ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ಅಕ್ರಮವಾಗಿ ತಯಾರಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಧಿಕಾರಕ್ಕೆ ಸಂಬಂಧಪಟ್ಟಂತಹ ಸ್ವತ್ತು ಪತ್ರಗಳ ಹಂಚಿಕೆ, ಸ್ವಾಧೀನ ಪತ್ರ, ಖಚಿತ ಅಳತೆ ವರದಿ ಸೇರಿದಂತೆ ಇತರೆ ದಾಖಲೆಗಳನ್ನು ತಯಾರಿಸುವಲ್ಲಿ ಬಿಡಿಎ ಸಿಬ್ಬಂದಿಗಳೂ ಶಾಮೀಲಾಗಿರುವುದು ತಿಳಿದು ಬಂದಿದೆ.
ಬೆಂಗಳೂರಿನ ಕನ್ನಿಂಗ್ಹ್ಯಾಂ ರಸ್ತೆಯ ಪ್ರೆಸ್ಟೀಜ್ ಸೆಂಟರ್ ಪಾಯಿಂಟ್ನಲ್ಲಿರುವ Redhan, the cinema people ಎಂಬ ಕಚೇರಿಯ ಮೇಲೆ ದಾಳಿ ನಡೆಸಿದ ಬಿಡಿಎ ಜಾಗೃತ ದಳದ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆ ಪತ್ರಗಳು, ಬಿಡಿಎ ಹೆಸರಿನ ಲೆಟರ್ಹೆಡ್ಗಳು, ಮೊಹರುಗಳು, ಹಂಚಿಕೆ ಪತ್ರಗಳು, ಸ್ವಾಧೀನ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಇಂದ್ರಕುಮಾರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ಅಕ್ರಮ ನಡೆಯುತ್ತಿರುವ ಕುರಿತು ಮಾಹಿತಿ ತಿಳಿದ ನಂತರ, ಜಾಗೃತ ದಳದ ಪೊಲೀಸರು ಕಳೆದ 15 ದಿನಗಳಿಂದ ಗೋಪ್ಯವಾಗಿ ತನಿಖೆ ಕೈಗೊಂಡಿದ್ದರು. ಅಂತಿಮವಾಗಿ ಇಂದು ದಾಳಿ ನಡೆಸಲಾಗಿದೆ.
ಇದರಲ್ಲಿ ಬಿಡಿಎ ಸಿಬ್ಬಂದಿಗಳು ಕೂಡಾ ಶಾಮೀಲಾಗಿರುವುದು ತಿಳಿದು ಬಂದಿದ್ದರಿಂದ ಅವರನ್ನು ಕೂಡಾ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದರೊಂದಿಗೆ ಈ ಹಿಂದೆ ಬಿಡಿಎನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಕೂಡಾ ಶಾಮೀಲಾಗಿರುವ ಕುರಿತು ಮಾಹಿತಿ ತಿಳಿದುಬಂದಿದೆ. ವಶಕ್ಕೆ ಪಡೆದಿರುವ ಬಿಡಿಎ ಸಿಬ್ಬಂದಿಗಳ ಹೆಸರನ್ನು ಗೋಪ್ಯವಾಗಿ ಇರಿಸಲಾಗಿದ್ದು, ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.