ತಮ್ಮದು ದೇಶಭಕ್ತರ ಪಕ್ಷ, ಶಾಂತಿಯನ್ನು ನೆಲೆಸುವುದು ನಮ್ಮ ಉದ್ದೇಶವೆಂದು ಪುಂಕಾನುಪುಂಕವಾಗಿ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದ ಬಿಜೆಪಿಯ ಹೀನ ಸಂಸ್ಕೃತಿ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಬಹಿರಂಗವಾಗುತ್ತಿದೆ. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಲು ಹೊರಟಿರುವ ಬಿಜೆಪಿ ದೇಶಭಕ್ತಿಯ ಮುಖವಾಡ ಕಳಚುತ್ತಿದೆ. ಇದಕ್ಕೆ ನೀರೆರೆಯುತ್ತಿರುವವರು ಪಕ್ಷದ ಮುಖಂಡರಾದರೆ, ನಾಲಗೆಯನ್ನು ಹರಿಯಬಿಟ್ಟು ಜಾತಿ-ಧರ್ಮದ ವಿಷದ ಬೀಜ ಬಿತ್ತುತ್ತಿರುವವರು ಚೋಟಾ-ಮೋಟ ನಾಯಕರು.
ಮುಸ್ಲಿಂರನ್ನು ಹೀನಾಯವಾಗಿ ಹೀಗಳೆಯುತ್ತಾ ಬಂದಿದ್ದ ಉತ್ತರ ಭಾರತದ ಹಾರ್ಡ್ ಕೋರ್ ಹಿಂದೂವಾದಿಗಳೆಂಬ ಮುಖವಾಡ ಹಾಕಿರುವ ನಾಯಕರ ಹೀನ ಸಂಸ್ಕೃತಿ ಇದೀಗ ಕರ್ನಾಟಕಕ್ಕೂ ತನ್ನ ಕಬಂಧಬಾಹುವನ್ನು ಚಾಚಿದೆ. ಬಳ್ಳಾರಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ತಮ್ಮ ಹೊಲಸು ನಾಲಗೆಯ ಹರಿಯ ಬಿಟ್ಟು ಮುಸ್ಲಿಂರನ್ನು ತುಚ್ಛವಾಗಿ ಹೀಗಳೆದಿದ್ದಾರೆ. ಭಾರತದಲ್ಲಿ ಹಿಂದೂಗಳು ಶೇ.80 ರಷ್ಟಿದ್ದೇವೆ. ಮುಸ್ಲಿಂರು ಇರುವುದು ಕೇವಲ ಶೇ.17 ರಷ್ಟು ಮಂದಿ. ಹೀಗಾಗಿ ನಾವು ಹೇಳಿದಂಗೆ ಕೇಳಿಕೊಂಡು ಇರಬೇಕು. ಇಲ್ಲವಾದರೆ ಪರಿಸ್ಥಿತಿ ಚೆನ್ನಾಗಿರುವುದಿಲ್ಲ ಎಂದು ಬಹಿರಂಗ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ಪಕ್ಷದ ಹೀನ ಸಂಸ್ಕೃತಿಯನ್ನು ಬಟಾಬಯಲು ಮಾಡಿದ್ದಾರೆ.
ಒಬ್ಬ ರಾಜಕಾರಣಿಯಾದವನು ಅಥವಾ ಜನಪ್ರತಿನಿಧಿಯಾದವನು ತನ್ನ ಕ್ಷೇತ್ರದಲ್ಲಿ ಅವನು ಮುಸ್ಲಿಂನಿರಲಿ, ಹಿಂದೂವಿರಲಿ, ಕ್ರೈಸ್ತನಿರಲಿ. ಎಲ್ಲಾ ಪ್ರಜೆಗಳನ್ನು ಒಟ್ಟಾಗಿ ಕೊಂಡೊಯ್ಯಬೇಕು ಮತ್ತು ಕ್ಷೇತ್ರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಆದರೆ, ಈ ಹೊಲಸು ಬಾಯಿಯ ಸೋಮಶೇಖರ ರೆಡ್ಡಿ ಮುಸ್ಲಿಂ ಬಾಂಧವರನ್ನು ಗುರಿಯಾಗಿಟ್ಟುಕೊಂಡು ನೀವು ನಾವು ಹೇಳಿದಂಗೆ ಕೇಳಿಕೊಂಡು ಇದ್ದರೆ ಸರಿ ಹೋಯ್ತು. ಇಲ್ಲವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಧಮಕಿ ಹಾಕುವ ಮೂಲಕ ಬಳ್ಳಾರಿಯ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಹೊರಟಿದ್ದಾರೆ.
ಬಳ್ಳಾರಿಯಲ್ಲಿ ಸಿಎಎ ಪರವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುಚ್ಚು ಬಂದವರಂತೆ ಬಡಬಡಾಯಿಸಿರುವ ಸೋಮಶೇಖರರೆಡ್ಡಿ ಸಿಎಎ ವಿರುದ್ಧ ಪ್ರತಿಭಟನೆ ಮಾಡಿದ ಮುಸಲ್ಮಾನರನ್ನು ಶೂಟ್ ಮಾಡಿದ್ರೆ ದೇಶದ ಜನಸಂಖ್ಯೆ ಕಡಿಮೆಯಾಗುತ್ತಿತ್ತು ಎಂದಿದ್ದಾರೆ. ಹಾಗಾದರೆ, ಇಡೀ ಬಳ್ಳಾರಿಯ ಸುತ್ತಮುತ್ತಲಿನ ಗಣಿಯನ್ನು ಕೊಳ್ಳೆ ಹೊಡೆದು ದೇಶದ ಸಂಪನ್ಮೂಲಕ್ಕೆ ಕನ್ನ ಹಾಕಿದ ರೆಡ್ಡಿ ಸಹೋದರರನ್ನು ಯಾವ ರೀತಿ ನೋಡಿಕೊಳ್ಳಬೇಕೆಂಬುದನ್ನು ಎಂಬುದರ ಬಗ್ಗೆ ಎದೆ ಬಗೆದು ನೋಡಿಕೊಳ್ಳಲಿ.
ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ಪವಿತ್ರವಾದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ನೀಡಿದೆ. ಪ್ರತಿಭಟನೆ ಮಾಡುವ ಹಕ್ಕೂ ಸಹ ಜನ್ಮಸಿದ್ಧವಾಗಿದೆ. ಇಲ್ಲಿ ತಮಗಾದ ಅನ್ಯಾಯದ ವಿರುದ್ಧ ದನಿ ಎತ್ತುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆದರೆ, ಈ ರೆಡ್ಡಿ ಎಂಬ ಮಹಾನುಭಾವ ಮುಸ್ಲಿಂರು ಜಾಸ್ತಿ ನಖರಾ ಮಾಡಿದರೆ ಹುಷಾರ್ ಎಂದಿದ್ದಾನೆ. ಹಿಂದೊಮ್ಮೆ ತಮ್ಮ ಸಹೋದರ ಜನಾರ್ಧನ ರೆಡ್ಡಿ ಮಂತ್ರಿಯಾಗಿದ್ದುಕೊಂಡು ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸೆಡ್ಡು ಹೊಡೆಯುತ್ತಾ ಬಳ್ಳಾರಿಗೆ ಕಾಲಿಡಿ, ನಾನೂ ನೋಡ್ತೀನಿ ಎಂದು ವೀರಾವೇಶದ ಮಾತುಗಳನ್ನಾಡಿ ಈಗ ಎಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂಬ ಅರಿವು ಮಾಡಿಕೊಳ್ಳಲಿ. ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಇಂದಲ್ಲಾ ನಾಳೆ ಸೋಮಶೇಖರ ರೆಡ್ಡಿಯ ಆಟಾಟೋಪಕ್ಕೆ ಕಡಿವಾಣ ಬೀಳದೇ ಇರಲಾರದು.
ಭಾರತ ವೈವಿಧ್ಯಮಯ ದೇಶ. ಇಲ್ಲಿ ಹತ್ತು ಹಲವಾರು ಕಲೆ ಸಂಸ್ಕೃತಿಗಳಿವೆ. ಹತ್ತಾರು ಧರ್ಮಗಳಿವೆ. ಅವುಗಳು ತಮ್ಮದೇ ಆದ ಸಂಸ್ಕೃತಿಯನ್ನು ಆಚರಿಸಿಕೊಳ್ಳುತ್ತಿವೆ. ಈ ಹಕ್ಕೂ ಕೂಡ ಪ್ರತಿಯೊಬ್ಬರಿಗೂ ಇದೆ. ಆದರೆ, ಈ ಬೃಹಸ್ಪತಿ ಸೋಮಶೇಖರ ರೆಡ್ಡಿ, ಕಾಂಗ್ರೆಸ್ ಪಕ್ಷ ಬೇಕೂಫ್ ಗಳ ಮಾತು ಕೇಳಿ ಪ್ರತಿಭಟನೆ ಮಾಡಬೇಡಿ, ಇದು ಭಾರತ ದೇಶ. ಇಲ್ಲಿನ ಪದ್ಧತಿ ಪ್ರಕಾರ ನೀವು ಜೀವನ ಮಾಡಬೇಕು ಎಂದು ಸರ್ವಾಧಿಕಾರಿಯಂತೆ ಮಾತನ್ನಾಡಿದ್ದಾರೆ. ನಾವು ಉಫ್ ಎಂದು ಊದಿದರೆ ನೀವೆಲ್ಲಾ ಹಾರಿ ಹೋಗುತ್ತೀರಿ. ನಿಮಗೆ ಆಸೆ ಇದ್ದರೆ ಇಲ್ಲಿರಿ. ಇಲ್ಲದಿದ್ದರೆ ಬೇರೆ ದೇಶಕ್ಕೆ ಹೋಗಿ ಎಂದು ಹೇಳುವ ಮೂಲಕ ರೆಡ್ಡಿ ದರ್ಪ ತೋರಿದ್ದಾರೆ.
ಮುಸಲ್ಮಾನರನ್ನೇ ಗುರಿಯಾಗಿಟ್ಟುಕೊಂಡು ಮಾತನಾಡಿರುವ ಸೋಮಶೇಖರ ರೆಡ್ಡಿ ಬಿಜೆಪಿಗರ ರಕ್ತದ ಕಣಕಣದಲ್ಲಿಯೂ ಕೋಮುವಾದಿ ಭಾವನೆ ಇದೆ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೋದಲ್ಲೆಲ್ಲಾ ಬಂದಲ್ಲೆಲ್ಲಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಉದ್ದುದ್ದ ಭಾಷಣ ಬಿಗಿಯುವ ಮೂಲಕ ತಮ್ಮಷ್ಟು ಜಾತ್ಯತೀತ ವ್ಯಕ್ತಿ ಮತ್ತೊಬ್ಬರಿಲ್ಲ ಎಂಬುದನ್ನು ತೋರಿಸಿಕೊಳ್ಳುವ ಹುನ್ನಾರ ಮಾಡುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರು ಹಾದಿ ಬೀದಿಯಲ್ಲಿ ಮತೀಯ ದ್ವೇಷವನ್ನು ಕೆರಳಿಸುವಂತಹ ಹೇಳಿಕೆಗಳನ್ನು ನೀಡುವ ಮೂಲಕ ತಾವು ಕೋಮುವಾದಿಗಳಲ್ಲದೇ ಮತ್ತೇನೂ ಅಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಿಜೆಪಿ ದೇಶಾದ್ಯಂತ ಸಮಾವೇಶಗಳನ್ನು ನಡೆಸುತ್ತಿದೆ. ಏಕೆಂದರೆ, ಸಿಎಎ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿರುವವರಿಗೆ ಪ್ರತಿಯಾಗಿ ಸಿಎಎಯಿಂದ ದೇಶದಲ್ಲಿರುವ ಮುಸಲ್ಮಾನ ಬಾಂಧವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಧೈರ್ಯ ತುಂಬಲೆಂದೇ ಈ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಈ ಮೂಲಕ ಅಲ್ಪಸಂಖ್ಯಾತರಲ್ಲಿ ಉಂಟಾಗಿರುವ ಭೀತಿಯನ್ನು ಹೋಗಲಾಡಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡಬೇಕಿದೆ. ಆದರೆ, ಸೋಮಶೇಖರರೆಡ್ಡಿಯಂತಹ ಹೊಣೆಗೇಡಿ ನಾಯಕರು ಮತ್ತು ಜನಪ್ರತಿನಿಧಿಗಳು ಈ ಸಮಾವೇಶಗಳನ್ನು ನಡೆಸುತ್ತಿರುವುದೇ ಮುಸ್ಲಿಂರನ್ನು ದೂಷಿಸಲು ಎಂದು ಭಾವಿಸಿದ್ದಾರೆ. ಹೀಗಾಗಿಯೇ ಮುಸ್ಲಿಂರಿಗೆ ಧೈರ್ಯ ತುಂಬುವ ಬದಲು ಕೋಮು ಭಾವನೆ ಕೆರಳಿಸುವಂತಹ ಮಾತುಗಳನ್ನಾಡಿ ಅವರನ್ನು ಮತ್ತಷ್ಟು ಅಧೀರರನ್ನಾಗಿ ಮಾಡುತ್ತಿದ್ದಾರೆ. ಇಂಖತಹ ಲಜ್ಜೆಗೇಡಿಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಬದಲು ಹಾಳು ಮಾಡಲು ಹೊರಟಿರುವುದು ವಿಪರ್ಯಾಸ.
ಸಿಎಎ ವಿರುದ್ಧ ಘೋಷಣೆ ಕೂಗುವ ಪ್ರತಿಭಟನಾಕಾರರನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡುವ ಪೊಲೀಸರಾಗಲೀ ಅಥವಾ ಅದಕ್ಕೆ ಕುಮ್ಮಕ್ಕು ನೀಡುವ ಸರ್ಕಾರವಾಗಲಿ ಈಗ ಹೊಲಸು ಬಾಯಿಯ ಸೋಮಶೇಖರರೆಡ್ಡಿಗೆ ಏನು ಮಾಡುತ್ತದೆ? ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಹೇಳಿಕೆ ನೀಡಿರುವ ರೆಡ್ಡಿಯನ್ನು ಜೈಲಿಗೆ ಕಳುಹಿಸುತ್ತದೆಯೇ?