಿರತೆಗಳು ಕಣ್ಣಿಗೆ ಕಾಣಿಸಿಕೊಂಡಿದ್ದವು. ಭಾರತದಲ್ಲಿ ಚೀತಾಗಳು ಕಣ್ಣಿಗೆ ಕಾಣಿಸಿಕೊಂಡ ವಿಚಾರವನ್ನು ಇದೇ ಕಡೆಯ ಬಾರಿಗೆ ನಂಬಲರ್ಹವಾಗಿ ಕೇಳಲಾಯಿತು. 1952ರಲ್ಲಿ ಚೀತಾಗಳು ಭಾರತದಲ್ಲಿ ಆವಾಸನಗೊಂಡಿವೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. .
ದೇಶದಲ್ಲಿ ಸದ್ಯ ಚೀತಾಗಳು ಇಲ್ಲದೇ ಇರುವ ಕಾರಣ, ಆಫ್ರಿಕಾದ ನಮೀಬಿಯಾದಿಂದ ಈ ಚೀತಾಗಳನ್ನುನ ಕರೆತಂದು ದೇಶದಲ್ಲಿ ಪರಿಚಯಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮುಂದಾಗಿದೆ.
UPA-II ಸರ್ಕಾರದ ಅವಧಿಯಲ್ಲಿ, ಚೀತಾಗಳನ್ನು ದೇಶದಲ್ಲಿ ಮತ್ತೊಮ್ಮೆ ಪರಿಚಯಿಸಬೇಕೆಂದು ಸಂರಕ್ಷಣಾ ತಜ್ಞರು ದನಿ ಏರಿಸಿದ್ದರು. ಆ ಸರ್ಕಾರದ ಅವಧಿಯಲ್ಲಿ ಪರಿಸರ ಹಾಗೂ ಅರಣ್ಯ ಸಚಿವಾಲಯವು ಭಾರತೀಯ ವನ್ಯಜೀವಿ ಸಂಸ್ಥೆಯೊಂದಿಗೆ ಸೇರಿಕೊಂಡು, ದೇಶದ ಅಗ್ರ ಚೀತಾ ತಜ್ಞರಾದ ಡಾ. ಎಂ.ಕೆ. ರಣಜಿತ್ ಸಿಂಗ್ ಗಾಗೈ ದಿವ್ಯಾಭಾನಿಸಿಂಗ್‌ರನ್ನು ಕನ್ಸಲ್ಟ್ ಮಾಡಿ, ಈ ಸಂಬಂಧ ವಿವರವಾದ ಯೋಜನೆಯೊಂದನ್ನು ಸಿದ್ಧಪಡಿಸಿತು.
“ಚೀತಾಗಳನ್ನು ದೊಡ್ಡ ಮಟ್ಟದಲ್ಲಿ ಮತ್ತೆ ಪರಿಚಯಿಸಲು ಯೋಜನೆಯೊಂದನ್ನು ಸಿದ್ಧಪಡಿಸಿದ್ದು, ಪರಿಸರ ವ್ಯವಸ್ಥೆಯ ಕಾರ್ಯವನ್ನು ಸರಿಪಡಿಸಲು ದೊಡ್ಡ ಬೇಟೆಗಾರ ಪ್ರಾಣಿಗಳನ್ನು ಮರುಪರಿಚಯಿಸುವ ಅಗತ್ಯವನ್ನು ಮನಗಾಣಲಾಗಿದೆ. ದೇಶದಲ್ಲಿರುವ ದೊಡ್ಡ ಮಾಂಸಹಾರಿ ಪ್ರಬೇಧಗಳಲ್ಲಿ ಅಳಿದುಹೋಗಿರುವ ಏಕೈಕ ಪ್ರಾಣಿ ಚೀತಾ ಆಗಿದೆ. ಐತಿಹಾಸಿಕ ಕಾಲದಿಂದಲೂ ಅತಿಯಾದ ಬೇಟೆಗೆ ಚೀತಾದ ಪ್ರಬೇಧ ನಶಿಸಿಹೋಗಿದೆ. ನೈತಿಕ ಹಾಗೂ ಪರಿಸರ ಸಂರಕ್ಷಣೆಯ ಕಾರಣಗಳಿಗಾಗಿ ತನ್ನ ಪ್ರಾಕೃತಿಕ ಪರಂಪರೆಯನ್ನು ಮರು ಸೃಷ್ಟಿಸಲು ಭಾರತದ ಬಳಿ ಈಗ ಸಾಕಷ್ಟು ಆರ್ಥಿಕ ಚೈತನ್ಯವಿದೆ,” ಎಂದು 2010ರಲ್ಲಿ ಪರಿಸರ ಸಚಿವಾಲಯ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿತ್ತು.
ದಶಕ ಮೀರಿದ ಈ ಯತ್ನಕ್ಕೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಬೆಂಬಲ ಸಿಕ್ಕಿರುವುದರಿಂದ ಚೀತಾದ ಸಂರಕ್ಷಣೆಯ ಕಾರ್ಯ ಯಶ ಕಾಣಲಿ ಎಂದು ಆಶಿಸೋಣ. ಆದರೂ ಸಹ, ದಿನೇ ದಿನೇ ಕ್ಷೀಣಿಸುತ್ತಿರುವ ಹಸಿರು ಹೊದಿಕೆ, ಕಣ್ಮರೆಯಾಗುತ್ತಿರುವ ಹುಲ್ಲುಗಾವಲುಗಳು, ಮಾನವ ಚಟುವಟಿಕೆ ಕಾರಣದಿಂದ ಇರೋ ಬರೋ ಅರಣ್ಯ ಪ್ರದೇಶಗಳ ಒಳಗೆಲ್ಲಾ ಬೆಳೆದುಕೊಳ್ಳುತ್ತಿರುವ ನಗರಗಳು, ಛಿದ್ರವಾಗುತ್ತಿರುವ ವಾಸಸ್ಥಾನಗಳ ನಡುವೆ ಇಂಥ ಒಂದು ಕ್ರಿಯಾಯೋಜನೆ ಯಾವ ಮಟ್ಟಿಗೆ ಫಲಪ್ರದವಾಗಲಿದೆ ಎಂಬುದನ್ನು ಕಾಲವೇ ತಿಳಿಸಬೇಕು.