ಮಹಾರಾಷ್ಟ್ರದಲ್ಲಿ ನಡೆದ ರಾತ್ರೋರಾತ್ರಿಯ ರಾಜಕೀಯ ಬೆಳವಣಿಗೆಯಾಗುತ್ತಿದ್ದಂತೆಯೇ ದೇಶದ ರಾಜಕೀಯ ರಂಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ತಾನೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸಿ ಅಧಿಕಾರದ ಗದ್ದುಗೆಗೇರಿದ್ದ ಬಿಜೆಪಿ ಇದೀಗ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿಪಿಯನ್ನೇ ಸ್ವಾಹ ಮಾಡಿಕೊಂಡು ಅದರ ಒಂದು ಬಣದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರವನ್ನು ಹಿಡಿದಿದೆ.
ಬಹುಮತ ಸಾಬೀತು ಮಾಡುವ ಜವಾಬ್ದಾರಿ ಬಿಜೆಪಿ ಮುಂದಿದೆಯಾದರೂ, ಸಾಬೀತುಪಡಿಸಲು ರಾಜ್ಯಪಾಲರು ಹೆಚ್ಚು ಕಾಲಾವಕಾಶವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರಿಗೆ ನೀಡಿದ್ದಾರೆ. ಅಷ್ಟರ ವೇಳೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿದ ರೀತಿಯಲ್ಲಿ ಮಹಾರಾಷ್ಟ್ರದಲ್ಲಿಯೂ ರಾಜೀನಾಮೆ ಕೊಡಿಸಬಹುದು ಎಂಬ ಗುಮಾನಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಶರದ್ ಪವಾರ್ ಆಪ್ತ ಶಾಸಕರು, ಕಾಂಗ್ರೆಸ್ ಮತ್ತು ಶಿವಸೇನೆ ಪಕ್ಷಗಳಿಗೆ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುತ್ತಿದೆ.
ಕಳೆದ ಹಲವು ವರ್ಷಗಳಲ್ಲಿ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಪವಿತ್ರ ಮೈತ್ರಿ ಸಾಧಿಸಿ ಅಧಿಕಾರಕ್ಕೆ ಏರಿದೆ. ಅದೇ ರೀತಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿನ ಬೆಳವಣಿಗೆಗಳು ತಾಜಾ ಉದಾಹರಣೆಯಾಗಿವೆ.
ಬಿಜೆಪಿಯ ಈ ಅಡ್ಡದಾರಿಯ ರಾಜಕಾರಣಕ್ಕೆ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಬಿಜೆಪಿಯ ಅಪವಿತ್ರ ಮೈತ್ರಿ ಬಗ್ಗೆ ಕಿಡಿ ಕಾರಿದ್ದಾರೆ. ಬನ್ನಿ ನೋಡೋಣ ಈ ಇಬ್ಬರು ನಾಯಕರು ಏನು ಹೇಳಿದ್ದಾರೆ ಎಂಬುದನ್ನು.