ಕಾವೇರಿ ಒಂದು ನದಿಮಾತ್ರವಲ್ಲ. ಅವಳು ಕೋಟ್ಯಾಂತರ ಜನರ ನಾಡಿಮಿಡಿತ, ಆರಾಧ್ಯ ದೈವ, ಕುಲದೇವತೆ, ಅವಳೆಂದರೆ ಸಾಂಪ್ರದಾಯ ಬದ್ಧ ಕೊಡಗಿನ ಜನರ ಭಯ, ಭಕ್ತಿ. ವರ್ಷಕ್ಕೊಮ್ಮೆ ತನ್ನ ಭಕ್ತರಿಗೆ ಆದಿಸ್ಥಾನ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಬಂದು ತನ್ನ ಇರುವಿಕೆಯನ್ನು ಖಚಿತ ಪಡಿಸಿಹೋಗುತ್ತಿದ್ದಾಳೆ ಮಾತೆ. ವರ್ಷಂಪ್ರತಿ ಆಕೆಗೆ, ಆಕೆಯ ಆಗಮನಕ್ಕೆ ತಕ್ಕ ಸ್ವಾಗತವನ್ನು, ಸಕಲ ಸಾಂಪ್ರದಾಯ ಬದ್ಧ ಪೂಜಾ ಕೈಂಕರ್ಯಗಳನ್ನು, ಭಕ್ತರು ಚಾಚೂ ತಪ್ಪದೆ ಅರ್ಪಿಸುತ್ತಾ ಬಂದಿದ್ದಾರೆ. ಕೆಲವೊಂದು ಲೋಪದೋಷಗಳು ಅರಿತೋ, ಅರಿಯದೆಯೋ ಈ ಹಿಂದಿಯೂ ಹಲವು ಬಾರಿ ಆದದ್ದಿದೆ. ಆದರೆ ಈ ವರ್ಷ ಎಲ್ಲವೂ ಆಯೋಮಯ ಆಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೊಡವರ ಕುಲದೈವವೇ ಕಾವೇರಿ ಮಾತೆ. ಆದರೆ ಈ ಬಾರಿ ಮಾತ್ರ ಜಿಲ್ಲಾಡಳಿತ ಕೈಗೊಂಡ ಬಿಗಿ ಕ್ರಮದಿಂದಾಗಿ ಸಾವಿರಾರು ಭಕ್ತರ ಅಸಮಾಧಾನಕ್ಕೂ ಕಾರಣವಾಗಿದೆ. ವರ್ಷಕ್ಕೊಮ್ಮೆ ಬರುವ ಕಾವೇರಿ ತುಲಾ ಸಂಕ್ರಮಣದಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ಈ ಬಾರಿ ಜಿಲ್ಲಾಡಳಿತದ ಯಡವಟ್ಟು ಕ್ರಮಗಳಿಂದಾಗಿ ಭಕ್ತರು ನಿರಾಶೆ ಅನುಭವಿಸಬೇಕಾಯಿತು. ಮೊದಲಿಗೆ ಕೊಡಗಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು17 ರಂದು ಬೆಳಿಗ್ಗೆ ನಡೆಯಲಿರುವ ತೀರ್ಥೋದ್ಭವಕ್ಕೆ ಹೊರಗಿನಿಂದ ಬರುವವರಿಗೆ ಅಂದರೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವವರಿಗೆ ಪ್ರವೇಶವಿಲ್ಲ. ಬಂದರೂ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಪ್ರವೇಶ ಎಂದು ಆದೇಶ ಹೊರಡಿಸಿದರು.

ಎರಡು ದಿನ ಬಿಟ್ಟು ಕೋವಿಡ್ ಕಾರಣದಿಂದಾಗಿ ಈ ಬಾರಿ ಸಾರ್ವಜನಿಕರಿಗೂ ಪ್ರವೇಶವಿಲ್ಲ ಎಂದು ಘೋಷಿಸಿದರು. ಇದು ಕೊಡವರನ್ನು ಸಿಟ್ಟಿಗೆಬ್ಬಿಸಲು ಕಾರಣವಾಯಿತು. ಈ ಕುರಿತು ಮಾತನಾಡಿದ ಕೊಡವ ಸಮಾಜ ಒಕ್ಕೂಟ ಯುವ ಘಟಕದ ಅದ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು ಕರೋನಾ ಎಂಬ ಸಾಂಕ್ರಮಿಕ ಜಗತ್ತಿನೆಲ್ಲೆಡೆ ಇದೆ. ಮೊನ್ನೆ ಉಪಚುನಾವಣೆ ನಾಮಪತ್ರ ಸಲ್ಲಿಸುವಾಗ 25 ಸಾವಿರಕ್ಕೂ ಅಧಿಕ ಜನ ಸೇರಿದ್ದರು. ನೆರೆಯ ಸುಬ್ರಮಣ್ಯ ಮತ್ತು ಧರ್ಮಸ್ಥಳದಲ್ಲಿ ನಿತ್ಯವೂ ಸಹಸ್ರರು ಭಕ್ತರು ಭೇಟಿ ಕೊಡುತ್ತಾರೆ.ಅವರಿಗೆ ಇಲ್ಲದ ನಿರ್ಭಂಧ ಇಲ್ಲಿಗೆ ಮಾತ್ರ ಏಕೆ ಎಂದು ಪ್ರಶ್ನಿಸುತ್ತಾರೆ. ಜಿಲ್ಲಾಡಳಿತದ ಇನ್ನೊಂದು ಯಡವಟ್ಟು ಏನೆಂದರೆ ತೀರ್ಥೋಧ್ವವ ಆದ ನಂತರ 08 ಘಂಟೆಯ ಮೇಲೆ ಭಕ್ತರನ್ನು ಒಳಗೆ ಬಿಡಲಾಗುವುದು ಎಂದು ಹೇಳಿದ್ದು. ಅದರೆ ಎಷ್ಟು ಘಂಟೆಯಿಂದ ಬಿಡಲಾಗುವುದು ಎಂದು ಅಧಿಕಾರಿಗಳಿಗೂ ನಿಖರತೆ ಇಲ್ಲ.ಹಾಗಾಗಿ ಇದು ಭಕ್ತರಿಗೆ ನಿರಾಸೆ ಜತೆಗೇ ವರುಷಕೊಮ್ಮೆ ಮಾತೆ ತೀರ್ಥರೂಪಿಣಿ ಯಾದಾಗ ಅಲ್ಲಿ ಅಸಂಖ್ಯಾತ ಭಕ್ತರು ಅವಳ ದರ್ಶನ ಪಡೆಯುತ್ತಿದ್ದರು, ಅವಳ ದರ್ಶನದಿಂದ ಪುನೀತರಾಗುತ್ತಿದ್ದರು.

ಈ ವರ್ಷ ಕರೋನಾ ಮಾರಿ ಎಲ್ಲವನ್ನೂ ಬುಡಮೇಲು ಮಾಡಿದೆ. ಕರೋನಾದೊಂದಿಗೆ ಸುರಿದ ಭಾರಿ ಮಳೆ ಹಾಗು ಕಾವೇರಿಯ ಆದಿಸ್ಥಾನದ ಸನಿಹದಲ್ಲೇ ಸಂಭವಿಸಿದ ಬಾರಿ ದುರಂತ ಒಂದು ತರೆನಾದ ಮಂಕನ್ನು, ಸೂತಕದ ಛಾಯೆಯನ್ನು ಅಲ್ಲಿ ಪಸರಿಸಿತ್ತು.
ಕರೋನಾ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ತಡೆಯನ್ನು ಜಿಲ್ಲಾಡಳಿತ ಹೊಡೆದಿತ್ತು. ಸಚಿವರೇ ಸ್ವತಃ ಮುತುವರ್ಜಿ ವಹಿಸಿ ಅಧಿಕ ಸಂಖ್ಯೆಯಲ್ಲಿ ಜನ ಜಮಾಯಿಸುವಂತಿಲ್ಲ. ಬರುವ ಕನಿಷ್ಠ ಸಂಖ್ಯೆಯ ಭಕ್ತರೂ, ಆಡಳಿತ ಮಂಡಳಿಯವರೂ ಚಾಚೂ ತಪ್ಪದೆ ಕರೋನಾ ಪರೀಕ್ಷೆ ಮಾಡಿ ಕೈಯಲ್ಲಿ ನೆಗೆಟಿವ್ ಸರ್ಟಿಫಿಕೇಟ್ ನೊಂದಿಗೆ ಬಂದರೆ ಮಾತ್ರ ಪ್ರವೇಶ. ಎಂದು ರೂಲ್ಸನ್ನು ಹೊರಡಿಸಿದ್ದರು.
ಅಲ್ಲಲ್ಲೇ ಈ ಕುರಿತು ಅಸಮಾಧಾನದ ಹೊಗೆ ಎದ್ದಿತ್ತು. ಆದರೂ ಸುರಕ್ಷತೆಯ ದೃಷ್ಟಿಯಿಂದ ಭಕ್ತರು ಅರ್ಥೈಸಿಕೊಂಡು ಸಮಾಧಾನದಲ್ಲಿದ್ದರು. ಅವರು ವಿಧಿಸಿದ ಕಾನೂನು ಕಟ್ಟಲೆಯಂತೆ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು. ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯನವರು ಕೂಡ ಮುನಿಸಿಕೊಳ್ಳುತ್ತಿರಲಿಲ್ಲವೇನೋ.

ಬಿದ್ದಾಟಂಡ ತಮ್ಮಯ್ಯ ಮುನಿಸು.
ಜಿಲ್ಲಾಡಳಿತ ಹಾಗು ಸಚಿವರು ಹೊರಡಿಸಿದ ಕಾನೂನು ಕಟ್ಟಲೆಯನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಹಾಗು ಭಕ್ತರು ಮುಲಾಜಿಲ್ಲದೆ ಬದಿಗೆ ಸರಿಸಿ, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೆ, ಪೊಲೀಸರಿಗೆ, ಅಧಿಕಾರಿಗಳಿಗೆ ಕ್ಯಾರೇ ಅನ್ನದೇ, ರೆಬಲ್ ಆಗಿ ದೇವಾಲಯ ಪ್ರವೇಶಿಸಿ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳುತ್ತಿದ್ದಂತೆ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಏಕಾಏಕಿ ಕೋಪಿಸಿಕೊಂಡು, ತೀರ್ಥೋದ್ಭವಕ್ಕೂ ಮುನ್ನವೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅನಿರೀಕ್ಷಿತ ಆಘಾತ ಸಂಭವಿಸಿದವರಂತೆ ಅವರು ವರ್ತಿಸಿದ್ದಾರೆ. ಅವರ ಈ ನಡೆಯ ಕುರಿತು ಈಗಾಗಲೇ ಕೊಡಗಿನಾದ್ಯಂತ ಭಕ್ತರು ಕೋಪಿಸಿಕೊಂಡಿದ್ದಾರೆ. ಅವರು ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿದ್ದು, ಅಲ್ಲಿನ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಗೊಂದಲವನ್ನು ಇತ್ಯರ್ಥಮಾಡಲು ಕನಿಷ್ಠ ಪ್ರಯತ್ನವನ್ನಾದರೂ ಮಾಡಬೇಕಿತ್ತು. ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಸಿಟ್ಟು ಮಾಡಿಕೊಂಡು ಸ್ಥಳದಿಂದ ನಿರ್ಗಮಿಸುವುದು ಅವರ ಸ್ಥಾನಕ್ಕೆ ಹಾಗು ಮಾತೆ ಕಾವೇರಿಗೆ ತೋರಿದ ಅಗೌರವ ಎಂದು ಭಕ್ತರು ಹಾಗು ಸಂಪ್ರದಾಯ ಬದ್ಧರು ಆಡಿಕೊಳ್ಳುತ್ತಿದ್ದಾರೆ.

ಸಂಪ್ರದಾಯ ಬದ್ಧರು ಜಿಲ್ಲಾಡಳಿತದ ಮೇಲೂ ಗರಮ್!
ಜಿಲ್ಲಾಡಳಿತ ಭಕ್ತರೊಡನೆ ಸಮಾಲೋಚಿಸಿ ಅವರ ಅಭಿಪ್ರಾಯವನ್ನೂ ಮನದಲ್ಲಿಟ್ಟುಕೊಂಡು ಕಾನೂನು ರೂಪಿಸಬೇಕಿತ್ತು. ಅವರ ದುಡುಕು ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗು ಜಿಲ್ಲಾಡಳಿತ ವ್ಯವಸ್ಥಾಪನ ಸಮಿತಿಯ ಸಲಹೆಯನ್ನು ದೂಳಿಪಟ ಮಾಡಿದೆ ಎಂದೂ, ಆದರಿಂದಲೇ ಅಧ್ಯಕ್ಷರು ನಿರ್ಗಮಿಸಿದ್ದಾರೆ ಎಂದೂ. ಅಲ್ಲಿ ಅವರ ಅಸಮಾಧಾನಕ್ಕೆ, ನಿರ್ಗಮನಕ್ಕೆ ಮೂಲ ಕಾರಣ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವೇ ಕಾರಣ ಎಂದೂ ಚಾನಲ್ ಕೂರ್ಗ್ ನೊಂದಿಗೆ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

ತಿರ್ಥೋಧ್ಭವದಲ್ಲಿ ಪಾಲ್ಗೊಂಡ ನಾರಾಯಣ್ ಆಚಾರ್ಯ ಪುತ್ರಿಯರು
ತಲಕಾವೇರಿಯ ಪ್ರಧಾನ ಅರ್ಚಕರಾಗಿ ಬದುಕು ಸವೆಸಿದ್ದ, ಮಾತೆಯ ಸೇವೆಯಲ್ಲಿ ಹಲವು ದಶಕಗಳ ಕಾಲ ಬದುಕು ಸಾಗಿಸಿದ್ದ, ಬಾರಿ ಮಳೆ ಹಾಗು ಗುಡ್ಡ ಕುಸಿತಕ್ಕೆ ಬಲಿಯಾದ ನಾರಾಯಣ್ ಆಚಾರ್ ಅವರ ದುರಂತ ಅಂತ್ಯ ಹಾಗು ಅವರ ಸಾವಿನ ಸುತ್ತ ಎದ್ದ(ಎಬ್ಬಿಸಿದ) ವಿವಾದಗಳು ಅಷ್ಟಿಷ್ಟಲ್ಲ. ಅದು ಜಗತ್ ಜಾಹೀರಾಗಿ ಹೋಗಿದೆ. ಸತ್ಯಾಸತ್ಯತೆ ಮಡಿದ ನಾರಾಯಣ್ ಆಚಾರ್ ಹಾಗು ಮಾತೆಗೆ ಮಾತ್ರ ತಿಳಿದಿದೆ. ಅವರ ಕುರಿತು ಎದ್ದ ಹತ್ತು ಹಲವು ಅಪಸ್ವರಗಳು, ವಿವಾದಗಳಲ್ಲಿ ದೊಡ್ಡ ಸದ್ದು ಮಾಡಿದ್ದ ಅವರ ಎರಡು ಪುತ್ರಿಯರು ಹಾಗು ಅವರು ಹೆಸರು ಬದಲಿಸಿಕೊಂಡು ಅನ್ಯಧರ್ಮಕ್ಕೆ ಮತಾಂತರವಾಗಿರುವುದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಹಿಂದು ಧರ್ಮ ತೊರೆದು ಹೋಗಿ ಬದುಕುಕಟ್ಟಿಕೊಂಡ ಅವರಿಬ್ಬರಿಗೆ ಕಾವೇರಿ ಮಾತೆಯ ಅದು ಇಷ್ಟೊಂದು ಕಟ್ಟುನಿಟ್ಟಿನ ಕೋವಿಡ್ ಸಂಧರ್ಭದಲ್ಲಿಯೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ್ದು ಮಾತ್ರ ಹಲವರ ಆಶ್ಚರ್ಯಕ್ಕೆ ಹಾಗು ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಸಾಂಪ್ರದಾಯಸ್ಥರಿಗೆ ಇಲ್ಲದ ದರುಷನ ಭಾಗ್ಯ ಇವರಿಗೆ ದೊರಕಿದ್ದು ಮಾತ್ರ ವಿಪರ್ಯಾಸವಲ್ಲದೆ ಮತ್ತೇನು? ಎನ್ನುತ್ತಿದ್ದಾರೆ ನಿಜವಾದ ದರುಷನ ಭಾಗ್ಯ ವಂಚಿತ ಭಕ್ತರು.

ಹೀಗೆ ಹಲವು ಹೈಡ್ರಾಮಗಳ ನಡುವೆ ಮಾತೆ ವರ್ಷಂಪ್ರತಿಯಂತೆ ಈ ಬಾರಿಯೂ ಬಂದು ದರುಷನವಿತ್ತು ಹೋಗಿದ್ದಾಳೆ. ಆಗಿರುವ ಲೋಪದೋಷಗಳನ್ನು ಅವಳು ಮನ್ನಿಸಲಿ. ನಾಡಿಗೆ ಒಳಿತನ್ನು ಮಾಡಲಿ. ಮಾತೆಯ ವಿಷಯದಲ್ಲಿ ಇನ್ನಾದರೂ ಎಚ್ಚರ ವಹಿಸುವಂತಾಗಲಿ ಎಂದು ಭಕ್ತರು ಬೇಡಿಕೊಳ್ಳುತ್ತಿದ್ದಾರೆ.