ದುರುದ್ದೇಶದ ಮಾನಹಾನಿಕರ ಸಂಗತಿ ಹಂಚಿಕೊಂಡಿದ್ದು ಮತ್ತು ಸಮುದಾಯಗಳ ನಡುವೆ ಪರಸ್ಪರ ದ್ವೇಷ ಹರಡುವ ಉದ್ದೇಶದಿಂದ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ವಿರುದ್ಧ ಮಹಾರಾಷ್ಟ್ರ ಮತ್ತು ಛತ್ತೀಸಗಢದಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಮತ್ತು ಜವಾಹರ್ ಲಾಲ್ ನೆಹರು ವಿರುದ್ಧ ಮಾನಹಾನಿಕರ ಟ್ವೀಟ್ ಮಾಡಿದ ಆರೋಪದ ಮೇಲೆ ಸಂಬಿತ್ ಪಾತ್ರ ವಿರುದ್ಧ ಮುಂಬೈನಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕರೋನಾ ಮಹಾಮಾರಿ ನಿಯಂತ್ರಣದ ವಿಷಯದಲ್ಲಿ ಈಗ ಬದುಕಿಲ್ಲದ ಮಾಜಿ ಪ್ರಧಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಕಪೋಲಕಲ್ಪಿತ ಮಾಹಿತಿ ಹಂಚಿಕೊಳ್ಳುವ ಮೂಲಕ ಪಕ್ಷ ಮತ್ತು ಪಕ್ಷದ ನಾಯಕರಿಗೆ ಅವಮಾನ ಮಾಡುವ ಮತ್ತು ಜನರಲ್ಲಿ ತಪ್ಪು ಕಲ್ಪನೆ ಬಿತ್ತುವ ದುರುದ್ದೇಶದಿಂದ ಅವಮಾನಕರ ಸಂಗತಿ ಟ್ವೀಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ದೂರು ನೀಡಿತ್ತು. ಆ ದೂರಿನ ಹಿನ್ನೆಲೆಯಲ್ಲಿ ಮುಂಬೈ ನಗರದ ಮಹಾತ್ಮ ಪುಲೆ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
‘ಕಾಂಗ್ರೆಸ್ ಕಾಲದಲ್ಲಿ ಏನಾದರೂ ಕರೋನಾ ಸಂಭವಿಸಿದ್ದರೆ, ಸಾವಿರಾರು ಕೋಟಿ ರೂಪಾಯಿ ಹಗರಣಗಳು ನಡೆಯುತ್ತಿದ್ದವು’ ಎಂದು ಟ್ವೀಟ್ ಮಾಡಿರುವ ಸಂಬಿತ್, ಆ ಟ್ವೀಟ್ ನೊಂದಿಗೆ ಕಾಂಗ್ರೆಸ್ ಮಾಜಿ ಪ್ರಧಾನಿಗಳಾದ ನೆಹರು ಮತ್ತು ರಾಜೀವ್ ಗಾಂಧಿ ಅವರ ಚಿತ್ರಗಳನ್ನು ಕೂಡ ಶೇರ್ ಮಾಡಿದ್ದಾರೆ. ಇದು ಈಗ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಬದುಕಿಲ್ಲದ ನಾಯಕರು ಮತ್ತು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗೆ ಅವಮಾನ ಮಾಡುವ, ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆ ಬಿತ್ತುವ ದುರುದ್ದೇಶದ ಟ್ವೀಟ್ ಎಂದು ಮಹಾರಾಷ್ಟ್ರ ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಬ್ರಿಜ್ ಕಿಶೋರ್ ದತ್ ನೀಡಿರುವ ದೂರಿನಲ್ಲಿ ಹೇಳಲಾಗಿತ್ತು. ಐಪಿಸಿ ಸೆಕ್ಷನ್ 500 ಅಡಿ ಸಂಬಿತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಛತ್ತೀಸಗಢದಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ, ಇದೇ ನಾಯಕರ ವಿರುದ್ಧ ಕಾಶ್ಮೀರ ಮತ್ತು ಸಿಖ್ ಗಲಭೆ ವಿಷಯ ಪ್ರಸ್ತಾಪಿಸಿ, ದೇಶದ ವಿವಿಧ ಸಮುದಾಯಗಳ ವಿರುದ್ಧ ಪರಸ್ಪರ ದ್ವೇಷ ಬಿತ್ತುವ ಮತ್ತು ಆ ಸಮುದಾಯಗಳಲ್ಲಿ ಕಾಂಗ್ರೆಸ್ ನಾಯಕರಾದ ದಿವಂತಹ ಪ್ರಧಾನಿಗಳ ವಿರುದ್ಧ ಅಸಹನೆ ಹುಟ್ಟಿಸುವ ದುರುದ್ದೇಶದಿಂದ ಟ್ವೀಟ್ ಮಾಡಿರುವುದಾಗಿ ಸಂಬಿತ್ ಪಾತ್ರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಛತ್ತೀಸಗಢ ಯುವ ಕಾಂಗ್ರೆಸ್ ಅಧ್ಯಕ್ಷ ಪೂರ್ಣಚಂದ್ ಪಧಿ ನೀಡಿದ ದೂರಿನ ಮೇಲೆ ಅಲ್ಲಿನ ರಾಯಪುರ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಕಾಶ್ಮೀರ ವಿಷಯ, 1984ರ ಸಿಖ್ ಗಲಭೆ ಮತ್ತು ಬೋಫೋರ್ಸ್ ವಿಷಯದಲ್ಲಿ ನೆಹರು ಮತ್ತು ರಾಜೀವ್ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿ ಸಾಮಾಜಿಕ ಶಾಂತಿ ಕದಡುವ, ಧಾರ್ಮಿಕ ದ್ವೇಷ ಬಿತ್ತುವ ಮತ್ತು ಸಮುದಾಯಗಳ ನಡುವೆ ಪರಸ್ಪರ ವೈಷಮ್ಯ ಬಿತ್ತುವ ಯತ್ನ ಮಾಡಿದ್ದಾರೆ ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ. ಐಪಿಸಿ ಸೆಕ್ಷನ್ 153ಎ, 505(2) ಮತ್ತು 298 ಅಡಿ ಪ್ರಕರಣ ದಾಖಲಿಸಲಾಗಿದೆ.