ಬೀದಿ ದೀಪದ ಬೆಳಕಿನಲ್ಲಿ ಸರ್ಕಾರಿ ಬೊಕ್ಕಸವನ್ನು ಕಗ್ಗತ್ತಲೆಗೆ ತಳ್ಳಿದ KIADB

ಕರ್ನಾಟಕ ಕೈಗಾರಿಕ ಪ್ರದೇಶಾಭಿವೃಧ್ದಿ ಮಂಡಳಿ (KIADB)ಯ ಹಗರಣಗಳ ಪಟ್ಟಿಗೆ ಮತ್ತೊಂದು ಹೊಸ ಹಗರಣ ಸೇರ್ಪಡೆಯಾಗಿದೆ. ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳಾಗಿ ಅಳವಡಿಸಲಾಗಿರುವ ಎಲ್‌ಇಡಿ ಬಲ್ಬ್‌ಗಳ ಮೊತ್ತ ಬರೋಬ್ಬರಿ 52,840 ರೂಪಾಯಿಗಳು. ಇದು ಎಲ್ಲಾ ಬಲ್ಬ್‌ಗಳ ಒಟ್ಟು ಮೊತ್ತವಲ್ಲ, ಕೇವಲ ಒಂದು ಬಲ್ಬ್‌ಗೆ KIADB ನೀಡಿರುವ ಮೊತ್ತ. ಈ ರೀತಿಯ 344 ಬಲ್ಬ್‌ಗಳನ್ನು ಈ ವರೆಗೆ ಅಳವಡಿಸಲಾಗಿದೆ.

ದೇವನಹಳ್ಳಿ ಕೈಗಾರಿಕಾ ಪ್ರದೇಶದ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಸಬ್‌ ಸ್ಟೇಷನ್‌ಗಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸುವ 230ಕೆವಿ ವ್ಯಾಟ್‌ ತಂತಿಯನ್ನು ಅಳವಡಿಸಲು 2018ರಲ್ಲಿ ಹೊರಡಿಸಿದ್ದ ಟೆಂಡರ್‌ ಈ ಅವ್ಯವಹಾರದ ಮೂಲ. ಈ ಪ್ರದೇಶದಲ್ಲಿ ಮೊದಲೇ 6.6 ಕಿಮೀಗಳಷ್ಟು ಉದ್ದದ ರಸ್ತೆಗೆ ಸೋಡಿಯಂ ವೇಪರ್‌ ಬಲ್ಬ್‌ಗಳನ್ನು ಅಳವಡಿಸಲಾಗಿತ್ತು. ರಸ್ತೆಯ ವಿಭಾಜಕದ ಮಧ್ಯದಲ್ಲಿದ್ದ ಈ ಸೋಡಿಯಂ ವೇಪರ್‌ ಲೈಟ್‌ಗಳನ್ನು ತೆಗೆಸಿ, ಆ ಜಾಗದಲ್ಲಿ ವಿದ್ಯುತ್‌ ತಂತಿಯನ್ನು ಹಾಯಿಸಲು ಟವರ್‌ಗಳ ನಿರ್ಮಾಣ ಕಾರ್ಯ ಆರಂಭವಾಯಿತು. ಈ ವೇಳೆ ಕೆಲವು ಅಧಿಕಾರಿಗಳು, ಇದೇ ಹಣ ಮಾಡಲು ಸರಿಯಾದ ಸಮಯವೆಂದು ಟೆಂಡರ್‌ ಕೂಡಾ ಕರೆಯದೆ ಬೀದಿ ದೀಪಗಳನ್ನು ಅಳವಡಿಸಲು ಕುಮಾರ್‌ ಎಲೆಕ್ಟ್ರಿಕಲ್ಸ್‌ ಎಂಬ ಕಂಪೆನಿಗೆ ಗುತ್ತಿಗೆಯನ್ನು ನೀಡಿಯೇ ಬಿಟ್ಟರು.

ಈ ಅವ್ಯವಹಾರದಲ್ಲಿ KIADB ಮುಖ್ಯ ಇಂಜಿನಿಯರ್‌ ಆದ ಎಂ ರಾಮ, ಟೆಕ್ನಿಕಲ್‌ ಅಸಿಸ್ಟೆಂಟ್‌ ಆದ ಚಂದ್ರ ಕುಮಾರ್‌ ಹಾಗೂ ಬೀದಿ ದೀಪಗಳನ್ನು ಅಳವಡಿಸಲು ಗುತ್ತಿಗೆ ಪಡೆದ ಕುಮಾರ್‌ ಎಲೆಕ್ಟ್ರಿಕಲ್ಸ್‌ ಕಂಪೆನಿ ನೇರ ಭಾಗಿದಾರರು ಎಂದು ಆರೋಪಿಸಿ ಕಮಿಟಿ ಫಾರ್‌ ಪಬ್ಲಿಕ್‌ ಅಕೌಂಟೆಬಿಲಿಟಿ (Committee for Public Accountability)ಯ ವತಿಯಿಂದ ಭೃಷ್ಟಾಚಾರ ನಿಗ್ರಹ ದಳ (Anti Corruption Bureau – ACB)ಗೆ ದೂರು ನೀಡಿದೆ.

KIADB ಮುಖ್ಯ ಇಂಜಿನಿಯರ್‌ ಎಂ ರಾಮ

2019ರಲ್ಲಿ ಲೋಕೋಪಯೋಗಿ ಇಲಾಖೆ ಬಿಡುಗಡೆ ಮಾಡಿರುವ ವಿದ್ಯುತ್‌ ಕಾಮಗಾರಿಗಳ ದರಪಟ್ಟಿಯ ಪ್ರಕಾರ 120 ವ್ಯಾಟ್‌ನ ಎಲ್‌ಇಡಿ ಬಲ್ಬ್‌ ಅಳವಡಿಕೆಗೆ 9200 ರೂಪಾಯಿಗಳು ಹಾಗೂ 150 ವ್ಯಾಟ್‌ ಬಲ್ಬ್‌ ಅಳವಡಿಸಲು 12300 ರೂಪಾಯಿಗಳ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆದರೆ, ದೇವನಹಳ್ಳಿ ಕೈಗಾರಿಕ ಪ್ರದೇಶದಲ್ಲಿ ನಡೆದದ್ದೇ ಬೇರೆ. ಈ ಆದೇಶವನ್ನು ಗಾಳಿಗೆ ತೂರಿ ತಮಗಿಷ್ಟ ಬಂದಂತೆ, ಯಾವುದೇ ಟೆಂಡರ್‌ ಕರೆಯುವ ಗೋಜಿಗೆ ಕೂಡಾ ಹೋಗದೇ, ಕುಮಾರ್‌ ಎಲೆಕ್ಟ್ರಿಕಲ್ಸ್‌ಗೆ ಪ್ರತೀ ಬಲ್ಬ್‌ಗೆ 52,840ರೂಪಾಯಿಗಳಂತೆ 344 ಬೀದಿ ದೀಪಗಳನ್ನು ಅಳವಡಿಸಲು ಅನುಮತಿ ನೀಡಿದ್ದರು KIADBಯ ಅಧಿಕಾರಿಗಳು. ಮೇಲ್ನೋಟಕ್ಕೆ ನೋಡುವಾಗಲೇ ಈ ಪ್ರಾಜೆಕ್ಟ್‌ನಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಹಳೆ ಬೀದಿ ದೀಪಗಳಿಗಿಲ್ಲ ಕಿಮ್ಮತ್ತು

ಸಬ್‌ ಸ್ಟೇಷನ್‌ಗೆ ವಿದ್ಯುತ್‌ ತಂತಿ ವ್ಯವಸ್ಥೆ ಕಲ್ಪಿಸಲು ಟವರ್‌ಗಳ ನಿರ್ಮಾಣ ಮಾಡುವಾಗ ಮೊದಲೇ ಇದ್ದಂತಹ ಸೋಡಿಯಂ ವೇಪರ್‌ ಬೀದಿ ದೀಪ (Sodium Vapour Street Lights)ಗಳನ್ನು ಬುಡ ಸಮೇತ ಕಿತ್ತೊಗೆಯಲಾಗಿದೆ. 2018ರಲ್ಲಿ ಅಳವಡಿಸಲಾಗಿದ್ದ ಸೋಡಿಯಂ ವೇಪರ್‌ ದೀಪಗಳನ್ನು, ಕಿತ್ತೆಸೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಲ್ಲದೇ, ಕನಿಷ್ಟ ಪಕ್ಷ ಅದರ ಕಂಬಗಳನ್ನಾದರೂ ಹೊಸ ದೀಪಗಳನ್ನು ಅಳವಡಿಸಲು ಬಳಸಿಕೊಳ್ಳಬಹುದಿತ್ತು. ಆದರೆ, ಇದು ಯಾವುದರ ಗೋಜಿಗೂ ಹೋಗದೇ, ಸರ್ಕಾರದ ಹಣವನ್ನು ಮನಸ್ಸೋ ಇಚ್ಚೆ ಬಂದಂತೆ ಖರ್ಚು ಮಾಡಿದೆ KIADB. ಜನರ ತೆರಿಗೆ ಹಣದಿಂದ ಮೂರು ಕೋಟಿಗೂ ಅಧಿಕ ಮೊತ್ತದ ಹಣವನ್ನು ವ್ಯಯಿಸಿ ಹೊಸ ದೀಪಗಳನ್ನು ಅಳವಡಿಸುವಂತಹ ಅಗತ್ಯತೆಯಾದರೂ ಏನಿತ್ತು?

ಹಳೆಯ ಸೋಡಿಯಂ ವೇಪರ್‌ ಬೀದಿ ದೀಪಗಳು 

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ, ವಿದ್ಯುತ್‌ ತಂತಿಗಳ ಟವರ್‌ಗಳನ್ನು ರಸ್ತೆಯ ಬದಿಯಲ್ಲಿ ನಿರ್ಮಿಸುವ ಬದಲು, ಡಿವೈಡರ್‌ ಮೇಲೆ ನಿರ್ಮಿಸಿರುವುದರಿಂದ ಬೀದಿ ದೀಪಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ರಸ್ತೆಯ ಎರಡೂ ಇಕ್ಕೆಲಗಳಲ್ಲಿ ವಿದ್ಯುತ್‌ ತಂತಿಯ ಟವರ್‌ ನಿರ್ಮಾಣ ಮಾಡಲು ಬೇಕಾದಷ್ಟು ಸ್ಥಳಾವಕಾಶವಿದ್ದರೂ ಅದನ್ನು ಬಳಸಿಕೊಳ್ಳುವ ಸಾಮಾನ್ಯ ಜ್ಞಾನವೂ KIADB ಅಧಿಕಾರಿಗಳಲ್ಲಿ ಇರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ವಿದ್ಯುತ್‌ ತಂತಿ ಟವರ್‌ಗಾಗಿ ಮುರಿದಿರುವ ಹಳೆಯ ವಿದ್ಯುತ್‌ ಕಂಬಗಳು 

2019ರಲ್ಲಿ ಬೀದರ್‌ ಹಾಗೂ ಮೈಸೂರಿನ ನಂಜನಗೂಡಿನಲ್ಲಿ KIADBಯಿಂದ ಅನುಮೋದನೆಗೊಂಡಿರುವ ವಿದ್ಯುತ್‌ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಪ್ರಕಟವಾಗಿರುವ ಪರಿಷ್ಕೃತ ದರವನ್ನೇ ಮಾನದಂಡವಾಗಿಟ್ಟುಕೊಂಡು ವಿದ್ಯುತ್‌ ಕಾಮಾಗಾರಿಗಳಿಗೆ ಟೆಂಡರ್‌ ಕರೆಯಲಾಗಿತ್ತು. 120 ವ್ಯಾಟ್‌ನ ಬೀದಿ ದೀಪ ಅಳವಡಿಕೆಗೆ ಬಲ್ಬ್‌ಗೆ ಒಂದರಂತೆ 9200 ವೆಚ್ಚದಲ್ಲಿ ದೀಪಗಳನ್ನು ಅಳವಡಿಸಲಾಗಿತ್ತು ಕೂಡ. ಆದರೆ, ದೇವನಹಳ್ಳಿ ಕೈಗಾರಿಕ ಪ್ರದೇಶ ಮಾತ್ರ ಇದಕ್ಕೆ ಹೊರತಾಗಿದೆ. ಕರ್ನಾಟಕ ಸರ್ಕಾರ ನಿಗದಿ ಪಡಿಸಿದಂತಹ ಪರಿಷ್ಕೃತ ದರ ದೇವನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅನ್ವಯಿಸುದಿಲ್ಲವೆಂಬಂತೆ ಈ ಅವ್ಯಹಾರ ನಡೆದದ್ದು ನಿಜಕ್ಕೂ ದುರದೃಷ್ಟಕರ.

ಇದರಿಂದಾಗಿ ರಾಜ್ಯದ ಬೊಕ್ಕಸದಿಂದ ಸುಮಾರು 3 ಕೋಟಿ ರೂಪಾಯಿಗಳಷ್ಟು ತೆರಿಗೆ ಹಣ ಅನಗತ್ಯವಾಗಿ ಖರ್ಚಾಗಿದೆ. ಈ ಕುರಿತು ʼಪ್ರತಿಧ್ವನಿʼಯು KIADBಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಸಂಪರ್ಕಿಸಿದಾಗ, ಭೃಷ್ಟಾಚಾರ ನಿಗೃಹ ದಳದಲ್ಲಿ ದೂರು ದಾಖಲಾಗಿರುವ ಕುರಿತು ಯಾವುದೇ ಮಾಹಿತಿಯಿಲ್ಲ ಮತ್ತು ಈ ಅವ್ಯವಹಾರ ನಡೆದ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಸಂಬಂಧ ಪಟ್ಟವರಿಗೆ ನೋಟೀಸ್‌ ಕಳುಹಿಸಿ ಅವರಿಂದ ಉತ್ತರ ಪಡೆಯುತ್ತೇನೆ ಎಂದಿದ್ದಾರೆ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯ ಸಹಿಯಿಲ್ಲದೇ, ಯಾವುದೇ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಸಾಧ್ಯವಿಲ್ಲ. ಹಾಗಾದರೆ KIADB ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯ ಗಮನಕ್ಕೂ ಬಾರದಂತೆ ಈ ಅವ್ಯವಹಾರ ನಡೆಯಿತೇ? ಅವರು ಸಹಿ ಹಾಕುವಾಗ ಕಡತಗಳನ್ನು ಪರಿಶೀಲಿಸಿಲ್ಲವೇ? ಅಥವಾ, KIADB ಅಧಿಕಾರಿಗಳು CEOಅನ್ನು ಕತ್ತಲಲ್ಲಿಟ್ಟು ಈ ಅವ್ಯವಹಾರ ನಡೆಸಿದ್ದಾರೆಯೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಇನ್ನು ACBಯಲ್ಲಿ ದೂರು ದಾಖಲಿಸಿರುವ ಸತೀಶ್‌ ಜಿ ಎನ್‌ ಅವರು ಹೇಳುವ ಪ್ರಕಾರ, ಈ ಅವ್ಯವಹಾರದಲ್ಲಿ KIADBಯ ಅಧಿಕಾರಿಗಳ ಪಾತ್ರ ಎದ್ದು ಕಾಣುತ್ತಿದೆ. ಈ ಕುರಿತಾಗಿ ಸಮಗ್ರ ತನಿಖೆಯನ್ನು ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ, ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಈ ಅವ್ಯವಹಾರ KIADBಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಉನ್ನತ ಮಟ್ಟದ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವ ಕುರಿತು ಸಂಶಯವಿದ್ದು, ACBಯ ತನಿಖೆಯ ನಂತರ ನಿಜವಾದ ಕಳ್ಳರು ಯಾರೆಂದು ತಿಳಿದು ಬರಬೇಕಾಗಿದೆ. ಈ ಅವ್ಯವಹಾರದ ಕುರಿತು ಇನ್ನಾದರೂ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ಅವರು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...