ಬಿಹಾರ ಚುನಾವಣೆಯ ಮತ ಎಣಿಕೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಎನ್ಡಿಎ ಮೈತ್ರಿಕೂಟ ಮತ್ತೊಮ್ಮೆ ಸರ್ಕಾರವನ್ನು ರಚಿಸುವತ್ತ ತನ್ನ ದೃಷ್ಟಿಯನ್ನೂ ನೆಟ್ಟಿದೆ. ಈ ನಡುವೆ ಗಮನಿಸಬೇಕಾದ ವಿಚಾರವೇನೆಂದರೆ, ಬಿಹಾರದಲ್ಲಿ ʼನೋಟಾʼ (None of the Above – NOTA) ಮತಗಳಲ್ಲಿ ಗಣನೀಯ ಇಳಿಕೆಯಾಗಿದೆ.
ಬಿಹಾರದಲ್ಲಿ ನೋಟಾ ಮೊದಲ ಬಾರಿಗೆ ಬಳಕೆಯಾಗಿದ್ದು 2015ರ ವಿಧಾನಸಭಾ ಚುನಾವಣೆಯಲ್ಲಿ. ಅಂದಿನ ಚುನಾವಣೆಯಲ್ಲಿ ದಾಖಲಾದ 3,81,20,124 ಅಧಿಕೃತ ಮತಗಳಲ್ಲಿ 9,47,279 ಮತಗಳು ನೋಟಾ ಮತಗಳಾಗಿದ್ದವು. ಅಂದರೆ ಒಟ್ಟು ಮತದಾನದ ಶೇ. 2.48ರಷ್ಟು ಮತಗಳು ನೋಟಾ ಮತಗಳಾಗಿದ್ದವು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಬಾರಿಯ ಚುನಾವಣೆಯಲ್ಲಿ ನೋಟಾ ಮತಗಳ ಪ್ರಮಾಣ ಇಳಿಕೆಯಾಗಿದೆ. ಈ ಬಾರಿ ಒಟ್ಟು 7,06,502 ನೋಟಾ ಮತಗಳು ಬಿಹಾರದಲ್ಲಿ ದಾಖಲಾಗಿವೆ. ಅಂದರೆ ಒಟ್ಟು ಮತದಾನದ ಶೇ. 1.68ರಷ್ಟು ನೋಟಾ ಮತಗಳು ಚಲಾಯಿಸಲಾಗಿವೆ.
ನೋಟಾಗಿಂತಲೂ ಹಿಂದೆ ಬಿದ್ದ ಶಿವಸೇನೆ ಮತ್ತು ಎನ್ಸಿಪಿ:
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿರುವ ಶಿವಸೇನೆಯು ಈ ಬಾರಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿಫಲವಾಗಿದೆ. ನೋಟಾ ಮತಗಳಿಗಿಂತಲೂ ಕಡಿಮೆ ಮತಗಳನ್ನು ಶಿವಸೇನೆ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (NCP) ಪಡೆದಿದೆ.
ಶಿವಸೇನೆಯು ಒಟ್ಟು ಮತದಾನದ ಶೇ. 0.05 ಮತಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಎನ್ನು ಎನ್ಸಿಪಿಯು ಶೇ. 0.23ರಷ್ಟು ಮತಗಳನ್ನು ಮಾತ್ರ ಪಡೆದಿದೆ.
ರಾಷ್ಟ್ರ ಮಟ್ಟದಲ್ಲಿ ಶಿವಸೇನೆಯನ್ನು ಬಲಪಡಿಸಲು ಹೂಡಿರುವ ಯೋಜನೆಯ ಇನ್ನೊಂದು ವಿಫಲ ಯತ್ನ ಇದಾಗಿದೆ. ಈ ಹಿಂದೆ ನಡೆದ ಗುಜರಾತ್, ಛತ್ತೀಸ್ಘಡ್, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿಯೂ ತನ್ನ ಪ್ರಭಾವವನ್ನು ಬೀರಲು ಶಿವಸೇನೆ ಯತ್ನಿಸಿತ್ತು. ಆದರೆ, ಅವರ ಯಾವ ಪ್ರಯತ್ನಗಳು ಕೂಡಾ ಯಶಸ್ವಿಯಾಗಲಿಲ್ಲ.
ಬಿಹಾರದಲ್ಲಿ 50 ಜನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲು ಶಿವಸೇನೆ ಯೋಜಿಸಿತ್ತು. ಆದರೆ, ಕೊನೆಗೆ 30 ಜನರಿಗೆ ಬಿ ಫಾರಂ ನೀಡಿತ್ತು. ಅದರಲ್ಲಿ 22 ಜನರ ನಾಮಪತ್ರಗಳು ಮಾತ್ರ ಊರ್ಜಿತವಾಗಿತ್ತು. ಇನ್ನು ಎನ್ಸಿಪಿಯು ಒಟ್ಟು 80 ಜನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿತ್ತು.
2013ರಲ್ಲಿ ಸುಪ್ರಿಂ ಕೋರ್ಟ್ ತೀರ್ಪು ನೀಡಿದ ನಂತರ ಇವಿಎಂಗಳಲ್ಲಿ ನೋಟಾ ಗುಂಡಿಯನ್ನು ಅಳವಡಿಸಲಾಗಿತ್ತು. ಒಂದು ವೇಳೆ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗಿಂತಲೂ ಹೆಚ್ಚಿನ ಮತಗಳು ನೋಟಾಗೆ ಬಿದ್ದರೆ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ವಜಾಗೊಳಿಸದೇ, ಎರಡನೇ ಅತೀ ಹೆಚ್ಚು ಮತ ದೊರೆತ ಅಭ್ಯರ್ಥಿಗಳನ್ನು ವಿಜೇತರು ಎಂದು ಘೊಷಿಸುವುದು ನೋಟಾ ಮತಗಳ ಇಳಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.